ದೇಶದ ಸುದ್ದಿವಾಹಿನಿಗಳೆಲ್ಲ ಚೀನಾ ಹುತಾತ್ಮರ ಕುರಿತಂತೆ ಪ್ರಧಾನಿ ಮೋದಿ ಹೇಳಿದ ‘ಸತ್ಯ’ಗಳನ್ನು ಪದೇ ಪದೇ ಬಿತ್ತರಿಸುತ್ತಿದ್ದ ಹೊತ್ತಿನಲ್ಲಿ ಬ್ಯುಸಿನೆಸ್ ಚಾನಲ್‌ಗಳು ಮೋದಿ ಅವರ ‘ಆಪ್ತಮಿತ್ರ’ ಮುಖೇಶ್ ಅಂಬಾನಿ ಕುರಿತ ಸುದ್ದಿಯನ್ನು ಬಿತ್ತರಿಸುತ್ತಿದ್ದವು. ಅದಕ್ಕೆ ಮುಖ್ಯ ಕಾರಣ ಏನಂದರೆ ಪ್ರಧಾನಿ ನರೇಂದ್ರಮೋದಿಯ ಆಪ್ತ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯು 150 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ಸೋಮವಾರದ (ಜೂನ್ 22) ವಹಿವಾಟಿನಲ್ಲಿ ದಾಖಲಿಸಿತು. ಅಲ್ಲದೇ 150 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿರುವ ಭಾರತದ ಏಕೈಕ ಕಂಪನಿ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಅಲ್ಲದೇ ದಿನದ ವಹಿವಾಟಿನಲ್ಲಿ ರಿಲಯನ್ಸ್ ಕಂಪನಿಯ ಷೇರು ಸರ್ವಕಾಲಿಕ ಗರಿಷ್ಠ ಮಟ್ಟಕ್ಕೆ(1804 ರುಪಾಯಿ) ಏರಿತು.
2018ರಲ್ಲಿ ಇದೇ ರಿಲಯನ್ಸ್ ಕಂಪನಿಯು 100 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯದ ಕಂಪನಿಯೆಂಬ ಹೆಗ್ಗಳಿಕೆ ಪಡೆದಿತ್ತು. ಆದರೆ, ಅದಕ್ಕೂ ಮುನ್ನವೇ ಟಾಟಾ ಸಮೂಹದ ದೈತ್ಯ ಮಾಹಿತಿ ತಂತ್ರಜ್ಞಾನ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) 100 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯದ ದೇಶದ ಮೊದಲ ಕಂಪನಿಯಾಗಿ ಹೊರ ಹೊಮ್ಮಿತ್ತು. ಈಗ ಟಿಸಿಎಸ್ ಎರಡನೇ ಸ್ಥಾನದಲ್ಲಿದೆ.
ಇಡೀ ದೇಶದ ಆರ್ಥಿಕತೆ ಕುಸಿದಿದೆ. ಕರೊನಾ ಸಂಕಷ್ಟದಿಂದ ದೇಶದ ಜನತೆ ಕಂಗೆಟ್ಟಿದ್ದಾರೆ. ಚೀನಾ ದಾಳಿಯಿಂದಾಗಿ ಮೋದಿ ತಮ್ಮ ವರ್ಚಸ್ಸು ಹಾಳಾಗುವುದನ್ನು ತಡೆಯುವುದು ಹೇಗೆಂದು ಚಿಂತಿತರಾಗಿದ್ದಾರೆ. ಇಂತಹ ಹೊತ್ತಿನಲ್ಲೇ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಈ ಎಲ್ಲಾ ಸಾಧನೆಗಳನ್ನು ಮಾಡಿದೆ. ರಿಲಯನ್ಸ್ ಇಂಡಸ್ಟೀಸ್ ಮಾರುಕಟ್ಟೆ ಬಂಡವಾಳವು (ಜೂನ್ 22ರಂದು) 11,80,719.33 ಕೋಟಿ ರುಪಾಯಿಗಳಿಗೆ ಏರಿತ್ತು. ಕರೊನಾ ಸೋಂಕು ಹರಡಿ ಇಡೀ ಷೇರು ಮಾರುಕಟ್ಟೆ ಕುಸಿದಾಗ 867 ರುಪಾಯಿಗೆ ಕುಸಿದಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಷೇರು ದರವು ಮೂರೇ ತಿಂಗಳಲ್ಲಿ ದುಪ್ಪಟ್ಟಾಗಿದೆ.
ಇಂತಹ ಸಂಕಷ್ಟ ಕಾಲದಲ್ಲೂ ರಿಲಯನ್ಸ್ ಇಂಡಸ್ಟ್ರೀಸ್ ಸರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಲು ಮತ್ತು 150 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಸಾಧಿಸಲು ಮುಖ್ಯ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾತ್ಮಕ ನೆರವು. ಇಡೀ ದೇಶದಲ್ಲಿ ಮೊಬೈಲ್ ಸಂಪರ್ಕ ಪಡೆಯಲು ಗುರುತಿನ ಪತ್ರ, ವಿಳಾಸ ಧೃಡೀಕರಣ ಪತ್ರ ಇತ್ಯಾದಿ ದಾಖಲೆಗಳನ್ನು ಪಡೆಯುವುದನ್ನು ಕಡ್ಡಾಯ ಮಾಡಿದ್ದ ಮೋದಿ ಸರ್ಕಾರವು ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಕಂಪನಿಗಾಗಿ ತಾನೇ ರೂಪಿಸಿದ್ದ ನೀತಿ ನಿಯಮಗಳನ್ನು ಗಾಳಿಗೆ ತೂರಿತ್ತು. ಜತೆಗೆ ದೇಶದ ಅತ್ಯಂತ ಸುರಕ್ಷಿತ ದಾಖಲೆಯಾಗಬೇಕಿದ್ದ ಆಧಾರ್ ಡೇಟಾವನ್ನು ರಿಲಯನ್ಸ್ ಜಿಯೋ ಕಂಪನಿಗೆ ನೀಡಿತು. ಹೀಗಾಗಿ ರಿಲಯನ್ಸ್ ಜಿಯೋ ಯಾವುದೇ ದಾಖಲೆ ಇಲ್ಲದೇ ಕೇವಲ ಆಧಾರ್ ಕಾರ್ಡ್ ನಂಬರ್ ಪಡೆದು ಕೆಲವೇ ದಿನಗಳಲ್ಲಿ ಕೋಟ್ಯಂತರ ಸಂಪರ್ಕಗಳನ್ನು ನೀಡಿತು. ಕೆಲವೇ ವಾರಗಳಲ್ಲಿ 10 ಕೋಟಿ ಗ್ರಾಹಕರನ್ನು ಪಡೆದ ವಿಶ್ವದ ಏಕೈಕ ಕಂಪನಿ ಎಂಬ ದಾಖಲೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡಿತು. ಮಾರುಕಟ್ಟೆಗೆ ಬಂದ ಮೂರೇ ವರ್ಷದಲ್ಲಿ ರಿಲಯನ್ಸ್ ಜಿಯೋ, ಈಗ ನಂಬರ್ 1 ಪಟ್ಟಕ್ಕಾಗಿ ಹತ್ತಾರು ವರ್ಷಗಳಿಂದ ಉದ್ಯಮದಲ್ಲಿರುವ ಏರ್ಟೆಲ್ ಜತೆ ಸೆಣೆಸುತ್ತಿದೆ.
ಮೋದಿ ಸರ್ಕಾರವು ರಿಲಯನ್ಸ್ ಜಿಯೋಗೆ ಆಧಾರ್ ಸೇವೆಯನ್ನು ಉಡುಗೊರೆಯಾಗಿ ಕೊಡುವಾಗ ದೇಶದ ಸಂಪರ್ಕಸೇತುವಾಗಿರುವ ಭಾರತ ಸಂಚಾರ ನಿಗಮ(ಬಿಎಸ್ಎನ್ಎಲ್) ಮತ್ತು ಮಹಾನಗರ ಟೆಲಿಫೋನ್ ನಿಗಮಗಳ(ಎಂಟಿಎನ್ಎಲ್) ಹಿತಸಕ್ತಿಯನ್ನು ಬಲಿಗೊಟ್ಟಿತು. ನರೇಂದ್ರ ಮೋದಿ ಸರ್ಕಾರಕ್ಕೆ ಕಾರ್ಪೊರೆಟ್ ಸಖ್ಯಕ್ಕಿಂತ ದೇಶದ ಸಾರ್ವಜನಿಕ ವಲಯಗಳ ಉದ್ಯಮಗಳ ಹಿತಾಸಕ್ತಿಯೇ ಮುಖ್ಯವಾಗಿದ್ದರೆ, ಆಧಾರ್ ಸೇವೆಯನ್ನು ಬಳಸಿಕೊಳ್ಳುವ ಅವಕಾಶವನ್ನು ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಗೆ ನೀಡಬೇಕಿತ್ತು, ಆಗ ಆ ಎರಡೂ ಕಂಪನಿಗಳು ಮೊಬೈಲ್ ಸೇವೆಯಲ್ಲಿ ಅಗ್ರಸ್ಥಾನದಲ್ಲಿ ಇರುತ್ತಿದ್ದವು. ಆದರೆ, ಮೋದಿ ಸರ್ಕಾರ ಕಾರ್ಪೊರೆಟ್ ವಲಯದ ಪರವಾಗಿ ನಿರ್ಧಾರ ಕೈಗೊಂಡಿತು. ತತ್ಪರಿಣಾಮ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗದೇ ನಷ್ಟಕ್ಕೀಡಾದವು. ಹೀಗಾಗಿ ಉಭಯ ಕಂಪನಿಗಳ 1 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗೆ ಕಡ್ಡಾಯ ನಿವೃತ್ತಿ ನೀಡಲಾಯಿತು.
ಮೋದಿ ವಿರುದ್ಧ ಟೀಕೆ ಮಾಡಿದಾಗಲೆಲ್ಲ ಬಿಜೆಪಿ ವಕ್ತಾರನಂತೆ ಮೋದಿ ರಕ್ಷಣೆಗೆ ಬರುವ ರವಿಶಂಕರ್ ಪ್ರಸಾದ್ ಅವರು ಹಲವು ವರ್ಷಗಳಿಂದ ದೂರಸಂಪರ್ಕ ಇಲಾಖೆ ಸಚಿವರಾಗಿದ್ದಾರೆ. ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಗಳ ಎಷ್ಟೆಲ್ಲ ಸೌಲಭ್ಯಗಳ ನಡುವೆಯೂ ಮಾರುಕಟ್ಟೆ ಕಳೆದುಕೊಂಡಿರುವುದಕ್ಕೆ ಸಚಿವರ ಅಸಮರ್ಥತೆ ಮತ್ತು ಕಾರ್ಪೊರೆಟ್ ಪ್ರೇಮವೇ ಕಾರಣ. ಆ ಲೆಕ್ಕದಲ್ಲಿ ರವಿಶಂಖರ್ ಪ್ರಸಾದ್ ಅವರಿಗೆ ನೈತಿಕತೆ ಇದ್ದರೆ ಈ ವೇಳೆಗೆ ರಾಜೀನಾಮೆ ನೀಡುತ್ತಿದ್ದರು. ರಾಜಿನಾಮೆ ನೀಡಿಲ್ಲ ಅದು ಬೇರೆ ಮಾತು!
ರಿಲಯನ್ಸ್ ಇಂಡಸ್ಟ್ರೀಸ್ ಈಗ 150 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯದ ಕಂಪನಿಯಾಗಲು ಮೋದಿ ಸರ್ಕಾರದ ನೆರವು ನೇರವಾಗಿಯೇ ಲಭ್ಯವಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಭಾಗವಾಗಿರುವ ಜಿಯೋ ಪ್ಲಾಟ್ ಫಾರಂ ಮಾರುಕಟ್ಟೆ ಮೌಲ್ಯವೇ 5 ಲಕ್ಷ ಕೋಟಿ ರುಪಾಯಿ ದಾಟಿದೆ. ಈ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು, ಇಡೀ ದೇಶದ ಸಂಪರ್ಕ ಸೇತುವೆಯ ಭಾಗವಾಗಿರುವ ಎಂಟಿಎನ್ಎಲ್ ಮಾರುಕಟ್ಟೆ ಮೌಲ್ಯವನ್ನು ಕೇವಲ 627 ಕೋಟಿಗೆ ಕುಗ್ಗಿಸಿದೆ. ಬಿಎಸ್ಎನ್ಎಲ್ ಷೇರುಪೇಟೆಯಲ್ಲಿ ಲಿಸ್ಟಾಗಿಲ್ಲ. ಲಿಸ್ಟಾಗಿದ್ದರೆ ಅದರ ಮಾರುಕಟ್ಟೆ ಮೌಲ್ಯವೂ 1000 ಕೋಟಿ ಆಜುಬಾಜಿಗೆ ಇಳಿಯುತ್ತಿತ್ತು. ಅದೇ ಮೂರು ವರ್ಷಗಳ ಹಿಂದೆ ಮಾರುಕಟ್ಟೆಗೆ ಬಂದಿರುವ ರಿಲಯನ್ಸ್ ಜಿಯೋ ಮಾರುಕಟ್ಟೆ ಮೌಲ್ಯವು 5 ಲಕ್ಷ ಕೋಟಿ ದಾಟಿದೆ. (ಷೇರುಪೇಟೆಯಲ್ಲಿ ಲಿಸ್ಟಾಗುವ ಪೂರ್ವದಲ್ಲಿ ಕಂಪನಿಯ ಮೌಲ್ಯವನ್ನು ಮಾರುಕಟ್ಟೆ ಮೌಲ್ಯವೆಂದೂ ಲಿಸ್ಟಾದ ನಂತರ ಮಾರುಕಟ್ಟೆ ಬಂಡವಾಳ ಮೌಲ್ಯವೆಂದು ಹೇಳಲಾಗುತ್ತದೆ.)
ಎರಡು ತಿಂಗಳ ಹಿಂದೆ ಅಂದರೆ ಏಪ್ರಿಲ್ 22 ರಂದು ರಿಲಯನ್ಸ್ ಜಿಯೋ ಪ್ಲಾಟ್ಫಾರಂ ನಲ್ಲಿ ‘ಫೇಸ್ ಬುಕ್’ 5.7 ಬಿಲಿಯನ್ ಡಾಲರ್ ಹೂಡಿಕೆ ಮಾಡಿ ಶೇ.10 ರಷ್ಟು ಪಾಲು ಖರೀದಿಸಿತು. ಅದಾದ ನಂತರ ರಿಲಯನ್ಸ್ ಜಿಯೋ ಪ್ಲಾಟ್ಫಾರಂನಲ್ಲಿ ಹೂಡಿಕೆ ಮಾಡಲು ಜಾಗತಿಕ ಹೂಡಿಕೆದಾರರೆಲ್ಲ ಸಾಲುಗಟ್ಟಿ ನಿಂತರು. ಈ ಎರಡು ತಿಂಗಳ ಅವಧಿಯಲ್ಲಿ ಮುಖೇಶ್ ಅಂಬಾನಿಯು ಜಿಯೋ ಪ್ಲಾಟ್ಫಾರಂನ ಶೇ.25ರಷ್ಟು ಪಾಲನ್ನು 15.6 ಬಿಲಿಯನ್ ಡಾಲರ್ ಗೆ ಮಾರಾಟ ಮಾಡಿದರು. ಫೇಸ್ ಬುಕ್ ನಂತರ ಜಾಗತಿಕ ಹೂಡಿಕೆದಾರರಾದ ಕೆಕೆಆರ್, ವಿಸ್ಟಾ, ಜನರಲ್ ಅಟ್ಲಾಂಟಿಕ್, ಟಿಜಿಪಿ, ಎಲ್ ಕ್ಯಾಟ್ಟರಾನ್, ಸಿಲ್ವರ್ ಲೇಕ್, ಯುನೈಟೆಡ್ ಅರಬ್ ಎಮಿರೇಟ್ಸ್ ನ ಮುಬಡಾಲ, ಅಬುದಾಬಿ ಇನ್ವೆಸ್ಟ್ಮೆಂಟ್ ಅಥಾರಿಟಿ ಮತ್ತು ಸೌದಿ ಅರೇಬಿಯಾ ಸಾವರಿನ್ ಫಂಡ್ ಹೂಡಿಕೆ ಮಾಡಿವೆ. ಶೇ.25ರಷ್ಟು ಜಿಯೋ ಪ್ಲಾಟ್ಫಾರಂ ಪಾಲು ಮಾರಾಟ ಮಾಡಿದ ಮುಖೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಮೇಲಿದ್ದ ಸುಮಾರು 1.60 ಲಕ್ಷ ಕೋಟಿ ಸಾಲವನ್ನು ತೀರಿಸಿ ಋಣಮುಕ್ತರಾಗುತ್ತಿದ್ದಾರೆ. ಮುಂದಿನ ವರ್ಷದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಿಂದ ರಿಲಯನ್ಸ್ ಜಿಯೋ ಫ್ಲಾಟ್ಫಾರಂ ಪ್ರತ್ಯೇಕ ಸಂಸ್ಥೆಯಾಗಲಿದ್ದು ಷೇರು ವಿನಿಮಯ ಕೇಂದ್ರದಲ್ಲಿ ಲಿಸ್ಟಾಗಲಿದೆ.
ಮುಖೇಶ್ ಅಂಬಾನಿಗೆ ಮೋದಿ ಸರ್ಕಾರದ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲ ಇರುವುದರಿಂದಾಗಿಯೇ ರಿಲಯನ್ಸ್ ಜಿಯೋಪ್ಲಾಟ್ಫಾರಂ ನಲ್ಲಿ ಹೂಡಿಕೆ ಮಾಡಲು ಜಾಗತಿಕ ಹೂಡಿಕೆದಾರರು ಮುಗಿಬಿದ್ದಿದ್ದಾರೆ. ಈಗ ಜಿಯೋ ಪ್ಲಾಟ್ಫಾರಂ ಮಾರುಕಟ್ಟೆ ಮೌಲ್ಯವು ಸುಮಾರು 5 ಲಕ್ಷ ಕೋಟಿ ರುಪಾಯಿ ಎಂದು ಅಂದಾಜಿಸಲಾಗಿದೆ. ಲಿಸ್ಟಾಗುವ ಹೊತ್ತಿಗೆ ಇದು 7 ಲಕ್ಷ ಕೋಟಿ ರುಪಾಯಿ ಆಗುವ ಸಾಧ್ಯತೆ ಇದೆ. ಮೋದಿ ಸರ್ಕಾರವು ರುಪಾಯಿ ಮೌಲ್ಯವನ್ನು ತಗ್ಗಿಸದೇ ಇದ್ದರೆ, ಡಾಲರ್ ವಿರುದ್ಧ ರುಪಾಯಿ ಮೌಲ್ಯವು 70 ರುಪಾಯಿಗಳೇ ಆಗಿದ್ದರೆ, ಜಿಯೋ ಪ್ಲಾಟ್ಫಾರಂ ಕಂಪನಿಯು ಲಿಸ್ಟಾಗುವ ಹೊತ್ತಿಗೆ 100 ಬಿಲಿಯನ್ ಡಾಲರ್ ಕಂಪನಿಯೆಂಬ ಹೆಗ್ಗಳಿಕೆ ಪಡೆದಿರುತ್ತದೆ.
ರಿಲಯನ್ಸ್ ಇಂಡಸ್ಟ್ರೀಸ್ ಸಾಲ ಮುಕ್ತವಾಗುತ್ತಿದೆ ಮತ್ತು ರಿಲಯನ್ಸ್ ಜಿಯೋ ಪ್ಲಾಟ್ಫಾರಂ ಪ್ರತ್ಯೇಕವಾಗಿ ಲಿಸ್ಟಾಗಲಿದೆ ಎಂಬ ಕಾರಣಕ್ಕೆ ರಿಲಯನ್ಸ್ ಷೇರು ದರ ತೀವ್ರವಾಗಿ ಏರುತ್ತಿದೆ. ಇದೆಲ್ಲವೂ ಸಾಧ್ಯವಾಗಿದ್ದು ಮೋದಿ ಸರ್ಕಾರವು ಮುಖೇಶ್ ಅಂಬಾನಿಗೆ ಆಧಾರ್ ಮಾಹಿತಿ ಬಳಸಿಕೊಂಡು ಜಿಯೋ ಸಿಮ್ ನೀಡಲು ಅವಕಾಶ ನೀಡಿದ್ದರಿಂದಾಗಿಯೇ!
ಮೋದಿ ಸರ್ಕಾರವು ಸಾರ್ವಜನಿಕ ಉದ್ಯಮಗಳ ಬಗ್ಗೆ ಇಟ್ಟಿರುವ ನಿರ್ಲಕ್ಷ್ಯ ಮತ್ತು ಮಲತಾಯಿ ಧೋರಣೆಯನ್ನು ಹೀಗೆ ಮುಂದುವರೆಸಿದರೆ ಎಂಟಿಎನ್ಎಲ್ ಷೇರು 9.95 ರುಪಾಯಿ ಇದ್ದದ್ದು, ಕೇವಲ 95 ಪೈಸೆಗೆ ಇಳಿದರೂ ಅಚ್ಚರಿ ಇಲ್ಲ!