ರಾಜ್ಯ ಸರ್ಕಾರ ಕೋವಿಡ್‌ನ ಸಂದಿಗ್ದ ಪರಿಸ್ಥಿತಿಯಲ್ಲಿ ಬೊಕ್ಕಸ ತುಂಬಲು ಸಾಕಷ್ಟು ರೀತಿಯ ಪ್ರಯತ್ನವನ್ನು ನಡೆಸುತ್ತಿದೆ. ತೀವ್ರವಾದ ಒತ್ತಡದ ನಡುವೆಯೂ, ಮದ್ಯದಂಗಡಿಗಳನ್ನು ತೆರೆಯುವುದರಿಂದ ಹಿಡಿದು ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವರೆಗೆ ಹಲವು ವಿವಾದಾತ್ಮಕ ತೀರ್ಮಾನಗಳನ್ನು ರಾಜ್ಯ ಸರ್ಕಾರ ತಾಳಿದೆ. ಜನಪರ ನಿಲುವುಗಳೆಂದೇ ಹೇಳಿಕೊಂಡು ಕೃಷಿ ಕ್ಷೇತ್ರಕ್ಕೆ ಕೊಡಲಿ ಏಟು ನೀಡುವಂತಹ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯ ವಿರುದ್ದ ಇದೀಗ ರೈತ ಚಳವಳಿ ಆರಂಭವಾಗಿದೆ.
ಸದ್ಯಕ್ಕೆ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಅಧಿಕೃತ ಮುದ್ರೆ ಬಿದ್ದಿದ್ದು, ಸಂವಿಧಾನದ ಆಶಯಗಳಿಗೆ ಶೋಭೆ ತರುವಂತದ್ದಲ್ಲ, ಎಂಬುದು ʼನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲʼ ಆಂದೋಲನದ ಧೋರಣೆ. ಕೃಷಿಕರು ಹಾಗೂ ಪ್ರಗತಿಪರ ಹೋರಾಟಗಾರರು ಸೇರಿ ಆರಂಭವಾದ ಈ ಆಂದೋಲನ, ರಾಜ್ಯದಾದ್ಯಂತ ಹಲವು ಸ್ಥರಗಳಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ.
ಕೃಷಿ ಭೂಮಿಯನ್ನು ಉಳಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡುವ ಸಲುವಾಗಿ ರೂಪುಗೊಂಡ ಈ ಆಂದೋಲನದ ಕಾರ್ಯಕರ್ತರು, ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳಿಗೆ ಸಾಮೂಹಿಕವಾಗಿ ಪೋಸ್ಟ್ ಕಾರ್ಡ್‌ಗಳನ್ನು ಕಳುಹಿಸುವ ಮೂಲಕ, ಸರ್ಕಾರದ ಕಣ್ಣು ತೆರೆಸುವ ಪ್ರಯತ್ನ ಮಾಡಿತ್ತು. ಇಷ್ಟು ಮಾತ್ರವಲ್ಲದೇ, ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವ ಮೂಲಕ ರೈತರಲ್ಲಿ ಒಗ್ಗಟ್ಟು ಮೂಡಿಸುವ ಕೆಲಸವನ್ನೂ ಈ ಆಂದೋಲನದ ಅಡಿಯಲ್ಲಿ ಮಾಡಲಾಗಿತ್ತು.
ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬರೆದಿದ್ದ ಪತ್ರದಲ್ಲಿ ಸರ್ಕಾರದ ಈ ನಡೆಯಿಂದಾಗಿ ಕಳೆದ 46 ವರ್ಷಗಳಿಂದ ಕರ್ನಾಟಕ ಪಾಲಿಸಿಕೊಂಡು ಬಂದಿದ್ದ ಒಂದು ಅಭೂತಪೂರ್ವ ಕಾಯ್ದೆಯ ಕೊನೆಯಾದಂತಾಗಿದೆ. ಕರ್ನಾಟಕದ ಚರಿತ್ರೆಯ ಒಂದು ಮಹತ್ವದ ಅಧ್ಯಾಯವೇ ಅಳಿಸಿಹೋಗುತ್ತಿದೆ ಎಂಬ ಅಂಶವನ್ನು ಒತ್ತಿ ಹೇಳಲಾಗಿತ್ತು.
ʼʼಈಗ ತಿದ್ದುಪಡಿಗೆ ಒಳಗಾಗಿರುವ ಅಥವಾ ತೆಗೆದುಹಾಕಿರುವ ಎಲ್ಲಾ ಸೆಕ್ಷನ್‌ಗಳು ಭೂಮಿ, ರೈತರು ಮತ್ತು ಭೂಮಿಯನ್ನೇ ನಂಬಿರುವ ಗ್ರಾಮೀಣ ಜನತೆಗೆ ರಕ್ಷಣೆ ನೀಡಿದ್ದವು. ಈಗ ತಂದಿರುವ ತಿದ್ದುಪಡಿಗಳಿಂದಾಗಿ ರೈತರ ಜಮೀನನ್ನು ಕಬಳಿಸಲು ಹವಣಿಸುತ್ತಿರುವವರಿಗೆ ಸ್ವರ್ಗ ಕಂಡಂತಾಗಿದೆ. ಎಲ್ಲಿಂದಲೋ ಬಂದ ಬಂಡವಾಳಿಗರು ಗ್ರಾಮಗಳಲ್ಲಿ ರೈತರ ಭೂಮಿಗೆ ಬೆಲೆ ಕಟ್ಟಲು ಪ್ರಾರಂಭಿಸಿಬಿಟ್ಟಾಗ ಈಗಾಗಲೇ ಸಾಕಷ್ಟು ಹೊಡೆತಗಳನ್ನು ಅನುಭವಿಸುತ್ತಿರುವ ಕೃಷಿ ಕ್ಷೇತ್ರ ನುಚ್ಚುನೂರಾಗುವುದರಲ್ಲಿ ಸಂಶಯವೇ ಇಲ್ಲ,” ಎಂದು ಕೃಷಿಕರು ತಮ್ಮ ಆತಂಕವನ್ನು ಹೊರಹಾಕಿದ್ದರು.
ಬಂಡವಾಳಶಾಹಿಗಳಿಗೆ ಪೂರಕವಾಗುವಂತೆ ಕಾನೂನುಗಳನ್ನು ಮಾರ್ಪಾಡು ಮಾಡಿರುವುದು ಸರ್ಕಾರದ ಆಡಳಿತಕ್ಕೆ ಕಳಂಕವನ್ನು ತಂದೊಡ್ಡಿರುವುದು ಸುಳ್ಳಲ್ಲ.
ಈ ಕುರಿತಾಗಿ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾಗಿರುವ ಜಸ್ಟೀಸ್ ನಾಗಮೋಹನ್ ದಾಸ್ ಹಾಗೂ ಪರಿಸರವಾದಿ ಅ ನಾ ಯಲ್ಲಪ್ಪರೆಡ್ಡಿ, ಪ್ರಜಾತಂತ್ರ ಮೌಲ್ಯಗಳನ್ನು ಎತ್ತಿ ಹಿಡಿದು ಸಂವಿಧಾನ ರಕ್ಷಕರಾಗಿ ಕೆಲಸ ಮಾಡಬೇಕಾದ ಗೌರವಾನ್ವಿತ ರಾಜ್ಯಪಾಲರು ಪೂರ್ವಾಪರವೊಂದನ್ನೂ ಪರಿಶೀಲಿಸದೆ ಈ ಸುಗ್ರೀವಾಜ್ಞೆಗೆ ಸಹಿ ಮಾಡಿರುವುದು ಕಲ್ಯಾಣ ರಾಜ್ಯದ ತತ್ವಗಳನ್ನೇ ಬುಡಮೇಲು ಮಾಡುವಂಥ ಕ್ರಮವಾಗಿದೆ. ಈಗ ಇನ್ನಿಲ್ಲದ ತರಾತುರಿಯಲ್ಲಿ ಸರ್ಕಾರಿ ಆದೇಶಗಳ ಮೂಲಕ ಇದನ್ನು ಅನುಷ್ಟಾನಕ್ಕೆ ತರುತ್ತಿರುವುದು ಖಂಡಿತವಾಗಿಯೂ ಒಪ್ಪತಕ್ಕುದಲ್ಲ, ಎಂದು ಹೇಳಿದ್ದಾರೆ.
“ಈ ತಿದ್ದುಪಡಿಗಳಿಗೆ ರಾಜ್ಯದಾದ್ಯಂತ ಪ್ರಬಲವಾದ ವಿರೋಧ ವ್ಯಕ್ತವಾಗಿದೆ. ಜನ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಗ್ರಾಮಗಳ ಮನೆಮನೆಗಳಿಂದ ರೈತರು, ಮಹಿಳೆಯರು, ಗ್ರಾಮೀಣ ಕಾರ್ಮಿಕರು ಇದನ್ನು ಹಿಂಪಡೆಯುವಂತೆ ಮುಖ್ಯ ಮಂತ್ರಿಗಳಿಗೆ ಪೋಸ್ಟ್ ಕಾರ್ಡ್ ಮೂಲಕ ಬರೆದು ತಿಳಿಸುತ್ತಿದ್ದಾರೆ. ಗ್ರಾಮಗಳಲ್ಲಿ ಫಲಕಗಳನ್ನು ಹಾಕುತ್ತಿದ್ದಾರೆ. ಭೂಮಿ ಕಳೆದುಕೊಂಡ ರೈತ ಕುಟುಂಬಗಳ ದುರವಸ್ಥೆಯ ಕಥೆಗಳನ್ನು ಮತ್ತು ರೈತರ ಭೂಮಿ ಕಬಳಿಸಿದ ಬಂಡವಾಳಿಗರು ಉಂಟುಮಾಡುತ್ತಿರುವ ವಿದ್ವಂಸಕ ಕೃತ್ಯಗಳನ್ನು ದಾಖಲಿಸಿ ಕಳುಹಿಸುತ್ತಿದ್ದಾರೆ. ಗ್ರಾಮಗಳಲ್ಲಿ ನಿರಂತರ ಜನಜಾಗೃತಿ ಮೂಡುತ್ತಿದ್ದು ಈ ತಿದ್ದುಪಡಿಗಳಿಗೆ ತೀಕ್ಷ್ಣ ಪ್ರತಿರೋಧ ಮೂಡಿ ಬರುತ್ತಿದೆ,” ಎಂದು ಹೇಳಿದ್ದಾರೆ.
ಸಂವಿಧಾನದ ಮಹಾನ್ ಆಶಯಗಳನ್ನು ಕಡೆಗಣಿಸಿ, ಪ್ರಜಾಪ್ರಭುತ್ವದ ನೆಲೆಗಟ್ಟನ್ನೇ ಅಲುಗಾಡಿಸುವಂತಿರುವ ಈ ಸುಗ್ರೀವಾಜ್ಞೆಯನ್ನು ಈ ರಾಜ್ಯದ ಪ್ರಜೆಗಳು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಆದ್ದರಿಂದ ಇದನ್ನು ಸದನದ ಮುಂದೆ ತಂದು ಪ್ರಜಾತಾಂತ್ರಿಕ ರೀತಿಯಲ್ಲಿ ಚರ್ಚೆಗೆ ಒಳಗಾಗಿಸಿ ಮಸೂದೆ ಹೊರಬರುವವರೆಗೂ ಈ ನಿಟ್ಟಿನಲ್ಲಿ ಯಾವ ಮುಂದುವರೆದ ಕ್ರಮಗಳಿಗೂ ಸರ್ಕಾರ ಮುಂದಾಗಕೂಡದು. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನೀಡಿರುವ ಆದೇಶವನ್ನು ರದ್ದುಗೊಳಿಸಿ ಜಮೀನುಗಳ ನೋಂದಣಿಯನ್ನು ತಕ್ಷಣ ನಿಲ್ಲಿಸಬೇಕು, ಎಂದು ತಮ್ಮ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ʼನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲ’ ಅಂದೋಲನ ರಾಜ್ಯದಾದ್ಯಂತ ಸಾಕಷ್ಟು ಪ್ರಚಾರ ಪಡೆಯುತ್ತಿದ್ದು, ಬಂಡವಾಳಶಾಹಿಗಳ ಪರವಾಗಿರುವ ತಿದ್ದುಪಡಿಯನ್ನು ಜನಪರವೆಂದು ಬಿಂಬಿಸಲು ಹೊರಟ ಸರ್ಕಾರದ ಕಣ್ಣು ತೆರೆಸುವ ಪ್ರಯತ್ನ ನಡೆಸುತ್ತಿದೆ. ರೈತರನ್ನು ಸಂಕಷ್ಟಕ್ಕೆ ದೂಡುವಂತಹ ಈ ಸುಗ್ರಿವಾಜ್ಞೆಯನ್ನು ಒಂದು ವೇಳೆ ಹಿಂಪಡೆಯದಿದ್ದಲ್ಲಿ ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನು ಆಂದೋಲನಕಾರರು ನೀಡಿದ್ದಾರೆ.