ನಾನು ಇಂದಿರಾ ಗಾಂಧಿ ಮೊಮ್ಮಗಳು. ಇತರೆ ವಿರೋಧ ಪಕ್ಷಗಳ ರೀತಿ ಬಿಜೆಪಿಯ ಅಘೋಷಿತ ವಕ್ತಾರೆಯಲ್ಲ ಎಂದು ಪ್ರಿಯಾಂಕ ಗಾಂಧಿ ವಾದ್ರ ಯುಪಿ ಸರ್ಕಾರದ ವಿರುದ್ದ ಸಿಡಿದಿದ್ದಾರೆ. ಹಲವು ಇಲಾಖೆಗಳ ಅಡಿಯಲ್ಲಿ ಪ್ರಿಯಾಂಕ ವಿರುದ್ದ ವಿಚಾರಣೆಯನ್ನು ನಡೆಸುತ್ತಿರುವುದನ್ನು ಖಂಡಿಸಿದ ಅವರು ಸತ್ಯವನ್ನು ಹೇಳಿದ್ದಕ್ಕಾಗಿ ಯುಪಿ ಸರ್ಕಾರ ನನ್ನಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಆಗ್ರಾದಲ್ಲಿನ ಕರೋನಾ ಸಾವುಗಳ ಕುರಿತು ಪ್ರಿಯಾಂಕ ಗಾಂಧಿ ಹೇಳಿರುವ ಮಾತುಗಳನ್ನು 24 ತಾಸುಗಳ ಒಳಗಾಗಿ ವಾಪಾಸ್ಸು ಪಡೆಯಬೇಕೆಂದು ಅಲ್ಲಿನ ಜಿಲ್ಲಾಡಳಿತ ಪ್ರಿಯಾಂಕ ಅವರಿಗೆ ಸೂಚಿಸಿತ್ತು. ಇದಕ್ಕೂ ಮುಂಚೆ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಕರೋನಾ ಸಂಕಷ್ಟವನ್ನು ಪರಿಹರಿಸುವ ಕುರಿತು ಆಲೋಚಿಸುವ ಬದಲು, ತಮ್ಮ ಅಜೆಂಡಾವನ್ನು ಜನರ ಮೇಲೆ ಹೇರುತ್ತಿದ್ದಾರೆ ಎಂದು ಪ್ರಿಯಾಂಕ ಈ ಹಿಂದೆ ಆರೋಪಿಸಿದ್ದರು.
“ಓರ್ವ ಜನರ ಸೇವಕಿಯಾಗಿ, ಯುಪಿಯ ಜನರಿಗೆ ನಾನು ಸೇವೆ ಮಾಡಬೇಕಾಗಿದೆ. ಅವರ ಮುಂದೆ ಸತ್ಯ ಮತ್ತು ಸರ್ಕಾರದ ಅಜೆಂಡಾಗಳನ್ನು ಬಿಚ್ಚಿಡಬೇಕಾಗಿದೆ. ಅದು ನನ್ನ ಕರ್ತವ್ಯ ಕೂಡಾ. ಆದರೆ, ಉತ್ತರ ಪ್ರದೇಶ ಸರ್ಕಾರ ನನ್ನನ್ನು ಬೆದರಿಸುವುದರಲ್ಲಿ ಕಾಳ ಕಳೆಯುತ್ತಿದೆ,” ಎಂದು ಪ್ರಿಯಾಂಕ ಗಾಂಧಿ ಟ್ವೀಟ್ ಮೂಲಕ ಗರ್ಜಿಸಿದ್ದಾರೆ.
ಅವರಿಗೇನು ಬೇಕೋ ಅವರು ಮಾಡಿಕೊಳ್ಳಲಿ. ಆದರೆ, ನಾನು ಜನರ ಮುಂದೆ ಸತ್ಯವನ್ನು ತೆರೆದಿಡುತ್ತಾ ಹೋಗುತ್ತೇನೆ. ನಾನು ಇಂದಿರಾ ಗಾಂಧಿಯ ಮೊಮ್ಮಗಳು. ಇತರೆ ವಿರೋಧ ಪಕ್ಷಗಳ ಅಘೋಷಿತ ಬಿಜೆಪಿ ವಕ್ತಾರೆಯಲ್ಲ, ಎಂದು ಅವರು ಕಿಡಿಕಾರಿದ್ದಾರೆ.
ಕಳೆದ ಒಂದು ವಾರದಿಂದ ಪ್ರಿಯಾಂಕ ಗಾಂಧಿ ಆಗ್ರಾದಲ್ಲಿನ ಕರೋನಾ ಸಾವುಗಳ ಕುರಿತಾಗಿ ಹಾಗೂ ಕರೋನಾ ಸಂಕಷ್ಟವನ್ನು ಸರ್ಕಾರ ಎಷ್ಟು ಅಸಮರ್ಪಕವಾಗಿ ನಿಭಾಯಿಸುತ್ತಿದೆ ಎಂಬುದರ ಕುರಿತು ಬಹಳಷ್ಟು ಟೀಕೆಗಳನ್ನು ಮಾಡಿದ್ದರು.