ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಪೊಲೀಸರಿಗೂ ವಿವಾದಕ್ಕೂ ಬಿಡದ ನಂಟು. ಸಿಎಎ ವಿರೋಧಿ ಪ್ರತಿಭಟನೆಗಳ ವಿಷಯದಲ್ಲಿ ಪೊಲೀಸ್ ಕಮೀಷನರ್ ವಿವಾದಾತ್ಮಕ ಹೇಳಿಕೆಗಳಿಂದ ಹಿಡಿದು, ಟೌನ್ ಹಾಲ್ ಬಳಿ ಪ್ರತಿಭಟನೆ ವಿಷಯದಲ್ಲಿ ಭಾರೀ ದಂಡ ವಿಧಿಸುವ ಪ್ರಸ್ತಾವನೆಯವರೆಗೆ ಬೆಂಗಳೂರು ಪೊಲೀಸರು ಮತ್ತೆ ಮತ್ತೆ ವಿವಾದದ ಸುಳಿಗೆ ಸಿಲುಕುತ್ತಲೇ ಇದ್ದಾರೆ.
ಇದೀಗ ಆ ಸರಣಿಗೆ ಹೊಸ ಸೇರ್ಪಡೆ ಜಮ್ಮು-ಕಾಶ್ಮೀರ ಮೂಲದ ಉದ್ಯೋಗಿಗಳ ಮಾಹಿತಿ ಕಲೆ ಹಾಕುವ ಪ್ರಯತ್ನ. ಬೆಂಗಳೂರಿನ ನಾಗವಾರ ರಿಂಗ್ ರಸ್ತೆಯ ಮಾನ್ಯತಾ ಎಂಬೆಸಿ ಪಾರ್ಕ್ ನಲ್ಲಿರುವ ವಿವಿಧ ಐಟಿ-ಬಿಟಿ ಕಂಪನಿಗಳಿಗೆ ಅಧಿಕೃತ ನೋಟಿಸ್ ನೀಡಿರುವ ಪೊಲೀಸರು, ಆಯಾ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಜಮ್ಮು ಮತ್ತು ಕಾಶ್ಮೀರ ಮೂಲದ ಎಲ್ಲಾ ಸಿಬ್ಬಂದಿಯ ಸಂಪೂರ್ಣ ವಿವರ ನೀಡುವಂತೆ ಸೂಚನೆ ನೀಡಿದ್ದಾರೆ!
ಕಳೆದ ವಾರ ಮಾ.5ರಂದು ಸಂಪಿಗೆಹಳ್ಳಿ ಪೊಲೀಸ್ ಠಾಣಾಧಿಕಾರಿಗಳು ಈ ನೋಟಿಸ್ ನೀಡಿದ್ದು, ಒಂದು ಕಡೆ ಕಂಪನಿಗಳು ಈ ಬಗ್ಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಗೊಂದಲಕ್ಕೆ ಸಿಲುಕಿದ್ದರೆ, ಮತ್ತೊಂದು ಕಡೆ ಕಂಪನಿಗಳ ಉದ್ಯೋಗಿಗಳು ಕೂಡ ಪೊಲೀಸರ ಈ ಕ್ರಮದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ‘ದ ಟೈಮ್ಸ್ ಆಫ್ ಇಂಡಿಯಾ’ ವರದಿ ಹೇಳಿದೆ. ಹಲವು ಮಾನವ ಹಕ್ಕು ಹೋರಾಟಗಾರರು ಮತ್ತು ಕಾನೂನು ತಜ್ಞರು ಕೂಡ ಪೊಲೀಸರ ಈ ಕ್ರಮವನ್ನು ಖಂಡಿಸಿದ್ದು, ಐಟಿ ಕಂಪನಿಗಳಲ್ಲಿ ವಿವಿಧ ರಾಜ್ಯ- ದೇಶಗಳ ಹಲವು ಉದ್ಯೋಗಿಗಳಿರುತ್ತಾರೆ. ಆದರೆ, ಬೆಂಗಳೂರು ಪೊಲೀಸರು ಮಾತ್ರ ಕೇವಲ ಜಮ್ಮು-ಕಾಶ್ಮೀರ ಮೂಲದವರ ಬಗ್ಗೆ ಮಾತ್ರ ಮಾಹಿತಿ ಕೋರಿರುವುದು ಕಾನೂನು ಬಾಹಿರ. ಯಾವುದೇ ಸಂದರ್ಭದಲ್ಲಿಯೂ ಹೀಗೆ ಒಂದು ನಿರ್ದಿಷ್ಟ ಭೂಪ್ರದೇಶ, ಒಂದು ರಾಜ್ಯ, ಒಂದು ಜನಾಂಗವನ್ನು ಗುರಿಯಾಗಿಸಿಕೊಂಡು ವೈಯಕ್ತಿಕ ಮಾಹಿತಿ ಕಲೆಹಾಕುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದಿದ್ದಾರೆ.
ಅದರಲ್ಲೂ ವಿಶೇಷವಾಗಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿ, ಅಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿರುವುದು. ರಾಜ್ಯದ ಸ್ಥಾನಮಾನವನ್ನು ರದ್ದು ಮಾಡಿ ಆ ರಾಜ್ಯವನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿರುವುದು ಮತ್ತು ಅದೆಲ್ಲಕ್ಕಿಂತ ಮುಖ್ಯವಾಗಿ ಕಳೆದ ಏಳೆಂಟು ತಿಂಗಳುಗಳಿಂದ ಕಣಿವೆ ರಾಜ್ಯದಲ್ಲಿ ಜನಸಾಮಾನ್ಯರ ಹಕ್ಕುಗಳನ್ನು ಸಂಪೂರ್ಣ ರದ್ದುಮಾಡಿ, ನಿರಂತರ ಕರ್ಫ್ಯೂ ಸ್ಥಿತಿ ನಿರ್ಮಾಣ ಮಾಡಿರುವುದು, ಅಲ್ಲಿನ ರಾಜಕೀಯ ನಾಯಕರನ್ನು ರಹಸ್ಯ ಸ್ಥಳಗಳಲ್ಲಿ ಬಂಧನದಲ್ಲಿಟ್ಟು ಅವರ ನಾಗರಿಕ ಹಕ್ಕುಗಳನ್ನು ಕಿತ್ತುಕೊಂಡಿರುವುದು ,.. ಮುಂತಾದ ಕೇಂದ್ರ ಸರ್ಕಾರದ ಬಿಗಿ ದಮನ ಕ್ರಮಗಳ ಹಿನ್ನೆಲೆಯಲ್ಲಿ ಪೊಲೀಸರ ಈ ನೋಟೀಸ್ ಹಲವು ಸಂಶಯಗಳಿಗೆ ಎಡೆಮಾಡಿದೆ.
ಜೊತೆಗೆ, ಇದೀಗ ಸಿಎಎ ಮತ್ತು ಎನ್ ಆರ್ ಸಿ ವಿರುದ್ಧ; ಅದು ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಸಿಕೊಂಡು ಜಾರಿಗೆ ತರಲಾಗುತ್ತಿದೆ ಮತ್ತು ಧರ್ಮಾಧಾರಿತವಾಗಿ ಪೌರತ್ವ ನೀಡುವ ಮೂಲಕ ಭಾರತೀಯ ಧರ್ಮನಿರಪೇಕ್ಷ ಸಂವಿಧಾನದ ಮೂಲ ಆಶಯಕ್ಕೆ ಪೆಟ್ಟು ಕೊಡುತ್ತಿದೆ ಎಂಬ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಅಂತಹ ಪ್ರತಿಭಟನೆಗಳಲ್ಲಿ ಬಹುತೇಕ ಮುಸ್ಲಿಂ ಸಮುದಾಯದವರೇ ನೇತೃತ್ವ ವಹಿಸುತ್ತಿದ್ದಾರೆ. ತಮ್ಮ ಪೌರತ್ವದ ಹಕ್ಕು ಕಿತ್ತುಕೊಳ್ಳುವ ಕಾಯ್ದೆ ಸಿಎಎ ಎಂಬ ಭೀತಿ ಮುಸ್ಲಿಮರಲ್ಲಿ ಮನೆಮಾಡಿದೆ. ಅದರಲ್ಲೂ ಹಿಂದುತ್ವವಾದಿ ಬಿಜೆಪಿಯ ಸರ್ಕಾರದ ಈ ಕ್ರಮವನ್ನು ಹಿಂದೂ ರಾಷ್ಟ್ರ ನಿರ್ಮಾಣದ ದಿಕ್ಕಿನಲ್ಲಿ ದೊಡ್ಡ ಹೆಜ್ಜೆ ಎಂದೇ ಹೇಳಲಾಗುತ್ತಿದೆ. ಆ ಎಲ್ಲಾ ಹಿನ್ನೆಲೆಯಲ್ಲಿ ಸಹಜವಾಗೇ ಬೆಂಗಳೂರು ಪೊಲೀಸರ ನೋಟೀಸನ್ನು ಕೂಡ ಸರ್ಕಾರದ ಮುಸ್ಲಿಂ ವಿರೋಧಿ ಕ್ರಮಗಳ ಭಾಗವಾಗಿಯೇ ನೋಡಲಾಗುತ್ತಿದೆ.
ಆದರೆ, “ಇದೊಂದು ಮಾಮೂಲಿ ಪ್ರಕ್ರಿಯೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ಪಿಜಿ, ಹಾಸ್ಟೆಲುಗಳಲ್ಲಿ ಮಾಹಿತಿ ಕಲೆಹಾಕಿದಂತೆಯೇ ಇಲ್ಲಿಯೂ ಮಾಹಿತಿ ಕೇಳಿದ್ದೇವೆ. ಇದು ಮುಂಜಾಗ್ರತಾ ಕ್ರಮವಾಗಿ ನಾನೇ ತೆಗೆದುಕೊಂಡು ನಿರ್ಧಾರ” ಎಂದು ಸಂಪಿಗೆಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ನಂದಕುಮಾರ್ ಪ್ರತಿಕ್ರಿಯಿಸಿದ್ದಾರೆ. ‘ಪ್ರತಿಧ್ವನಿ’ಯೊಂದಿಗೆ ಮಾತನಾಡಿದ ಅವರು, “ಕಾನೂನು-ಸುವ್ಯವಸ್ಥೆಯ ಅಧಿಕಾರಿಯಾಗಿ ಅಷ್ಟೂ ಅಧಿಕಾರವಿಲ್ಲವೇ ನನಗೆ? ಈ ಹಿಂದೆಯೂ ಈಶಾನ್ಯ ರಾಜ್ಯ ಮೂಲಗಳ ಉದ್ಯೋಗಿಗಳ ಮಾಹಿತಿ ಕೇಳಿದ್ದೆವು. ಆಗ ಇಲ್ಲದ ಪ್ರಶ್ನೆ ಈಗೇಕೆ?” ಎಂದೂ ಮರುಪ್ರಶ್ನೆ ಹಾಕಿದ್ಧಾರೆ.
ಆದರೆ, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸ್ ಕಮೀಷನರ್ ಭಾಸ್ಕರ್ ರಾವ್, “ಯಾವುದೇ ಹಿನ್ನೆಲೆಯಿಲ್ಲದೆ ವ್ಯಕ್ತಿಗಳ ವೈಯಕ್ತಿಕ ಮಾಹಿತಿಯನ್ನು ಕಲೆಹಾಕಲು ಇಲಾಖೆ ಪ್ರಯತ್ನಿಸುವುದಿಲ್ಲ. ಈ ಪ್ರಕರಣದಲ್ಲಿಯಂತೂ ಯಾವುದೇ ಪೊಲೀಸ್ ಠಾಣೆಗೂ ಅಂತಹ ಮಾಹಿತಿ ಕಲೆಹಾಕುವಂತೆ ಸೂಚನೆ ನೀಡಿಲ್ಲ. ತಮ್ಮ ವ್ಯಾಪ್ತಿಯಲ್ಲಿ ಕೂಡ ಸ್ವಂತ ನಿರ್ಧಾರದ ಮೇಲೆ ಇಂತಹ ಕ್ರಮ ವಹಿಸಲು ಕೂಡ ತಿಳಿಸಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ಸಂಪಿಗೆಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ಮಾನ್ಯತಾ ಎಂಬೆಸಿ ಪಾರ್ಕಿನ ಕಂಪನಿಗಳಿಗೆ ನೀಡಿರುವ ನೋಟೀಸ್ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಸ್ಪಷ್ಟವಾಗಿಯೇ ಜಮ್ಮು-ಕಾಶ್ಮೀರ ಮೂಲದ ಉದ್ಯೋಗಿಯ ಹೆಸರು ಮತ್ತು ಮೊಬೈಲ್ ಸಂಖ್ಯೆ, ಆತ/ ಆಕೆ ಕೆಲಸ ಮಾಡುತ್ತಿರುವ ಕಂಪನಿ ಹೆಸರು ಮತ್ತು ವಿಳಾಸ, ಆ ಉದ್ಯೋಗಿಯ ವಾಸಸ್ಥಳದ ವಿಳಾಸ, ಅವರ ಮೂಲ ವಾಸಸ್ಥಳದ ವಿಳಾಸ, ಅವರು ಯಾವ ದಿನಾಂಕದಿಂದ ಕೆಲಸ ಮಾಡುತ್ತಿದ್ದಾರೆ ಎಂಬ ವಿವರ ಸೇರಿ ಮಹತ್ವದ ತೀರಾ ಖಾಸಗಿ ಮಾಹಿತಿ ಕೋರಲಾಗಿದೆ. ಆ ನೋಟೀಸ್ ಗೆ ಸ್ವತಃ ಇನ್ಸ್ ಪೆಕ್ಟರ್ ನಂದಕುಮಾರ್ ಸಹಿ ಕೂಡ ಇದೆ.
ಹಾಗಾಗಿ ಈಗ ಇರುವ ಪ್ರಶ್ನೆ; ಸುಮಾರು ಒಂದು ಲಕ್ಷ ಜನ ಕೆಲಸ ಮಾಡುವ ಬೆಂಗಳೂರಿನ ಅತಿದೊಡ್ಡ ಮತ್ತು ದೇಶದ ಎರಡನೇ ಅತಿದೊಡ್ಡ ಐಟಿ ಪಾರ್ಕಿನಲ್ಲಿರುವ ಸುಮಾರು 60ಕ್ಕೂ ಹೆಚ್ಚು ಕಂಪನಿಗಳಿಗೆ ಮಹತ್ವದ ಮಾಹಿತಿ ಕೋರಿ ನೀಡಿರುವ ಈ ನೋಟಿಸಿನ ಹಿಂದೆ ನಿಜಕ್ಕೂ ಯಾರಿದ್ದಾರೆ? ಯಾವ ಉದ್ದೇಶದಿಂದ ಈ ನೋಟಿಸ್ ನೀಡಲಾಗಿದೆ. ಸಿಎಎ-ಎನ್ ಆರ್ ಸಿ ಕಾಯ್ದೆ, ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಮತ್ತು ಆ ಬಳಿಕದ ಕಾನೂನು-ಸುವ್ಯವಸ್ಥೆಯ ಪತನ, ನಾಗರಿಕ ಹಕ್ಕುಗಳ ದಮನದ ಕ್ರಮಗಳಿಗೂ ಈ ನೋಟಿಸ್ ಗೂ ಸಂಬಂಧವಿದೆಯೇ? ಇಂತಹದ್ದೊಂದು ಸೂಕ್ಷ್ಮ ಕ್ರಮದ ವಿಷಯದಲ್ಲಿ ಪೊಲೀಸ್ ಕಮೀಷನರ್ ಸೂಚನೆ ಇಲ್ಲದೆ, ಅವರ ಗಮನಕ್ಕೆ ಬರದ ರೀತಿಯಲ್ಲಿ ಒಬ್ಬ ಪೊಲೀಸ್ ಇನ್ಸ್ ಪೆಕ್ಟರ್ ತಾನೇತಾನಾಗಿ ನೋಟಿಸ್ ನೀಡುವುದು ಸಾಧ್ಯವೇ? ಎಂಬುದು.
ಆ ಹಿನ್ನೆಲೆಯಲ್ಲಿಯೇ, ಸುಪ್ರೀಂಕೋರ್ಟ್ ಹಿರಿಯ ವಕೀಲ ಕೆ ವಿ ಧನಂಜಯ್ ಅವರು, “ಇಂತಹ ಮಾಹಿತಿ ಕಲೆ ಹಾಕುವ ಅಧಿಕಾರವನ್ನು ಪೊಲೀಸರಿಗೆ ನೀಡುವ ಯಾವುದೇ ಕಾನೂನು ದೇಶದಲ್ಲಿ ಇಲ್ಲ. ಈ ನೋಟಿಸ್ ಪ್ರಕಾರ, ಜಮ್ಮು-ಕಾಶ್ಮೀರ ಭಾರತದ ಭಾಗವಲ್ಲವೆ?” ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ, ಒಂದು ವೇಳೆ ಈ ಪೊಲೀಸ್ ಅಧಿಕಾರಿ, ಮೇಲಧಿಕಾರಿಗಳ ಸೂಚನೆ ಇಲ್ಲದೆ ಇಂತಹ ಮಹತ್ವದ ಮಾಹಿತಿ ಕಲೆಹಾಕಲು ಪ್ರಯತ್ನಿಸಿದ್ದಾರೆ ಎಂದರೆ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಿದೆ. ಅಂತಹ ಯಾವುದೇ ಮಾಹಿತಿ ಕಲೆಹಾಕಲು ತಾವು ಯಾರಿಗೂ ಸೂಚಿಸಿಲ್ಲ ಎಂದಿರುವ ಕಮೀಷನರ್, ಈಗ ಅಂತಹ ಕಾನೂನುಬಾಹಿರ ಕ್ರಮಕ್ಕೆ ಮುಂದಾಗಿರುವ ಅಧಿಕಾರಿಯ ವಿರುದ್ಧ ಯಾವ ಕ್ರಮ ಜರುಗಿಸುವರು ಎಂಬುದನ್ನು ಕಾದುನೋಡಬೇಕಿದೆ ಎಂಬ ಮಾತುಗಳೂ ಕೇಳಿಬಂದಿವೆ.
ಸಿಎಎ ಪ್ರತಿಭಟನಾಕಾರರ ವೈಯಕ್ತಿಕ ಮಾಹಿತಿ ಕಲೆಹಾಕಿಅವರ ಭಾವಚಿತ್ರ ಸಹಿತ ಮಾಹಿತಿಯನ್ನು ಬೀದಿಗಳಲ್ಲಿ ಪ್ರದರ್ಶನ ಮಾಡುವ ಉತ್ತರಪ್ರದೇಶದ ಪೊಲೀಸರ ನಡೆ ಒಂದು ಕಡೆ ದೇಶದಾದ್ಯಂತ ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವೆಯೇ ಅಥವಾ ಉತ್ತರಕೊರಿಯಾದಂತಹ ಕ್ರೂರ ಸರ್ವಾಧಿಕಾರಿಗಳ ಆಡಳಿತದಲ್ಲಿದ್ದೇವೆಯೇ ಎಂಬ ಆಘಾತ ಹುಟ್ಟಿಸಿದೆ. ನ್ಯಾಯಾಲಯಗಳು ಎಚ್ಚರಿಕೆ ನೀಡಿದರೂ, ಛೀಮಾರಿ ಹಾಕಿದರೂ, ಅದನ್ನು ಮತ್ತೆ ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುವ ಮಟ್ಟಿಗಿನ ಮೊಂಡುತನವನ್ನು ಅಲ್ಲಿನ ಬಿಜೆಪಿ ಸರ್ಕಾರ ಪ್ರದರ್ಶಿಸುತ್ತಿದೆ. ಇಂತಹ ಹೊತ್ತಲ್ಲಿ, ಅದೇ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿರುವ ರಾಜ್ಯದಲ್ಲಿ ಪೊಲೀಸರು, ಮುಸ್ಲಿಂ ಬಾಹುಳ್ಯದ ರಾಜ್ಯದ ಮೂಲದ ಉದ್ಯೋಗಿಗಳ ಕುರಿತು ಗುಟ್ಟಾಗಿ ಮಾಹಿತಿ ಕಲೆ ಹಾಕುತ್ತಿರುವುದು ಸಹಜವಾಗೇ ತೆರೆಮರೆಯಲ್ಲಿ ಇನ್ನೇನೋ ನಡೆಯುತ್ತಿದೆ ಎಂಬ ಆತಂಕ ಸೃಷ್ಟಿಸಿದೆ. ಆ ದಿಸೆಯಲ್ಲಿ ಬೆಂಗಳೂರು ಪೊಲೀಸರ ಮುಂದಿನ ನಡೆ ಮತ್ತು ಸರ್ಕಾರದ ಕ್ರಮಗಳು ಕುತೂಹಲ ಹುಟ್ಟಿಸಿವೆ.