ಅಂಗವೈಕಲ್ಯತೆ ಎನ್ನುವುದು ಬಹುತೇಕ ಬಡ ವ್ಯಕ್ತಿಗಳನ್ನು ಬಿಕ್ಷಾಟನೆಗೆ ತಳ್ಳಿಬಿಡುತ್ತದೆ. ಆದರೆ ಇಂತಹ ಅಂಗವಿಕಲತೆಯ ನಡುವೆಯೂ ಸ್ವಾವಲಂಬಿಗಳಾಗಿ ಬದುಕುತ್ತಿರುವ ಅನೇಕ ವಿಕಲ ಚೇತನರು ನಮ್ಮ ನಡುವೆ ಇದ್ದು ಇತರರಿಗೆ ಮಾದರಿ ಆಗಿದ್ದಾರೆ. ಅಂತಹ ಯಶೋಗಾಥೆ ಮಡಿಕೇರಿಯ ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ ಶೆಟ್ಟಳ್ಳಿ ಗ್ರಾಮದಲ್ಲಿ ದರ್ಜಿ ವೃತ್ತಿ ಮಾಡಿಕೊಂಡು ಬದುಕು ಸಾಗಿಸುತ್ತಿರುವ ರುದ್ರಾಚಾರಿ ಅವರದು.
ಟೈಲರ್ ವೃತ್ತಿಗೆ ನೈಪುಣ್ಯತೆ ಹಾಗೂ ನಾಜೂಕು ಬೇಕೆ ಬೇಕು, ಇಲ್ಲದಿದ್ದರೆ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಇದರಲ್ಲಿ ಯಶಸ್ಸು ಗಳಿಸುವುದು ಸುಲಭದ ಮಾತೇನಲ್ಲ. ಅಂತಹುದರಲ್ಲಿ ಕಣ್ಣುಗಳೇ ಕಾಣದ ವ್ಯಕ್ತಿಯೊಬ್ಬರು ಟೈಲರಿಂಗ್ ಮಾಡುತ್ತಿರುವುದು ಆಶ್ಚರ್ಯ ಅಲ್ಲವೇ? 55 ವಸಂತಗಳನ್ನು ಕಂಡಿರುವ ರುದ್ರಾಚಾರಿ ಆವರು ಹುಟ್ಟು ಕುರುಡರೇನಲ್ಲ. ತಮ್ಮ 22 ನೇ ವಯಸ್ಸಿನಲ್ಲಿ ಜೀವನೋಪಾಯಕ್ಕೆ ಟೈಲರಿಂಗ್ ವೃತ್ತಿಯನ್ನು ಆಯ್ದುಕೊಂಡ ರುದ್ರಾಚಾರಿ ಅವರು 28 ನೇ ವಯಸ್ಸಿನ ವರೆಗೂ ಯಾವುದೇ ನ್ಯೂನತೆ ಇಲ್ಲದೆ ಕೆಲಸ ಮಾಡಿದ್ದಾರೆ.
ಆದರೆ, 28 ನೇ ವಯಸ್ಸಿನಿಂದ ರಾತ್ರಿ ಕಣ್ಣು ಕಾಣದಾಯಿತು. ನಂತರ 33 ನೇ ವಯಸ್ಸಿನಲ್ಲಿ ಸಂಪೂರ್ಣ ಅಂಧರೇ ಆಗಿಬಿಟ್ಟರು. ಬೆಂಗಳೂರು, ಮೈಸೂರಿನ ತಜ್ಞ ವೈದ್ಯರಿಗೆ ತೋರಿಸಿದರೂ ಏನೂ ಪ್ರಯೋಜನವಿಲ್ಲದಾಯಿತು ಎನ್ನುತ್ತಾರೆ ಆಚಾರಿ ಅವರು. ದಿಢೀರನೆ ಅಂಧರಾದರೂ ಆಚಾರಿ ಅವರು ಎದೆಗುಂದದೆ ಸ್ವಾಭಿಮಾನಿಯಾಗಿ ಬದುಕುವ ಛಲ ತೊಟ್ಟರು. ಅದು ಅವರಿಗೆ ಅನಿವಾರ್ಯ ಕೂಡ ಆಗಿತ್ತು ಏಕೆಂದರೆ ಅವರಿಗೆ ಪಿತ್ರಾರ್ಜಿತವಾಗಿ ಬಂದಿದ್ದುದು ಸಣ್ಣ ಮನೆಯೊಂದು ಮಾತ್ರ. ವಯಸ್ಸಾದ ತಾಯಿ, ಪತ್ನಿ ಹಾಗೂ ಎರಡು ಮಕ್ಕಳ ಹೊಟ್ಟೆ ತುಂಬಿಸಲು ದುಡಿಮೆ ಮಾಡಲೇಬೇಕಿತ್ತು.
ಮೊದಲಿಗೆ ಕಲಿತಿದ್ದ ಟೈಲರಿಂಗ್ ನ್ನೇ ಮುಂದುವರೆಸಲು ಪ್ರಯತ್ನಿಸಿದರು. ಪತ್ನಿಯ ಸಹಾಯ ಪಡೆದು ಬಟ್ಟೆ ಅಳತೆ ತೆಗೆದುಕೊಳ್ಳುವುದು, ಕತ್ತರಿಸುವುದನ್ನು ಕಲಿತರು. ಮೊದ ಮೊದಲು ಕಷ್ಟವಾಯಿತಾದರೂ ಈಗ ಸಲೀಸಾಗಿ ಬಟ್ಟೆ ಹೊಲಿಯುತ್ತಾರೆ. ಇವರ ಕಷ್ಟವು ಮಂಗಳೂರಿನ ಸಮಾಜ ಸೇವಕಿ ವನಿತಾ ಶೆಟ್ಟಿ ಅವರ ಗಮನಕ್ಕೆ ಬಂದಿತು. ವನಿತಾ ಅವರು ಸುಧೀರ್ಘ 30 ವರ್ಷ ಇಂಗ್ಲೆಂಡ್ ನಲ್ಲಿದ್ದವರಾಗಿದ್ದು ತಮ್ಮ ಸ್ನೇಹಿತೆಯರ ಸಹಾಯದಿಂದ ಅಂಧರು ಬಳಸಲು ಅನುಕೂಲವಾಗುವಂತೆ ಪ್ರತೀ ಇಂಚಿಗೂ ತೂತುಗಳುಳ್ಳ ಟೇಪ್ ಹಾಗೂ ಸೂಜಿಗೆ ದಾರ ಪೋಣಿಸಲು ಚಿಕ್ಕ ತಂತಿಯಾಕಾರದ ವಸ್ತುವನ್ನು ತರಿಸಿಕೊಟ್ಟರು. ಇದೀಗ ರುದ್ರಾಚಾರಿ ಅವರು ಆ ಟೇಪ್ ನ ಸಹಾಯದಿಂದ ತಾವೇ ಅಳತೆ ತೆಗೆದುಕೊಳ್ಳುತ್ತಾರೆ. ಸೂಜಿಗೆ ದಾರ ಪೋಣಿಸಿಕೊಳ್ಳುತ್ತಾರೆ. ಆದರೆ, ಬಟ್ಟೆಯನ್ನು ಕತ್ತರಿಸಲು ಮಾತ್ರ ಬೇರೆಯವರ ನೆರವು ಬೇಕು. ಕತ್ತರಿಸಲು ಬಟ್ಟೆಗೆ ಮಾಡಿರುವ ಮಾರ್ಕಿಂಗ್ ನ್ನು ಅವರಿಗೆ ತೋರಿಸಿಕೊಡಬೇಕಾಗುತ್ತದೆ.

ಇವರು ಗ್ರಾಮದಲ್ಲಿ ಮಹಿಳೆಯರ ಪೆಟ್ಟಿಕೋಟ್ ಹೊಲಿಯುವದರಲ್ಲಿ ನಿಪುಣರಾಗಿದ್ದು, ತಾವೇ ಬಟ್ಟೆ ಖರೀದಿಸಿ ತಂದು ಪೆಟ್ಟಿಕೋಟ್ ಹೊಲಿದು ಮಾರಾಟ ಮಾಡುತ್ತಿದ್ದಾರೆ. ಮಕ್ಕಳ ಬಟ್ಟೆ, ಮಹಿಳೆಯರ ಬ್ಲೌಸ್ ಹೊಲಿಯುತ್ತಾರೆ. ಸಮೀಪದ ಸರ್ಕಾರೀ ಶಾಲೆಯ ಮುಖ್ಯೋಪಾಧ್ಯಾಯರು ಪ್ರತೀ ವರ್ಷವೂ 30 ರಿಂದ 40 ಮಕ್ಕಳ ಸಮವಸ್ತ್ರವನ್ನು ಇವರ ಬಳಿಯೇ ಹೊಲಿಸುತ್ತಿದ್ದಾರೆ. ಗ್ರಾಮಸ್ಥರಿಂದ ಉತ್ತಮ ಸಹಕಾರ ಸಿಗುತ್ತಿದೆ ಎಂಬುದನ್ನು ಸ್ಮರಿಸುತ್ತಾರೆ ರುದ್ರಾಚಾರಿ. ಕೆಲಸದಲ್ಲಿ ಸಹಕರಿಸುತಿದ್ದ ಪತ್ನಿಯೂ ಕಳೆದ ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದು ವಯೋವೃದ್ದ ತಾಯಿ 95 ವರ್ಷದ ಗಂಗಮ್ಮ ಕೂಡ ಮೃತರಾಗಿದ್ದಾರೆ. ಹಿರಿಯ ಮಗ ಮದುವೆಯಾಗಿ ಪರ ಊರಿನಲ್ಲಿ ಕೆಲಸದಲ್ಲಿದ್ದಾರೆ, ಕಿರಿ ಮಗ ಬಡಗಿ ವೃತ್ತಿ ಮಾಡುತಿದ್ದು ಮನೆಗೆ ನೆರವಾಗುತ್ತಿದ್ದಾನೆ.
ಅಂಧರಾಗಿ ಯಶಸ್ವಿಯಾಗಿ ಕೆಲಸ ಮಾಡುತಿದ್ದರೂ ಇವರಿಗೆ ನೆರವು ನೀಡಲು ಯಾವುದೇ ಬ್ಯಾಂಕ್ ಈ ತನಕ ಮುಂದೆ ಬರಲಿಲ್ಲ ಎಂದ ರುದ್ರಾಚಾರಿ ಅವರು ಹೊಲಿಗೆ ಮೆಷಿನ್ ಹಳತಾಗಿದ್ದು ಅದನ್ನು ಬದಲಿಸಲು ಮತ್ತು ಮನೆಯ ದುರಸ್ಥಿಗೆ ತುರ್ತು ನೆರವು ಬೇಕಾಗಿದೆ, ಆದರೆ ಬ್ಯಾಂಕ್ ಗಳು ತಾವು ಅಂಧರಾಗಿರುವ ಕಾರಣದಿಂದ ಮರುಪಾವತಿ ಸಾಮರ್ಥ್ಯ ಶಂಕಿಸಿ ಸಾಲ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಇವರಿಗೆ ನೆರವು ನೀಡಬಯಸುವವರು ಆಚಾರಿ ಅವರನ್ನು 9481532576 ರಲ್ಲಿ ಸಂಪರ್ಕಿಸಬಹುದು.