ದಿಲೀಪ್ ಘೋಷ್. ಈ ಹೆಸರು ಇತ್ತೀಚಿನ ದಿನಗಳಲ್ಲಿ ಪ್ರತಿದಿನ ವಿವಾದದ ಕೇಂದ್ರ ಬಿಂದು. ನಾಯಿಯನ್ನು ಅಟ್ಟಾಡಿಸಿಕೊಂಡು ಹೊಡೆದು ಸಾಯಿಸುವಂತೆ ಉತ್ತರಪ್ರದೇಶ, ಅಸ್ಸಾಂ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರನ್ನು ಕೊಂದು ಹಾಕಲಾಗಿದೆ ಎಂದು ಹೇಳಿಕೆಯನ್ನು ನೀಡುವ ಮೂಲಕ ಘೋಷ್ ದೇಶಾದ್ಯಂತ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಈ ಹೇಳಿಕೆಯನ್ನು ನೀಡಿದ್ದರಿಂದ ಘೋಷ್ ವಿರುದ್ಧ ಪ್ರತಿಪಕ್ಷಗಳಷ್ಟೇ ಅಲ್ಲ, ನಾಗರಿಕ ಸಮಾಜ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.
ಇಂತಹ ಹೇಳಿಕೆಗಳನ್ನು ನೀಡುತ್ತಲೇ ಬಂದಿರುವ ಘೋಷ್ ಅವರ ಬಾಯಿ ಮುಚ್ಚಿಸುವುದೇ ತೃಣಮೂಲ ಕಾಂಗ್ರೆಸ್ ನೇತೃತ್ವದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಕ್ರಮ ನುಸುಳುಕೋರರನ್ನು ದೇಶದಿಂದ ಹೊರಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ಜಾರಿಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಘೋಷ್ ಅವರ ಕಾಳಜಿಯೂ ಇದಾಗಿದೆ. ಮುಸ್ಲಿಂರನ್ನು ದೇಶದಿಂದ ಹೊರಹಾಕುವುದು ಇವರ ಕಾಳಜಿಯಾಗಿದ್ದು, ಒಂದು ವೇಳೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿರುವ 50 ಲಕ್ಷ ಮುಸ್ಲಿಂ ನಿರಾಶ್ರಿತರನ್ನು ಹೊರ ಹಾಕಲಾಗುವುದು ಎಂದಿದ್ದರು.
ಈ ಸಮುದಾಯಕ್ಕೆ ಸೇರಿರುವ ಹೆಸರುಗಳನ್ನು ಮೊದಲು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗುವುದು ಮತ್ತು ಅಗತ್ಯ ಬಿದ್ದರೆ ದೇಶದಿಂದ ಹೊರ ಹಾಕಲಾಗುತ್ತದೆ ಎಂದು ವಿವಾದದ ಹೇಳಿಕೆ ನೀಡುವ ಮೂಲಕ ಜನರಲ್ಲಿ ಗೊಂದಲ, ಆತಂಕ ಮೂಡಿಸಿದ್ದರು.
ತಮ್ಮ ಇಂತಹ ವಿವಾದಾಸ್ಪದ ಹೇಳಿಕೆಗಳ ಬಗ್ಗೆ ಆಂಗ್ಲ ಆನ್ ಲೈನ್ ಸುದ್ದಿವಾಹಿನಿ `ದಿ ವೈರ್’ ಗೆ ನೀಡಿರುವ ಸಂದರ್ಶನದಲ್ಲಿ ಘೋಷ್ ಅವರು, ಯಾವುದೇ ಕಾರಣಕ್ಕೂ ನಾನು ನೀಡಿರುವ ಹೇಳಿಕೆಯನ್ನು ವಾಪಸ್ ಪಡೆಯುವುದಿಲ್ಲ. ನನ್ನ ಹೇಳಿಕೆ ಸರಿಯಾಗಿದ್ದು, ಅದಕ್ಕೆ ನಾನು ಬದ್ಧನಾಗಿದ್ದೇನೆ ಎಂದಿದ್ದಾರೆ.
ಬಿಜೆಪಿ ಸರ್ಕಾರಗಳಿರುವ ಉತ್ತರಪ್ರದೇಶ, ಅಸ್ಸಾಂ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸಿದವರನ್ನು ನಾಯಿಗಳನ್ನು ಸಾಯಿಸಿ ಗುಂಡಿಕ್ಕಿ ಕೊಂದ ರೀತಿಯಲ್ಲಿ ಕೊಲ್ಲಲಾಗಿದೆ ಎಂದು ವಿವಾದಿತ ಹೇಳಿಕೆ ನೀಡಿದ್ದೀರಲ್ಲಾ? ಈ ಬಗ್ಗೆ ನಿಮಗೆ ವಿಷಾದವಾಗುತ್ತಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಘೋಷ್, ಇಲ್ಲವೇ ಇಲ್ಲ. ನಾನು ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಒಬ್ಬ ನಾಗರಿಕನಾಗಿ ಹೇಳುತ್ತಿದ್ದೇನೆ. ಯಾವುದೇ ವ್ಯಕ್ತಿಗೆ ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾನಿ ಮಾಡುವುದಕ್ಕೆ, ಸುಟ್ಟು ಹಾಕುವುದಕ್ಕೆ ಅಥವಾ ನಾಶ ಮಾಡುವ ಹಕ್ಕು ಇಲ್ಲ. ತೆರಿಗೆದಾರರ ಹಣದಿಂದ ಸ್ಥಾಪಿಸಲಾಗಿರುವ ಅಥವಾ ನಿರ್ಮಿಸಲಾಗಿರುವ ಆಸ್ತಿಯನ್ನು ನಾಶಪಡಿಸುವ ಅಧಿಕಾರವನ್ನು ಈ ಪ್ರತಿಭಟನಾಕಾರರಿಗೆ ಕೊಟ್ಟವರಾರು? ಇಂತಹ ದುಷ್ಕೃತ್ಯಗಳನ್ನು ನಿಯಂತ್ರಿಸುವುದು ಸರ್ಕಾರದ ಆದ್ಯ ಕರ್ತವ್ಯವಲ್ಲವೇ? ಈ ಹಿನ್ನೆಲೆಯಲ್ಲಿ ಅಗತ್ಯ ಬಿದ್ದಲ್ಲಿ ಅವರನ್ನು ಗುಂಡಿಕ್ಕಿ ಹೊಡೆದುರುಳಿಸಬೇಕು. ಈ ಹಿಂದೆ ಹಲವು ಸರ್ಕಾರಗಳು ಈ ಕ್ರಮವನ್ನೇ ಕೈಗೊಂಡಿವೆ. ದೇಶದಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸದಿರುವ ಒಂದೇ ಒಂದು ರಾಜ್ಯ ಸರ್ಕಾರವೂ ಇಲ್ಲ ಎಂದು ಅವರು ಪ್ರತಿಭಟನಾಕಾರರ ಮೇಲೆ ಗುಂಡಿಕ್ಕಿದ ಬಿಜೆಪಿ ಸರ್ಕಾರಗಳ ಕ್ರಮವನ್ನು ಸಮರ್ಥಿಸಿದ್ದಾರೆ.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಯಾವುದೇ ಆಯ್ಕೆ ಇಲ್ಲದಿದ್ದಾಗ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಗೋಲಿಬಾರ್ ಮಾಡುತ್ತಾರೆ. ನಾನು ಈಗ ಮತ್ತೊಮ್ಮೆ ಹೇಳುತ್ತಿದ್ದೇನೆ, ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾನಿಗೊಳಿಸುವವರನ್ನು ಗುಂಡಿಕ್ಕಿ ಕೊಲ್ಲಬೇಕೆಂದು ಹೇಳಿದ್ದಾರೆ.
1975 ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಹೋರಾಟಗಾರರು ಬೀದಿಗಿಳಿದು ಪ್ರತಿಭಟನೆ ನಡೆಸಿ, ಹಿಂಸಾಚಾರ ನಡೆದು ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾನಿಗೊಳಿಸಿದ್ದಾಗ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಗೋಲಿಬಾರ್ ಗೆ ಆದೇಶ ನೀಡಿದ್ದು ಸರಿಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಘೋಷ್, ರಸ್ತೆಯಲ್ಲಿ ಟೈರ್ ಗಳಿಗೆ ಬೆಂಕಿ ಇಟ್ಟರೆ ಅದು ಸಾರ್ವಜನಿಕ ಆಸ್ತಿಗೆ ಹಾನಿಯಾದಂತೆ ಲೆಕ್ಕವಲ್ಲ. ಆದರೆ, ಬಸ್ಸುಗಳು, ರೈಲುಗಳಿಗೆ ಬೆಂಕಿ ಹಚ್ಚುವುದು, ಅವುಗಳನ್ನು ಹಾನಿ ಮಾಡುವುದನ್ನು ನಾವು ತೆರಿಗೆದಾರರ ಹಣವನ್ನು ಲೂಟಿ ಮಾಡಿದಂತೆ ಅಥವಾ ಹಾನಿ ಮಾಡಿದಂತೆ ಅರ್ಥವಾಗುತ್ತದೆ.
ನಮ್ಮದು ಸ್ವತಂತ್ರ ದೇಶ, ನಾವು ಪ್ರಜಾಪ್ರಭುತ್ವದ ತಳಹದಿಯಲ್ಲಿ ಚುನಾಯಿತ ಸರ್ಕಾರವನ್ನು ಆಯ್ಕೆ ಮಾಡಿರುತ್ತೇವೆ. ಆದರೆ, ಈ ಪ್ರತಿಭಟನಾಕಾರರು ಏಕೆ ನಮ್ಮ ಆಸ್ತಿಗಳನ್ನು ಹಾನಿಗೊಳಿಸಬೇಕು? ಪಶ್ಚಿಮ ಬಂಗಾಳದಲ್ಲಿ ದುಷ್ಕರ್ಮಿಗಳು ಬಸ್ಸುಗಳು, ರೈಲುಗಳು, ರೈಲ್ವೆ ನಿಲ್ದಾಣಗಳಿಗೆ ನುಗ್ಗಿ ಹಾನಿಗೊಳಿಸಿದ್ದರಿಂದ ನಾನು ಈ ರೀತಿಯ ಹೇಳಿಕೆ ನೀಡಿದ್ದೇನೆ. ಇಷ್ಟೆಲ್ಲಾ ದೇಶದ ಆಸ್ತಿಗೆ ಹಾನಿ ಮಾಡುತ್ತಿರುವ ಈ ಪ್ರತಿಭಟನಾಕಾರರು ಭಾರತೀಯರಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಒಂದು ವೇಳೆ ಅವರು ಭಾರತೀಯರೇ ಆಗಿದ್ದಲ್ಲಿ, ಅವರು ಹೇಗೆ ಅವರ ಆಸ್ತಿಯನ್ನು ಹಾನಿಗೊಳಿಸುತ್ತಾರೆ? ಇಂತಹವರ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರವೇಕೆ ಕ್ರಮ ಕೈಗೊಳ್ಳುತ್ತಿಲ್ಲ? ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೋರಾಟಗಾರರು ಏನು ಮಾಡಿದ್ದರು ಎಂಬುದು ನನಗೆ ಗೊತ್ತಿಲ್ಲ. ಆ ಸಂದರ್ಭದಲ್ಲಿ ನಾನಿನ್ನೂ ಚಿಕ್ಕವನಿದ್ದೆ. ಆಗಿನ ವಿಚಾರಗಳ ಬಗ್ಗೆ ನನಗೆ ತಿಳಿದಿಲ್ಲ. ಆದರೆ, ಆರ್ ಎಸ್ ಎಸ್ ಮತ್ತು ಜನಸಂಘದ ಯಾವೊಬ್ಬ ಕಾರ್ಯಕರ್ತನೂ ಸಹ ರಾಷ್ಟ್ರೀಯ ಆಸ್ತಿಯನ್ನು ಹಾನಿಗೊಳಿಸಿರಲಿಲ್ಲ.
ಈ ವಿವಾದಾತ್ಮಕ ಹೇಳಿಕೆಯಿಂದ ಬಂಗಾಳದ ಬಿಜೆಪಿ ನಾಯಕರಲ್ಲಿ ಕೆಲವರಿಗೆ ಅಸಮಾಧಾನವಿದೆ ಎಂಬುದನ್ನು ಒಪ್ಪಿಕೊಂಡ ಘೋಷ್, ಕೆಲವು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಆದರೆ, ಈ ಭಿನ್ನಾಭಿಪ್ರಾಯಗಳು ನೀತಿ ಅಥವಾ ಸಿದ್ಧಾಂತಗಳ ಮಟ್ಟದಲ್ಲಿಲ್ಲ. ಸಿಎಎ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ವಾಪಸ್ ತೆಗೆದ ವಿಚಾರ, ತ್ರಿವಳಿ ತಲಾಖ್ ನಂತಹ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ಕಳೆದ ಹಲವು ವರ್ಷಗಳಲ್ಲಿ ನಮ್ಮ ಪಕ್ಷದ 94 ಕಾರ್ಯಕರ್ತರು ಹತ್ಯೆಯಾಗಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷನಾಗಿ ಪ್ರತಿ ವಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಆದರೆ, ಇತರೆ ನಾಯಕರು ಇದನ್ನು ಮಾಡುವುದಿಲ್ಲ. ಇದನ್ನೆಲ್ಲಾ ನೋಡಿದ ಮೇಲೆಯೂ ನಾನು ಸಿಹಿಸಿಹಿಯಾಗಿ ಮಾತನಾಡಬೇಕೆಂದು ಕೆಲವರು ಬಯಸಿದಲ್ಲಿ ನಾನು ಒಪ್ಪುವುದಿಲ್ಲ ಎನ್ನುವ ಮೂಲಕ ತಮ್ಮ ಮಾತಿನ ವೈಖರಿಯನ್ನು ಬದಲಿಸಿಕೊಳ್ಳುವುದೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.