ಮಾರ್ಚ್ 23 ರಿಂದ ಜಾರಿಯಾದ ಲಾಕ್‌ಡೌನ್ ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದವರೇ ವಲಸೆ ಕಾರ್ಮಿಕರು. ಈ ಕುರಿತು ಈಗಾಗಲೇ ಹತ್ತು ಹಲವು ಸಮಗ್ರ ವರದಿಗಳನ್ನ ʼಪ್ರತಿಧ್ವನಿʼ ಕೂಡಾ ಪ್ರಕಟಿಸಿತ್ತು. ಈ ಮೂಲಕ ನಾಡಿನ ಜನತೆಗೆ ವಲಸೆ ಕಾರ್ಮಿಕರ ಬವಣೆ ಏನೆನ್ನುವುದು ತಿಳಿಯುವಂತಾಗಿತ್ತು. ಕಾಲ್ನಡಿಗೆಯಲ್ಲಿಯೇ ನೂರಾರು ಕಿಲೋ ಮೀಟರ್ ನಡೆದುಕೊಂಡು ಹೋದ ವಲಸೆ ಕಾರ್ಮಿಕರಿಂದ ಹಿಡಿದು, ಮನೆ ಸೇರುವ ಮುನ್ನವೇ ಇಹಲೋಕ ತ್ಯಜಿಸಿದ ಅದೆಷ್ಟೋ ಕಾರ್ಮಿಕರ ಕರುಣಾಜನಕ ಕಥೆಯೇ ಇದೆ.
ಈ ರೀತಿ ತಂಡೋಪತಂಡವಾಗಿ ತವರು ರಾಜ್ಯಗಳಿಗೆ ಹೊರಟ ವಲಸೆ ಕಾರ್ಮಿಕರಿಗೆ ರಾಜಕೀಯ ನಾಯಕರು, ಬಾಲಿವುಡ್ ನಟರು ಹಾಗೂ ಸರಕಾರೇತರ ಸಂಘ ಸಂಸ್ಥೆಗಳು, ದಾನಿಗಳು ಹಸಿವು ನೀಗಿಸಿದ್ದಾರೆ. ದೇಶದಲ್ಲಿ ಲಾಕ್‌ಡೌನ್ ಬಳಿಕ, ಕರೋನಾ ಆತಂಕದ ನಡುವೆಯೂ ತಾವಾಯಿತು, ತಮ್ಮ ಪಾಡಾಯಿತು ಎಂದು ಬೀದಿಗಿಳಿದವರೇ ತಮ್ಮ ಊರಿನತ್ತ ಹೆಜ್ಜೆ ಹಾಕಿದ್ದರು. ಇದೀಗ ʼಟೈಮ್ಸ್ ಆಫ್ ಇಂಡಿಯಾʼ ತಯಾರಿಸಿದ ವರದಿಯಲ್ಲೂ ಲಾಕ್‌ಡೌನ್ ನಿಂದ ತವರಿನತ್ತ ಹಿಂತಿರುಗಲು ಸಂಕಷ್ಟಪಡುವವರು ವಲಸೆ ಕಾರ್ಮಿಕರೇ ಅನ್ನೋದು ಸಾಬೀತಾಗಿದೆ. ಅಂಕಿಅಂಶಗಳೂ ಅದನ್ನ ದೃಢೀಕರಿಸುತ್ತಿದ್ದು, ʼಸೇವಾ ಸಿಂಧುʼ ಮೂಲಕ ತವರು ರಾಜ್ಯಕ್ಕೆ ಹಿಂತಿರುಗಿ ಹೋಗಲು ಅರ್ಜಿ ಸಲ್ಲಿಸಿದವರಲ್ಲಿ ಶೇಕಡಾ 80ರಷ್ಟು ಮಂದಿ ವಲಸೆ ಕಾರ್ಮಿಕರೇ ಆಗಿದ್ದಾರೆ ಎಂದು ʼಟೈಮ್ಸ್ ಆಫ್ ಇಂಡಿಯಾʼ ವರದಿಯೂ ತಿಳಿಸಿದೆ.
ಕರ್ನಾಟಕ ಸರಕಾರದ ʼಸೇವಾ ಸಿಂಧುʼ ವೆಬ್‌ಸೈಟ್ ನಲ್ಲಿ ದಾಖಲಾದ ಮಾಹಿತಿ ಆಧರಿಸಿ ತಯಾರಿಸಿದ ವರದಿಯಲ್ಲಿ ಮೇ 27ರ ಬುಧವಾರ ರಾತ್ರಿವರೆಗೂ ಒಟ್ಟು 11.6 ಲಕ್ಷ ಮಂದಿ ಕರ್ನಾಟಕ ಬಿಟ್ಟು ತೆರಳಲು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಶೇಕಡಾ 80 ರಷ್ಟು ಮಂದಿ ವಲಸೆ ಕಾರ್ಮಿಕರೇ ಇರುವುದಾಗಿ ವರದಿ ತಿಳಿಸಿದೆ. ಅವರ ಒಟ್ಟು ಸಂಖ್ಯೆ 9.1 ಲಕ್ಷ ಆಗಿದೆ. ಅಂತಹ 9.1 ಲಕ್ಷ ವಲಸೆ ಕಾರ್ಮಿಕರಲ್ಲಿ 6.8 ಲಕ್ಷ ಕಾರ್ಮಿಕರಿಗೆ ಅನುಮತಿ ನೀಡಲಾಗಿದೆ. ಅದರಲ್ಲೂ 1.4 ಲಕ್ಷ ಜನ ಸಂಸಾರವನ್ನೂ ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.
ಅದರಲ್ಲೂ ಶೇಕಡಾ 60 ರಷ್ಟು ವಲಸೆ ಕಾರ್ಮಿಕರು ಬಿಹಾರ, ಪಶ್ಚಿಮ ಬಂಗಾಳ, ರಾಜಸ್ತಾನ, ಝಾರ್ಖಂಡ್ ಹಾಗೂ ಒಡಿಶಾ ರಾಜ್ಯಗಳಿಗೇ ಸೀಮಿತರಾದ ಕಾರ್ಮಿಕರಾಗಿದ್ದಾರೆ. ಅದರಲ್ಲೂ ಶೇಕಡಾ 55 ರಷ್ಟು ಜನರು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೇ ಬದುಕು ಕಟ್ಟಿಕೊಂಡವರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 5 ಲಕ್ಷ ಕಾರ್ಮಿಕರಿದ್ದರೆ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಕೋಲಾರ, ಬಳ್ಳಾರಿ ಮುಂತಾದೆಡೆಯೂ ಸಾವಿರಾರು ಸಂಖ್ಯೆಯ ಕಾರ್ಮಿಕರು ಸಿಲುಕಿ ಹಾಕಿಕೊಂಡಿದ್ದರು.
ಈ ರೀತಿ ರಾಜ್ಯದಲ್ಲಿ ಬೀಡು ಬಿಟ್ಟಿರುವ ವಲಸೆ ಕಾರ್ಮಿಕರು ಬಹುತೇಕ ಮಂದಿ ಇಲ್ಲಿ ಕೈಗಾರಿಕೆ, ಕಾರ್ಖಾನೆ ಹಾಗೂ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ಇದರಲ್ಲಿ ಈಗಾಗಲೇ 2.9 ಲಕ್ಷ ಕಾರ್ಮಿಕರು ನಗರ ಬಿಟ್ಟು ತೆರಳಿದ್ದಾರೆ. ಅದರಲ್ಲೂ 2.6 ಲಕ್ಷ ಮಂದಿ ಕಾರ್ಮಿಕರು ಶ್ರಮಿಕ್ ವಿಶೇಷ ರೈಲಿನಲ್ಲಿಯೇ ತವರು ರಾಜ್ಯ ಸೇರಿದ್ದಾರೆ. ಇನ್ನುಳಿದಂತೆ 2.5 ಲಕ್ಷ ಅರ್ಜಿದಾರರಲ್ಲಿ ಯಾತ್ರಿಕರು, ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳೂ ಸೇರಿದ್ದು ಕರ್ನಾಟಕ ಬಿಟ್ಟು ತಮ್ಮ ತವರು ರಾಜ್ಯಗಳಿಗೆ ತೆರಳಲು ಸಿದ್ಧರಾಗಿದ್ದಾರೆ. ಇನ್ನೂ ಕೆಲವರು ಈಗಾಗಲೇ ಬಿಟ್ಟು ತೆರಳಿದವರೂ ಇದ್ದಾರೆ. ಅದಲ್ಲದೇ ಇನ್ನು ಹಲವರು ನಗರಗಳಲ್ಲಿಯೇ ಉಳಿದಿದ್ದು, ಅದ್ಯಾವಾಗ ಕೆಲಸ ಕಾರ್ಯ ಆರಂಭವಾಗುತ್ತೆ ಅನ್ನೋ ಕಾತರದಲ್ಲಿದ್ದಾರೆ. ಆದರೆ ಹೀಗೆ ಉಳಿದ ವಲಸೆ ಕಾರ್ಮಿಕರ ಸಂಖ್ಯೆ ಶೇಕಡಾ 10ಕ್ಕಿಂತಲೂ ಕಡಿಮೆ ಅಂತಾ ಬಿಲ್ಡರ್ಸ್‌ಗಳು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ʼಪ್ರತಿಧ್ವನಿʼ ವೆಬ್ ಜಾಲತಾಣವು ನಡೆಸಿದ ವಿಶೇಷ ಸಂದರ್ಶನದಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಇಂಡಿಯಾ (ಬೆಂಗಳೂರು ಕೇಂದ್ರ) ಇದರ ಛೇರ್ಮನ್ ಜಿಎಂ ರವೀಂದ್ರ ಕಾರ್ಮಿಕರ ಸಂಖ್ಯೆ ಕಡಿಮೆ ಇರುವುದರಿಂದ ನಿರ್ಮಾಣ ಕಾಮಗಾರಿಗೆ ಅಡ್ಡಿಯಾಗಿದೆ ಎಂದು ಹೇಳಿದ್ದರು.
ಒಟ್ಟಿನಲ್ಲಿ ವಲಸೆ ಕಾರ್ಮಿಕರ ಹಿಂತಿರುಗುವಿಕೆಯಿಂದ ರಾಜ್ಯದ ಬಹುತೇಕ ಕೈಗಾರಿಕೆ, ಕಟ್ಟಡ ನಿರ್ಮಾಣ ಹಾಗೂ ಇನ್ನಿತರ ಕಾಮಗಾರಿಗಳ ಅಭಿವೃದ್ಧಿಗೆ ತಡೆಯಾಗಿದೆ. ಹೀಗೆ ಲಕ್ಷ ಸಂಖ್ಯೆಯಲ್ಲಿ ಊರಿಗೆ ಹೊರಟ ಕಾರ್ಮಿಕರು ಕರೋನಾ ಅವಧಿ ಮುಗಿಯುವುದನ್ನ ಕಾಯುವ ಬದಲು ತಮ್ಮ ಊರಲ್ಲಿಯೇ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇನ್ನು ಕೆಲವರು ಮತ್ತೆ ಕರುನಾಡಿಗೆ ವಾಪಾಸ್ ಆಗಲಿದ್ದಾರೆ ಅನ್ನೋದರಲ್ಲಿ ಸಂಶಯವಿಲ್ಲ. ಆದರೆ ಇದರ ಹೊರತಾಗಿ ಸರಕಾರ ಯಾವುದೇ ರೀತಿಯಲ್ಲೂ ವಲಸೆ ಕಾರ್ಮಿಕರ ಬದುಕಿಗೊಂದು ಭದ್ರ ಬುನಾದಿ ಹಾಕಿಕೊಡುವಲ್ಲಿ ವಿಫಲ ಆಗಿದೆ ಅನ್ನೋದರಲ್ಲಿ ಅನುಮಾನವಿಲ್ಲ.