ಶಿವಸೇನಾ ನೇತೃತ್ವದ ಮಾಹರಾಷ್ಟ್ರ ಸರ್ಕಾರದ ವಿರುಧ್ಧ ʼಸೇವ್ ಮಹಾರಾಷ್ಟ್ರ ಆಂದೋಲನʼ ಶುರು ಮಾಡಿದ್ದ ಮಹಾರಾಷ್ಟ್ರ ಬಿಜೆಪಿ ಮಹಾರಾಷ್ಟ್ರ ಸರ್ಕಾರ ಕೋವಿಡ್19 ವಿರುಧ್ಧದ ಹೋರಾಟದಲ್ಲಿ ಎಡವಿದೆ ಎಂದು ಆರೋಪಿಸಿತ್ತು.
ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಮೇ 20 ರಂದು ವೀಡಿಯೋ ಸಂದೇಶದಲ್ಲಿ ಕೇರಳ ಸರ್ಕಾರದ ಕಾರ್ಯವೈಖರಿಯೊಂದಿಗೆ ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿಯನ್ನು ಸಮೀಕರಿಸಿ ಟೀಕೆ ಮಾಡಿದ್ದರು.
ಬಿಜೆಪಿ ಅಧ್ಯಕ್ಷರ ಟೀಕೆಯ ಬೆನ್ನಿಗೆ ಶಿವಸೇನಾ ತನ್ನ ಮುಖವಾಣಿ ʼಸಾಮ್ನಾʼದಲ್ಲಿ ವಿರೋಧ ಪಕ್ಷ ಬಿಜೆಪಿಯ ನಡೆಯನ್ನು ತೀವ್ರವಾಗಿ ವಿರೋಧಿಸಿದೆ. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ರಾಜ್ಯದ ಹಿತದೃಷ್ಟಿಯಿಂದ ಯಾವುದಾದರೂ ಸಲಹೆಗಳಿದ್ದರೆ ವಿರೋಧ ಪಕ್ಷ ಮುಖ್ಯಮಂತ್ರಿಯೊಂದಿಗೆ ಚರ್ಚಿಸಬೇಕು ಎಂದು ಸಂಪಾದಕೀಯದಲ್ಲಿ ಬರೆದುಕೊಂಡಿದೆ.
ಮಹಾರಾಷ್ಟ್ರ ಸರ್ಕಾರವನ್ನು ಕೇರಳ ಸರ್ಕಾರದೊಂದಿಗೆ ತುಲನೆ ಮಾಡಿರುವ ಬಿಜೆಪಿ ಅಧ್ಯಕ್ಷರ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಯಿಸಿದ ಶಿವಸೇನೆ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೋನಾದ ವಿರುಧ್ಧದ ಹೋರಾಟದಲ್ಲಿ ನರೇಂದ್ರ ಮೋದಿಯ ಸಲಹೆಗಳನ್ನು ಕೇಳುತ್ತಿಲ್ಲ ಹಾಗಾಗಿ ಅಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಂದಿದೆ ಎಂದು ಅಭಿಪ್ರಾಯ ಪಟ್ಟಿದೆ.
ಸಂಪಾದಕೀಯ ಮುಂದುವರೆಸುತ್ತಾ, ಪಿಣರಾಯಿ ವಿಜಯನ್ ಪ್ರಧಾನಿಯೊಂದಿಗಿನ ಮುಖ್ಯಮಂತ್ರಿಗಳ ಸಂವಾದವನ್ನು ಉದ್ದೇಶಪೂರ್ವಕವಾಗಿ ತಪ್ಪಿಸುತ್ತಾರೆ. ಪ್ರಧಾನಿಯೊಂದಿಗಿನ ಸಂವಾದವು ಕಾಲಹರಣವೆಂದು ವಿಜಯನ್ ಭಾವಿಸಿದ್ದಾರೆಂದು ಪ್ರತಿಕ್ರಯಿಸಿದೆ.
ಭಾರತದಲ್ಲಿ ಮೊಟ್ಟ ಮೊದಲು ಸೋಂಕು ಕಂಡುಬಂದ ಕೇರಳದಲ್ಲಿ ಸದ್ಯ ಉಳಿದೆಲ್ಲಾ ರಾಜ್ಯಗಳಿಗಿಂತ ಕರೋನಾ ನಿಯಂತ್ರಣಕ್ಕೆ ಬಂದಿದೆ. ಕೇರಳದ ಆರೋಗ್ಯ ಸಚಿವೆ ಶೈಲಜಾ ಟೀಚರ್ ಹಾಗೂ ಮುಖ್ಯಮಂತ್ರಿ ವಿಜಯನ್ ಕಾರ್ಯವೈಖರಿಯನ್ನು 35 ಕ್ಕೂ ಹೆಚ್ಚು ಅಂತರಾಷ್ಟ್ರೀಯ ಸುದ್ದಿಸಂಸ್ಥೆಗಳು ಶ್ಲಾಘಿಸಿವೆ. ಈ ಕುರಿತು ʼಪ್ರತಿಧ್ವನಿʼಯು ವಿಸ್ತೃತ ವರದಿಯನ್ನು ಪ್ರಕಟಿಸಿತ್ತು.
Also Read: ಕೋವಿಡ್ 19 ವಿರುದ್ಧದ ಹೋರಾಟ: ವಿಶ್ವ ಮಾಧ್ಯಮಗಳಲ್ಲಿ ರಾರಾಜಿಸಿದ ಕೇರಳ.!