ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) 21 ಅಕ್ಟೋಬರ್ 2019ರಂದು ಕ್ರೈಮ್ ಇನ್ ಇಂಡಿಯಾ – 2017 (Crime in India-2017) ಅಂಕಿಅಂಶಗಳನ್ನೊಳಗೊಂಡ ವರದಿ ಬಿಡುಗಡೆ ಮಾಡಿತ್ತು. ಈ 2017ರ ವರದಿಯಲ್ಲಿ ‘ರಾಜ್ಯದ ವಿರುದ್ಧದ ಅಪರಾಧಗಳು’ (Offences against the State) 2016ಕ್ಕಿಂತ 2017ರಲ್ಲಿ ಶೇಕಡ 30ರಷ್ಟು ಹೆಚ್ಚಾಗಿರುವುದು ವರದಿಯಿಂದ ಕಂಡು ಬಂದಿದೆ. 2017ರಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 9,013 ಪ್ರಕರಣಗಳು ರಾಜ್ಯದ ವಿರುದ್ಧದ ಅಪರಾಧಗಳಡಿ ದಾಖಲಾಗಿವೆ. 2016ರಲ್ಲಿ 6,986 ಪ್ರಕರಣಗಳಿದ್ದರೆ, 2015ರಲ್ಲಿ 6,040 ಪ್ರಕರಣಗಳು ದಾಖಲಾಗಿತ್ತು. ಕರ್ನಾಟಕದಲ್ಲಿ 2015ರಲ್ಲಿ 87 ಪ್ರಕರಣ, 2016ರಲ್ಲಿ 148 ಪ್ರಕರಣ ಮತ್ತು 2017ರಲ್ಲಿ 111 ಪ್ರಕರಣಗಳು ದಾಖಲಾಗಿತ್ತು. 2017ರಲ್ಲಿ ದೇಶಾದ್ಯಂತ ಗರಿಷ್ಠ ಪ್ರಕರಣ ಹೊಂದಿರುವ ರಾಜ್ಯಗಳೆಂದರೆ ಹರ್ಯಾಣ-2,576, ಉತ್ತರ ಪ್ರದೇಶ-2,055 ಮತ್ತು ತಮಿಳುನಾಡು-1,802.
ಎನ್‌ಸಿಆರ್‌ಬಿ ಬಿಡುಗಡೆ ಮಾಡಿದ ಒಟ್ಟು 9,013 ಪ್ರಕರಣಗಳಲ್ಲಿ, ಸೆಕ್ಷನ್ 124ಎ ಐಪಿಸಿ (ಹಿಂಸೆಗೆ ಪ್ರಚೋದನೆ ನೀಡುವುದು ಮತ್ತು ಹಿಂಸಾಚಾರದಲ್ಲಿ ತೊಡಗುವುದು) ಅಡಿ ಬರುವ ದೇಶದ್ರೋಹ ಅಪರಾಧಡಿ 51 ಪ್ರಕರಣಗಳು, ಸೆಕ್ಷನ್ 121, 121ಎ, 122, 123 ಐಪಿಸಿ (ಉದ್ದೇಶ ಪೂರ್ವಕವಾಗಿ ಪ್ರಚೋದನೆ ಹೇಳಿಕೆ ಕೊಡುವ) ಅಡಿ 109 ಪ್ರಕರಣಗಳು, Imputation, assertions prejudicial to national integration ಅಡಿ 24 ಪ್ರಕರಣಗಳು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ತಡೆ ಕಾಯ್ದೆ ಅಡಿ 7,910 ಪ್ರಕರಣಗಳು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಅಡಿ 901 ಪ್ರಕರಣಗಳು ಮತ್ತು ಅಧಿಕೃತ ರಹಸ್ಯ ಕಾಯ್ದೆಯಡಿ 18 ಪ್ರಕರಣಗಳನ್ನು ದಾಖಲಿಸಲಾಗಿದೆ.
50ಕ್ಕಿಂತ ಕಡಿಮೆ ‘ರಾಜ್ಯದ ವಿರುದ್ಧ ಅಪರಾಧ’ ಪ್ರಕರಣಗಳು ದಾಖಲಾಗಿರುವ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ವಿವರ
ಪೋಲಿಸರ ತನಿಖೆಯಲ್ಲಿರುವ ಪ್ರಕರಣಗಳು
ರಾಜ್ಯದ ವಿರುದ್ಧದ ಅಪರಾಧಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ 2017ರಲ್ಲಿ ಪೋಲಿಸರು ಒಟ್ಟು 16,170 ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ. ಈ ಪೈಕಿ 2017ರಲ್ಲಿ 9,013 ಪ್ರಕರಣಗಳನ್ನು ಪೋಲಿಸರು ಕೈಗೆತ್ತಿಕೊಂಡಿದ್ದಾರೆ. ಆದರೆ 7,154 ಪ್ರಕರಣಗಳು 2016ರ ಹಿಂದಿನಿಂದಲೂ ಬಾಕಿ ಉಳಿದಿವೆ. ಇದರಲ್ಲಿ ಸೆಕ್ಷನ್ 124ಎ ಐಪಿಸಿ-105 ಪ್ರಕರಣಗಳು, ಸೆಕ್ಷನ್ 121-123 ಐಪಿಸಿ-516 ಪ್ರಕರಣಗಳು, Imputation, assertions prejudicial to national integration-36 ಪ್ರಕರಣಗಳು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ತಡೆ ಕಾಯ್ದೆ ಅಡಿಯ-2,935 ಪ್ರಕರಣಗಳು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಅಡಿ-3,550 ಪ್ರಕರಣಗಳು ಮತ್ತು ಅಧಿಕೃತ ರಹಸ್ಯ ಕಾಯ್ದೆಯಡಿ-12 ಪ್ರಕರಣಗಳು ಹಿಂದಿನ ವರ್ಷಗಳಿಂದ ಬಾಕಿ ಉಳಿದಿವೆ.
ತನಿಖೆಯಲ್ಲಿ ಪೋಲಿಸರು ಕೈಬಿಟ್ಟ ಪ್ರಕರಣಗಳು
ಪೋಲಿಸರು ತನಿಖೆ ನಡೆಸುತ್ತಿರುವ 16,170 ಪ್ರಕರಣಗಳಲ್ಲಿ, 1,177 ಪ್ರಕರಣಗಳು ಕೊನೆಗೊಂಡಿದೆ ಎಂದು ಎನ್‌ಸಿಆರ್‌ಬಿ ತನ್ನ ವರದಿಯಲ್ಲಿ ಹೇಳಿದೆ. ಇದಕ್ಕೆ ಕೆಲ ಕಾರಣಗಳಿವೆ. ಅಂತಿಮ ವರದಿ ತಪ್ಪೆಂದು ತಿಳಿದು (Cases Ended as Final Report False) 69 ಪ್ರಕರಣಗಳು ಕೊನೆಗೊಂಡಿದೆ. ನಾಗರಿಕ ವಿವಾದವನ್ನು, ವಾಸ್ತವಿಕತೆಯನ್ನು ಅಥವಾ ಕಾನೂನನ್ನೇ ತಪ್ಪೆಂದು ಪರಿಗಣಿಸಿದ ಕಾರಣ (Cases Ended as Mistake of Fact or of Law or Civil Dispute) 181 ಪ್ರಕರಣಗಳು ಕೊನೆಗೊಂಡಿದೆ. ಪ್ರಕರಣಗಳು ಸ್ಪಷ್ಟವಾಗಿವೆ ಆದರೆ ಅದಕ್ಕೆ ಸರಿಯಾದ ಪುರಾವೆಗಳಿಲ್ಲ ಅಥವಾ ಸರಿಯಾದ ಸುಳಿವಿಲ್ಲವೆಂದು (Cases True but Insufficient Evidence or Untraced or No Clue) 921 ಪ್ರಕರಣಗಳು ಕೊನೆಗೊಂಡಿದೆ. ತನಿಖೆಯ ಸಮಯದಲ್ಲಿ (Cases Abated during Investigation) 3 ಪ್ರಕರಣಗಳನ್ನು ಕೈ ಬಿಡಲಾಗಿದೆ.
ಅಲ್ಲದೆ, 2017ರ ವರ್ಷದಲ್ಲಿ 5,566 ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಮತ್ತು 2016ರ ಹಿಂದಿನ ವರ್ಷಗಳ 1,503 ಪ್ರಕರಣಗಳಿಗೆ ಅದೇ ವರ್ಷದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ವಿಚಾರಣೆ ನಡೆಯುತ್ತಿರುವ ಪ್ರಕರಣಗಳು
‘ರಾಜ್ಯದ ವಿರುದ್ಧದ ಅಪರಾಧ’ ಪ್ರಕರಣಗಳ ಪೈಕಿ 19,434 ಪ್ರಕರಣಗಳಲ್ಲಿ ಆಯಾ ರಾಜ್ಯಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇದರಲ್ಲಿ 2016ಕ್ಕಿಂತ ಹಿಂದಿನ ವರ್ಷಗಳ 12,365 ಪ್ರಕರಣಗಳ ವಿಚಾರಣೆ ಇನ್ನೂ ಬಾಕಿ ಉಳಿದಿದೆ. 2017ರಲ್ಲಿ 7,069 ಪ್ರಕರಣಗಳು ವಿಚಾರಣೆ ಹಂತದಲ್ಲಿದೆ. ಗರಿಷ್ಠ ಪ್ರಕರಣ ವಿಚಾರಣೆ ನಡೆಸುತ್ತಿರುವ ರಾಜ್ಯಗಳೆಂದರೆ, ಅಸ್ಸಾಂ-1,242 ಪ್ರಕರಣಗಳು, ಹರ್ಯಾಣ-5,207, ಕೇರಳ-1,032, ತಮಿಳುನಾಡು-4,264 ಹಾಗೂ ಉತ್ತರ ಪ್ರದೇಶ-3,958 ಪ್ರಕರಣಗಳು ಎಂದು ಎನ್‌ಸಿಆರ್‌ಬಿ ವರದಿ ಹೇಳಿದೆ.
ಪುರುಷ ಮತ್ತು ಮಹಿಳಾ ಅಪರಾಧಿಗಳು
ಅಪರಾಧ ತನಿಖೆಯಲ್ಲಿ ಒಟ್ಟು 16,210 ಅಪರಾಧಿಗಳನ್ನು ಬಂಧಿಸಲಾಗಿದೆ. ಈ ಪೈಕಿ 15,960 ಪುರುಷ ಅಪರಾಧಿಗಳಿದ್ದರೆ, 250 ಮಹಿಳಾ ಅಪರಾಧಿಗಳಿದ್ದಾರೆ. ಇದರಲ್ಲಿ 14,933 ಪುರುಷ ಅಪರಾಧಿಗಳಿಗೆ ಮತ್ತು 169 ಮಹಿಳಾ ಅಪರಾಧಿಗಳಿಗೆ ಚಾರ್ಜ್ ಶೀಟ್ ಹಾಕಲಾಗಿದೆ. ಅಂತೆಯೇ ಕರ್ನಾಟಕದಲ್ಲಿ 197 ಅಪರಾಧಿಗಳಲ್ಲಿ 190 ಪುರುಷ ಅಪರಾಧಿಗಳಿದ್ದರೆ, 7 ಮಹಿಳಾ ಅಪರಾಧಿಗಳಿದ್ದಾರೆ ಎಂದು ಹೇಳಲಾಗಿದೆ.
ಎನ್‌ಸಿಆರ್‌ಬಿಯ ‘ಭಾರತದ ಅಪರಾಧ-2017’ ವರದಿಯಲ್ಲಿ, ಕೆಲಸದ ಸ್ಥಳದಲ್ಲಿ/ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಅಪರಾಧಗಳು, ಚುನಾವಣೆಗೆ ಸಂಬಂಧಿಸಿದ ಅಪರಾಧಗಳು, ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ಕೃತ್ಯ ಅಪರಾಧಗಳು, ನಕಲಿ ಸುದ್ದಿಗಳ ಪ್ರಸಾರ, ಚಿಟ್ ಫಂಡ್ ಗಳು, ಕಳ್ಳತನ ಮತ್ತು ಅಪಹರಣ, ಪರಿಶಿಷ್ಟ ಜಾತಿಗಳ ಮೇಲಿನ ದೌರ್ಜನ್ಯಗಳು ಸೇರಿದಂತೆ ಒಟ್ಟು 88 ಅಪರಾಧ ವಿಭಾಗಗಳು ಈ ವರದಿಯಲ್ಲಿದೆ.