ಜಾರ್ಖಂಡ್ ಮುಕ್ತಿ ಮೋರ್ಚಾದ ಅಧ್ಯಕ್ಷ ಮತ್ತು ಸಿಎಂ ಹೇಮಂತ್ ಸೋರೆನ್ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸಿಎಂ ಹೇಮಂತ್ ಸೋರೆನ್ ವಿರುದ್ಧ ಅತ್ಯಾಚಾರ ಪ್ರಕರಣದಲ್ಲಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಜಾರ್ಖಂಡ್ ಭಾರತೀಯ ಜನತಾ ಪಕ್ಷದ ಮಹಿಳಾ ಘಟಕ ಗವರ್ನರ್ ದ್ರೌಪದಿ ಮುರ್ಮುಗೆ ಮನವಿ ಮಾಡಿದೆ. ಬಿಜೆಪಿ ಮಹಿಳಾ ಘಟಕ ಮುಖ್ಯಸ್ಥೆ ಆರ್ತಿ ಕುಜೂರ್ ನೇತೃತ್ವದಲ್ಲಿ ಗವರ್ನರ್‌ಗೆ ದೂರು ನೀಡಲಾಗಿದೆ.
ಗವರ್ನರ್‌ಗೆ ಜಾರ್ಖಂಡ್ ಸಿಎಂ ಸೋರೆನ್ ವಿರುದ್ಧ ದೂರು ನೀಡಿದ ಬಳಿಕ ಮಾತಾಡಿದ ಆರ್ತಿ ಕುಜೂರ್ ಅವರು, ಮುಖ್ಯಮಂತ್ರಿ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿರುವುದು ದುರಂತ. ಸಿಬಿಐ ಕೂಡಲೇ ಈ ಕೇಸ್ ಕೈಗೆತ್ತಿಕೊಂಡು ವಿಚಾರಣೆ ನಡೆಸಬೇಕು. ಸಂತ್ರಸ್ತೆ ಯುವತಿಗೆ ರಾಜ್ಯ ಸರ್ಕಾರ ಭದ್ರತೆ ನೀಡಬೇಕು. ಸಿಎಂ ಹೇಮಂತ್ ಸೋರೆನ್‌ಗೆ ಮಾನ ಮಾರ್ಯಾದೆ ಇದ್ದರೆ ನೈತಿಕ ಜವಾಬ್ದಾರಿ ಹೊತ್ತು ಈಗಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
2013ರಲ್ಲಿ ಮುಂಬೈನ ಹೋಟೆಲ್ ಒಂದರಲ್ಲಿ ಹೇಮಂತ್ ಸೋರೆನ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದರು. ಹೀಗೆ ಆರೋಪಿಸಿ ಸಂತ್ರಸ್ತೆ ಹೇಮಂತ್ ಸೋರೆನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪ್ರಕರಣ ಮುಚ್ಚಿ ಹೋಗಿತ್ತು.
ಹೀಗಿರುವಾಗಲೇ ಕಳೆದ ಸೋಮವಾರ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರಿಂದ ಮತ್ತೆ ಈ ಪ್ರಕರಣ ಮುನ್ನಲೆಗೆ ಬಂದಿದೆ. ಈ ಸಂಬಂಧ ದುಬೆ ಮಹಾರಾಷ್ಟ್ರ ಗೃಹ ಸಚಿವರಿಗೆ ಟ್ವೀಟ್ ಮಾಡಿ ಹೇಮಂತ್ ಸೋರೆನ್ ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ಕೊಡಿಸಿ ಎಂದು ಆಗ್ರಹಿಸಿದ್ದಾರೆ. ಹಾಗೆಯೇ ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆ ಮತ್ತವರ ಕುಟುಂಬ ಇತ್ಯರ್ಥಪಡಿಸಿಕೊಳ್ಳಲು ಸಾಧ್ಯವಿಲ್ಲ, ಬದಲಿಗೆ ಅಪರಾಧಿಗೆ ಶಿಕ್ಷೆಯಾಗಬೇಕು ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲೇಖಿಸಿದ್ದಾರೆ.
ಇದರ ಮಧ್ಯೆ ದುಬೆ ವಿರುದ್ಧ ಹೇಮಂತ್ ಸೋರೆನ್ ಪರ ವಕೀಲರು ರಾಂಚಿ ಸಿವಿಲ್ ಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ್ದಾರೆ. ಈ ಬೆನ್ನಲ್ಲೇ ರಾಷ್ಟ್ರೀಯ ಮಹಿಳಾ ಆಯೋಗವೂ ಸಂತ್ರಸ್ತೆ ನೀಡಿದ ದೂರು ಸಂಬಂಧ ಪೊಲೀಸರು ಕೈಗೊಂಡ ಕ್ರಮದ ಬಗ್ಗೆ ವರದಿ ನೀಡುವಂತೆ ಮಹಾರಾಷ್ಟ್ರ ಡಿಜಿಪಿಗೆ ಪತ್ರ ಬರೆದಿದೆ.
ಇಂತಹ ಮಹತ್ವದ ಬೆಳವಣಿಗೆಗಳ ನಡುವೆ ಸಂತ್ರಸ್ತೆ ವಿಡಿಯೋವೊಂದು ಹರಿಬಿಟ್ಟಿದ್ದಾರೆ. ನನಗೆ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ, ಜೀವ ಬೆದರಿಕೆ ಹಾಕಲಾಗುತ್ತಿದೆ. ಯಾರೋ ಟ್ವೀಟ್ ಮಾಡುವ ಮೂಲಕ ನನ್ನ ಗೌರವಕ್ಕೆ ಧಕ್ಕೆ ತರಲಾಗುತ್ತಿದೆ. ನಾನು ನಿಜಕ್ಕೂ ಆತಂಕಗೊಂಡಿದ್ದೇನೆ ಎಂದು ವಿಡಿಯೋದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸದ್ಯ 37 ಸೆಕೆಂಡುಗಳ ಈ ವಿಡಿಯೋ ಭಾರೀ ವೈರಲ್ ಆಗಿದೆ. ತನಗೇನಾದರೂ ಅನಾಹುತವಾದರೆ ಅದಕ್ಕೆ ಜಾರ್ಖಂಡ್ ವಿಪಕ್ಷ ನಾಯಕ ಬಾಬುಲಾಲ್ ಮರಾಂಡಿ, ಗೊಡ್ಡಾ ಸಂಸದ ನಿಶಿಕಾಂತ್ ದುಬೆ, ಮರಾಂಡಿಯ ಆಪ್ತ ಸುನಿಲ್ ತಿವಾರಿ ಮತ್ತು ಜಹೂರ್ ಆಲಂ ಹೊಣೆ ಎಂದು ಯುವತಿ ಎಚ್ಚರಿಕೆ ನೀಡಿದ್ದಾಳೆ.