• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

‘ಹಿಟ್ ವಿಕೆಟ್’ ಪ್ರಧಾನಿಗೆ ದೇಶದ ನಾಗರಿಕರ ಪ್ರಶ್ನೆಗಳು

by
June 20, 2020
in ಅಭಿಮತ
0
‘ಹಿಟ್ ವಿಕೆಟ್’ ಪ್ರಧಾನಿಗೆ ದೇಶದ ನಾಗರಿಕರ ಪ್ರಶ್ನೆಗಳು
Share on WhatsAppShare on FacebookShare on Telegram

ಪ್ರಧಾನಿ ಮೋದಿಯವರಿಗೆ ಹಾಗೂ ಸಂಘ ಪರಿವಾರಕ್ಕೆ ಈ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್‌ ನೆಹರು ಎಂದರೆ ಎಲ್ಲಿಲ್ಲದ ಪ್ರೀತಿ! ನೆಹರು ಅವರನ್ನು ಹೀಗಳೆಯದೆ, ಕಾಶ್ಮೀರ ಹಾಗೂ ಚೀನಾ ವಿಷಯದಲ್ಲಿ ನೆಹರು ಅವರ ನಡೆಗಳನ್ನು ಟೀಕಿಸದೆ ಹೋದರೆ ಸೂರ್ಯ ಹುಟ್ಟುವುದೇ ಇಲ್ಲ ಎನ್ನುವಂತೆ ಅನುದಿನವೂ ಈ ದೇಶದ ಜನಮಾನಸದಲ್ಲಿ ನೆಹರೂ ಅವರ ಬಗೆಗಿನ ಚಿತ್ರಣವನ್ನು ಇನ್ನಿಲ್ಲದಂತೆ ಅಂದಗೆಡಿಸಲು ಕಾಯಾ, ವಾಚಾ, ಮನಸಾ ಶ್ರಮಿಸಿದೆ ಈ ಪರಿವಾರ. ಚೀನಾದ ವಿರುದ್ಧ 1962ರಲ್ಲಿ ನಡೆದ ಯುದ್ಧದಲ್ಲಿ ಭಾರತಕ್ಕೆ ಆದ ಹಿನ್ನಡೆಯನ್ನು, ನೆಹರು ಪ್ರಣೀತ ವಿದೇಶಾಂಗ ನೀತಿಯು ಚೀನಾ ವಿಚಾರದಲ್ಲಿ ಎಡವಿದ ಪರಿಯನ್ನು ಸವಿಸವಿದು ಹೇಳುವ, ನೆಹರು ಅವರನ್ನು ಹೀನಾಮಾನ ಜರೆಯುವ ಈ ಮಂದಿ ನೆಹರು ಅವರನ್ನು ಓರ್ವ ಲಂಪಟ, ಅಧಿಕಾರದಾಹಿ, ಅಶಕ್ತ, ದೂರದೃಷ್ಟಿ ಹೀನ ಪ್ರಧಾನಿ ಎಂದೇ ಬಿಂಬಿಸಲು ದಶಕಗಳ ಕಾಲ ಶ್ರಮಿಸಿ, ಆ ವಿಚಾರದಲ್ಲಿ ಸಾಕಷ್ಟು ಯಶಸ್ಸನ್ನೂ ಸಾಧಿಸಿದ್ದಾರೆ. ನೆಹರು ಅವರೆಡೆಗಿನ ಇವರ ಕಡುಕೋಪದ ಬಗೆಗಿನ ಚರ್ಚೆಯನ್ನು ಸದ್ಯ ಪಕ್ಕಕ್ಕೆ ಇಡೋಣ. ಅದು ಬೇರೆಯದೇ ಸುದೀರ್ಘ ಚರ್ಚೆಯ ವಿಚಾರ. ಆದರೆ, ಅಂತಹ ನೆಹರು ಸೋತ ವಿಚಾರದಲ್ಲಿ ತಾನು ಗೆದ್ದು ಬೀಗಬೇಕು ಎಂದು ಸದಾಕಾಲ ಹಂಬಲಿಸುವ ದೇಶದ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಈಗ ಮಾಡಿರುವ ಘನ ಕಾರ್ಯವಾದರೂ ಏನು?

ADVERTISEMENT

ಈ ದೇಶ ಕಂಡ 56 ಇಂಚಿನ ಎದೆಯಳತೆಯ ಏಕೈಕ ಪ್ರಧಾನಿ ತಾನು ಎಂದು ಬೀಗುತ್ತಿದ್ದ ಪ್ರಧಾನಿ ಮೋದಿಯವರು, ಚೀನಾವನ್ನು ನಾನು ಹೇಗೆ ಪಳಗಿಸಿಕೊಂಡಿದ್ದೇನೆ ನೋಡಿ ಎನ್ನುವುದನ್ನು ತೋರಿಸಲೆನ್ನುವಂತೆ, ಇತಿಹಾಸಕಾರರಿಗೆ, ‘ತನ್ನನ್ನು ನೆಹರು ಅವರೊಂದಿಗೆ ಹೋಲಿಸಿ ನೋಡಿ ಎಂದು ತಿವಿತಿವಿದು ಹೇಳುವಂತೆ,’ ಚೀನಾದ ಅಧ್ಯಕ್ಷ, ತನ್ನ ನೆಚ್ಚಿನ ಗೆಳೆಯ ಜಿನ್‌ ಪಿಂಗ್ ಅವರೊಂದಿಗೆ ತನಗಿರುವ ವಿಶ್ವಾಸವನ್ನು ಅವಕಾಶ ಸಿಕ್ಕಾಗಲೆಲ್ಲಾ ಬಹಿರಂಗ ಪ್ರದರ್ಶನಕ್ಕೆ ಇರಿಸುತ್ತಿದ್ದರು. ಜಿನ್‌ ಪಿಂಗ್ ಅವರೊಂದಿಗೆ ಜೋಕಾಲಿಯಾಡಿದ್ದೇನು, ಗಾಂಧೀಜಿಯ ಸ್ವದೇಶಿ ವಿಚಾರಧಾರೆಯನ್ನು ಅಣಕಿಸುವಂತೆ ಚರಕದಲ್ಲಿ ನೂಲುವುದನ್ನು ಕಲಿಸಿದ್ದೇನು, ಮುಂದೊಮ್ಮೆ ಜರತಾರಿ ಪಂಚೆ ತೊಟ್ಟು ಮಹಾಬಲಿಪುರಂನ ಬೆರಗಿನ ಶಿಲ್ಪಕಲೆಯನ್ನು ನೆಚ್ಚಿನ ಗೆಳೆಯನಿಗೆ ವಿವರಿಸುತ್ತಾ, ಮರಳ ದಂಡೆಯ ಮೆಲೆ ವಿಹರಿಸಿದ್ದೇನು! ಆಹಾ, ಏನೆಲ್ಲಾ ಲೀಲಾ ವಿನೋದ!!

ಪ್ರಧಾನಿ ಮೋದಿಯವರದು ವಿದೇಶಾಂಗ ನೀತಿಗಳಲ್ಲ, ಅವು ವಿದೇಶಾಂಗ ವಿನೋದ ಲೀಲೆಗಳು! ಇಂದು ಜಾಗತಿಕ ಸ್ತರದಲ್ಲಿ ವಿದೇಶಾಂಗ ನೀತಿ ಎನ್ನುವುದು ದೇಶಗಳ ನಡುವಿನ ಸಮನ್ವಯ, ಸೈದ್ಧಾಂತಿಕ, ವ್ಯೂಹಾತ್ಮಕ ಹೆಣಿಗೆಗಳಿಗಿಂತಲೂ ಹೆಚ್ಚಾಗಿ ಕಾರ್ಪೊರೆಟ್‌ ಲೀಡರ್‌ಗಳ ನಡುವಿನ ವ್ಯಾವಹಾರಿಕ ಚಟುವಟಿಕೆಗಳಂತೆ ಭಾಸವಾಗುತ್ತವೆ. ದೇಶದೇಶಗಳ ನಡುವಿನ ವ್ಯೂಹಾತ್ಮಕ ಸಂಬಂಧಗಳ ಚರ್ಚೆಯನ್ನು ಹಿಂದಕ್ಕೆ ಸರಿಸಿ ರಾಷ್ಟ್ರ ನಾಯಕರುಗಳ ನಡುವಿನ ವೈಯಕ್ತಿಕ ಸಂಬಂಧಗಳ ಕೆಮಿಸ್ಟ್ರಿಯನ್ನೇ ವಿಜೃಂಭಿಸುವ “Photo Opportunity” ಪ್ರಧಾನವಾದ, ತೋರಿಕೆಯ ಡಿಪ್ಲೊಮಸಿ ಮುನ್ನೆಲೆಗೆ ಬಂದಿದೆ. ಇಂತಹ ತೋರಿಕೆ ಪ್ರಧಾನವಾದ ವಿದೇಶಾಂಗ ವಿನೋದ ಲೀಲೆಗಳಲ್ಲೇ ಮುಳುಗಿ ಅಸಲಿ ವಿದೇಶಾಂಗ ನೀತಿಗಳನ್ನೇ ಮರೆತು ಮೋದಿಯವರು ತುಂಬಾ ದೂರ ಕ್ರಮಿಸಿರುವಂತೆ ಕಾಣುತ್ತಿದೆ ಸದ್ಯದ ಪರಿಸ್ಥಿತಿ.

ಹೀಗೆ ತಮ್ಮದೇ ಗುಂಗಿನಲ್ಲಿರುವ ಪ್ರಧಾನಿಯವರು ಇದೀಗ ನೆಚ್ಚಿನ ಗಳೆಯನೊಂದಿಗೆ ಜೋಕಾಲಿಯಾಡುತ್ತಲೇ ಮಕಾಡೆ ಬಿದ್ದಿದ್ದಾರೆ! ನೆಹರು ಎಡವಿದಲ್ಲಿ ತಾನು ಜಿಗಿಯುವೆ ಎಂದು ಬೀಗಿದ್ದವರಿಗೆ ಗೆಳೆಯ ಕೈಕೊಟ್ಟಿದ್ದಾನೆ. ಮತ್ತದೇ ಹಳೆಯ ಕತೆ ಮರುಕಳಿಸಿದೆ. ‘Once bitten, twice shy,’ ಎನ್ನುತ್ತದೆ ನಾಣ್ಣುಡಿ. ಎಡವಿದವನು ಎಚ್ಚರದಿಂದಿರುತ್ತಾನೆ ಎನ್ನುವ ಈ ನಾಣ್ಣುಡಿಯನ್ನು ಸುಳ್ಳು ಮಾಡಲೇ ಹಾತೊರೆದಂತಿದೆ ಪ್ರಧಾನಿಯವರ ಸದ್ಯದ ಮನಸ್ಥಿತಿ. ಜಾರಿ ಬಿದ್ದ ಮೇಲೆ ಅಪಹಾಸ್ಯಕ್ಕೀಡಾಗಿ ಬಿಡುವೆನೇನೋ ಎನ್ನುವ ಭರದಲ್ಲಿ ಅವರು ಮತ್ತಷ್ಟು ಅಸಂಬದ್ಧಗಳನ್ನೇ ನುಡಿದಿದ್ದಾರೆ. ಮುಂದೆ ಇನ್ನೂ ಎಷ್ಟು ನುಡಿಯಲಿದ್ದಾರೋ ಕಾಶಿ ವಿಶ್ವನಾಥನೇ ಬಲ್ಲ!

ಪಾಂಗಾಂಗ್ ಸರೋವರಕ್ಕೆ ಹೊಂದಿಕೊಂಡಂತೆ ಚಾಚಿರುವ ಪರ್ವತ ಸಾಲುಗಳ ಎಂಟು ಆಯಕಟ್ಟಿನ ಜಾಗಗಳಲ್ಲಿ (ಫಿಂಗರ್ಸ್‌), ಫಿಂಗರ್‌ 4ರಿಂದ 8ರವರೆಗೆ ಇರುವ ಭೂಭಾಗದ ಪ್ರದೇಶದ ಹಕ್ಕುಸಾಮ್ಯದ ವಿಚಾರದಲ್ಲಿ ದಶಕಗಳಿಂದ ನಡೆಯುತ್ತಿದ್ದ ಹಗ್ಗಜಗ್ಗಾಟವನ್ನು, ನಮ್ಮ ಸೈನಿಕರು ಇದಕ್ಕಾಗಿ ಶೂನ್ಯಕ್ಕೂ ಕೆಳಗಿನ ತಾಪಮಾನದಲ್ಲಿ ಜೀವವನ್ನೇ ತೇಯ್ದು ನಡೆಸುತ್ತಿದ್ದ ಗಸ್ತನ್ನೂ ಒಂದೇ ಏಟಿಗೆ ಮರೆತು ಆಡ ಬಾರದ ಮಾತನ್ನು ಆಡಿದ್ದಾರೆ ಐವತ್ತಾರು ಇಂಚಿನ ಎದೆಯ ಪ್ರಧಾನಿ ಮೋದಿಯವರು. ವಿದೇಶಾಂಗ ಸಚಿವರೇ ನೀಡಿದ್ದ ಅಧಿಕೃತ ಹೇಳಿಕೆಯಂತೆ ನಮ್ಮ ಭಾಗದಲ್ಲಿ ಅತಿಕ್ರಮವಾಗಿ ನಿರ್ಮಾಣ ಮಾಡಲು ಹೊರಟಿದ್ದ ಸೇನಾ ನಿರ್ಮಿತಿಯನ್ನು ತಡೆಯಲು ಹೋಗಿ ಹುತಾತ್ಮರಾದ ಸೈನಿಕರ ಸಾವನ್ನೂ ಮರೆತು ಆ ಭೂಭಾಗ ತಮ್ಮದಲ್ಲ, ಚೀನಿಯರು ಭಾರತದ ಗಡಿಯನ್ನು ಉಲ್ಲಂಘಿಸಲೇ ಇಲ್ಲ. ನಮ್ಮ ಯಾವುದೇ ಸೇನಾ ನೆಲೆಗಳನ್ನು ವಶಪಡಿಸಿಕೊಂಡಿಲ್ಲ ಎಂದು ಹೇಳುತ್ತಾ, ಭಾರತೀಯ ಸೈನಿಕರೇ ಗಡಿಯನ್ನು ಉಲ್ಲಂಘಿಸಿ ಬಂದು ಪ್ರಚೋದಿಸಿದರು ಎನ್ನುವ ಚೀನಾದ ವಾದವನ್ನೇ ತಾವೂ ಪ್ರತಿಪಾದಿಸಿದ್ದಾರೆ! ಅಲ್ಲಿಗೆ, ನಮ್ಮ ಸೈನಿಕರ ದಾರುಣ ವೀರಮರಣಕ್ಕೆ ಸೇನಾ ತುಕುಡಿಯ ಅಚಾತುರ್ಯವೇ ಕಾರಣವಿರಬಹುದೇನೋ ಎನ್ನುವಂತಹ ಕೆಟ್ಟ ಚರ್ಚೆಯೊಂದಕ್ಕೆ ನಾಂದಿ ಹಾಡಿದ್ದಾರೆ.

ಬಹುಶಃ ಪ್ರಧಾನಿಯವರು ಈ ಹೇಳಿಕೆಯನ್ನು ನೀಡುವಾಗ ಅವರ ಮನಸ್ಸಿನಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರಿಗೆ, ವಿಶೇಷವಾಗಿ ಚೀನಾದ ಸೈನಿಕರು ಗಡಿ ದಾಟಿ ಅತಿಕ್ರಮಿಸಿ ಸೇನಾನೆಲೆಗಳ ನಿರ್ಮಾಣದಲ್ಲಿ ತೊಡಗಿದ್ದಾರೆ ಎಂದು ಪದೇಪದೇ ಹೇಳುತ್ತಿದ್ದ ರಾಹುಲ್‌ ಗಾಂಧಿಯವರಿಗೆ ಉತ್ತರಿಸಬೇಕು ಎನ್ನುವುದೇ ಪ್ರಧಾನವಾಗಿದ್ದಂತೆ ಕಾಣುತ್ತಿದೆ. ಹೀಗಾಗಿ ತಮ್ಮ ಹೇಳಿಕೆಯ ಭರದಲ್ಲಿ ದೇಶದ ಹಿತಾಸಕ್ತಿಯನ್ನೇ ಮರೆತು, ನಮ್ಮದೇ ಭೂಭಾಗದ ಮೇಲೆ ಹಕ್ಕುಸ್ವಾಮ್ಯವನ್ನು ತಿರಸ್ಕರಿಸಿ, ಭಾರತದ ಸಾರ್ವಭೌಮತೆಗೆ ಅಪಚಾರವೆಸಗಸಿದ ಕೆಲಸವನ್ನು ಖುದ್ದು ಪ್ರಧಾನಿಯವರೇ ಮಾಡಿದರೇ ಎನ್ನುವ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ. ನಿರ್ಣಾಯಕ ಪಂದ್ಯದಲ್ಲಿ ತನ್ನದೇ ಗೋಲುಪೆಟ್ಟಿಗೆಗೆ ಗೋಲು ಹೊಡೆದ ಆಟಗಾರನಂತೆ ಪ್ರಧಾನಿ ಕಾಣುತ್ತಿದ್ದಾರೆ. ಅಂಪೈರಿನ ಮೇಲಿನ ಮುನಿಸಿಗೆ ತಾನೇ ‘ಹಿಟ್’ ವಿಕೆಟ್‌ ಮಾಡಿಕೊಂಡು ಪೆವಿಲಿಯನ್‌ ಗೆ ಮರಳುತ್ತಿರುವಂತೆ ಅವರ ಈ ನಡೆ ಕಾಣುತ್ತಿದೆ!

ಪ್ರಧಾನಿಯವರ ಹೇಳಿಕೆ ಹುಟ್ಟಿ ಹಾಕಿರುವ ಪ್ರಮುಖ ಪ್ರಶ್ನೆಗಳಿವು:

* ಚೀನಿಯರು ಭಾರತೀಯ ಗಡಿಯನ್ನು ಅತಿಕ್ರಮಣ ಮಾಡಿಲ್ಲ, ಭಾರತದ ಗಡಿ ವ್ಯಾಪ್ತಿಯಲ್ಲಿ ಸೇನಾ ಚೌಕಿಯನ್ನು ನಿರ್ಮಿಸುತ್ತಿಲ್ಲ ಎಂದರೆ ಭಾರತೀಯ ಸೈನಿಕರೇ ಗಡಿಯನ್ನು ದಾಟಿದರೇ? ಹೀಗೆ ಗಡಿ ದಾಟಿ ಚೀನಿಯರ ಭೂಭಾಗಕ್ಕೆ ಸಾಗಿ ಅವರ ನೆಲದಲ್ಲಿ ಅವರು ಕೈಗೊಂಡಿದ್ದ ಕಾಮಗಾರಿಯ ಬಗ್ಗೆ ತಕರಾರು ತೆಗೆದರೇ?

* ಅದು ಹಾಗಲ್ಲ, ಅದು ‘ನೋ ಮ್ಯಾನ್ಸ್ ಲ್ಯಾಂಡ್’ (ಎರಡೂ ದೇಶಗಳು ಸ್ಪಷ್ಟವಾಗಿ ಹಕ್ಕುಸ್ವಾಮ್ಯ ಸಾಧಿಸಲು ಆಗಿರದ, ಸದ್ಯದ ಸಂದರ್ಭದಲ್ಲಿ ಯಾರಿಗೂ ಸೇರದ ಪ್ರದೇಶ) ಎಂದಾಗಿದ್ದರೆ, ಚೀನಿಯರು ಅದನ್ನು ಅತಿಕ್ರಮಿಸಿದ್ದು ಹೇಗೆ? ಅದು ‘ಬಫರ್ ಝೋನ್’ ಎಂದು ಪರಿಗಣಿಸಲಾಗಿದ್ದ, ನಿರ್ದಿಷ್ಟ ಗಡಿ ಗುರುತಿಲ್ಲದ ಕಾರಣಕ್ಕೆ ಎರಡೂ ದೇಶಗಳ ಗಡಿಗಳ ನಡುವೆ ಇದ್ದ ಪ್ರದೇಶ ಇದು ಎಂದು ಹೇಳುವುದಾದರೆ ಇಲ್ಲಿಯವರೆಗೆ ನಮ್ಮ ಸೈನಿಕರು ಅಲ್ಲಿ ಗಸ್ತು ತಿರುಗಿರುವುದು ಸುಳ್ಳೇ? ನಮ್ಮ ಸೈನಿಕರು ಗಸ್ತು ತಿರುಗುತ್ತಿದ್ದರು ಎಂದರೆ, ಒಂದೋ ಅದು ನಮಗೆ ಸೇರಬೇಕಾಗಿರುವ ಪ್ರದೇಶ ಎಂದಿರಬೇಕು, ಇಲ್ಲವೇ, ಚೀನಾದ ಸ್ವಾಧೀನದಲ್ಲಿ ಇಲ್ಲದೆ ಇರುವ ಪ್ರದೇಶ ಎಂದಾದರೂ ಆಗಬೇಕು. ಇದೆರಡೂ ಅಲ್ಲವಾದಲ್ಲಿ, ಎರಡೂ ದೇಶದ ಸೈನಿಕರು ಗಸ್ತು ತಿರುಗುವ ಪ್ರದೇಶ ಎಂದಾದರೂ ಆಗಬೇಕು. ಕೊನೆಯದು ಸರಿ ಎಂದಾದರೆ, ಹೀಗೆ ಎರಡೂ ದೇಶಗಳ ಸೈನಿಕರು ಗಸ್ತು ಮಾತ್ರವೇ ತಿರುಗಲು ಇದ್ದ ಪ್ರದೇಶದಲ್ಲಿ ಸೇನಾ ನಿರ್ಮಾಣಗಳಲ್ಲಿ ತೊಡಗಲು ಚೀನಿಯರು ಮುಂದಾದದ್ದನ್ನು ನಮ್ಮ ಸೈನಿಕರು ಪ್ರಶ್ನಿಸಿರುವುದು, ಆಕ್ಷೇಪಿಸಿರುವುದು, ಸರ್ವಥಾ ಸಮರ್ಥನೀಯವೇ ತಾನೆ? ಆದರೆ, ನಿಮ್ಮ ಹೇಳಿಕೆಯಲ್ಲಿ ಈ ಕುರಿತಾದ ವಿವರಣೆಗಳು ಏಕಿಲ್ಲ?

* ನೇರವಾದ ಪ್ರಶ್ನೆ, ಫಿಂಗರ್ 4 ರಿಂದ 8ರವರೆಗಿನ ಪ್ರದೇಶ ಯಾರಿಗೆ ಸೇರುತ್ತದೆ? ನೀವಂತೂ ನಮ್ಮದಲ್ಲ ಎನ್ನುವ ಅರ್ಥ ಬರುವಂತೆ ಹೇಳಿದ್ದೀರಿ, ಚೀನಾವಂತೂ ಅದು ನನ್ನದೇ ಎಂದು ದೊಡ್ಡ ಗಂಟಲಿನಲ್ಲಿ ಹೇಳಿದೆ. ಆ ವ್ಯಾಪ್ತಿಯಲ್ಲೇ ನಮ್ಮ ಇಪ್ಪತ್ತು ಸೈನಿಕರ ಮೇಲೆ ಹಲ್ಲೆಯನ್ನು ನಡೆಸಿ ಪ್ರಾಣವನ್ನೂ ಕಸಿದಿದೆ. ಪ್ರಧಾನಿಯವರೇ, ಈ ಸಂದರ್ಭದಲ್ಲಿ ನೀವು ಹೇಳಬೇಕಾಗಿದ್ದು, ಚೀನಿಯರು ನಮ್ಮ ಸೇನಾ ನೆಲೆಯನ್ನಾಗಲಿ, ಗಡಿಯನ್ನಾಗಲಿ ದಾಟಿಲ್ಲ ಎಂದಲ್ಲ. ಬದಲಿಗೆ ಗಾಲ್ವಾನ್‌ ಕಣಿವೆಯಾಗಲಿ ಹಾಗೂ ಪಾಂಗಾಂಗ್ ಸರೋವರದ ಫಿಂಗರ್ 4ರಿಂದ 8ರವರೆಗಿನ ಪ್ರದೇಶ ಚೀನಿಯರಿಗೆ ಸೇರಿದ್ದಲ್ಲ ಎಂದಲ್ಲವೇ. ಆ ಮಾತು ನಿಮ್ಮ ಬಾಯಿಂದ ಏಕೆ ಬರುತ್ತಿಲ್ಲ? ‌

* ಪ್ರಧಾನಿಯವರೇ, ಕಡೆಗೂ ನೀವು ಹೇಳಿದ್ದು ಚೀನಿಯರಿಗೆ ಪ್ರಿಯವಾದದ್ದನ್ನೇ. ಎರಡು ಹೆಜ್ಜೆ ಮುಂದಿರಿಸಿ, ಒಂದು ಹೆಜ್ಜೆ ಹಿಂದೆ ಸರಿದು ಕಡೆಗೆ ಅತಿಕ್ರಮಿಸಿದ ಒಂದು ಹೆಜ್ಜೆಯನ್ನು ತನ್ನದೇ ಎಂದು ಸಾರುವ ಹಳೆಯ ಚಾಳಿ ಚೀನಾದ್ದು. ಇದುವೇ ಅದರ ಗಡಿ ನೀತಿ. ಈಗ ನೀವು ಅದನ್ನೇ ಪರೋಕ್ಷವಾಗಿ ಸಮರ್ಥಿಸಿದ್ದೀರಿ ಅಲ್ಲವೇ?

* ಕೋವಿಡ್‌-19 ಜಾಗತಿಕ ಸೋಂಕಿನ ವಿಚಾರದಲ್ಲಿ ತನ್ನ ಬೇಜವಾಬ್ದಾರಿ ನಡೆಯಿಂದ ವಿಶ್ವದ ಬಹುತೇಕ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದ್ದ ಚೀನಾ, ಕರೋನಾ ವಿಷಯದಿಂದ ಬೇರೆಡೆಗೆ ಜಗತ್ತಿನ ಗಮನ ತಿರುಗಿಸಲು ಬಯಸಿತ್ತು. ಭಾರತದೊಂದಿಗಿನ ಗಡಿ ತಗಾದೆಯ ಮೂಲಕ ಈಗ ಅದು ಜಗತ್ತಿನ ಗಮನವನ್ನು ಕೋವಿಡ್‌ ನಿಂದ ಸೇನಾ ಸಂಘರ್ಷದೆಡೆಗೆ ತಿರುಗಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಕೋವಿಡ್‌ ನಿಂದ ಚೀನಾದ ಹೆಸರನ್ನು ನಿಧಾನವಾಗಿ ಪ್ರತ್ಯೇಕಿಸಲು ಮಾಡಿದಂತಿರುವ ಈ ‘ಸುರಕ್ಷಿತ ನಿರ್ಗಮನ’ಕ್ಕೆ ಪರೋಕ್ಷವಾಗಿ ತಾವೂ ಸಹಕರಿಸಿದಂತಾಗಲಿಲ್ಲವೇ? ಉಂಡೂ ಹೋದ, ಕೊಂಡೂ ಹೋದ ಎನ್ನುವಂತೆ ಚೀನಾಗೆ ಭಾರತದಿಂದ ಎರಡು ಲಾಭಗಳು ಸುಲಭದಲ್ಲಿ ಆಗಿವೆ. ಕೋವಿಡ್‌ ನಿಂದ ಜಗತ್ತಿನ ಗಮನವನ್ನು ಬೇರೆಡೆಗೆ ತಿರುಗಿಸುವಲ್ಲಿ ಭಾಗಶಃ ಸಫಲವಾಗಿದ್ದೂ ಆಯಿತು, ಭಾರತಕ್ಕೆ ಸೇರಿದ್ದ ಭೂಭಾಗವನ್ನು ಹೆಚ್ಚು ಶ್ರಮವಿಲ್ಲದೆ ಅತಿಕ್ರಮಿಸಿದ್ದೂ ಆಯಿತು. ಅಂತೂ ಚೀನಾದ ಹಿತಾಸಕ್ತಿಗೆ ತಕ್ಕಂತೆಯೇ ಎಲ್ಲವೂ ಆಗಿ ಹೋಯಿತು, ಅಲ್ಲವೇ? ನಿಮ್ಮ ಅರಿವಿದ್ದೇ ನೀವು ಚೀನಾದ ತಾಳಕ್ಕೆ ತಕ್ಕಂತೆ ಕುಣಿದಿರೋ, 56 ಇಂಚಿನ ಎದೆಗೆ ದೇಶಕ್ಕಿಂತ ದೇಶದೊಳಗಿನ ಕಳಪೆ ರಾಜಕಾರಣವೇ ಮುಖ್ಯವಾಯಿತೋ?

* ಅಸಲಿಗೆ ನಮ್ಮ ಸೈನಿಕರ ಪ್ರಾಣ ಹರಣಕ್ಕೆ ಹೊಣೆ ಯಾರು? ಚೀನಾ ನಮ್ಮ ಬದಿಯ ಗಡಿಯಲ್ಲಿ ಸೇನಾ ನಿರ್ಮಿತಿ ನಡೆಸಿದೆ ಎಂದು ಅಧಿಕೃತ ಹೇಳಿಕೆ ನೀಡಿರುವ ವಿದೇಶಾಂಗ ಸಚಿವರು ಸುಳ್ಳುಗಾರರೇ? ಕಳೆದ ಎರಡು ಮೂರು ತಿಂಗಳಿನಿಂದ ಚೀನಾದ ಅತಿಕ್ರಮಣದ ಬಗ್ಗೆ ಸಾಲುಸಾಲು ಮಾಧ್ಯಮ ವರದಿಗಳು, ರಕ್ಷಣಾ ತಜ್ಞರ ವಿಶ್ಲೇಷಣೆಗಳು ಇವೆಲ್ಲವೂ ಸುಳ್ಳೇ? ಚೀನಾ ತನ್ನ ವಶದಲ್ಲಿರಿಸಿಕೊಂಡು ಭಾರತದ ಸೇನೆ ನಡೆಸಿದ ತ್ರಾಸದಾಯಕ ಸಂಧಾನದ ನಂತರವಷ್ಟೇ ಬಿಡುಗಡೆಯಾಗಿರುವ ಹತ್ತು ಸೈನಿಕರ ಬಗ್ಗೆ ಸೇನೆ ಮೊದಲಿಗೆ ಲೆಕ್ಕವನ್ನೇ ನೀಡಿರಲಿಲ್ಲವೇಕೆ? ಒಂದು ವೇಳೆ ಸೇನೆ ಲೆಕ್ಕವನ್ನು ನೀಡಿದ್ದರೆ ಅದನ್ನು ಸರ್ಕಾರ ಮರೆಮಾಚಿತೇ?

* ಗಡಿಯಲ್ಲಿ ಅತೀವ ಉದ್ವಿಗ್ನ ಪರಿಸ್ಥಿತಿಯಲ್ಲಿದ್ದಾಗ ಸೈನಿಕರು ಶಸ್ತ್ರಗಳಿಲ್ಲದೆ ಗಸ್ತು ತಿರುಗಲು, ಚೀನಾದ ನಿರ್ಮಿತಿಯ ಬಗ್ಗೆ ಆಕ್ಷೇಪಿಸಲು ಹೋಗಿದ್ದೇಕೆ? ವಿದೇಶಾಂಗ ಸಚಿವರ ಹೇಳಿಕೆಯಂತೆ ಸೈನಿಕರು ಅಸ್ತ್ರಗಳನ್ನು ಒಯ್ದಿದ್ದರು, ಆದರೆ, ಈ ಹಿಂದಿನ ಒಪ್ಪಂದದನ್ವಯ ಅದನ್ನು ಬಳಸಲಿಲ್ಲ ಎಂದಿದ್ದಾರೆ. ಹಾಗಾದರೆ, ತಮ್ಮ ನಾಯಕನನ್ನೇ ಹೊಡೆದು ಹತ್ಯೆ ಮಾಡುವ ಸಮಯದಲ್ಲಿಯೂ ನಮ್ಮ ಸೈನಿಕರು ತಮ್ಮ ಅಸ್ತ್ರಗಳನ್ನು ಬಳಸಲಿಲ್ಲ ಎನ್ನುವ ವಾದವನ್ನು ಒಪ್ಪಬೇಕೇ? ಪ್ರಾಣಕ್ಕೆ ಸಂಚಕಾರ ಒದಗಿದಾಗ, ಕಣ್ಣಮುಂದೆಯೇ ಗಡಿ ಉಲ್ಲಂಘನೆ, ಶಾಂತಿ ಒಪ್ಪಂದದ ಉಲ್ಲಂಘನೆಯಾದಾಗ ‘ತಮ್ಮ ಶಸ್ತ್ರಗಳ ವಾರಸುದಾರರು ಹಾಗೂ ಅದನ್ನು ಬಳಸುವ ಅಂತಿಮ ನಿರ್ಧಾರಕರು ಸೈನಿಕರೇ ಆಗಿರುತ್ತಾರೆ’ ಎನ್ನುವುದನ್ನು ಸ್ಪಷ್ಟವಾಗಿ ಹೇಳಿರುವಾಗಲೂ ನಮ್ಮ ಸೈನಿಕರು ಶಸ್ತ್ರಗಳನ್ನು ಬಳಸಲಿಲ್ಲವೇ? ಭಾರತೀಯ ಸೇನೆ ಹಾಗೂ ಅದರ ಸೈನಿಕರ ವಿವೇಚನೆಯನ್ನೇ ಪ್ರಶ್ನಿಸುವಂತಿದೆ ಸರ್ಕಾರ ಹಾಗೂ ಪ್ರಧಾನಿಯವರು ನೀಡಿರುವ ಹೇಳಿಕೆಗಳು. ನಮ್ಮ ಸೈನಿಕರು ಕಣ್ಣ ಮುಂದಿನ ಅಪಾಯಕ್ಕೆ ಕುರುಡಾದರು ಎನ್ನುವುದು ಕಷ್ಟ. ತಿಳಿದೂ ತಿಳಿದೂ ಅವರನ್ನು ಅಪಾಯಕ್ಕೆ ದೂಡಲಾಗಿದೆ ಎನ್ನುವುದು ಸತ್ಯ. ಇದರ ಹೊಣೆಗಾರರು ಯಾರು? ಅವರಿಗೆ ಶಿಕ್ಷೆ ಇಲ್ಲವೇ?

ಕೇಳಿದಷ್ಟೂ ಪ್ರಶ್ನೆಗಳು ಹುಟ್ಟುತ್ತವೆ, ಆದರೆ, ಪ್ರಶ್ನೆ ಕೇಳುವವರೆಲ್ಲರೂ ರಾಷ್ಟ್ರದ್ರೋಹಿಗಳಾಗುತ್ತಾರೆ. ಪ್ರಶ್ನೆ ಕೇಳುವವರೆಲ್ಲರೂ ರಾಷ್ಟ್ರದ್ರೋಹಿಗಳಾದರೆ, ಮರುಮಾತಿಲ್ಲದೆ ಭಾರತದ ನೆಲವನ್ನು ಸಂಚುಕೋರ ಚೀನಾಗೆ ಒಪ್ಪಿಸಿದ ನಡೆಯನ್ನು ಏನೆನ್ನಬೇಕು? ಸೈನಿಕರ ವೀರಮರಣಕ್ಕೆ ಕಾರಣವನ್ನು ಮರೆಮಾಚುತ್ತಿರುವ ಸರ್ಕಾರವನ್ನು ಏನೆಂದು ಕರೆಯಬೇಕು?

Tags: Galwan ClashPM Narendra Modiಗಲ್ವಾನ್‌ ಕಣಿವೆಪ್ರಧಾನಿ ನರೇಂದ್ರ ಮೋದಿ
Previous Post

ಸಾರ್ವಜನಿಕರಿಗೆ ಪಾರ್ಕ್ ಮುಕ್ತಗೊಳಿಸುವ ಸಮಯ ವಿಸ್ತರಣೆ

Next Post

“ಮೋದಿ ಚೀನಾಕ್ಕೆ ಶರಣಾಗಿದ್ದಾರೆ..” ಪ್ರಧಾನಿ ಮೇಲಿನ ಭರವಸೆ ಕಳೆದುಕೊಂಡ ನಿವೃತ್ತ ಯೋಧರು

Related Posts

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..
Uncategorized

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

by ನಾ ದಿವಾಕರ
March 1, 2026
0

ನಾ ದಿವಾಕರ  ಭಾರತೀಯ ಸಮಾಜದ ಎಲ್ಲ ಸ್ತರಗಳಲ್ಲೂ ಸಮಾನವಾಗಿ ಗುರುತಿಸಬಹುದಾದ ಒಂದು ಲಕ್ಷಣ ಎಂದರೆ ʼ ನೈತಿಕ ಅಧಃಪತನ ಮತ್ತು ಮಾನವೀಯ ಮೌಲ್ಯಗಳ ಅವನತಿ ʼ. ಬದಲಾಗುತ್ತಿರುವ...

Read moreDetails
ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

February 3, 2026
ಕುಟುಂಬ ರಾಜಕಾರಣ: ಭಾರತೀಯ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ಭೀಕರ ದಾಳಿ! 

ಕುಟುಂಬ ರಾಜಕಾರಣ: ಭಾರತೀಯ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ಭೀಕರ ದಾಳಿ! 

January 26, 2026
ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ

November 7, 2025

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

January 12, 2025
Next Post
“ಮೋದಿ ಚೀನಾಕ್ಕೆ ಶರಣಾಗಿದ್ದಾರೆ..” ಪ್ರಧಾನಿ ಮೇಲಿನ ಭರವಸೆ ಕಳೆದುಕೊಂಡ ನಿವೃತ್ತ ಯೋಧರು

“ಮೋದಿ ಚೀನಾಕ್ಕೆ ಶರಣಾಗಿದ್ದಾರೆ..” ಪ್ರಧಾನಿ ಮೇಲಿನ ಭರವಸೆ ಕಳೆದುಕೊಂಡ ನಿವೃತ್ತ ಯೋಧರು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada