ಬೌದ್ಧ ದೀಕ್ಷೆ ಪಡೆದರು ಗುಜರಾತಿನ ಖಂಬಿಸಾರದ ದಲಿತರು
ಗುಜರಾತಿನ ನವರಾತ್ರಿ ಸಂಭ್ರಮಗಳಲ್ಲಿ ದಲಿತರಿಗೆ ತಲೆ ತಲಾಂತರಗಳಿಂದ ಅವಕಾಶವಿಲ್ಲ. ಖಂಬಿಸಾರ ಗ್ರಾಮದ ದಲಿತರು ಈ ಬಾರಿ ಗರ್ಬಾ ನೃತ್ಯಗಳು ಮತ್ತಿತರೆ ಉತ್ಸವಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕೆಂದು ಸರಪಂಚನಿಗೆ ಕಾಗದ ಬರೆದು ಕೋರಿದರು. ಆರಂಭದಲ್ಲಿ ಒಪ್ಪಿಗೆ ನೀಡಿದಂತೆ ತೋರಿದರೂ, ನವರಾತ್ರಿಯ ಮೊದಲ ರಾತ್ರಿಯ ಕಡೆಯ ಗಳಿಗೆಯಲ್ಲಿ ಉತ್ಸವವನ್ನೇ ರದ್ದು ಮಾಡಲಾಗಿತ್ತು. ದಲಿತರೊಂದಿಗೆ ಉತ್ಸವ ಆಚರಿಸಲು ಕೆಲವರು ವ್ಯಕ್ತಪಡಿಸಿದ ವಿರೋಧವೇ ಉತ್ಸವ ರದ್ದಿಗೆ ಕಾರಣ ಎಂದು ಸರಪಂಚ ತಿಳಿಸಿದ. ನಿರಾಶರಾದ ದಲಿತರು ತಮ್ಮ ಕೇರಿಗಳಲ್ಲೇ ಗರ್ಬಾ ಆಚರಿಸಿದರು.
ಈ ಪ್ರಕರಣದ ನಂತರ ದಲಿತ ಗ್ರಾಮಸ್ಥರ ಪೈಕಿ ಪಂಕಜ್ ರಾಠೋಡ್ ಎಂಬ ದಲಿತ ಯುವಕ ತನ್ನ ಪತ್ನಿ ಊರ್ಮಿಳಾ ಮತ್ತು ಒಂದು ವರ್ಷದ ಗಂಡು ಕೂಸು ಹಾಗೂ ನಾಲ್ಕು ವರ್ಷ ವಯಸ್ಸಿನ ಮಗಳೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿರುವುದಾಗಿ ಸಾರಿದ್ದಾನೆ. ‘ದೇವ ದೇವತೆಗಳು ನಿಜವಾಗಿಯೂ ಇದ್ದಿದ್ದಲ್ಲಿ ಇಂತಹ ಭೇದ ಭಾವ ಎದುರಿಸುವ ದುಸ್ಥಿತಿ ನಮಗೆ ಬರುತ್ತಿರಲಿಲ್ಲ’ ಎಂಬುದು ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ ಪೇದೆಯಾಗಿರುವ ಆತನ ಅಳಲು. ಮತ್ತೊಬ್ಬ ಯುವಕ ಮಹೇಂದ್ರ ರಾಠೋಡ ತನ್ನ ಪತ್ನಿ ಜಾಗೃತಿ ಮತ್ತು ಎರಡು ವರ್ಷ ವಯಸ್ಸಿನ ಮಗಳೊಂದಿಗೆ ಬೌದ್ಧ ಧರ್ಮದ ದೀಕ್ಷೆ ಸ್ವೀಕರಿಸಿದ್ದಾನೆ. ಕಳೆದ ಮೇ ತಿಂಗಳಿನಲ್ಲಿ ಕುದುರೆಯೇರಿದ ಜಯೇಶ ರಾಠೋಡ ಎಂಬ ದಲಿತ ವರನ ದಿಬ್ಬಣದ ಮೇಲೆ ಮೇಲ್ಜಾತಿಗಳು ಕಲ್ಲು ತೂರಿದ್ದ ಪ್ರಕರಣ ವರದಿಯಾಗಿತ್ತು. ಈ ಇಬ್ಬರು ದಲಿತ ಯುವಕರು ಜಯೇಶನ ಸಂಬಂಧಿಕರು.
ಗರ್ಬಾದಲ್ಲಿ ಪಾಲ್ಗೊಳ್ಳಲು ತಮಗೂ ಅವಕಾಶ ನೀಡುವಂತೆ ದಲಿತರು ಪತ್ರ ನೀಡಿದ್ದು ನಿಜ. ಆದರೆ ಗರ್ಬಾ ರದ್ದಾಗಿದ್ದಕ್ಕೆ ಮಳೆ ಬಂದದ್ದು ಮತ್ತು ರೈತರು ಶೇಂಗಾ ಫಸಲಿನ ಕಟಾವಿನಲ್ಲಿ ನಿರತರಾಗಿದ್ದು ಕಾರಣವೇ ವಿನಾ ದಲಿತರ ಕೋರಿಕೆ ಅಲ್ಲ ಎಂಬುದು ಖಂಬಿಸಾರದ ಸರಪಂಚ ಬಲದೇವ ಪಟೇಲ್ ಸಮಜಾಯಿಷಿ.
ರಜಪೂತ-ಜಾಟ-ಬ್ರಾಹ್ಮಣ-ಗುರ್ಜರ ಸ್ಟಿಕರ್ ಗಳಿಗೆ ದಂಡ ಶುಲ್ಕ
ನೋಯ್ಡಾ (ನ್ಯೂ ಓಖ್ಲಾ ಇಂಡಸ್ಟ್ರಿಯಲ್ ಏರಿಯಾ) ದೆಹಲಿಗೆ ಹತ್ತಿಕೊಂಡಂತಿರುವ ಉತ್ತರಪ್ರದೇಶದ ಸೀಮೆ. ಇಲ್ಲಿನ ರಸ್ತೆಗಳು, ಮೂಲ ಸೌಲಭ್ಯಗಳು, ವಸತಿ ಸೌಕರ್ಯಗಳನ್ನು ದೇಶದ ಯಾವುದೇ ದೊಡ್ಡ ನಗರದೊಂದಿಗೆ ಹೋಲಿಸಬಹುದು. ನಗರ ರಾಜ್ಯವಾದ ದೆಹಲಿಯಲ್ಲಿ ಕೆಲಸ ಮಾಡುವ ಬಹಳಷ್ಟು ಜನ ನೋಯ್ಡಾದಲ್ಲಿ ಮನೆ ಮಾಡಿರುತ್ತಾರೆ. ಹಾಗೆಯೇ ದೆಹಲಿಯಲ್ಲಿ ವಾಸಿಸುವವರು ನೋಯ್ಡಾದಲ್ಲಿ ಉದ್ಯೋಗಿಗಳಾಗಿರುತ್ತಾರೆ. ನೋಯ್ಡಾ ಮತ್ತು ದೆಹಲಿಯದು ಅವಿನಾಭಾವ ಸಂಬಂಧ. ದೂರ ಮತ್ತು ರಾಜಧಾನಿಯ ವಿಳಾಸದಿಂದ ವಂಚಿತ ಎಂಬುದನ್ನು ಬಿಟ್ಟರೆ ನೋಯ್ಡಾ ದೆಹಲಿಗಿಂತ ಉತ್ತಮ ಮತ್ತು ದೆಹಲಿಗಿಂತ ಅಗ್ಗದ ವಸತಿ ಸೌಕರ್ಯವನ್ನು ಒದಗಿಸಿರುವ ಪ್ರದೇಶ.
ರಜಪೂತ, ಠಾಕೂರ್, ಜಾಟ್, ಗುರ್ಜರ್, ಬ್ರಾಹ್ಮಣ ಎಂದು ಮುಂತಾದ ಜಾತಿ ವಾಚಕ ಸ್ಟಿಕರ್ ಗಳನ್ನು ಕಾರುಗಳ ‘ವಿಂಡ್ ಸ್ಕ್ರೀನ್’ ಗಾಜುಗಳು ಮತ್ತು ನಂಬರ್ ಪ್ಲೇಟ್ ಗಳ ಮೇಲೆ ಹಚ್ಚಿಕೊಳ್ಳುವ ಪ್ರವೃತ್ತಿ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಕ್ಷೇತ್ರದಲ್ಲಿ ಹಳೆಯದೇ. ಆದರೆ, ಇತ್ತೀಚಿನ ವರ್ಷಗಳಲ್ಲಿ ಇದು ಹೆಚ್ಚುತ್ತ ನಡೆದಿದೆ. ಮೋಟಾರು ವಾಹನಗಳ ಕಾಯಿದೆಯ ಈ ಉಲ್ಲಂಘನೆಯನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿಲ್ಲ. ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಬಹುಕಾಲದಿಂದ ವ್ಯಾಪಿಸುತ್ತಿರುವ ಕಾಯಿದೆಯಿದು.
ಆದರೆ ಆಪ್ಯಾಯಕರ ಅಚ್ಚರಿಯೊಂದು ಜರುಗಿದೆ. ನೋಯ್ಡಾದ ಪೊಲೀಸರು ಇಂತಹ ಕಾರುಗಳು ಮತ್ತು ಬೈಕುಗಳನ್ನು ಹಿಡಿದು ದಂಡ ಹಾಕಿದ್ದಾರೆ. ಮೊನ್ನೆ ಶುಕ್ರವಾರ ಒಂದೇ ದಿನ ಹೀಗೆ ಹಿಡಿದು ದಂಡ ಹಾಕಲಾಗಿರುವ ವಾಹನಗಳ ಸಂಖ್ಯೆ 250. ‘ದಬಂಗ್’ (ದಬ್ಬಾಳಿಕೆ ನಡೆಸುವವನು, ನಿರ್ಭೀತ, ಕಾನೂನು ಕಾಯಿದೆಗೆ ಸೊಪ್ಪು ಹಾಕದವನು), ‘ನಂಬರದಾರ್’ (ಅದೃಷ್ಟವಂತ), ತಂದೆಯ ಉಡುಗೊರೆ, ತಾಯಿಯ ಉಡುಗೊರೆ ಎಂಬುದಾಗಿ ನಂಬರ್ ಪ್ಲೇಟ್ ಗಳ ಮೇಲೆ ಬರೆಯಲಾಗಿರುವ ವಾಹನಗಳನ್ನೂ ಬಿಟ್ಟಿಲ್ಲ. ಮೋಟಾರು ವಾಹನ ಕಾಯಿದೆಯ 177ನೆಯ ಸೆಕ್ಷನ್ ಮತ್ತು 1989ರ ಮೋಟಾರು ವಾಹನ ನಿಯಮಗಳ 50 -51ನೆಯ ನಿಯಮಗಳಡಿ ಈ ಕ್ರಮ ಜರುಗಿದೆ.
ನಂಬರ್ ಪ್ಲೇಟುಗಳ ಮೇಲೆ ಮತ್ತು ವಿಂಡ್ ಸ್ಕ್ರೀನ್ ಗಳ ಮೇಲೆ ಆಕ್ರಮಣಕಾರಿ ಮಾತುಗಳನ್ನು ಮತ್ತು ಜಾತಿಯ ಹೆಸರುಗಳನ್ನು ಬರೆದುಕೊಳ್ಳುವುದು ಸರಿಯಲ್ಲ. ಅಂತಹ ಸ್ಟಿಕರ್ ಗಳನ್ನು ಹಚ್ಚಿರುವ ವಾಹನಗಳ ಮೇಲೆ ಕ್ರಮ ಜರುಗಿಸುತ್ತಿದ್ದೇವೆ ಎಂದು ನೋಯ್ಡಾ ಪೊಲೀಸ್ ಮುಖ್ಯಸ್ಥ ವೈಭವ್ ಕೃಷ್ಣ ಹೇಳಿದ್ದಾರೆ. ನೋಯ್ಡಾ ಪೊಲೀಸರ ಈ ಕ್ರಮದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಂದ ಅಪಾರ ಪ್ರಶಂಸೆ ಪ್ರಕಟವಾಗಿದೆ. ತಿಂಗಳ ಹಿಂದೆ ರಾಜಸ್ತಾನದ ರಾಜಧಾನಿ ಜೈಪುರದ ಪೊಲೀಸರೂ ಇಂತಹುದೇ ಅಭಿಯಾನ ಜರುಗಿಸಿದ್ದರು. ದೆಹಲಿ ಪೊಲೀಸ್ ವ್ಯವಸ್ಥೆ ನೇರ ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಟ್ಟಿದ್ದು. ದೆಹಲಿಯಲ್ಲಿ ಮಾತ್ರವಲ್ಲದೆ ದೇಶದ ಎಲ್ಲ ರಾಜ್ಯಗಳಲ್ಲೂ ಈ ಅಭಿಯಾನ ನಡೆಯಬೇಕಿದೆ.
ನೋಯ್ಡಾ ಪೊಲೀಸ್ ಮುಖ್ಯಸ್ಥರು ತಾವಾಗಿ ಕೈಗೊಂಡಿರುವ ಈ ಅಭಿಯಾನದ ಮೇಲೆ ರಾಜ್ಯ ಸರ್ಕಾರದ ಒತ್ತಡದ ಕೊಡಲಿ ಯಾವಾಗ ಬೀಳುವುದೋ ಹೇಳಲು ಬಾರದು. ಅಂತಹ ಒತ್ತಡ ಹೇರದೆ ಮೇಲ್ಜಾತಿಗಳ ಪಾಳೇಗಾರಿಕೆ ಪ್ರವೃತ್ತಿ ಮೆರೆದಾಡುತ್ತಿರುವ ಉತ್ತರಪ್ರದೇಶದ ಎಲ್ಲೆಡೆಗೆ ಈ ಕ್ರಮವನ್ನು ವಿಸ್ತರಿಸಿದರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅಭಿನಂದನೀಯ ಆಗುತ್ತಾರೆ.
ಇಲ್ಲಿ ಸಪ್ತಪದಿ ತುಳಿಯುವಾಕೆ ವರನ ಸೋದರಿ!
ಗುಜರಾತಿನ ಛೋಟಾ ಉದಯಪುರ ಸೀಮೆಯ ಆದಿವಾಸಿ ಗ್ರಾಮಗಳಾದ ಸುರ್ಖೇಡಾ, ಸನದಾ ಹಾಗೂ ಅಂಬಾಲದಲ್ಲಿ ವಿವಾಹ ವಿಧಿಗಳು ಮದುಮಗನ ಖುದ್ದು ಹಾಜರಿಯಿಲ್ಲದೆ ನಡೆಯುತ್ತವೆ. ವರನ ಅವಿವಾಹಿತ ಸೋದರಿ ಇಲ್ಲವೇ ಆ ಕುಟುಂಬದ ಯಾವುದೇ ಅವಿವಾಹಿತ ಹೆಣ್ಣುಮಗಳು ಮದುಮಗನ ಪಾತ್ರ ವಹಿಸುತ್ತಾಳೆ. ಖುದ್ದು ಮದುಮಗನು ವಿವಾಹದ ವೇಷಭೂಷಣಗಳನ್ನು ಧರಿಸಿ, ಖಡ್ಗವನ್ನೂ ಹಿಡಿದು ತಾಯಿಯೊಂದಿಗೆ ತನ್ನ ಮನೆಯಲ್ಲಿ ಕುಳಿತಿರುತ್ತಾನೆ. ಆತನ ಕುಟುಂಬಕ್ಕೆ ಸೇರಿದ ಅವಿವಾಹಿತ ಹೆಣ್ಣುಮಗಳು ಸಾಲಂಕೃತಳಾಗಿ ವಧುವಿನ ಮನೆಗೆ ದಿಬ್ಬಣದಲ್ಲಿ ತೆರಳುತ್ತಾಳೆ. ಮಹೂರ್ತದ ಎಲ್ಲ ವಿಧಿಗಳಲ್ಲಿ ಸೋದರನ ಪರವಾಗಿ ಆಕೆಯೇ ಪಾಲ್ಗೊಳ್ಳುತ್ತಾಳೆ. ವಧುವನ್ನು ಮದುವೆಯಾಗಿ ಮನೆಗೆ ಕರೆತರುತ್ತಾಳೆ ಕೂಡ. ಈ ಮೂರೂ ಗ್ರಾಮಗಳ ಅಧಿ ದೇವತೆಗಳು ಬ್ರಹ್ಮಚಾರಿಗಳಂತೆ. ಬ್ರಹ್ಮಚಾರಿ ದೇವರುಗಳಿಗೆ ಗೌರವ ಆದರ ತೋರುವುದು ಈ ಸಂಪ್ರದಾಯದ ಉದ್ದೇಶ. ಉಲ್ಲಂಘಿಸಿದಾಗಲೆಲ್ಲ ಹಳ್ಳಿಗೆ ಕೇಡಾಗಿದೆ ಎನ್ನುತ್ತಾರೆ ಗ್ರಾಮಸ್ತರು.
ಗುಜರಾತಿನ ಗಾಂಧೀನಗರದ ಕಲೋಲ್ ತಾಲ್ಕೂಕಿನ ಪಿಯಾಜ್ ಎಂಬ ಗ್ರಾಮದಲ್ಲಿ ವರನ ಮತ್ತು ಆತನ ಕುಟುಂಬದ ಎಲ್ಲ ಗಂಡಸರ ಉಸಿರಿನ ಪರೀಕ್ಷೆ ನಡೆಸುವುದು ಮದುವೆಗಳಲ್ಲಿ ಕಡ್ಡಾಯ. ನಿಶ್ಚಿತಾರ್ಥದ ಮತ್ತು ಮದುವೆಯ ಎರಡೂ ಸಂದರ್ಭಗಳಲ್ಲಿ ಕನಿಷ್ಠ 25 ಮಂದಿಯಾದರೂ ಈ ಉಸಿರಾಟದ ಪರೀಕ್ಷೆ ನಡೆಸುತ್ತಾರೆ. ಮದ್ಯಪಾನ ಮಾಡಿರುವ ವಾಸನೆ ಬಂದರೆ ಮದುವೆಯನ್ನು ನಿಲ್ಲಿಸಲಾಗುತ್ತದೆ. ವಿವಾಹದ ನಂತರ ಗಂಡನ ಕುಡಿತದ ಚಟದಿಂದ ಸಂಸಾರ ಹಾಳಾದರೆ ಗಂಡಿನ ಕಡೆಯವರು ಹೆಣ್ಣಿನ ಕಡೆಯವರಿಗೆ ಒಂದು ಲಕ್ಷ ರುಪಾಯಿ ದಂಡ ತೆರಬೇಕು.
ನಾಲ್ಕು ವರ್ಷಗಳ ಹಿಂದೆ ಈ ಗ್ರಾಮದ ಹದಿನೈದು ಮಂದಿ ಹುಡುಗರು 12 ಮತ್ತು 13ನೆಯ ವಯಸ್ಸಿಗೆ ಕುಡಿತದ ಚಟಕ್ಕೆ ಬಿದ್ದು ಪ್ರಾಯಕ್ಕೆ ಬರುವ ಮುನ್ನವೇ ಪ್ರಾಣ ತೆತ್ತರಂತೆ. ಇವರ ವಯಸ್ಸು 20 ವರ್ಷ ಮೀರಿರಲಿಲ್ಲ. ಆಗಿನಿಂದ ಗ್ರಾಮದಲ್ಲಿ ಮದುವೆಗೆ ಮೊದಲು ಉಸಿರು ಪರೀಕ್ಷೆಯ ರೂಢಿ ಜಾರಿಗೆ ಬಂತು. ವರನಿಗೆ ತಿಳಿಯದಂತೆ ಅವನನ್ನೂ, ಅವನ ಕುಟುಂಬದವರನ್ನೂ ಹಿಂಬಾಲಿಸಿ ಅವರು ಗಡಂಗಿಗೆ ಹೋಗುವರೇ ಇಲ್ಲವೇ ಎಂಬುದನ್ನೂ ಪತ್ತೆ ಮಾಡುವುದುಂಟು. ಗಡಂಗುಗಳನ್ನೇ ತೆಗೆಯಿಸಬಹುದಲ್ಲ? ಈ ಪ್ರಯತ್ನದಲ್ಲಿ ಗ್ರಾಮಸ್ಥರು ಸಫಲರಾಗಿಲ್ಲ. ಪೊಲೀಸರು ಮತ್ತು ಗಡಂಗುಗಳ ಮಾಲೀಕರು ಶಾಮೀಲಂತೆ…..
ಅಂದ ಹಾಗೆ ಗುಜರಾತು ಪಾನನಿಷೇಧ ಜಾರಿಯಲ್ಲಿರುವ ರಾಜ್ಯ ಮಾರಾಯರೇ!
ಆದಿವಾಸಿ ಮಕ್ಕಳಿಗೆ ಮೊದಲ ಬಾರಿಗೆ ಮೊಟ್ಟೆ ಹಂಚಿಕೆ
ಮಧ್ಯಾಹ್ನದ ಬಿಸಿಯೂಟದಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವುದನ್ನು ಹಿಡಿಯಷ್ಟು ಮೇಲ್ಜಾತಿಗಳ ಸಂಪ್ರದಾಯವಾದಿಗಳು ವಿರೋಧಿಸುತ್ತಲೇ ಬಂದಿದ್ದಾರೆ. ಸಮಗ್ರ ಶಿಶು ಅಭಿವೃದ್ಧಿ ಸೇವಾ ಯೋಜನೆಯಡಿ ತನ್ನ 89 ಆದಿವಾಸಿ ಬ್ಲಾಕ್ ಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡಿದರೆ ಹೇಗೆ ಎಂದು ಮಧ್ಯಪ್ರದೇಶ ಸರ್ಕಾರ ಆಲೋಚಿಸುತ್ತಿದೆ.
ಆಹಾರದ ಹಕ್ಕು ಆಂದೋಲನಕಾರ ಸಚಿನ್ ಜೈನ್ ಎಂಬುವರು ಈ ಸಂಬಂಧದಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಪತ್ರ ಬರೆದಿರುವುದು ವಿಶೇಷ ಬೆಳವಣಿಗೆ. ಐದು ವರ್ಷಗಳೊಳಗಿನ ಪುಟ್ಟ ಮಕ್ಕಳ ಪೈಕಿ ಶೇ. 42ರಷ್ಟು ಕೂಸುಗಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ವರದಿಗಳಿವೆ. ಮಗುವೊಂದಕ್ಕೆ ವಾರಕ್ಕೆ ಮೂರು ಮೊಟ್ಟೆಗಳನ್ನು ನೀಡಲಾಗುವುದು. ಆದಿವಾಸಿ ಮಕ್ಕಳು ಮೊಟ್ಟೆಯನ್ನು ಇಷ್ಟಪಟ್ಟು ತಿನ್ನುತ್ತವೆ. ಮೊಟ್ಟೆ ಬೇಡದ ಮಕ್ಕಳಿಗೆ ಹಾಲಿನ ಆಯ್ಕೆಯೂ ಉಂಟು. ಈ ಯೋಜನೆಯ ವಾರ್ಷಿಕ ಅಂದಾಜು ವೆಚ್ಚ 40 ರಿಂದ 50 ಕೋಟಿ ರುಪಾಯಿಗಳು. ಖುದ್ದು ಸಸ್ಯಾಹಾರಿಯಾಗಿದ್ದ ಮಾಜಿ ಮುಖ್ಯಮಂತ್ರಿ ಶಿವರಾಜಸಿಂಗ್ ಚೌಹಾಣ್ ಇಷ್ಟು ವರ್ಷಗಳ ಕಾಲ ಮೊಟ್ಟೆ ನೀಡಿಕೆಗೆ ಅಡ್ಡಗಾಲು ಹಾಕಿಕೊಂಡು ಬಂದಿದ್ದರು.
ಎ.ಸಿ. ನಿರೀಕ್ಷಣಾ ಕೊಠಡಿಗಳು- ತಾಸಿಗೆ 10 ರೂ ಬಾಡಿಗೆ
ದೆಹಲಿಯ ನವದೆಹಲಿ ರೇಲ್ವೆ ನಿಲ್ದಾಣ ಮತ್ತು ಹಜರತ್ ನಿಜಾಮುದ್ದೀನ್ ರೇಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆಂದು ಹವಾನಿಯಂತ್ರಿತ ನಿರೀಕ್ಷಣಾ ಕೊಠಡಿಗಳ ಸೌಲಭ್ಯ ಆರಂಭಿಸಲಾಗಿದೆ. ಈ ಸೌಲಭ್ಯ ಪಡೆಯುವ ಎ. ಸಿ. ಕಂಪಾರ್ಟಮೆಂಟ್ ಗಳ ಪ್ರಯಾಣಿಕರು ತಾಸಿಗೆ ತಲಾ ಹತ್ತು ರುಪಾಯಿ ತೆರಬೇಕು. ಐದರಿಂದ 12ರ ಪ್ರಾಯದ ಮಕ್ಕಳಿಗೆ ತಲಾ ಐದು ರುಪಾಯಿ. ಸ್ಲೀಪರ್ ದರ್ಜೆಯ ಪ್ರಯಾಣಿಕರ ನಿರೀಕ್ಷಣಾ ಕೊಠಡಿಗಳ ಬಳಕೆಗೆ ಶುಲ್ಕ ತೆರಬೇಕಿಲ್ಲ. ಗಾಳಿ ಬೆಳಕಿನ ಸೌಲಭ್ಯವಿಲ್ಲದೆ, ಮಂಕು ಕವಿದು ಪಾಳು ಬಿದ್ದಂತಿದ್ದ ಈ ನಿರೀಕ್ಷಣಾ ಕೊಠಡಿಗಳನ್ನು ನಾಲ್ಕು ಕೋಟಿ ಮತ್ತು ಎರಡು ಕೋಟಿ ರುಪಾಯಿ ವೆಚ್ಚದಲ್ಲಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ನವೀಕರಿಸಲಾಗಿದೆ. ಊಟ ತಿಂಡಿ ಮತ್ತು ಮಾಹಿತಿ ನೀಡಿಕೆಯ ಅನುಕೂಲವನ್ನೂ ಕಲ್ಪಿಸಲಾಗಿದೆ.