ನಾವು ಮುಗ್ದರು, ಸರ್ಕಾರ ಏನನ್ನು ಹೇಳುತ್ತದೆಯೋ ಅದನ್ನು ಚಾಚೂ ತಪ್ಪದೆ ಪಾಲಿಸುತ್ತೇವೆ. ಗಂಟೆ ಹೊಡೆಯಿರಿ ಎಂದರೂ ಸರಿ, ಮನೆ ಬಿಟ್ಟು ಹೊರಕ್ಕೆ ಬರಬೇಡಿ ಎಂದರೂ ಸರಿ. ಆದರೆ ರಾಜಕಾರಣಿಗಳು ಮಾತ್ರ ಯಾವುದೇ ಕಾನೂನು ಉಲ್ಲಂಘಿಸಿದರೂ ಕೇಳುವವರು ಇಲ್ಲ. ಸಾರ್ವಜನಿಕರು ಮಾಸ್ಕ್ ಹಾಕಿಲ್ಲ ಎಂದರೆ 200 ರೂಪಾಯಿ ದಂಡ ವಿಧಿಸುತ್ತಾರೆ. ಆದರೆ ಶ್ರೀಮಂತರು ಐಶಾರಾಮಿ ಮದುವೆಯಲ್ಲಿ ಭಾಗಿಯಾಗಿ, ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೆ ಸುತ್ತಾಡಿ ಬಂದರೂ ಪೊಲೀಸರು ಮಾತ್ರ ಕೋಲೆ ಬಸವನ ರೀತಿ ನಿಂತಿರುತ್ತಾರೆ. ಇದಕ್ಕೆ ತಾಜಾ ಸಾಕ್ಷಿ ಸೋಮವಾರ ಬಳ್ಳಾರಿಯಲ್ಲಿ ನಡೆದ ಮಾಜಿ ಸಚಿವ ಹಾಲಿ ಶಾಸಕ ಪಿ.ಟಿ ಪರಮೇಶ್ವರ್ ನಾಯ್ಕ್ ಪುತ್ರನ ಅದ್ಧೂರಿ ಮದುವೆ.
ಮಾಜಿ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ಮದುವೆಯಲ್ಲಿ 98 ಜನರು ಭಾಗಿಯಾಗಿದ್ದರು ಎನ್ನುವ ಕಾರಣಕ್ಕೆ ಸರ್ಕಾರದ ಹಲವಾರು ಸಚಿವರು ಆಕ್ರೋಶ ಹೊರ ಹಾಕಿದ್ದರು. ಕಾನೂನು ಉಲ್ಲಂಘನೆಯಾಗಿದೆ ಎಂದು ಬೊಬ್ಬೆ ಹಾಕಿದ್ದರು. ಆ ಬಳಿಕ ಹೈಕೋರ್ಟ್ ಸ್ವಯಂ ಪ್ರೇರಿತ ದೂರನ್ನೂ ದಾಖಲಿಸಿಕೊಂಡಿತ್ತು. ಆದರೆ, ಕಾಂಗ್ರೆಸ್ ಶಾಸಕ ಪಿ ಟಿ ಪರಮೇಶ್ವರ್ ನಾಯ್ಕ್ ಅವರ ಪುತ್ರನ ಮದುವೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ಹಲವಾರು ಗಣ್ಯಾತಿಗಣ್ಯರು ಭಾಗಿಯಾಗಿದ್ದರು. ಸಾಮಾಜಿಕ ಅಂತರವೂ ಇರಲಿಲ್ಲ. ಮುಖಗವಸೂ ಕೂಡ ಇರಲಿಲ್ಲ. ಅದ್ಧೂರಿ ಮದುವೆಯಲ್ಲಿ ಸರ್ಕಾರವೂ ಭಾಗಿಯಾಗಿತ್ತು.
ಲಾಕ್‌ಡೌನ್ ಅವಧಿಯಲ್ಲಿ ಇದ್ದ ನಿಯಮಗಳೇ ಇನ್ನೂ ಕೂಡ ಮದುವೆ ಹಾಗೂ ಅಂತ್ಯಸಂಸ್ಕಾರಕ್ಕೆ ಇದ್ದರೂ, ನೂರಾರು ಗಣ್ಯರು, ಸಾವಿರಾರು ಅಭಿಮಾನಿಗಳು ಮದುವೆಯಲ್ಲಿ ಭಾಗಿಯಾಗಿದ್ದರು. ಸರ್ಕಾರ ಮದುವೆ ಸಮಾರಂಭಗಳಿಗೆ ಕೇವಲ 50 ಜನರು ಭಾಗಿಯಾಗಲು ಮಾತ್ರ ಅವಕಾಶ ಎಂದು ಬಾಯಲ್ಲಿ ಹೇಳುತ್ತ ತನ್ನ ನಿಯಮವನ್ನೂ ತಾವೇ ಮುರಿಯುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರು, ಶಾಸಕರು ಮದುವೆಯಲ್ಲಿ ಭಾಗವಹಿಸಿದ್ದರು. ಹರಪನಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಮದುವೆ ಆಯೋಜನೆ ಮಾಡಲಾಗಿತ್ತು.
ಕಾನೂನು ಉಲ್ಲಂಘನೆ ಬಗ್ಗೆ ಯಾರೆಲ್ಲಾ ಏನಂದರು..?
ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ನಡೆದ ಪರಮೇಶ್ವರ್ ನಾಯ್ಕ್ ಪುತ್ರನ ಮದುವೆಯಲ್ಲಿ ಸಾಮಾಜಿಕ ಅಂತರ ಮರಿಚಿಕೆಯಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಅದ್ದೂರಿ ಮದುವೆ ನಡೆಸಿದ್ದರ ಬಗ್ಗೆ ಸಾಕಷ್ಟು ಜನರು ಮಾತನಾಡಿದ್ದು, ಕಾನೂನು ಉಲ್ಲಂಘನೆ ಮಾಡಿಲ್ಲ ಎನ್ನುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾನೂನು ಎಲ್ಲರಿಗೂ ಒಂದೇ, ಹಳ್ಳಿಜನ ಕರೆಯದೇ ಬಂದು ಬಿಡುತ್ತಾರೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ. ಮಾರ್ಗಸೂಚಿ ಉಲ್ಲಂಘನೆ ಮಾಡಿದ್ರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ ಗೃಹ ಸಚಿವ ಬಸವರಾಜ ಬೊಮ್ಮಾಯಿ. ಮದುವೆಗೆ ನಾನು ಹೋಗಿದ್ದಾಗ ಎಲ್ಲವೂ ಸರಿಯಿತ್ತು. ನಾನು ಬಂದಮೇಲೆ ಸಾಮಾಜಿಕ ಅಂತರ ಉಲ್ಲಂಘನೆ ಆಗಿರಬಹುದು ಎಂದಿದ್ದಾರೆ ಸಚಿವ ಪ್ರಭು ಚೌಹಾಣ್. ಸಚಿವ ಆನಂದ ಸಿಂಗ್ ಮಾತನಾಡಿ, ಮದುವೆಗೆ ಬಂದಿದ್ದೇನೆ, ಸಾಮಾಜಿಕ ಅಂತರ ಕಾಪಾಡಿಲ್ಲ. ಗಣ್ಯ ವಕ್ತಿಗಳ ಮನೆ ಮದುವೆಗೆ ಸಾಮಾನ್ಯವಾಗಿ ಜನ ಬಂದೇ ಬರ್ತಾರೆ. ಪಿ ಟಿ ಪರಮೇಶ್ವರ್ ನಾಯ್ಕ್ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ ಎಂದಿದ್ದಾರೆ.
ಈ ಹಿಂದೆಯೂ ಜನರಲ್ಲಿ ಕ್ಷಮೆ ಕೇಳಿದ್ದೇನೆ. ನಮ್ಮ ಮತದಾರರು, ಅಭಿಮಾನಿಗಳು ಬಂದು ಆಶೀರ್ವಾದ ಮಾಡಿದ್ದಾರೆ. ಲಾಕ್‌ಡೌನ್ ಹಿನ್ನೆಲೆ ಮದುವೆ ಮುಂದೂಡಿದ್ದೆವು. ಸಮುದಾಯ ಭವನ ಸಿಗದ ಕಾರಣ ಸ್ವಗ್ರಾಮದಲ್ಲಿ ಮದುವೆ ಮಾಡಿದ್ದೇವೆ. ಮದುವೆಯಲ್ಲಿ ಕಾನೂನು ಉಲ್ಲಂಘನೆ ಆಗಿದೆ. ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ಈಗಾಗಲೇ ಗುರುಹಿರಿಯರ ಸಮ್ಮುಖದಲ್ಲಿ ಮದುವೆ ಆಗಿದೆ. ತಪ್ಪಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೆನೆ. ಪೊಲೀಸ್ ನಮಗೂ ಕೂಡ ನೋಟಿಸ್ ನೀಡಿದ್ದಾರೆ ಎಂದಿದ್ದಾರೆ ಮಾಜಿ ಮಿನಿಸ್ಟರ್ ಪರಮೇಶ್ವರ್ ನಾಯ್ಕ್.
ಶಾಸಕ ಪಿ ಟಿ ಪರಮೇಶ್ವರ ನಾಯ್ಕ್ ಪುತ್ರನ ಮದುವೆಯಲ್ಲಿ ಕೋವಿಡ್-19 ನಿಯಮಾವಳಿ ಉಲ್ಲಂಘನೆ ಮಾಡಿದ್ದರಿಂದ ಬಳ್ಳಾರಿ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಹರಪನಹಳ್ಳಿಯ ಅರಸೀಕೆರೆ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಶಾಸಕ ಪರಮೇಶ್ವರ್ ನಾಯ್ಕ್ ಹಾಗೂ ಪುತ್ರ ಭರತ್ ನಾಯ್ಕ್ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ. ಆದರೆ ಒಬ್ಬರಿಗೆ ಒಂದೊಂದು ರೀತಿ ನಿಯಮ ಇದೆಯಾ ಎನ್ನುವ ಅನುಮಾನ ಜನರನ್ನು ಕಾಡಲು ಶುರು ಮಾಡಿದೆ.
ಸಾಮಾನ್ಯ, ಮಧ್ಯಮ, ಅಗರ್ಭ ಶ್ರೀಮಂತ.. ಸರ್ಕಾರದಿಂದ ವಿಂಗಡಣೆ..?
ಜನ ಸಾಮಾನ್ಯರು 50 ಜನರನ್ನು ಸೇರಿಸಿಕೊಂಡು ಸಾಮಾಜಿಕ ಅಂತರದಲ್ಲಿ ಮದುವೆ ಮಾಡಬಹುದು ಯಾವುದೇ ಸಮಸ್ಯೆ ಇಲ್ಲ. ಒಂದು ವೇಳೆ 50ಕ್ಕಿಂತ ಹೆಚ್ಚಿನ ಜನರು ಭಾಗಿಯಾಗಿದ್ದರೆ ಪೊಲೀಸರು ದೂರು ದಾಖಲು ಮಾಡಿಕೊಳ್ತಾರೆ. ಕೋರ್ಟು, ಕಟಕಟೆ ಅಲೆದಾಡ ಬೇಕಾಗುತ್ತದೆ. ಅದೇ ರೀತಿ ಮಧ್ಯಮ ವರ್ಗ, ರಾಜಕೀಯದಲ್ಲೇ ಇದ್ದರೂ ಸ್ವಲ್ಪ ಕೆಳಮಟ್ಟದ ನಾಯಕನಾಗಿದ್ದರೆ ಕಾನೂನು ಕಠಿಣ ಕ್ರಮ ಕೈಗೊಳ್ಳುತ್ತದೆ. ಇದಕ್ಕೆ ಉದಾಹರಣೆ ಅಂದರೆ ಪಾದರಾಯನಪುರ ಕಾರ್ಪೊರೇಟರ್ ಪ್ರಕರಣ. ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾ ಕರೋನಾ ಸೋಂಕಿನಿಂದ ಗುಣಮುಖನಾಗಿ ಮನೆಗೆ ವಾಪಸ್ ಆಗುವಾಗ ಜನರು ಸೇರಿದ್ದರು ಎನ್ನುವ ಕಾರಣಕ್ಕೆ ಕೇಸ್ ಹಾಕಿದ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಆದರೆ ಪಿ ಟಿ ಪರಮೇಶ್ವರ್ ನಾಯ್ಕ್ ಪ್ರಕರಣದಲ್ಲಿ ಮಾತ್ರ ದೂರು ದಾಖಲು ಮಾಡಿಕೊಂಡು ಸುಮ್ಮನಾಗಿದ್ದಾರೆ. ಸಚಿವ ಶ್ರೀರಾಮುಲು ಕೂಡ ಇದೇ ರೀತಿ ಭರ್ಜರಿ ಕಾರ್ಯಕ್ರಮ ಮಾಡಿದ್ದರು, ಅವರ ವಿರುದ್ಧ ದೂರು ಕೂಡ ದಾಖಲಾಗಿಲ್ಲ ಎನ್ನುವುದು ಪ್ರಭಾವಿಗಳಿಗೆ ಇರುವ ಕಾನೂನು ಏನು ಎನ್ನುವುದನ್ನು ಪ್ರಶ್ನೆ ಮಾಡುವಂತಾಗಿದೆ.
ಆಯೋಜಕರದ್ದು ತಪ್ಪು.. ಭಾಗಿಯಾದವರದ್ದು ತಪ್ಪಲ್ಲವೇ..?
ಕಾರ್ಯಕ್ರಮ ಆಯೋಜನೆ ಮಾಡಿದ್ದವರದ್ದು ತಪ್ಪಿದೆ. ಪೊಲೀಸರು ದೂರು ದಾಖಲು ಮಾಡಿಕೊಂಡು ಎಫ್‌ಐಆರ್ ಹಾಕಿದ್ದಾರೆ ಸರಿ. ಆದರೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರದ್ದು ಯಾವುದೇ ತಪ್ಪಿಲ್ಲವೇ..? ಸಿದ್ದರಾಮಯ್ಯ ಹೊರತು ಪಡಿಸಿ ಯಾವುದೇ ನಾಯಕ ಮಾಸ್ಕ್ ಧರಿಸಿರಲಿಲ್ಲ. ರಾಜ್ಯ ಸರ್ಕಾರದ ಕ್ಯಾಬಿನೆಟ್ ಮಿನಿಸ್ಟರ್ಸ್ ಕೂಡ ಮಾಸ್ಕ್ ಹಾಕದೆ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಾಸ್ಕ್ ಧರಿಸದಿದ್ದರೆ 200 ರೂಪಾಯಿ ದಂಡ ಹಾಕುತ್ತೇವೆ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದು ಬಡವರಿಗೆ ಮಾತ್ರ ಅನ್ವಯವೇ..? ಶ್ರೀಮಂತರು ಯಾವುದೇ ಕಾನೂನು ಪಾಲನೆ ಮಾಡದಿದ್ದರೂ ನಡೆಯುತ್ತಾ..? ಎನ್ನುವುದಕ್ಕೆ ಸಂಬಂಧಪಟ್ಟವರೇ ಉತ್ತರ ನೀಡಬೇಕಿದೆ. ಒಟ್ಟಾರೆ ಶ್ರೀಮಂತರದ್ದು ಆದರೆ ತೇಪೆ ಹಾಕುವ ಕೆಲಸ ಮಾಡುತ್ತಾರೆ. ಬಡವರಾದರೆ ಕಠಿಣ ನಿರ್ಧಾರ ಕೈಗೊಳ್ತಾರೆ ಎನ್ನುವ ಮಾತು ಮಾತ್ರ ಸತ್ಯ.
ತಹಸೀಲ್ದಾರ್‌ರಿಂದ ದೂರು
ಇನ್ನು, ಈ ಸಂಬಂಧ ಹರಪನಹಳ್ಳಿಯ ಒಂದನೇ ಜೆ ಎಂ ಎಫ್ ಸಿ ಕೋರ್ಟ್‌ನಲ್ಲಿ ಹರಪನಹಳ್ಳಿ ತಹಸೀಲ್ದಾರ್ ಡಾ.ನಾಗವೇಣಿ ದೂರು ದಾಖಲಿಸಿದ್ದಾರೆ. ಕೊವಿಡ್ ನಿಯಮಾವಳಿ ಉಲ್ಲಂಘನೆ ಮಾಡಿ ಪುತ್ರನ ಅದ್ದೂರಿ ಮದುವೆ ಮಾಡಿದ್ದ ಪಿ ಟಿ ಪರಮೇಶ್ವರ್ ವಿರುದ್ದವೇ ದೂರು ದಾಖಲಾಗಿದ್ದು, ಇನ್ನಾದರೂ ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳುವರೇ ಎಂದು ಕಾದು ನೋಡಬೇಕಾಗಿದೆ.