ಅಣ್ಣಾ ಹಜಾರೆ, ನಮ್ಮ ರಾಜಕಾರಣದಲ್ಲಿ ತುಂಬಿ ತುಳುಕುತ್ತಿದ್ದ ಭ್ರಷ್ಟಾಚಾರದ ಬಗ್ಗೆ ಬೇಸತ್ತಿದ್ದ ಜನರಿಗೆ ಬೆಳಕು ಮೂಡಿಸಿದ್ದ ಹೆಸರು. ಜಡ್ಡು ಗಟ್ಡಿದ ರಾಜಕೀಯ ವ್ಯವಸ್ಥೆಯಲ್ಲಿ ಹೊಸತನ ಬೇಕು ಎಂದು ಹಂಬಲಿಸುತ್ತಿದ್ದವರಿಗೆ ಭರವಸೆ ಹುಟ್ಟಿಸಿದ್ದ ಹೆಸರು. ಎಲ್ಲ ಚಳವಳಿಗಳು ಕಳೆಗುಂದಿ, ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದ್ದಾಗ ಎಪ್ಪತ್ತರಲ್ಲೂ ಎದ್ದು ಬಂದು ಆಶಾಕಿರಣ ಮೂಡಿಸಿದ್ದ ಹೆಸರು. ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಕಾರ್ಯಕರ್ತನೊಬ್ಬ ಮಾಡಬಹುದಾದ ಮಹಾನ್ ಸಾಧ್ಯತೆಯನ್ನು ಮನವರಿಕೆ ಮಾಡಿಕೊಟ್ಟಿದ್ದ ಹೆಸರು.
ಡಾ. ಕಿಷನ್ ಬಾಬುರಾವ್ ಹಜಾರೆ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ರಾಳೆಗಣ್ ಸಿದ್ಧಿಯನ್ನು ಮಾದರಿ ಹಳ್ಳಿಯನ್ನಾಗಿ ಪರಿವರ್ತಿಸುವಷ್ಟರಲ್ಲಿ ಅಣ್ಣಾ ಹಜಾರೆ ಎಂದು ಪ್ರಖ್ಯಾತರಾಗಿಬಿಟ್ಟಿದ್ದರು. ಅಭಿವೃದ್ಧಿಗೆ ಭ್ರಷ್ಟಾಚಾರವೇ ಅಡ್ಡಿಯಾಗಿದೆ ಎಂದು ತಿಳಿದ ಅವರು 1991ರಲ್ಲಿ ಭ್ರಷ್ಟಾಚಾರ ವಿರೋಧಿ ಜನಾಂದೋಲನ ಆರಂಭಿಸಿದರು. ಮಹಾರಾಷ್ಟ್ರ ಸರ್ಕಾರದ 42 ಅರಣ್ಯಾಧಿಕಾರಿಗಳು ನಡೆಸಿದ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದರು. ಮಹಾರಾಷ್ಟ್ರ ಸರ್ಕಾರ ಕ್ರಮ ಕೈಗೊಳ್ಳದಿದ್ದಾಗ ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಹಿಂತಿರುಗಿಸಿದರು. ಅಲ್ಲಿಂದ ಆರಂಭವಾದ ಅವರ ಹೋರಾಟದ ಬದುಕು ಬರೊಬ್ಬರಿ 20 ವರ್ಷ ಪೂರೈಸುವಷ್ಟರಲ್ಲಿ ಅಂದರೆ 2011ರ ವೇಳೆಗೆ ಮತ್ತೊಂದು ಆಯಾಮ ಪಡೆದುಕೊಂಡಿತ್ತು.
ಅಣ್ಣಾ ಹಜಾರೆ ಮಹಾರಾಷ್ಟ್ರದಿಂದ ದೆಹಲಿಗೆ ಆಗಮಿಸಿದ್ದರು. ಭ್ರಷ್ಟಾಚಾರ ತಡೆಗಾಗಿ ಲೋಕಪಾಲ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಆಮರಣಾಂತ ಉಪವಾಸ ಕೈಗೊಂಡರು. 2011ರಲ್ಲಿ ಅಂದಿನ ಯುಪಿಎ ಸರ್ಕಾರದ ವಿರುದ್ದ ಅವರು ಆರಂಭಿಸಿದ ಹೋರಾಟಕ್ಕೆ ವ್ಯಾಪಕವಾದ ಜನ ಬೆಂಬಲ ವ್ಯಕ್ತವಾಯಿತು. ಆ ಜನಾಕ್ರೋಶ 2014ರಲ್ಲಿ ಯುಪಿಎ ಸರ್ಕಾರವನ್ನು ಅಪೋಶನ ತೆಗೆದುಕೊಂಡಿತು. ಇನ್ನೊಂದೆಡೆ ಅಣ್ಣಾ ಹಜಾರೆಯವರೊಂದಿಗೆ ‘ಇಂಡಿಯಾ ಎಗೆನೆಸ್ಟ್ ಕರೆಪ್ಷನ್’ ಸಾಥಿಯಾಗಿದ್ದ ಮಾಜಿ ಅಧಿಕಾರಿ ಅರವಿಂದ ಕೇಜ್ರೀವಾಲ್ ರಾಷ್ಟ್ರ ರಾಜಧಾನಿ ದೆಹಲಿಯ ಗದ್ದುಗೆಯನ್ನು ಏರಿದರು.
ಇಂಥ ಅಣ್ಣಾ ಹಜಾರೆ ದೇಶ ಕಡುಕಷ್ಟದಲ್ಲಿರುವಾಗ ಕಾಣೆಯಾಗಿರುವುದು ಅಚ್ಚರಿ, ಆತಂಕಗಳನ್ನು ಮೂಡಿಸಿದೆ. ಒಂದು ಸರ್ಕಾರವನ್ನು ಕೆಡವುವ ಮಟ್ಟಕ್ಕೆ ಪ್ರಭಾವ ಬೀರಿ ಅದು ಬಿದ್ದು ಹೊಸ ಸರ್ಕಾರವೊಂದು ಬಂದು, ಅದೂ ಹಳೆಯದರ ಇನ್ನೊಂದು ರೂಪವಾಗಿ ಮಾರ್ಪಟ್ಟಾಗ, ಕೆಲ ವಿಷಯಗಳಲ್ಲಿ ಹಳೆಯದಕ್ಕಿಂತ ಹೊಸ ಸರ್ಕಾರ ಹೆಚ್ಚು ಅಪಾಯಕಾರಿ ಎಂದೆನಿಸಿದಾಗಲೂ ಅಣ್ಣಾ ಹಜಾರೆ ಮೌನವಾಗಿದ್ದಾರೆ. 2014ಕ್ಕೆ ದೇಶದ ಎಲ್ಲಾ ಸಮಸ್ಯೆಗಳು ಅಂತ್ಯಗೊಂಡವೆ? ಇದೇ ಅಣ್ಣಾ ಹಜಾರೆ ಬಿತ್ತಿದ ಕನಸಾದ ಜನಲೋಕಪಾಲ್ ಕತೆ ಏನಾಯಿತು? 2014ರಲ್ಲಿ ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ಮತ್ತವರ ಸಂಗಾತಿಗಳು ಸಾಲುಸಾಲಾಗಿ ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿರುವುದು ಅಣ್ಣಾ ಹಜಾರೆ ಅವರಿಗೆ ಕಾಣಲಿಲ್ಲವೇ? ಒಂದು ಜನ ಲೋಕಪಾಲ ಸಂಸ್ಥೆಗೆ ಒತ್ತಾಯಿಸಿದ ಅಣ್ಣಾ ಹಜಾರೆ ಅವರ ಕಣ್ಣೆದುರೇ ಹತ್ತಾರು ಸಂವಿಧಾನಿಕ ಸಂಸ್ಥೆಗಳು ತಮ್ಮ ಸ್ವಾಯತ್ತತೆಯನ್ನು ಕಳೆದುಕೊಂಡು ಆಳುವವರ ಕೈಗೊಂಬೆಯಾಗಿದ್ದರೂ ಸುಮ್ಮನಿರುವುದು ಏಕೆ?
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸದ್ಯ ತೀವ್ರ ಆರ್ಥಿಕ ಕುಸಿತ ಇದೆ. ಅದರ ದುಷ್ಪರಿಣಾಮ ದೇಶದ ಪ್ರತಿ ಪಜೆಯ ಮೇಲೂ ಬೀರುತ್ತಿದೆ. ಕಳೆದ ಮೂರ್ನಾಲ್ಕು ದಶಕಗಳಲ್ಲೇ ಅತಿ ಹೆಚ್ಚು ನಿರುದ್ಯೋಗ ಸೃಷ್ಟಿಯಾಗುತ್ತಿದೆ. ಅಭಿವೃದ್ಧಿ ಎಂಬುದು ಹಿಮ್ಮುಖವಾಗಿ ಚಲಿಸತೊಡಗಿದೆ. ಅಸಹಿಷ್ಟುವಾದ ವಾತಾವರಣ ನಿರ್ಮಾಣವಾಗಿದೆ. ಜನರು ಆರಿಸಿ ಕಳಿಸಿದ ಸರ್ಕಾರವನ್ನು ಹಣದ ಮೂಲಕ ದುರ್ಬಲಗೊಳಿಸಿ, ಶಾಸಕರನ್ನು ಖರೀದಿಸಿ ಜನಾದೇಶ ಇಲ್ಲದ ಪಕ್ಷ ಅಧಿಕಾರ ಹಿಡಿಯುತ್ತಿದೆ. ‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು’ ಎಂಬಂತೆ ಸಾವಿರ ಸಮಸ್ಯೆಗಳ ನಡುವೆ ಅನಗತ್ಯವಾದ ರಾಷ್ಟ್ರೀಯ ಪೌರತ್ವ ನೊಂದಣಿಯಂತಹ ಪ್ರಹಸನಗಳು ನಡೆಯುತ್ತಿವೆ. ಉತ್ತರದಾಯಿತ್ವ ಇಲ್ಲದ ‘ಪಿಎಂ ಕೇರ್ಸ್’ ಖಾತೆ ಹುಟ್ಟುಕೊಂಡಿದೆ.
ದೇಶ ಕರೋನಾದಂಥ ಕಷ್ಟಕ್ಕೆ ಸಿಲುಕಿ ಪರಿತಪಿಸುತ್ತಿರುವಾಗ ಚೀನಾದ ಸೈನಿಕರು ಭಾರತದ ಭೂಭಾಗವನ್ನು ಆಕ್ರಮಿಸಿಕೊಂಡಿದ್ದಾರೆ. ಭಾರತದ 20 ಬಡ ಸೈನಿಕರು ಹುತಾತ್ಮರಾಗಿದ್ದಾರೆ. ಪ್ರಶ್ನೆ ಮಾಡುವವರನ್ನು ಮೂದಲಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಇಡೀ ವಿಶ್ವವೇ ಆರ್ಥಿಕ ಹಿಂಜರಿತದಿಂದ ತತ್ತರಿಸುತ್ತಿದ್ದಾಗ ಭಾರತದ ಆರ್ಥಿಕತೆಯನ್ನು ಜತನದಿಂದ ಕಾಪಾಡಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗೌವರ್ನರ್ ಡಾ. ರಘುರಾಮ ರಾಜನ್ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ ಅಭಿಜಿತ್ ಬ್ಯಾನರ್ಜಿ ಅವರಂಥವರು ದೇಶದ ಆರ್ಥಿಕತೆ ದಯನೀಯ ಸ್ಥಿತಿಯಲ್ಲಿರುವಾಗ ಆಳುವ ಸರ್ಕಾರಕ್ಕೆ ನೆನಪಿಗೆ ಬರುವುದಿಲ್ಲ. ಏಕೆಂದರೆ ಪ್ರಧಾನ ಸೇವಕರದ್ದು ಸ್ವಪ್ರತಿಷ್ಟೆ. ದೇಶದಲ್ಲಿ ಅಲಿಖಿತ ತುರ್ತುಪರಿಸ್ಥಿತಿ. ಅಘೋಷಿತ ಸರ್ವಾಧಿಕಾರಿ ಆಡಳಿತ. ಇವ್ಯಾವು ಅಣ್ಣಾ ಹಜಾರೆ ಅವರನ್ನು ವಿಚಲಿತಗೊಳಿಸಿಲ್ಲವೇ? ಅಣ್ಣಾ ಹಜಾರೆ ಎದ್ದು ಬರಲು ಈ ದೇಶಕ್ಕೆ ಇದಕ್ಕಿಂತಲೂ ದುರ್ದಿನಗಳು ಬರಬೇಕಾ?