ಇವತ್ತು ಸಂವಿಧಾನದ ದಿನಾಚರಣೆ. ನವೆಂಬರ್ 26, 1949 ರಂದು ದೇಶ ಸಂವಿಧಾನವನ್ನು ಅಧಿಕೃತವಾಗಿ ಅಂಗೀಕರಿಸಿ, ಪ್ರಜಾಸತ್ತತೆಯನ್ನು ಒಪ್ಪಿಕೊಂಡಿತು. ಸಂವಿಧಾನ ಈ ದೇಶಕ್ಕೆ ನಾವೇ ಕೊಟ್ಟುಕೊಂಡಿರುವ ಸಾಮಾಜಿಕ ವ್ಯಾಕರಣ. ಈ ದೇಶದ ಪ್ರತಿಯೊಬ್ಬ ಪ್ರಜೆಯ ಅಸ್ತಿತ್ವ ಇರುವುದೇ ಸಂವಿಧಾನ ಮುಖಾಂತರ.
ಭಾರತದ ಸಂವಿಧಾನದ ಏಕೈಕ ಶಿಲ್ಪಿ, ಸಂವಿಧಾನದ ಪಿತಾಮಹ ಡಾ ಅಂಬೇಡ್ಕರ್ ಮಾತ್ರ. ಯಾಕೆಂದರೆ 395 ವಿಧಿಗಳು, 8 ಅನುಚ್ಛೇದಗಳು, 22 ಭಾಗಗಳು, ಒಂದು ಲಕ್ಷಕ್ಕಿಂತಲೂ ಹೆಚ್ಚು ಶಬ್ದಗಳು ಹಾಗೂ ಇನ್ನೂರಕ್ಕಿಂತ ಹೆಚ್ಚು ಪುಟಗಳ ಸಂವಿಧಾನವನ್ನು ರಚಿಸುವಲ್ಲಿ ಡಾ ಅಂಬೇಡ್ಕರ್ ಪಟ್ಟ ಶ್ರಮ, ವ್ಯಯಿಸಿದ ಸಮಯ ಎಲ್ಲರಿಗಿಂತಲೂ ಹೆಚ್ಚು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಂವಿಧಾನ ಕರಡು ಸಮಿತಿಯ ಸದಸ್ಯರಾಗಿ ಕೃಷ್ಣಸ್ವಾಮಿ ಅಯ್ಯರ್, ಗೋಪಾಲಸ್ವಾಮಿ ಅಯ್ಯಂಗಾರ್, ಕೆ ಎಮ್ ಮುನ್ಶಿಯಂಥ ಘಟಾನುಘಟಿಗಳು ಇದ್ದರೂ, ಸಾಮರ್ಥ್ಯ ಹಾಗೂ ಅಗಾಧವಾದ ಜ್ಞಾನದಾಧರದಲ್ಲಿ ಸಮಿತಿಯ ಅಧ್ಯಕ್ಷರನ್ನಾಗಿ ಆರಿಸಿದ್ದು ಬಾಬಾಸಾಹೇಬರನ್ನು. ಸಂವಿಧಾನ ಕರಡು ಸಮಿತಿಯಲ್ಲಿ ಬಾಬಾಸಾಹೇಬರ ಜೊತೆ ಇನ್ನೂ ಆರು ಜನರಿದ್ದರು. ಆದರೆ ಕಾರಾಣಾಂತರಗಳಿಂದ ಕರಡು ಸಮಿತಿಯ ಹೆಚ್ಚಿನ ಸದಸ್ಯರು ಸಂವಿಧಾನ ರಚನೆಯಲ್ಲಿ ಭಾಗವಹಿಸಲೇ ಇಲ್ಲ. ಒಬ್ಬರು ತೀರಿಹೋದರು, ಇನ್ನೊಬ್ಬರು ಅಮೇರಿಕಾಕ್ಕೆ ಹೋದರೆ, ಮತ್ತೋರ್ವರು ತಮ್ಮ ರಾಜ್ಯದ ವಿಷಯಗಳಲ್ಲೇ ತಲ್ಲೀನರಾದರು. ಇನ್ನಿಬ್ಬರು ಅನಾರೋಗ್ಯದ ನಿಮಿತ್ತ ದೆಹಲಿ ಕಡೆ ಬರಲೇ ಇಲ್ಲ. ಹೀಗಾಗಿ ಇಡೀ ಸಂವಿಧಾನವನ್ನು ರಚಿಸುವ ಸಂಪೂರ್ಣ ಜವಾಬ್ದಾರಿ ಬಾಬಾಸಾಹೇಬರ ಹೆಗಲಿಗೇ ಬಿತ್ತು.




ಸುಮಾರು ಎರಡೂವರೆ ವರುಷಗಳ ಕಾಲ ನಡೆದ ಸಂವಿಧಾನ ರಚನೆ, ನವೆಂಬರ್ 26, 1949ರಂದು ಸಂವಿಧಾನ ಸಭೆಯ ಅನುಮೋದನೆ ಪಡೆಯುವ ಮೊದಲು ಸುಮಾರು 2500 ಬಾರಿ ತಿದ್ದುಪಡಿಗೆ ಒಳಗಾಗಿತ್ತು. ಕೊನೆಗೆ ಈ ಸಂವಿಧಾನ ಅನುಮೋದನೆಯಾದಾಗ ಅದು ಜಗತ್ತಿನ ಅತೀ ದೊಡ್ಡ ಸಂವಿಧಾನವೆಂದು ಪರಿಗಣಿಸಲ್ಪಟ್ಟಿತ್ತು. ಸದ್ಯಕ್ಕೆ ನಮ್ಮ ಸಂವಿಧಾನ ಜಗತ್ತಿನ ಎರಡನೆಯ ಅತೀ ದೊಡ್ಡ ಸಂವಿಧಾನ. ಮೊದಲನೆಯ ಸ್ಥಾನದಲ್ಲಿ ಈವಾಗ ಅಲ್ಬೇನಿಯಾದ ಸಂವಿಧಾನ ಇದೆ.

ಸಂಘ ಪರಿವಾರ ಹೇಳುವಂತೆ, ನಮ್ಮ ದೇಶ ಯಾವುದೇ ದೇಶದ ಸಂವಿಧಾನದ ಕಾಪಿ-ಪೇಸ್ಟ್ ಅಲ್ಲ, ಬ್ರಿಟನ್, ಅಮೇರಿಕಾ, ಐರ್ಲೆಂಡ್, ಫ್ರಾನ್ಸ್, ಆಸ್ಟ್ರೇಲಿಯಾ, ಜರ್ಮನಿ, ಯುಎಸ್‍ಎಸ್‍ಆರ್ ಮುಂತಾದ ದೇಶಗಳ ಸಂವಿಧಾನಗಳ ಪ್ರಭಾವ ನಮ್ಮ ಸಂವಿಧಾನದ ಮೇಲೂ ಇದೆಯಾದಾದರೂ ಅಲ್ಲಿಂದ ನಕಲಾಗಿಲ್ಲ, ಬದಲಾಗಿ ಅವುಗಳ ಕೆಲ ಆಶಯಗಳನ್ನು ಮೂಲಾಧಾರವಾಗಿಟ್ಟು, ಭಾರತದ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ, ಭೌಗೋಳಿಕ, ಭಾಷಿಕಾ ವಿವಿಧತೆಗಳಿಗೆ ಅನುಸಾರವಾಗಿ ಭಾರತದ ಸಂವಿಧಾನವನ್ನು ರಚಿಸಲಾಗಿದೆ.
ಸಂವಿಧಾನ ಕರಡು ಸಮಿತಿಯ ಸದಸ್ಯರಾಗಿದ್ದವರು ಬಾಬಾಸಾಹೇಬ್ ಅಂಬೇಡ್ಕರ್, ಗೋಪಾಲಸ್ವಾಮಿ ಅಯ್ಯಂಗಾರ್, ಕೃಷ್ಣಸ್ವಾಮಿ ಅಯ್ಯರ್, ಕೆಎಮ್ ಮುನ್ಶಿ, ಸಯ್ಯದ್ ಮಹಮೂದ್ ಸಾ’ದುಲ್ಲಾ, ಬಿ ಎಲ್ ಮಿಟ್ಟರ್, ಡಿ ಪಿ ಖೈತಾನ್. (ಮಿಟ್ಟರ್ ಅವರ ಅನಾರೋಗ್ಯದ ಕಾರಣದಿಂದ ಸಮಿತಿಯಿಂದ ಹೊರಗುಳಿದಾಗ ನಮ್ಮ ಮೈಸೂರಿನ ಮಾಧವ ರಾವ್ ಅವರ ಜಾಗಕ್ಕೆ ಆಯ್ಕೆಯಾಗಿದ್ದರೆ, ಡಿ ಪಿ ಖೈತಾನ್ 1948ರಲ್ಲಿ ತೀರಿಹೋದ ಕಾರಣ ಅವರ ಜಾಗಕ್ಕೆ ಟಿ ಟಿ ಕೃಷ್ಣಮಾಚಾರಿ ಆಯ್ಕೆಯಾಗಿದ್ದರು). ಭಾರತದ ಸಂವಿಧಾನ ನವೆಂಬರ್ 26, 1949ರಂದು ಸಂವಿಧಾನ ಸಭೆಯ ಅನುಮೋದನೆ ಪಡೆದಾಗ ಸಂವಿಧಾನ ಸಭೆಯನ್ನುದ್ದೇಶಿಸಿ ಮಾತಾನಾಡಿದ ಟಿ ಟಿ ಕೃಷ್ಣಮಾಚಾರಿ ಹೀಗೆಂದಿದ್ದಾರೆ “ಕರಡು ರಚನಾ ಸಮಿತಿಗೆ ಈ ಸಂವಿಧಾನ ಸಭೆ ಏಳು ಜನರನ್ನು ನೇಮಿಸಿತ್ತು. ಅದರಲ್ಲಿ ಒಬ್ಬರು ರಾಜೀನಾಮೆ ಕೊಟ್ಟಾಗ ಅವರ ಜಾಗಕ್ಕೆ ಇನ್ನೋರ್ವರ ಆಯ್ಕೆಯಾಯಿತು. ಒಬ್ಬರು ತೀರಿಹೋದರು, ಒಬ್ಬರು ಅಮೇರಿಕಾಕ್ಕೆ ಹೋದರೆ, ಮತ್ತೊಬ್ಬ ಸದಸ್ಯರು ತಾವು ಪ್ರತಿನಿಧಿಸುತ್ತಿದ್ದ ರಾಜ್ಯದ ವಿಷಯಗಳಲ್ಲೇ ತಲ್ಲೀನರಾಗಿದ್ದರೆ, ಇನ್ನಿಬ್ಬರು ದೆಹಲಿಯಿಂದ ದೂರವಿದ್ದು, ಅವರ ಅನಾರೋಗ್ಯದ ಕಾರಣದಿಂದ ಸಂವಿಧಾನ ರಚನೆಯಲ್ಲಿ ಭಾಗವಹಿಸಲಿಲ್ಲ. ಹೀಗಾಗಿ ಸಂವಿಧಾನವನ್ನು ರಚಿಸುವ ಸಂಪೂರ್ಣ ಜವಾಬ್ದಾರಿ ಡಾ ಅಂಬೇಡ್ಕರ್ ಅವರ ಹೆಗಲಿಗೆ ಬಿತ್ತು. ಈ ಜವಾಬ್ದಾರಿಯನ್ನು ಸಮರ್ಪಕವಾಗಿ ಹಾಗೂ ಪ್ರಶಂಸನೀಯ ರೀತಿಯಲ್ಲಿ ನಿಭಾಯಿಸಿದಕ್ಕಾಗಿ ನಾವೆಲ್ಲರೂ ಅವರಿಗೆ ಋಣಿಯಾಗಿರಬೇಕೆಂದು ನನ್ನ ಅಭಿಪ್ರಾಯ.”
Also Read: ಅಂಬೇಡ್ಕರ್ ಪ್ರೇರಿತ ಅರಿವಿನ ಧರ್ಮ ಅರ್ಥವಾಗುವವರೆಗೆ ಭಾರತಕ್ಕೆ ಬೆಳಕಿಲ್ಲ!
ಭಾರತದ ಪ್ರಪ್ರಥಮ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಸಂವಿಧಾನ ಸಭೆಯ ಡಿಬೇಟ್‍ನಲ್ಲಿ ಒಂದೊಮ್ಮೆ ಹೀಗೆಂದಿದ್ದರು. “ಅಧ್ಯಕ್ಷನ ಸ್ಥಾನದಲ್ಲಿದ್ದು ಕರಡು ರಚನೆ ಸಮಿತಿಯ ದೈನಂದಿನ ಕೆಲಸಗಳನ್ನು ನಾನು ಬಲು ಹತ್ತಿರದಿಂದ ನೋಡಿದ್ಡೇನೆ. ಹಾಗಾಗಿ ಬೇರೆಯರವರಿಗಿಂತ ಹೆಚ್ಚಾಗಿ ಸಂವಿಧಾನ ಕರಡು ರಚನೆ ಸಮಿತಿಯ ಸದಸ್ಯರು ಹಾಗೂ ಪ್ರತ್ಯೇಕವಾಗಿ ಸಮಿತಿ ಅಧ್ಯಕ್ಷರು ಎಷ್ಟೊಂದು ಶೃದ್ಧೆ ಹಾಗೂ ಚೈತನ್ಯದಿಂದ ಈ ಸಂವಿಧಾನವನ್ನು ರಚಿಸಿದ್ದಾರೆ ಎಂದು ನನಗೆ ತಿಳಿದಿದೆ. ಅಂಬೇಡ್ಕರ್ ಅವರನ್ನು ಕರಡು ಸಮಿತಿಗೆ ಆಯ್ಕೆ ಮಾಡಿ, ತದನಂತರ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿರುವುದಕ್ಕಿಂತ ಹೆಮ್ಮೆಯ ಕೆಲಸವನ್ನು ನಾವು ಮಾಡಿಲ್ಲ”.
ಜೂನ್ 5, 1952 ರಂದು ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾನಿಲಯ (ಇದೇ ವಿಶ್ವವಿದ್ಯಾನಿಲಯದಲ್ಲಿ ಬಾಬಾಸಾಹೇಬರು ತಮ್ಮ ಎಮ್‍ಎ ಪದವಿಯನ್ನೂ ಪಡೆದಿದ್ದರು) ತನ್ನ ವಿಶೇಷ ಘಟಿಕೋತ್ಸವದಲ್ಲಿ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅವರು ದೇಶಕ್ಕೆ ಸಲ್ಲಿಸಿದ ಅಮೋಘ ಸೇವೆಗಾಗಿ, ಅದರಲ್ಲೂ ಸಂವಿಧಾನ ರಚನೆಯಲ್ಲಿ ಅವರ ಪಾತ್ರಕ್ಕಾಗಿ ಗೌರವಾರ್ಥ LLD ಪದವಿಯನ್ನು ನೀಡಿತು. (ಅದರ ಕಾಪಿ, ಜೊತೆಗೆ ಪದವಿ ಪ್ರಧಾನ ಸಮಾರಂಭದಲ್ಲಿ ಅಮೇರಿಕಾದ ಖ್ಯಾತ ಕವಿ ವಾಲೇಸ್ ಸ್ಟೀವನ್ಸ್ ಬಾಬಾಸಾಹೇಬರ ಜೊತೆ ತೆಗೆಸಿಕೊಂಡ ಪಟವನ್ನು ಈ ಕೆಳಗಿದೆ)

