ಲೋಕಸಭಾ ಚುನಾವಣೆಯಲ್ಲಿ ಸತತವಾಗಿ ಸೋಲುಂಡ ಬಳಿಕ, ಕಾಂಗ್ರೆಸ್ ನಾಯಕತ್ವದ ಕುರಿತು ಗಂಭೀರವಾದ ಪ್ರಶ್ನೆಗಳಿದ್ದಿದ್ದವು. ಕಾಂಗ್ರೆಸ್‌ಗೆ ಸಮರ್ಥವಾದ ಮತ್ತು ಪೂರ್ಣಕಾಲಿಕ ಅಧ್ಯಕ್ಷರ ನೇಮಕವಾಗಬೇಕು ಎಂದು ಒತ್ತಡವೂ ಕೇಳಿ ಬಂದಿತ್ತು. ಕಳೆದ ಬಾರಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ, ಕಾಂಗ್ರೆಸ್‌ಗೆ ಹೊಸ ರಾಷ್ಟ್ರೀಯ ನಾಯಕರು ಸಿಗುತ್ತಾರೆ ಎಂಬ ಆಶಾಭಾವನೆ ಇದ್ದರೂ, ಆ ಅವಕಾಶವನ್ನು ಕಾಂಗ್ರೆಸ್ ಕಳೆದುಕೊಂಡಿತು. ಈಗ, ಪಕ್ಷದಲ್ಲಿ ಎಲ್ಲರಿಗೂ ಸಹಮತವಿರುವ ದಂಡನಾಯಕನಿಲ್ಲದಿದ್ದರೂ, ಪಕ್ಷದ ಪದಾಧಿಕಾರಿಗಳ ಹುದ್ದೆಯಲ್ಲಿ ಭಾರಿ ಬದಲಾವಣೆ ಮಾಡಿ, ಹೊಸ ಸ್ವರೂಪ ನೀಡುವ ಪ್ರಯತ್ನ ಮಾಡಿದೆ.
ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಆಗಿದ್ದ ಕೆ.ಸಿ ವೇಣುಗೋಪಾಲ್ ಅವರನ್ನು ಬದಲಾವಣೆ ಮಾಡಿ ಅವರ ಜಾಗಕ್ಕೆ ರಣದೀಪ್ ಸುರ್ಜೆವಾಲಾ ಅವರನ್ನು ನೇಮಕ ಮಾಡಿ ಆದೇಶ ಮಾಡಿದೆ. ಇನ್ನು ಕರ್ನಾಟಕದ ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ ಅವರಿಗೆ ʻಕೈʼಕಮಾಂಡ್ ಕೊಕ್ ಕೊಟ್ಟಿದ್ದು, ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಮಲ್ಲಿಕಾರ್ಜುನ ಖರ್ಗೆಯಿಂದ ಹಿಂಪಡೆದಿದೆ. ಇದರ ಜೊತೆ ಜೊತೆಗೆ ಮಾಜಿ ಸಚಿವ ಕೃಷ್ಣಭೈರೇಗೌಡ ಮತ್ತು ಮಾಜಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್‌ಗೆ ಹೊಸದಾಗಿ ಜವಾಬ್ದಾರಿ ವಹಿಸಿದೆ. ತಮಿಳುನಾಡು, ಪುದುಚೇರಿ, ಗೋವಾ ರಾಜ್ಯದ ಉಸ್ತುವಾರಿಯನ್ನು ದಿನೇಶ್ ಗುಂಡೂರಾವ್‌ಗೆ ಕೊಟ್ಟರೆ, ಮಹಾರಾಷ್ಟ್ರಕ್ಕೆ ಎಚ್. ಕೆ. ಪಾಟೀಲ್ ಅವರನ್ನು ಉಸ್ತುವಾರಿಯನ್ನಾಗಿ ಮಾಡಿದ್ದಾರೆ. ಇನ್ನೂ ಸೆಂಟ್ರಲ್ ಎಲೆಕ್ಷನ್ ಕಮಿಟಿಗೆ ಕೃಷ್ಣ ಭೈರೇಗೌಡ ಅವರನ್ನು ನೇಮಕ ಮಾಡಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೆ.ಸಿ. ವೇಣುಗೋಪಾಲ್ ಅವರನ್ನು ಸದ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರೆಸಲಾಗಿದೆ. ಕಾಂಗ್ರೆಸ್ ಸಂಘಟನೆಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಹಲವು ತಂಡಗಳನ್ನು ಪುನರ್ ರಚನೆ ಮಾಡಲಾಗಿದೆ. ಹೊಸ ಟೀಂ ಕಡೆಗೆ ಕಾಂಗ್ರೆಸ್ ಹೈಕಮಾಂಡ್ ಮುಖ ಮಾಡಿದ್ದು, ಬಹುತೇಕ ಹಲವು ರಾಜ್ಯಗಳ ಉಸ್ತುವಾರಿಗಳ ಬದಲಾವಣೆ ಮಾಡಿದ್ದಾರೆ. ಕರ್ನಾಟಕಕ್ಕೆ ರಣದೀಪ್ ಸಿಂಗ್ ಸುರ್ಜೆವಾಲ, ಮಧ್ಯಪ್ರದೇಶಕ್ಕೆ ಮುಕುಲ್ ವಾಸ್ನಿಕ್, ಪಂಜಾಬ್‌ಗೆ ಹರೀಶ್ ರಾವತ್, ಆಂಧ್ರಪ್ರದೇಶಕ್ಕೆ ಉಮ್ಮನ್ ಚಾಂಡಿ, ಉತ್ತರ ಪ್ರದೇಶಕ್ಕೆ ಪ್ರಿಯಾಂಕಾ ವಾದ್ರಾ, ಕೇರಳಕ್ಕೆ ತಾರೀಖ್ ಅನ್ವರ್, ಅಸ್ಸಾಂ ರಾಜ್ಯಕ್ಕೆ ಜಿತೇಂದ್ರ ಸಿಂಗ್, ರಾಜಸ್ಥಾನಕ್ಕೆ ಅಜೇಯ್ ಮಾಕೇನ್ ಅವೆನ್ನು ನಿಯೋಜಿಸಲಾಗಿದೆ. ಲೋಕಸಭಾ ಮತ್ತು ವಿಧಾನಸಭಾ ಅಭ್ಯರ್ಥಿಗಳ ಆಯ್ಕೆಗೂ ಸಮಿತಿ ರಚನೆ ಮಾಡಿದ್ದು, ಐವರು ಸದಸ್ಯರ ಸೆಂಟ್ರಲ್ ಎಲೆಕ್ಷನ್ ಕಮಿಟಿ ರಚನೆ ಮಾಡಲಾಗಿದೆ. ಸಮಿತಿಯಲ್ಲಿ ರಾಜ್ಯದಿಂದ ಕೃಷ್ಣಭೈರೇಗೌಡ ಅವರಿಗೆ ಸ್ಥಾನ ನೀಡಲಾಗಿದೆ. ಮಧುಸೂಧನ್ ಮಿಸ್ತ್ರಿ ನೇತೃತ್ವದ ಕಮಿಟಿ ರಚನೆಯಾಗಿದ್ದು, ರಾಜೇಶ್ ಮಿಶ್ರಾ, ಜ್ಯೋತಿಮಣಿ, ಅರವಿಂದ್ ಸಿಂಗ್ ಲೊವೆಲಿ ಸದಸ್ಯರಾಗಿ ಇರಲಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯಗೆ ಹಿನ್ನಡೆ, ಡಿಕೆಶಿಗೆ ಮುನ್ನಡೆ..?
ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಬಣಕ್ಕೆ ಹಿನ್ನಡೆಯಾಗಿದೆ. ಕೆ.ಸಿ ವೇಣುಗೋಪಾಲ್, ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಒಬ್ಬರಾಗಿದ್ದರು. ಇದೀಗ ರಾಜ್ಯ ಉಸ್ತುವಾರಿ ಸ್ಥಾನದಿಂದ ವೇಣುಗೋಪಾಲ್ ಅವರನ್ನು ತೆಗೆದುಹಾಕಲಾಗಿದೆ. ಅಂದರೆ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿರುವ ಡಿ.ಕೆ ಶಿವಕುಮಾರ್ ಆಡಳಿತಕ್ಕೆ ಪಕ್ಷದಿಂದ ಯಾವುದೇ ಇರುಸು ಮುರುಸು ಉಂಟಾಗಬಾರದು ಎನ್ನುವ ಏಕೈಕ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನುವುದು ರಾಜಕೀಯ ವಲಯದಲ್ಲಿ ಕೇಳುತ್ತಿರುವ ಮಾತು.
ಕೆ.ಸಿ ವೇಣುಗೋಪಾಲ್ ಉಸ್ತುವಾರಿಯಾಗಿ ಮುಂದುವರಿದಿದ್ದರೆ ಸಿದ್ದರಾಮಯ್ಯ ಮಾತಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿತ್ತು. ಆದರೆ ಪಕ್ಷದ ಕೆಲವೊಂದು ನಿರ್ಧಾರಗಳು ಅಧ್ಯಕ್ಷರ ಮೂಗಿನ ನೇರಕ್ಕೆ ನಡೆಯಬೇಕಾದ ಅನಿವಾರ್ಯತೆ ಇರುತ್ತದೆ. ಹಾಗಾಗಿ ಬದಲಾವಣೆ ಅನಿವಾರ್ಯವಾಗಿತ್ತು ಎನ್ನುತ್ತಿದೆ ಡಿಕೆಶಿ ಬಳಗದ ಮೂಲಗಳು.
ಕಾಂಗ್ರೆಸ್‌ನ ಈ ಬೆಳವಣಿಗೆ ಯಾಕಿಷ್ಟು ಮಹತ್ವ..?
ಕಾಂಗ್ರೆಸ್ ಪಕ್ಷ ಇಷ್ಟು ದಿನಗಳ ಕಾಲ ಗಾಂಧಿ ಪರಿವಾರದ ನೆರಳಲ್ಲಿಯೇ ಅಧಿಕಾರ ಅನುಭವಿಸುತ್ತಾ ಸಾಗಿತ್ತು. ಇದೀಗ ಕಾಲ ಬದಲಾಗಿದ್ದು, ಗಾಂಧಿ ಕುಟುಂಬದಿಂದ ಹೊರಬರಬೇಕಾದ ಅನಿವಾರ್ಯತೆ ಎದುರಾಗಿದೆ. ಕಾಂಗ್ರೆಸ್ ಪಕ್ಷ ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲೂ ಹೀನಾಯವಾಗಿ ಸೋಲು ಕಂಡಿದ್ದು, ಲೋಕಸಭಾ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಂಡಿದೆ. ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಅಧ್ಯಕ್ಷರಾಗಬೇಕು ಎನ್ನುವ ಆಗ್ರಹ ಕೇಳಿಬಂದಿದೆ. ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಮಾಡುವಂತೆ ಇತ್ತೀಚಿಗಷ್ಟೇ ಒತ್ತಾಯ ಮಾಡಿ ಕಾಂಗ್ರೆಸ್‌ನ 23 ಮಂದಿ ಹಿರಿಯ ನಾಯಕರು ಪತ್ರ ಕೂಡ ಬರೆದಿದ್ದರು. ಅದಾದ ಬಳಿಕ ಕಾಂಗ್ರೆಸ್ ಹೈಕಮಾಂಡ್ ಪ್ರಮುಖ ನಿರ್ಧಾರ ಕೈಗೊಂಡಿದ್ದು, ಎಲ್ಲಾ ಸಮಿತಿಗಳನ್ನು ಪುನರ್‌ರಚನೆ ಮಾಡಿದೆ. ಅದೂ ಅಲ್ಲದೆ ರಾಹುಲ್ ಆಪ್ತರಿಗೇ ಹಲವಾರು ಕಡೆ ಮಣೆ ಹಾಕಲಾಗಿದೆ.
ದೆಹಲಿಯಲ್ಲೂ ಸಾಕಷ್ಟು ಬದಲಾವಣೆ ಆಗಿದ್ದು ಶೀಘ್ರದಲ್ಲೇ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರೂ ಬರಲಿದ್ದಾರಾ? ಎನ್ನುವ ಪ್ರಶ್ನೆಯೂ ಈಗ ಎದ್ದಿದೆ. ಒಂದೊಮ್ಮೆ ಗಾಂಧಿ ಕುಟುಂಬದ ಸದಸ್ಯರು ಮತ್ತೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಬಂದರೆ ಈಗ ಮಾಡಿರುವ ಬದಲಾವಣೆ ಮತ್ತೆ ನಾಮಕಾವಸ್ತೆಗೆ ಸರಿಯಲಿದೆ. ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರದತ್ತ ತರುವ ಮನಸ್ಸು ಗಾಂಧಿ ಕುಟುಂಬಕ್ಕೆ ಇದ್ದರೆ, ಹೊಸ ಮುಖ, ಸಮರ್ಥ ನಾಯಕತ್ವ, ಚಾಣಕ್ಯ ನೀತಿ ಹೊಂದಿರುವ ನಾಯಕನಿಗೆ ಅಧ್ಯಕ್ಷ ಪಟ್ಟ ಕಟ್ಟಬೇಕು ಎನ್ನುತ್ತಾರೆ ಕಾಂಗ್ರೆಸ್ಸಿಗರು.