ರಾಜ್ಯದ ಒಳಗೆ ಕೆಲಸ ಮಾಡುವ ಕಾರ್ಮಿಕರು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ತೆರಳಲು ಈಗ ಯಾವುದೇ ಸಮಸ್ಯೆ ಇಲ್ಲ. ತಾವು ಕೆಲಸ ಮಾಡುತ್ತಿರುವ ಸ್ಥಳದಿಂದ ಗುಂಪು ಗುಂಪಾಗಿ ಹೋಗಬಹುದು ಎಂದು ವಾರದ ಹಿಂದೆಯೇ ರಾಜ್ಯ ಸರ್ಕಾರಗಳು ಅನುಮತಿ ಕೊಟ್ಟಿದ್ದವು. ಕೇಂದ್ರ ಸೂಚನೆಯಂತೆಯೇ ಈ ನಿರ್ಧಾರ ಮಾಡಲಾಗಿತ್ತು. ಆದರೀಗ ಮತ್ತೊಂದು ನಿರ್ಧಾರ ಹೊರಬಿದ್ದಿದ್ದು ಅಂತಾರಾಜ್ಯ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಹೊರ ರಾಜ್ಯಗಳಲ್ಲಿ ಸಿಲುಕಿರುವ ಜನರು ತಮ್ಮ ತವರೂರುಗಳಿಗೆ ವಾಪಸ್ ಹೋಗಬಹುದು ಎಂದು ಕೇಂದ್ರ ಗೃಹ ಇಲಾಖೆ ಹೊಸ ಆದೇಶ ಹೊರಡಿಸಿದೆ. ದೇಶದಲ್ಲಿ ಲಾಕ್‌ಡೌನ್ ಘೋಷಣೆ ಆಗುವ ಮೊದಲು ಬೇರೆ ರಾಜ್ಯಗಳಿಗೆ ಪ್ರಯಾಣ ಕೈಗೊಂಡಿದ್ದವರು, ಬೇರೆ ರಾಜ್ಯಗಳಲ್ಲಿ ವಿದ್ಯಾಭ್ಯಾಸ ಮಾಡಲು ತೆರಳಿದ್ದವರು, ಉದ್ಯೋಗ ಅರಸಿ ಹೋಗಿದ್ದವರು ತಮ್ಮ ಹುಟ್ಟೂರುಗಳಿಗೆ ತೆರಳಲು ಬುಧುವಾರ (29-04-2020) ಅನುಮತಿ ನೀಡಿದೆ. ಆದರೆ ಕೆಲವೊಂದು ಷರತ್ತುಗಳು ಅನ್ವಯ.
ಕೇಂದ್ರ ಸರ್ಕಾರದ ಆದೇಶದಲ್ಲಿ ಏನಿದೆ..?
ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಬಳ್ಳಾ ಈ ಬಗ್ಗೆ ಆದೇಶ ಹೊರಡಿಸಿದ್ದು, ಎಲ್ಲಾ ರಾಜ್ಯಗಳು ವಲಸಿಗರನ್ನು ಕಳುಹಿಸಿಕೊಡುವಾಗ ನೋಡಲ್ ಅಧಿಕಾರಿಗಳ ಮಾರ್ಗಸೂಚಿಯನ್ನು ಪಾಲಿಸಬೇಕು. ವಲಸಿಗರು ಗುಂಪು ಗುಂಪಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣಿಸುವುದಾದರೆ ಎರಡೂ ರಾಜ್ಯಗಳು ಮಾತುಕತೆ ನಡೆಸಿ ರಸ್ತೆಗಳಲ್ಲಿ ಸಂಚರಿಸಲು ಅನುಕೂಲ ಮಾಡಿಕೊಡಬೇಕು. ಪ್ರಯಾಣ ಬೆಳೆಸುವವರಿಗೆ ಸೋಂಕು ತಗುಲಿದೆಯೋ ಇಲ್ಲವೋ ಎಂದು ಪರೀಕ್ಷಿಸಿಕೊಳ್ಳಬೇಕು. ಜನರನ್ನು ಗುಂಪು ಗುಂಪಾಗಿ ಸಾಗಿಸಲು ಬಸ್ಗಳನ್ನು ಬಳಸಿಕೊಳ್ಳಬಹುದು. ಬಸ್ಗಳನ್ನು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಿರಬೇಕು ಮತ್ತು ಸೋಷಿಯಕ್ ಡಿಸ್ಟೆನ್ಸ್ ಕಾಪಾಡಿಕೊಂಡು ಪ್ರಯಾಣ ಮಾಡಬೇಕು. ಹೊರರಾಜ್ಯದ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಿಕೊಡುವುದು ಆಯಾ ರಾಜ್ಯಗಳ ಜವಾಬ್ದಾರಿಯಾಗಿರುತ್ತದೆ. ಹೊರರಾಜ್ಯದಿಂದ ಬಂದಿಳಿದವರನ್ನು ಸ್ಥಳೀಯ ಆರೋಗ್ಯ ಸಂಸ್ಥೆಗಳಲ್ಲಿ ಪರೀಕ್ಷಿಸಬೇಕು, ಮತ್ತು ಹೋಮ್ ಕ್ವಾರಂಟೈನ್ನಲ್ಲಿ ಇರಿಸಬೇಕು. ಅಗತ್ಯ ಬಿದ್ದಲ್ಲಿ ಇನ್ಸ್ಟಿಟ್ಯೂಟ್ ಕ್ವಾರಂಟೈನ್ನಲ್ಲಿ ಇರಿಸಬೇಕು. ಜೊತೆಗೆ ಕಾಲ ಕಾಲಕ್ಕೆ ಪರೀಕ್ಷೆ ನಡೆಸಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ರವಾನಿಸಿದೆ.

ವಲಸೆ ಕಾರ್ಮಿಕರು ಮಾಡಬೇಕಿರುವುದು ಏನು..?
ಅಂತಾರಾಜ್ಯ ಕಾರ್ಮಿಕರು ತಮ್ಮ ತವರು ಊರುಗಳಿಗೆ ಹೋಗಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ವಲಸೆ ಕಾರ್ಮಿಕರು ಸೂಕ್ತವಾಗಿ ನಡೆದುಕೊಳ್ಳಬೇಕಿದೆ. ತಮ್ಮ ತಮ್ಮ ಊರುಗಳ ಅಕ್ಕಪಕ್ಕದಲ್ಲಿರುವ ಜನರು ಒಂದೊಂದು ಟೀಂ ಮಾಡಿಕೊಂಡು, ವಾಟ್ಸಪ್ ಗ್ರೂಪ್ಗಳನ್ನು ಮಾಡಿಕೊಂಡು ಚರ್ಚೆ ನಡೆಸುವ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಸ್ಥಳೀಯ ಅಧಿಕಾರಿಯನ್ನು ಸಂಪರ್ಕಿಸಿ, ನಾವು ಇಷ್ಟು ಜನರಿದ್ದು, ಈ ಭಾಗಕ್ಕೆ ಹೋಗಬೇಕಿದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಆ ಬಳಿಕ ಸ್ಥಳೀಯ ಅಧಿಕಾರಿಗಳು ಕರೆದಾಗ ತಪಾಸಣೆಗೆ ತೆರಳಬೇಕು. ನಂತರ ಅಲ್ಲಿನ ಸರ್ಕಾರಗಳು ವ್ಯವಸ್ಥೆ ಮಾಡುವ ಸಾರಿಗೆ ಬಸ್ಗಳಲ್ಲಿ ತಮ್ಮ ತಮ್ಮ ಊರುಗಳತ್ತ ಪ್ರಯಾಣ ಮಾಡಬೇಕು. ಜೊತೆಗೆ ಹುಟ್ಟೂರಿಗೆ ಹೋಗುತ್ತಿದ್ದೇವೆ ಎನ್ನುವ ಕಾರಣಕ್ಕೆ ಇಡೀ ಮನೆಯ ವಸ್ತುಗಳನ್ನೆಲ್ಲಾ ಹೊತ್ತು ತಾರದೆ ಸಮಯಕ್ಕೆ ಬೇಕಾದಷ್ಟು ಸಾಮಗ್ರಿ ತೆಗೆದುಕೊಂಡು ಬಂದರೆ ಪ್ರಯಾಣಕ್ಕೆ ಸಹಕಾರಿಯಾಗಲಿದೆ.
ಸ್ಥಳೀಯ ಸರ್ಕಾರಕ್ಕೆ ಎದುರಾಗಿದೆ ಸವಾಲು..!
ಕರ್ನಾಟಕದಲ್ಲಿ ವಾಸವಿರುವ ಜನರನ್ನು ಅವರವರ ಊರುಗಳಿಗೆ ಕಳುಹಿಸಿ ಕೊಡಲು ರಾಜ್ಯ ಸರ್ಕಾರಕ್ಕೆ ಸವಾಲಿನ ಕೆಲಸ ಆಗಲಿದೆ. ಬಿಹಾರದ ನೂರು ಮಂದಿ ಕಾರ್ಮಿಕರು ತಮ್ಮೂರಿಗೆ ಹೊರಟು ನಿಂತರೆ ಎಲ್ಲರಿಗೂ ತಪಾಸಣೆ ನಡೆಸಿ ತಮ್ಮದೇ ಬಸ್ಗಳಲ್ಲಿ ಕಳುಹಿಸಿಕೊಡಬೇಕಿದೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ನಮ್ಮ ಕರ್ನಾಟಕದ ಜನರು ತಮ್ಮ ತಮ್ಮ ಊರುಗಳಿಗೆ ಬರುತ್ತಿದ್ದರೆ, ಬಂದವರನ್ನು ಎಲ್ಲರನ್ನೂ ಗಮನಿಸಬೇಕು, ಆರೋಗ್ಯ ಪರಿಸ್ಥಿತಿ ಬಗ್ಗೆ ಡಾಟಾ ಸಂಗ್ರಹ ಮಾಡಬೇಕು. ಆರೋಗ್ಯ ಹದಗೆಟ್ಟರೆ ಚಿಕಿತ್ಸೆ ನೀಡಲು ತಯಾರಿ ಮಾಡಿಕೊಳ್ಳಬೇಕು. ಒಟ್ಟಾರೆ, ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರದ ಆದೇಶ ಬಿಸಿ ತುಪ್ಪ ಎನ್ನಲಾಗುತ್ತಿದೆ. ಆದರೂ, ವಲಸೆ ಕಾರ್ಮಿಕರನ್ನು ತಮ್ಮೂರಿಗೆ ತೆರಳಲು ಅನುಮತಿ ಕೊಡುತ್ತಿರುವುದು ಅದೆಷ್ಟೋ ಜೀವಗಳಿಗೆ ಸಂತಸವನ್ನುಂಟು ಮಾಡಿದೆ ಎಂದರೆ ತಪ್ಪಲ್ಲ.
