ವಿವಾಹಿತ ಹೆಣ್ಣುಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡದಿರುವುದನ್ನು ಕರ್ನಾಟಕ ಹೈಕೋರ್ಟ್ ಸಂವಿಧಾನ ಬಾಹಿರ ಮತ್ತು ತಾರತಮ್ಯ ನೀತಿ ಎಂದು ತೀರ್ಪು ನೀಡಿದೆ.
ಕೃಷಿ ಮಾರುಕಟ್ಟೆ ಇಲಾಖೆಯು ‘ವಿವಾಹಿತ ಮಗಳಿ’ಗೆ ತಂದೆ ನಿರ್ವಹಿಸುತ್ತಿದ್ದ ಕೆಲಸವನ್ನು ಅನುಕಂಪದ ಆಧಾರದ ಮೇಲೆ ನೀಡಲಾಗುವುದಿಲ್ಲ ಎಂದು ಹೇಳಿರುವುದರ ವಿರುದ್ಧ ಭುವನೇಶ್ವರಿ ವಿ ಪುರಾಣಿಕ್ ಎಂಬವರು ಹೈಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನಿಯಮ 2 (1)(a)(i), ನಿಯಮ 2(1)(b) ಮತ್ತು ನಿಯಮ 3 (2)(i)(c) ನ್ನು ಅಸಂವಿಧಾನಿಕ ಎಂದು ಘೋಷಿಸಿದ ಕೋರ್ಟ್, ಕರ್ನಾಟಕ ನಾಗರಿಕ ಸೇವೆಗಳು (ಅನುಕಂಪದ ನೇಮಕಾತಿ) 1996 ನಿಂದ ‘ಅವಿವಾಹಿತ’ ಪದವನ್ನು ತೆಗೆದು ಹಾಕಿದೆ.
ಹೆಚ್ಚುವರಿ ವಕೀಲರು “ಅನುಕಂಪದ ನೇಮಕಾತಿ ಹಕ್ಕು ಅಲ್ಲ, ಅದು ರಿಯಾಯಿತಿ ಮಾತ್ರ” ಎಂದು ವಾದ ಮಾಡಿದ್ದರು. ತೀರ್ಪು ನೀಡುವಾಗ ನ್ಯಾಯಾಧೀಶರಾದ ಎಮ್ ನಾಗಪ್ರಸನ್ನ ಅವರು “ಮದುವೆ ಎನ್ನುವುದು ಹೆತ್ತವರೊಂದಿಗಿನ ಸಂಬಂಧದ ಮುಂದುವರಿಕೆಯನ್ನು ನಿರ್ಧರಿಸುವುದಿಲ್ಲ” ಎಂದು ಹೇಳಿದ್ದಾರೆ. ಕಾನೂನಿನ ವ್ಯಾಖ್ಯೆ ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತದೆ. ಕಾನೂನಿನಲ್ಲಿರುವ ಆಕ್ಷೇಪಾರ್ಹ ನಿಬಂಧನೆಗಳು ಹಾಗೆಯೇ ಉಳಿಸಿದರೆ ಗಡಿಯಾರವನ್ನು ಹಿಂದಕ್ಕೆ ತಿರುಗಿಸಿದಂತೆ ಎಂದು ಅಭಿಪ್ರಾಯ ಪಟ್ಟ ಕೋರ್ಟ್ “ಯಾವುದೇ ನಿಯಮ ಒಂದೇ ವಿಚಾರಕ್ಕೆ ಸಂಬಂಧಿಸಿದಂತೆ ಮಗನಿಗೆ ಯಾವ ಅರ್ಹತೆಯೂ ಇಲ್ಲದೆ ನೇಮಕಾತಿ ಗೆ ಅವಕಾಶ ಕೊಟ್ಟು ಮಗಳಿಗೆ ‘ವಿವಾಹಿತೆ’ ಎನ್ನುವ ಕಾರಣಕ್ಕೆ ಅವಕಾಶ ನಿರಾಕರಿಸುತ್ತದೆ ಎಂದರೆ ಅದು ತಾರತಮ್ಯವಾಗುತ್ತದೆ” ಎಂದು ಹೇಳಿತು.
ನೇಮಕಾತಿಯೊಂದು ನಡೆಯುವಾಗ ವ್ಯಕ್ತಿಯ ಮೇಲೆ ಎಷ್ಟು ಅವಲಂಬಿತರಿದ್ದಾರೆ ಎನ್ನುವುದು ಪರಿಗಣನೆಗೆ ಬರಬೇಕೇ ಹೊರತು ವ್ಯಕ್ತಿಯ ಲಿಂಗವಲ್ಲ ಎಂದೂ ಹೇಳಿರುವ ಕೋರ್ಟ್ ಸರ್ಕಾರ ಮುಂದಿನ ಆದೇಶ ನೀಡುವಾಗ ನ್ಯಾಯಾಲಯದ ಈ ಆದೇಶವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದಿದೆ.