2021ರ ಹೊಸ ವರ್ಷದ ಆರಂಭದಲ್ಲೇ ಜಿಲ್ಲೆಯಲ್ಲಿ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು – ಕಾಫಿ ಬೆಳೆಗಾರರು ಆಘಾತಕ್ಕೊಳಗಾಗುವಂತಾಗಿದೆ. ಪ್ರತೀ ವರ್ಷವೂ ಡಿಸೆಂಬರ್ ಜನವರಿ ತಿಂಗಳಿನಲ್ಲಿ ಕಾಫಿ ಕೊಯ್ಲು ಮತ್ತು ಒಣಗಿಸುವ ಸಮಯವಾಗಿದೆ. ಈ ತಿಂಗಳಿನಲ್ಲಿ ಅರೇಬಿಕಾ ಕಾಫಿಯ ಹಣ್ಣುಗಳು ಕೆಂಪಗಾಗಿ ರಸ ತುಂಬಿಕೊಂಡು ಮಾಗಿದ್ದು ಕೊಯ್ಲಿಗೆ ಸಿದ್ದವಾಗಿರುತ್ತವೆ. ಕೊಯ್ಲಿನ ನಂತರ ಮಾರ್ಚ್ ತಿಂಗಳಿನಲ್ಲಿ ಹೂ ಬಿಡುವುದು ವಾಡಿಕೆ. ಅದರೆ ಕಳೆದ ಕೆಲವು ದಿನಗಳಿಂದ ವಾತಾವರಣದಲ್ಲಿ ಉಂಟಾಗಿರುವ ದಿಢೀರ್ ಬದಲಾವಣೆಯಿಂದಾಗಿ ಜಿಲ್ಲೆಯ ಬಹುತೇಕ ಮಳೆಯಿಂದಾಗಿ ಇದು ಹೂಬಿಡುವುದು ಖಚಿತವಾಗಿದೆ.
ಆದರೆ ಇನ್ನೂ ಶೇ.60ರಷ್ಟು ಮೊಗ್ಗು ಬರಬೇಕಾಗಿರುವುದರಿಂದ ಒಂದೇ ಗಿಡದಲ್ಲಿ ಮುಂದಿನ ಸಾಲಿಗೆ ಎರಡು ರೀತಿಯ ಫಸಲಿನ ಏರಿಳಿತವಾಗಲಿದೆ. ನೆರಳು ಇಲ್ಲದ ಕಡೆ ಈಗಾಗಲೇ ಶೇ.40ರಷ್ಟು ಹೂ ಅರಳುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಪ್ರಸಕ್ತ ಇರುವ ಫಸಲಿಗೆ ಸಂಬಂಧಿಸಿದಂತೆ ಕಾಫಿ ಉದುರುವಿಕೆ ಹೆಚ್ಚಾಗುವುದು, ಕಾಯಿ ಒಡೆಯುವುದು, ಕುಯಿಲು ಮಾಡಿರುವ ಕಾಫಿಗೆ ನೀರು ಸೇರಿದಲ್ಲಿ ಶೇ.10ಕ್ಕೂ ಅಧಿಕ ತೂಕ ಕಡಿಮೆ ಬರುವ ಮೂಲಕವೂ ನಷ್ಟ ಎದುರಾಗಲಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಅಕಾಲಿಕ ಮಳೆಯಿಂದಾಗಿ ಮಾಗಿದ ಕಾಫಿ ಹಣ್ಣುಗಳು ನೆಲಕ್ಕೆ ಉದುರುವುದಲ್ಲದೆ ಈಗಲೇ ಹೂವು ಬಂದು ಮುಂದಿನ ವರ್ಷದ ಫಸಲೂ ಕೂಡ ನಷ್ಟವಾಗಲಿದೆ. ಮಳೆಯಿಂದ ನೆಲಕಚ್ಚಿದ ಹಣ್ಣಾದ ಕಾಫಿಯನ್ನು ತ್ವರಿತವಾಗಿ ಆಯದಿದ್ದಲ್ಲಿ ಬೋರರ್ ರೋಗವೂ ಹೆಚ್ಚಾಗುವ ಸಂಭವವೂ ಉಂಟಾಗಲಿದೆ. ಇದರೊಂದಿಗೆ ಗಿಡದಲ್ಲಿ ಈಗ ಹಣ್ಣಾಗಿರುವ ಕಾಫಿ ಗಿಡದಲ್ಲೇ ಒಣಗಲಾರಂಭಿಸುತ್ತದೆ. ಇದರಿಂದಲೂ ತೂಕ ಕಡಿಮೆಯಾಗಬಹುದು ಎಂಬುದು ಇವರ ಅನಿಸಿಕೆಯಾಗಿದೆ.
ಸಾಧಾರಣವಾಗಿ ಕಾಫಿಗೆ ಜನವರಿ ಅಂತ್ಯದ ಬಳಿಕ ಹೂಮಳೆಯಾದರೆ ಅದು ಪ್ರಯೋಜನಕಾರಿಯಾಗುತ್ತದೆ. ಆದರೆ, ಜನವರಿ ಆರಂಭದಲ್ಲೇ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಕಾಫಿ ಹೂ ಅರಳುವ ಸನ್ನಿವೇಶ ಎದುರಾಗಿರುವುದು ಇದು ಮುಂದಿನ ವರ್ಷದ ಫಸಲಿಗೆ ಧಕ್ಕೆಯಾಗುತ್ತದೆ ಎಂಬುದು ಬೆಳೆಗಾರರ ಅಭಿಪ್ರಾಯವಾಗಿದೆ. ಇದೇ ಮಳೆ ಫೆಬ್ರವರಿ ಮೊದಲ ವಾರದ ನಂತರ ಬಂದಿದ್ದರೆ ಶೇ. 100ರಷ್ಟು ಹೂ ಅರಳುತ್ತಿತ್ತು. ಈಗಾಗಲೇ ಜಿಲ್ಲೆಯ ಹಲವಾರು ಭಾಗದಲ್ಲಿ 50 ಸೆಂಟ್ನಿದ ಒಂದು ಇಂಚಿಗೂ ಅಧಿಕ ಮಳೆ ಸುರಿದಿದೆ. ಮಾತ್ರವಲ್ಲ, ಇನ್ನೂ ಕೆಲವು ದಿನಗಳ ಕಾಲ ಮತ್ತೆ ಆಗಾಗ್ಗೆ ಮಳೆಯಾಗುವ ಮುನ್ಸೂಚನೆಯೂ ಇರುವುದು ಬೆಳೆಗಾರರನ್ನು ಕಂಗೆಡಿಸಿದೆ. ಹಲವೆಡೆಗಳಲ್ಲಿ ಈಗಾಗಲೇ ಕಾಫಿ ಹೂ ಅರಳಿದ್ದು, ಗಿಡದಲ್ಲಿರುವ ಕಾಫಿಯನ್ನು ಕುಯಿಲು ಮಾಡುವುದೂ ದುಸ್ತರವಾಗುತ್ತಿದೆ.
ಇದರೊಂದಿಗೆ ಅವಧಿಗೆ ಮುನ್ನವೇ ಮೊಗ್ಗು ಮುಂದುವರೆಯುತ್ತಿದ್ದು, ಇದು ನಂತರದಲ್ಲಿ ಉದುರಿ ಹೋಗುವ ಸಾಧ್ಯತೆ ಕೂಡ ಇದೆ ಎನ್ನುತ್ತಾರೆ ಹಲವರು. ಕಾಫಿ ಬೆಳೆಯ ಪರಿಸ್ಥಿತಿ ಒಂದೆಡೆಯಾದರೆ ಭತ್ತದ ಕೃಷಿಯ ಕೆಲಸವನ್ನು ಪೂರ್ಣಗೊಳಿಸಲು ಕೊನೆಯ ಹಂತದ ಕೆಲಸ ನಿರ್ವಹಿಸುತ್ತಿರುವ ರೈತರಿಗೂ ಈಗಿನ ಮಳೆ ಭಾರೀ ಸಮಸ್ಯೆಯನ್ನು ತಂದೊಡ್ಡಿದೆ. ಭತ್ತವೂ ಸೇರಿದಂತೆ ಹುಲ್ಲು ಕೂಡ ಮಳೆಯಿಂದಾಗಿ ನಾಶವಾಗುವಂತಾಗಿದೆ. ಗದ್ದೆಯಲ್ಲಿ ಕುಯಿಲು ಮಾಡಿರುವ ಭತ್ತ ಮೊಳಕೆ ಬರುವಂತಾಗಲಿದ್ದರೆ, ಹುಲ್ಲು ಕೊಳೆತು ನಷ್ಟವಾಗಲಿದೆ.
ಕಳೆದ ಮೂರು ವರ್ಷಗಳಿಂದ ಕೊಡಗಿನಲ್ಲಿ ವಿಪರೀತ ಮಳೆ ಮತ್ತು ಭೂ ಕುಸಿತದಿಂದಾಗಿ ಕಾಫಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಕುರಿತು ಮಾತನಾಡಿದ ಕೊಡಗು ಬೆಳೆಗಾರರ ಒಕ್ಕೂಟದ ಅದ್ಯಕ್ಷ ಕೇಚಂಡ ಕುಶಾಲಪ್ಪ ಅವರು ಆದಾಯಕ್ಕೆ ಮೀರಿ ನಿವರ್ಹಣೆ ವೆಚ್ಚ ತಗಲುತ್ತಿದ್ದು, ಪ್ರತಿವರ್ಷ ಸಾಲದ ಹೊರೆ ಹೆಚ್ಚಾಗುತ್ತಿದೆ. ಆದ್ದರಿಂದ ಸರ್ಕಾರವು ಬೆಳೆಗಾರರನ್ನು ಶೂನ್ಯ ಆದಾಯ ಹೊಂದಿರುವ ಬೆಳೆಗಾರರೆಂದು ಘೋಷಿಸಬೇಕು. ವಾಸ್ತವಾಂಶದ ಆದಾಯವನ್ನು ಪರಿಗಣಿಸಿ ಆದಾಯ ಪ್ರಮಾಣ ಪತ್ರ ನೀಡಬೇಕು. ಸಣ್ಣ ಬೆಳೆಗಾರರನ್ನು ಬಿಪಿಎಲ್ ಪಟ್ಟಿಗೆ ಸೇರಿಸಲು ನಿಬಂಧನೆಗಳನ್ನು ಸಡಿಲಿಸಿ ಸೌಲಭ್ಯ ಒದಗಿಸಬೇಕು.
ಕೊಡಗಿನ ಎಲ್ಲಾ ಬೆಳೆಗಾರರು ಎಲ್ಲಾ ಬ್ಯಾಂಕ್ಗಳ ಹಣಕಾಸು ಸಂಸ್ಥೆಗಳ, ಖಾಸಗಿಯಾಗಿ ಪಡೆದಿರುವ ಎಲ್ಲಾ ರೀತಿಯ ಸಾಲಗಳನ್ನು ಮನ್ನಾ ಮಾಡಿ ಮುಂದೆ ಬಡ್ಡಿ ರಹಿತವಾಗಿ ವಿಸ್ತರಿಸಬೇಕು. ಸಾಲ ಮರುಪಾವತಿಗೆ ಯಾವುದೇ ಒತ್ತಡವನ್ನು ಹಾಕದಂತೆ ಕ್ರಮ ಕೈಗೊಳ್ಳಬೇಕು.
ಉದ್ಯೋಗ ಖಾತ್ರಿ ಯೋಜನೆ ಯಡಿ ಜಿಲ್ಲೆಯ ಕಾಫಿ ಮತ್ತು ಎಲ್ಲಾ ಕೃಷಿ ಚಟುವಟಿಕೆಗೆ ಅವಕಾಶ ಕಲ್ಪಿಸಬೇಕು. 2020-21ರ ಸಾಲಿನ ಅತಿವೃಷ್ಠಿ ಬೆಳೆ ನಷ್ಟ ಪರಿಹಾರ ವಿತರಣೆ ಬಾಕಿ ಇದ್ದು ಇದನ್ನು ಆದಷ್ಟು ಶೀಘ್ರ ಪಾವತಿ ಮಾಡಬೇಕು. ಫಸಲು ಭೀಮಾ ಯೋಜನೆಯ ಮೂಲಕ ಕಾಳುಮೆಣಸು ಬೆಳೆಗೆ ಕಟ್ಟಿದ್ದ ವಿಮೆಯ ಸೌಲಭ್ಯ ಇನ್ನೂ ಬೆಳೆಗಾರರಿಗೆ ಪಾವತಿಯಾಗಿರುವುದಿಲ್ಲ. ಈ ಬಗ್ಗೆ ಕೂಡಲೇ ವಿಮೆ ಸೌಲಭ್ಯದ ಹಣವನ್ನು ಒದಗಿಸಬೇಕು.
ದಶಕಗಳಿಂದ ಹಲವಾರು ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಕಾಫಿ ಮಂಡಳಿಯಿಂದ ಬೆಳೆ ಉತ್ತೇಜನಕ್ಕೆ ನೀಡುವ ವಿವಿಧ ಸಹಾಯ ಧನ ಸ್ಥಗಿತವಾಗಿದ್ದು, ಇದನ್ನು ಮುಂದುವರೆಸಬೇಕು. ಶೇ. 98 ರಷ್ಟು ಸಣ್ಣ ಬೆಳೆಗಾರರಿರುವ ಕಾಫಿ ಉದ್ಯಮದಲ್ಲಿ ಪ್ರಯೋಜನವಾಗುವ ಈ ಸಹಾಯ ಧನ ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಒಕ್ಕೂಟದ ಬೇಡಿಕೆಗಳನ್ನು ಈಡೇರಿಸುವ ಸಂಬಂದ ಒಕ್ಕೂಟದ ಪಧಾದಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರೊಂದಿಗೂ ಸಮಾಲೋಚನೆ ನಡೆಸಿದರು. ಆಗ ಮಾತನಾಡಿದ ಜಿಲ್ಲಾಧಿಕಾರಿ ಅವರು 2020-21ನೇ ಸಾಲಿನ ಬೆಳೆ ನಷ್ಟ ಪರಿಹಾರ ಅರ್ಜಿಗಳನ್ನು ಅಪ್ಲೋಡ್ ಮಾಡುವುದು ಜಿಲ್ಲಾಡಳಿತವಾಗಿದ್ದು, ಖಾತೆಗೆ ಹಣ ಪಾವತಿಸುವುದು ಬೆಂಗಳೂರಿನಿಂದ ಸರಕಾರ ಮಟ್ಟದಲ್ಲಿ ಆಗಲಿದೆ. ಇದು ಹಂತ ಹಂತವಾಗಿ ಬಿಡುಗಡೆ ಯಾಗಲಿದೆ ಎಂದು ತಿಳಿಸಿದ್ದಾರೆ.
ದೇಶದ ಒಟ್ಟು ಕಾಫಿ ಉತ್ಪಾದನೆ 3.6 ಲಕ್ಷ ಟನ್ ಗಳಷ್ಟಿದ್ದು ಇದರಲ್ಲಿ ರಾಜ್ಯದ ಪಾಲು ಶೇಕಡಾ 70 ರಷ್ಟು ಇದೆ. ದೇಶದ ಒಟ್ಟು ಉತ್ಪಾದನೆಯಲ್ಲಿಒ ಕೊಡಗಿನ ಪಾಲು ಶೇಕಡಾ 30 ರಷ್ಟಿದೆ. ವಾರ್ಷಿಕ ಈ ಪುಟ್ಟ ಜಿಲ್ಲೆಯಲ್ಲಿ 1.25 ಲಕ್ಷ ಟನ್ ಗಳಷ್ಟು ಕಾಫಿ ಉತ್ಪಾದಿಸಲಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಾಫಿ ಬೆಳೆಗಾರರ ನೆರವಿಗೆ ಬರಲೇಬೇಕಿದೆ. ಏಕೆಂದರೆ ಹಿಂದೆಲ್ಲ ಕಾಫಿ ರಫ್ತಿನಿಂದ ಅಪಾರ ಪ್ರಮಾಣಣದ ವಿದೇಶೀ ವಿನಿಮಯವನ್ನು ಸರ್ಕಾರ ಗಳಿಸಿದೆ. ಈಗ ಸರ್ಕಾರ ಕೈ ಹಿಡಿಯುವುದೋ ಅಥವಾ ಕೈ ಎತ್ತುವುದೋ ಕಾದು ನೋಡಬೇಕಿದೆ.