ಜಗತ್ತಿನಾದ್ಯಂತ ಕರೋನಾ ವೈರಸ್ ಮಹಾಮಾರಿ ಜನತೆಯಲ್ಲಿ ಆತಂಕದ ವಾತಾವರಣ ಮೂಡಿಸಿದೆ. ಸದಾ ತನ್ನ ಜೊತೆಗಿರುವ ಸ್ನೇಹಿತರು, ಕುಟುಂಬಿಕರ ಬಗ್ಗೆಯೇ ಸಂಶಯಿಸುವ ಸನ್ನಿವೇಶ ಒದಗಿ ಬಂದಿದೆ.. ಚೀನಾದಲ್ಲಿ ಆರಂಭವಾದ ಈ ಮಹಾಮಾರಿ ರೋಗ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದೆ. ಅಮೆರಿಕಾ, ಇಟಲಿ, ಸ್ಪೇನ್, ಇರಾನ್ ರಾಷ್ಟ್ರಗಳಂತೂ ಕರೋನಾ ಪೀಡಿತ ಭೂಮಿಯಾಗತೊಡಗಿದೆ. ಅಮೆರಿಕಾ ದೇಶವೊಂದರಲ್ಲಿಯೇ ಲಕ್ಷಕ್ಕೂ ಮಿಕ್ಕ ಕೋವಿಡ್-19 ಸೋಂಕಿತರು ಪತ್ತೆಯಾಗಿದ್ದಾರೆ. ಆರಂಭದಲ್ಲಿ ಚೀನಾದಲ್ಲಿ ಉಂಟು ಮಾಡಿದ್ದ ಸಾವು-ನೋವು ಈಗ ಇಟಲಿ, ಅಮೆರಿಕಾ, ಸ್ಪೇನ್ ನಂತಹ ರಾಷ್ಟ್ರಗಳಲ್ಲಿ ವ್ಯಾಪಕವಾಗ ತೊಡಗಿದೆ. ದಿನದಿಂದ ದಿನಕ್ಕೆ ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ ಅಧಿಕವಾಗತೊಡಗಿದೆ. ಅಂತೆಯೇ ಕೋವಿಡ್-19 ರೋಗಿಗಳ ಗುಣಮುಖರಾಗುವ ಸಂಖ್ಯೆಯೂ ನಿಧಾನಗತಿಯಲ್ಲಿ ಏರಿಕೆಯಾಗುತ್ತಿರುವುದು ಸಮಾಧಾನಕರ ಸಂಗತಿ.
ಸಾಮಾನ್ಯವಾಗಿ ಈ ಸೋಂಕು ವೃದ್ಧರು ಹಾಗೂ ಮಕ್ಕಳಿಗೆ ತಗುಲಿದರೆ ಅವರು ಬದುಕಿ ಉಳಿಯುವುದು ಕಷ್ಟ ಎನ್ನಲಾಗುತ್ತಿದೆ. ಆದರೆ ಅದೇ ಸಮಯಕ್ಕೆ ಇಟೆಲಿಯಲ್ಲಿ 101 ರ ಹರೆಯದ ವೃದ್ಧರೋರ್ವರು ಕೋವಿಡ್-19 ಸೋಂಕಿನ ವಿರುದ್ಧ ಗೆದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಇದು ಕರೋನಾ ರೋಗಗ್ರಸ್ತ ಇಟೆಲಿಯಲ್ಲಿ ಒಂದು ರೀತಿಯ ಆಶಾಭಾವನೆ ಮೂಡಿಸಿದೆ. ಅಲ್ಲದೇ ಯಾವ ದೇಶ ತನ್ನಲ್ಲಿ ವೃದ್ಧರಿಗೆ ಚಿಕಿತ್ಸೆ ನೀಡಲು ನಿರಾಕರಿಸಿತ್ತೋ ಅದೇ ದೇಶದಲ್ಲಿ ಇಂತಹದ್ದೊಂದು ಪವಾಡ ನಡೆದಿದೆ.
ಈ ಮಧ್ಯೆ ಜಗತ್ತಿನಾದ್ಯಂತ ಕರೋನಾ ಸೋಂಕಿತರ ಸಂಖ್ಯೆ 6 ಲಕ್ಷ ಮೀರಿದೆ. ಪ್ರಸ್ತುತ ಜಗತ್ತಿನಾದ್ಯಂತ 6,01,478 ಮಂದಿಗೆ ಕೋವಿಡ್-19 ದೃಢಪಟ್ಟರೆ, ಅದರಲ್ಲಿ 27,862 ಮಂದಿ ಅಸುನೀಗಿದ್ದಾರೆ. ಆದರೆ ಸಮಧಾನದ ಸಂಗತಿ ಅಂದ್ರೆ 1,31,826 ಮಂದಿ ಕರೋನಾ ವಿರುದ್ಧದ ಹೋರಾಟದಲ್ಲಿ ಗೆದ್ದಿದ್ದಾರೆ, ಅರ್ಥಾತ್ ಗುಣಮುಖರಾಗಿದ್ದಾರೆ. ಅಂತೆಯೇ ದೇಶದಲ್ಲೂ ಪ್ರಸ್ತುತ 917 ಮಂದಿಯಲ್ಲಿ ಕೋವಿಡ್-19 ದೃಢಪಟ್ಟರೆ, 20 ಮಂದಿ ಸಾವನ್ನಪ್ಪಿದ್ದಾರೆ, ಜೊತೆಗೆ 83 ಮಂದಿ ಗುಣಮುಖರಾಗಿದ್ದಾರೆ.
ಇನ್ನು ಕರ್ನಾಟಕ ರಾಜ್ಯದಲ್ಲಿ ಸದ್ಯ 73 ಮಂದಿಗೆ ಕೋವಿಡ್-19 ದೃಢಪಟ್ಟರೆ, ಮೂರು ಮಂದಿ ಸಾವನ್ನಪ್ಪಿ, 65 ಮಂದಿ ಇನ್ನೂ ಆಸ್ಪತ್ರೆ ನಿಗಾದಲ್ಲಿದ್ದಾರೆ. 5 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಕಂಡಿದ್ದಾರೆ. ಇನ್ನು ಅತ್ಯಧಿಕ ಕೋವಿಡ್-19 ಪೀಡಿತ ಕೇರಳ ರಾಜ್ಯದಲ್ಲಿ 176 ಮಂದಿಯಲ್ಲಿ 12 ಮಂದಿ ಗುಣಮುಖರಾಗಿದ್ದರೆ, ಓರ್ವ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಏಕಾಏಕಿ ತವರಿಗೆ ಎನ್ಆರ್ಐಗಳು ವಾಪಾಸ್ ಬಂದ ಹಿನ್ನೆಲೆ ಏರುಗತಿಯಲ್ಲಿ ಸಾಗಿದ್ದ ಕೋವಿಡ್ -19 ಬಾಧಿತರ ಸಂಖ್ಯೆ 162 ತಲುಪಿದ್ದು ಅದರಲ್ಲಿ 4 ಮಂದಿ ಸಾವನ್ನಪ್ಪಿ 25 ಮಂದಿ ಗುಣಮುಖರಾಗಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 40 ಸೋಂಕು ದೃಢಪಟ್ಟಿದ್ದು, ಅವರಲ್ಲಿ 6 ಮಂದಿ ಗುಣಮುಖರಾದರೆ ಓರ್ವ ಸಾವನ್ನಪ್ಪಿದ್ದಾರೆ.
ಇನ್ನು ಜಗತ್ತಿನ ವಿಚಾರಕ್ಕೆ ಬರೋದಾದರೂ ಅತೀ ಹೆಚ್ಚು ಕೋವಿಡ್-19 ಪೀಡಿತ ದೇಶ ಅಮೆರಿಕಾ. ಸದ್ಯ ಅಮೆರಿಕಾದಲ್ಲಿ ಕರೋನಾ ವೈರಸ್ ಲಕ್ಷಕ್ಕೂ ಅಧಿಕ ಮಂದಿ ಮೇಲೆ ದಾಳಿ ನಡೆಸಿದೆ. ಅಮೆರಿಕಾದಲ್ಲಿ ಸದ್ಯ 1,04,671 ಮಂದಿ ಸೋಂಕು ಪೀಡಿತರಾದರೆ 1,176 ಮಂದಿ ಸಾವನ್ನಪ್ಪಿದ್ದರೆ, 2387 ಮಂದಿ ಗುಣಮುಖ ಹೊಂದಿದ್ದಾರೆ. ಇನ್ನು ಇಟೆಲಿಯ 86,498 ಸೋಂಕು ಪೀಡಿತರಲ್ಲಿ 10950 ಗುಣಮುಖರಾದರೆ, 9134 ಮಂದಿ ಸಾವೀಗೀಡಾಗಿದ್ದಾರೆ. ಹಾಗೂ ಸ್ಪೇನ್ ನಲ್ಲಿ 65,719 ಕನ್ಫರ್ಮ್ ಆದರೆ, 9357 ಮಂದಿ ಗುಣಮುಖ ಹೊಂದಿದ್ದಾರೆ ಆದರೆ ಸಾವಿನ ಸಂಖ್ಯೆ ಮಾತ್ರ ಐದು ಸಾವಿರ ದಾಟಿವೆ. ಇನ್ನೂ ಕೋವಿಡ್-19 ನ ಮೂಲ ಚೀನಾದಲ್ಲಿ 74,971 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಚೀನಾದ ಪ್ರಕಾರ 81,394 ಕೋವಿಡ್-19 ಪೀಡಿತರಲ್ಲಿ 3295 ಮಂದಿ ಬಲಿಯಾಗಿದ್ದಾರೆ. ಇನ್ನು ಬಹರೇನ್ ದೇಶದಲ್ಲಿ ಸೋಂಕು ಪತ್ತೆಯಾದ ಅರ್ಧದಷ್ಟು ಮಂದಿ ಗುಣಮುಖರಾಗಿರುವುದು ಸಮಾಧಾನದ ಸಂಗತಿ. ಅಲ್ಲಿ ದೃಢಪಟ್ಟಿರುವ ಸೋಂಕಿನ ಸಂಖ್ಯೆ 466, ಅದಲ್ಲಿ ನಾಲ್ವರು ಸಾವನ್ನಪ್ಪಿದ್ದರೆ 235 ಮಂದಿ ಗುಣಮುಖ ಹೊಂದಿದ್ದಾರೆ.
ಒಟ್ಟಿನಲ್ಲಿ ಜಗತ್ತಿನ ಹಲವು ದೇಶಗಳಲ್ಲಿ ಕರ್ಫ್ಯೂ ಮಾದರಿ ಲಾಕ್ಡೌನ್ ಅಳವಡಿಸಲಾಗಿದ್ದು, ಕರೋನಾ ವೈರಸ್ ವಿರುದ್ಧ ಗೆಲ್ಲಲು ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳು ಪರದಾಡುತ್ತಿದೆ. ಅದರೆ ಸಮಾಧಾನದ ಸಂಗತಿ ಅಂದ್ರೆ ಭಾರತದಲ್ಲಿ ಇದುವರೆಗೆ ವಿಮಾನ ಮೂಲಕ ಆಗಮಿಸಿದ 15,24,266 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದ್ದು, ಅದರಲ್ಲಿ ಬಹುತೇಕ ಮಂದಿ ʼಹೋಮ್ ಕ್ವಾರೆಂಟೈನ್ʼ ಗೆ ಒಳಗಾಗಿದ್ದಾರೆ. ಅದಲ್ಲದೇ ಈ ರೀತಿ ಕೋವಿಡ್-19 ಏರಿಕೆಯ ನಡುವೆಯೂ ರೋಗಿಗಳು ಚಿಕಿತ್ಸೆ ಸ್ಪಂದಿಸುತ್ತಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಕೇವಲ ಕೋವಿಡ್-19 ಸಾವಿನ ಕುರಿತು ಲೆಕ್ಕಾಚಾರ ಹಾಕುವ ಸಂದರ್ಭದಲ್ಲಿಯೇ ಈ ರೀತಿಯಾಗಿ ಕೋವಿಡ್-19 ಪಾಸಿಟಿವ್ ಆದ ಬಳಿಕವೂ ಬದುಕಿ ಬಂದವರ ಲೆಕ್ಕಾಚಾರದ ಬಗ್ಗೆಯೂ ನಾವು ಗಮನಹರಿಸಬೇಕಿದೆ. ಆದರೆ ಒಂದು ಕಡೆಯಲ್ಲಿ ಕೋವಿಡ್-19 ಅಪಾಯದ ಮುನ್ಸೂಚನೆ ಬಗ್ಗೆಯೂ ಗಮನವಿಡುತ್ತ, ಗುಣಮುಖರಾದವರ ಬಗ್ಗೆಯೂ ತಿಳಿದುಕೊಳ್ಳುವ ಜೊತೆಗೆ ನಮ್ಮ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕಿದೆ.