ಸಾಮಾಜಿಕ ನ್ಯಾಯದ ಪರವಾಗಿದ್ದೇವೆ ಎಂದು ಬಾಯಿಮಾತಿನಲ್ಲಿ ಹೇಳಿದರೆ ಸಾಲದು, ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಲ್ಲಿಸಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಬಿ.ಎಸ್.ಯಡಿಯೂರಪ್ಪ ಮತ್ತು ಸಚಿವ ಶ್ರೀರಾಮುಲು ಅವರನ್ನು ಒತ್ತಾಯಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನಾನು ಮುಖ್ಯಮಂತ್ರಿಯಾಗಿದ್ದಾಗ ಕಾಂತರಾಜ್ ನೇತೃತ್ವದ ಆಯೋಗಕ್ಕೆ ಸಮೀಕ್ಷೆ ನಡೆಸುವ ಜವಾಬ್ದಾರಿ ವಹಿಸಿದ್ದೆ. ನಮ್ಮ ಅಧಿಕಾರಾವಧಿ ಮುಗಿಯುವುದರೊಳಗೆ ವರದಿ ಸಿದ್ಧಗೊಂಡಿರದ ಕಾರಣ ಅದರ ಬಿಡುಗಡೆ ಸಾಧ್ಯವಾಗಿಲ್ಲ. ಈಗ ವರದಿ ರಾಜ್ಯ ಸರ್ಕಾರದ ಮುಂದಿದೆ. ಇನ್ನಷ್ಟು ವಿಳಂಬ ಮಾಡದೆ ವರದಿಯನ್ನು ಬಿಡುಗಡೆ ಮಾಡಿ ಅದರ ಶಿಫಾರಸುಗಳನ್ನು ಜಾರಿಗೊಳಿಸಬೇಕು. ಸಮ್ಮಿಶ್ರ ಸರ್ಕಾರದ ಕಾಲದಲ್ಲಿಯೇ ಶಾಶ್ವತ ಆಯೋಗ ವರದಿಯನ್ನು ಸಲ್ಲಿಸುವ ಪ್ರಯತ್ನ ಮಾಡಿದರೂ ಸರ್ಕಾರ ಆಸಕ್ತಿ ತೋರಿರಲಿಲ್ಲ. ಬಿ.ಎಸ್.ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ ಕೂಡಲೇ ಆಯೋಗವನ್ನು ವಜಾಗೊಳಿಸಿದರು. ಈ ಕಾರಣದಿಂದಾಗಿ ಆಯೋಗದ ಅಧ್ಯಕ್ಷರು ಆಯುಕ್ತರಿಗೆ ವರದಿ ಸಲ್ಲಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ದೇಶದಲ್ಲಿ ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿ ನಡೆದರೂ 1931ರ ನಂತರ ಜಾತಿಗಣತಿ ನಡೆದಿಲ್ಲ. ಇಂದಿರಾ ಸ್ಹಾನಿ ಪ್ರಕರಣದಲ್ಲಿ ಸುಪ್ರೀಮ್ ಕೋರ್ಟ್ ಎಲ್ಲ ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಚನೆಗೆ ಆದೇಶ ನೀಡಿತ್ತು. ನಾನು ಉಪಮುಖ್ಯಮಂತ್ರಿಯಾಗಿದ್ದಾಗ ದೇಶದಲ್ಲಿ ಪ್ರಥಮವಾಗಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಚಿಸಿದ್ದೆ. ಈ ಆಯೋಗವು ರೂ.162 ಕೋಟಿ ಖರ್ಚಿನಲ್ಲಿ ಸುಮಾರು 1.78 ಲಕ್ಷ ಸರ್ಕಾರಿ ಸಿಬ್ಬಂದಿಯನ್ನು ಬಳಸಿಕೊಂಡು ಮನೆಮನೆಗೆ ಭೇಟಿ ನೀಡಿ 55 ವಿಷಯಗಳ ಮೇಲೆ ಪ್ರಶ್ನೆಗಳಿಗೆ ಉತ್ತರ ಪಡೆದು ಅತ್ಯಂತ ವೈಜ್ಞಾನಿಕವಾಗಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದೆ ಎಂದಿದ್ದಾರೆ.
ಇದು ಕೇವಲ ಜಾತಿಗಳ ಸಮೀಕ್ಷೆಯೂ ಅಲ್ಲ, ಹಿಂದುಳಿದ ಜಾತಿಗಳ ಸಮೀಕ್ಷೆ ಅಲ್ಲ, ಇದು ರಾಜ್ಯದ ಪ್ರತಿಯೊಂದು ಕುಟುಂಬದ ಸಾಮಾಜಿಕ,ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಾಗಿದೆ. ಸರ್ಕಾರವು ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಲು ಇದರಿಂದ ನೆರವಾಗುತ್ತದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತೀಯ ಜನತಾ ಪಕ್ಷ ಮೂಲಭೂತವಾಗಿ ಸಾಮಾಜಿಕ ನ್ಯಾಯ ಮತ್ತು ಅದರ ಭಾಗವಾದ ಮೀಸಲಾತಿಯನ್ನು ವಿರೋಧಿಸುತ್ತಾ ಬಂದಿದೆ. ಮಂಡಲ ಆಯೋಗದ ವರದಿ ಜಾರಿಯನ್ನು ವಿರೋಧಿಸಿ ದೇಶಕ್ಕೆ ಬೆಂಕಿ ಹಚ್ಚಿದ ಪಕ್ಷ ಇದು. ಈ ಕಳಂಕವನ್ನು ತೊಡೆದು ಹಾಕಲಿಕ್ಕಾದರೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಆಯೋಗದ ವರದಿಯನ್ನು ಒಪ್ಪಿಕೊಂಡು ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.