Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಹಿಂದಿ ಮಂದಿ- ದಕ್ಷಿಣಕ್ಕೊಂದು ಉತ್ತರದ ಕಿಟಕಿ

ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ಹೆಸರಿನ ಜೊತೆ ಜಾತಿ ವಾಚಕಗಳನ್ನು ಕೈಬಿಡುವ ನಿರ್ಧಾರದ ನಗೆಪಾಟಲು, ಉತ್ತರಪ್ರದೇಶದಲ್ಲಿ ವರದಕ್ಷಿಣೆಗಾಗಿ 
ಹಿಂದಿ ಮಂದಿ- ದಕ್ಷಿಣಕ್ಕೊಂದು ಉತ್ತರದ ಕಿಟಕಿ

December 8, 2019
Share on FacebookShare on Twitter

ಜಾತಿ ಹೆಸರು ಬಿಟ್ಟರು, ಆದರೆ ಜಾತಿ ಬಿಡಲಿಲ್ಲ!

ಸಾಂಧರ್ಭಿಕ ಚಿತ್ರ

ಜಿಂದ್ ಎಂಬುದು ಹರಿಯಾಣಾದ ಅತಿ ಹಳೆಯ ಮತ್ತು ದೊಡ್ಡ ನಗರ. ಜಿಲ್ಲಾ ಕೇಂದ್ರವೂ ಹೌದು. ಇಂದ್ರನನ್ನು ಪೂಜಿಸುತ್ತಿದ್ದ ಪಾಂಡವರು ಜಿಂದ್ ನಲ್ಲಿ ಜಯಂತಿ ದೇವಿ ದೇವಾಲಯ ಕಟ್ಟಿದ್ದರಂತೆ. (ಇಂದ್ರನ ಮತ್ತೊಂದು ಹೆಸರು ಜಯಂತ. ಇಂದ್ರನ ಹೆಣ್ಣು ರೂಪದ ಪ್ರತೀಕವೆಂದು ಜಯಂತಿದೇವಿಯನ್ನು ಬಗೆಯಲಾಯಿತು). ಕುರುಕ್ಷೇತ್ರದ ಯುದ್ಧದಲ್ಲಿ ಗೆಲುವಿಗಾಗಿ ಜಯಂತಿ ದೇವಿಯನ್ನು ಪ್ರಾರ್ಥಿಸಿದ್ದರೆಂದು ಹೇಳುತ್ತದೆ ಸ್ಥಳೀಯ ಮೌಖಿಕ ಪರಂಪರೆ. ಜಯಂತಿದೇವಿ ದೇಗುಲದ ಸುತ್ತಮುತ್ತ ಹಬ್ಬುತ್ತ ಹೋದ ನಗರವೇ ಜಿಂದ್ ಎಂಬ ಹೆಸರು ಪಡೆಯಿತು.

ಹೆಚ್ಚು ಓದಿದ ಸ್ಟೋರಿಗಳು

‘85 % ಸರ್ಕಾರ ನಡೆಸಿದವರು ಇಂದು ನಮ್ಮ ಮೇಲೆ ಕಮಿಷನ್​ ಆರೋಪ ಮಾಡ್ತಿದ್ದಾರೆ ’ : ಬಿಜೆಪಿ ನಾಯಕ ಸುಧಾಂಶು ತ್ರಿವೇದಿ ಕಿಡಿ

ದೇಶವನ್ನು ಹಿಂದುಳಿಸುತ್ತಿರುವ ನೆಹರು ದ್ವೇಷ

ಹಾಸನ ಜೆಡಿಎಸ್​ ಟಿಕೆಟ್​ ಹೈಡ್ರಾಮಾಗೆ ಬಿತ್ತಾ ತೆರೆ..? : ಕೆ.ಎಂ. ರಾಜೇಗೌಡರಿಗೆ ಟಿಕೆಟ್​ ಫಿಕ್ಸ್​..?

ಇಂತಹ ಜಿಂದ್ ಜಿಲ್ಲೆಯ ಎರಡು ಲಕ್ಷ ಜನಸಂಖ್ಯೆಯುಳ್ಳ 24 ಹಳ್ಳಿಗಳ ಹಿರಿಯರನ್ನು ಒಳಗೊಂಡ ಖೇಡಾ ಖಾಪ್ (ಖೇಡಾ ಅನಧಿಕೃತ ನ್ಯಾಯಪಂಚಾಯಿತಿ) ಐದು ತಿಂಗಳ ಹಿಂದೆ ಜೂನ್ 29ರಂದು ವಿಶಿಷ್ಟ ತೀರ್ಮಾನ ತೆಗೆದುಕೊಂಡಿತ್ತು. ವ್ಯಕ್ತಿಗಳ ಹೆಸರುಗಳೊಂದಿಗೆ ಶತಮಾನಗಳಿಂದ ತಳುಕು ಹಾಕಿಕೊಂಡು ಬಂದಿರುವ ಜಾತಿಸೂಚಕ ಪದಗಳನ್ನು ತ್ಯಜಿಸಬೇಕು. ಅವುಗಳ ಬದಲಿಗೆ ಆಯಾ ಹಳ್ಳಿಗಳ ಹೆಸರುಗಳನ್ನು ಸೇರಿಸಿಕೊಳ್ಳಬೇಕು.

ಜಾತಿ ಎಂಬುದು ಜೀವನವಿಧಾನವನ್ನು ಹುಟ್ಟಿನಿಂದ ಸಾವಿನ ತನಕ ಆವರಿಸಿಕೊಂಡು ಹಣೆಬರೆಹ ಬರೆಯುತ್ತಿರುವ ಭಾರತೀಯ ಸಮಾಜದಲ್ಲಿ ಇಂತಹ ತೀರ್ಮಾನವೊಂದು ಪ್ರಗತಿಪರ ಹೌದು. ಆದರೆ ಕೇವಲ ಜಾತಿವಾಚಕಗಳನ್ನು ಕೈಬಿಡುವುದಕ್ಕೆ ಸೀಮಿತ ಆಗುವ ಅದರ ಸಾಧಕ ಬಾಧಕಗಳು ಶೂನ್ಯವೇ ಸರಿ. ಇದೀಗ ಆಗಿರುವುದೂ ಅದೇ. ಈ ತೀರ್ಮಾನವನ್ನು 24 ಹಳ್ಳಿಗಳ ಬಲಿಷ್ಠ ಜಾತಿಗಳಾಗಲೀ, ಕೆಳಜಾತಿಗಳಾಗಲೀ ಲೆಕ್ಕಕ್ಕೆ ತೆಗೆದುಕೊಂಡಿಲ್ಲ.

ಕೃಷಿಯನ್ನು ಅವಲಂಬಿಸಿದ ಉತ್ತರಭಾರತದ ಜಾಟ್ ಸಮುದಾಯವನ್ನು ಕರ್ನಾಟಕದ ಹಾಸನ- ಮಂಡ್ಯ-ಮೈಸೂರು ಜಿಲ್ಲೆಗಳ ಒಕ್ಕಲಿಗ ಸಮುದಾಯಕ್ಕೂ, ಉತ್ತರ ಕರ್ನಾಟಕದ ಜಮೀನುದಾರಿ ಲಿಂಗಾಯತ ಸಮುದಾಯಕ್ಕೂ ಹೋಲಿಸಬಹುದು. ಒಕ್ಕಲಿಗರಂತೆ ಬಹುಪಾಲು ಜಾಟರು ಮಾಂಸಾಹಾರಿಗಳೂ ಹೌದು.

ಜಿಂದ್ ಜಿಲ್ಲೆಯ ಈ 24 ಹಳ್ಳಿಗಳಲ್ಲಿ ಜಾಟರೇ ಬಹುಸಂಖ್ಯಾತರು. ಅವರ ನಂತರದ ಸ್ಥಾನ ಬ್ರಾಹ್ಮಣರದು. ದಲಿತರು ಹಿಂದುಳಿದವರು ಇವರ ಜಮೀನುಗಳಲ್ಲಿ ಕೂಲಿ ನಾಲಿ ಮಾಡಿ ಬದುಕುವವರು. ಮೀಸಲಾತಿಯ ಕಾರಣ ಕೆಳಜಾತಿಗಳವರು ಬಲಿಷ್ಠ ಜಾತಿಗಳಿಗಿಂತ ಹೆಚ್ಚು ಮುಂದುವರೆದಿದ್ದಾರೆಂಬ ತಪ್ಪು ತಿಳಿವಳಿಕೆ ಈ ಸೀಮೆಯಲ್ಲೂ ನೆಲೆಸಿದೆ. ಹರಿಯಾಣ ಜಾಟರೂ ಮೀಸಲಾತಿ ಬೇಕೆಂದು ಉಗ್ರ ಚಳವಳಿ ನಡೆಸಿದ್ದುಂಟು. ದಲಿತರು ಮತ್ತು ಮೇಲ್ಜಾತಿಗಳು ಎಂದಿಗೂ ಸಮಾನ ಅಲ್ಲ. ಜಾತಿಗಳ ಸೃಷ್ಟಿಯಲ್ಲಿ ರೂಪಿಸಲಾಗಿರುವ ಈ ಮೇಲು ಕೀಳು ಸ್ವಾಭಾವಿಕವಾದದ್ದು ಎಂಬುದು ಇಲ್ಲಿನ ಬಲಿಷ್ಠ ಜಾತಿಗಳಲ್ಲಿ ನೆಲೆಸಿರುವ ಸರ್ವೇಸಾಧಾರಣ ಅಭಿಪ್ರಾಯ.

ಜಾತಿಸೂಚಕಗಳನ್ನು ಕೈಬಿಟ್ಟರೂ ಅಷ್ಟೇ, ಇಟ್ಟುಕೊಂಡರೂ ಅಷ್ಟೇ. ಅದರಿಂದ ನಮ್ಮ ಬದುಕುಗಳಲ್ಲಿ ದೊಡ್ಡ ವ್ಯತ್ಯಾಸವೇನೂ ಆಗುವುದಿಲ್ಲ ಎಂಬುದು ಈ ಸೀಮೆಯ ದಲಿತರ ಅನಿಸಿಕೆ. ನಮಗೆ ಬೇಕಾದದ್ದೆಲ್ಲ ಉಳುಮೆ ಮಾಡಿ ಉಣ್ಣಲು ತುಸು ಜಮೀನು, ಕೈಯಲ್ಲಿ ಒಂದಿಷ್ಟು ಹಣ. ವಾಲ್ಮೀಕಿ- ಚಮಾರ್ ಎಂಬ ಜಾತಿ ಸೂಚಕ ಕೈ ಬಿಟ್ಟರೆ ಅಥವಾ ಇಟ್ಟುಕೊಂಡರೆ ನಮಗೆ ಬೇಕಾದದ್ದು ಸಿಕ್ಕುಬಿಡುತ್ತದೆಯೇ ಎಂಬುದು ಅವರ ಪ್ರಶ್ನೆ.

ಜಾತಿ ಸೂಚಕ ಪದವನ್ನು ಕೈಬಿಟ್ಟೆವೆಂದು ನಾವು ದಲಿತರೊಂದಿಗೆ ವೈವಾಹಿಕ ಸಂಬಂಧ ಇಟ್ಟುಕೊಳ್ಳುವುದು ಅಸಾಧ್ಯ ಎಂಬುದು ಜಾಟರ ನಿಲುವು.

ಬಂಡೆದ್ದಳು ಬಿಜನೂರಿನ ವಧು!

ಸಾಂಧರ್ಭಿಕ ಚಿತ್ರ

ಉತ್ತರಪ್ರದೇಶದ ಬಿಜನೂರು ದೆಹಲಿಯಿಂದ 160 ಕಿ.ಮೀ.ಗಳ ಜಿಲ್ಲಾ ಕೇಂದ್ರ. ಅಲ್ಲಿಂದ 16 ಕಿ.ಮೀ.ದೂರದ ಗ್ರಾಮ ನಂಗಲ್ ಜಾಟ್. ಮೊನ್ನೆ ಅಲ್ಲೊಂದು ಮದುವೆ. ವರದಕ್ಷಿಣೆಗಾಗಿ ಸತಾಯಿಸಿ, ಬೆದರಿಸಿ, ತಡವಾಗಿ ಬಂದ ವರನನ್ನೂ, ದಿಬ್ಬಣವನ್ನು ಕೂಡಿ ಹಾಕಿ ಥಳಿಸಲಾಯಿತು. ಕಡೆಗೆ ಸಂಧಾನ ನಡೆದು ಹುಡುಗಿಯ ತಂದೆ ತಾಯಿ ಮದುವೆ ಕಾರ್ಯ ಮುಂದುವರೆಸಲು ಒಪ್ಪಿದರೂ, ಮದುವಣಗಿತ್ತಿ ವರನನ್ನು ತಿರಸ್ಕರಿಸಿದಳು. ನೆರೆಹೊರೆಯ ಹುಡುಗನೊಬ್ಬನನ್ನು ವರಿಸಿದಳು.

ಇಂತಹ ಸಾವಿರಾರು ಘಟನೆಗಳು ಭಾರತೀಯ ವಿವಾಹ ಪದ್ಧತಿಯಲ್ಲಿ ಜರುಗಿವೆ. ಮುಂದೆಯೂ ಜರುಗುತ್ತಲೇ ಇರುತ್ತವೆ. ಈ ಚರ್ಯೆಗೆ ಉತ್ತರ ಭಾರತ ಅಥವಾ ದಕ್ಷಿಣ ಭಾರತವೆಂಬ ಭೇದ ಭಾವ ಇಲ್ಲ. ವಿಧಿ ವಿಧಾನಗಳು, ಆಚರಣೆ ಸಂಪ್ರದಾಯಗಳು ಭಿನ್ನವಾದರೂ ಮನುಷ್ಯ ಸ್ವಭಾವ ಒಂದೇ.

ತಿಂಗಳ ಹಿಂದೆ ಸಾಮೂಹಿಕ ವಿವಾಹದಲ್ಲಿ ತಾಳಿ ಕಟ್ಟಿದ್ದ ಈ ಜೋಡಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಲು ನಿಶ್ಚಯಿಸಲಾಗಿತ್ತು. ಹೀಗಾಗಿ ಹುಡುಗಿಯನ್ನು ಗಂಡನ ಮನೆಗೆ ಇನ್ನೂ ಕಳಿಸಿಕೊಟ್ಟಿರಲಿಲ್ಲ. ಹುಡುಗ ಅದೇ ಬಿಜನೂರಿನ ಧಾಮಪುರ ಟೌನಿನವನು. ಹುಡುಗಿಯ ಊರು ನಂಗಲ್ ಜಾಟ್ ನಲ್ಲಿ ಮದುವೆ ನಡೆಯಬೇಕಿತ್ತು. ದಿನಾಂಕ ಹತ್ತಿರ ಬರುತ್ತಿದ್ದಂತೆ ವರದಕ್ಷಿಣೆ ಕುರಿತು ಎರಡೂ ಕುಟುಂಬಗಳ ನಡುವೆ ಕಾವೇರಿದ ವಾಗ್ವಾದ ನಡೆಯಿತು. ಮೋಟರ್ ಸೈಕಲ್ ಮತ್ತು ನಗದಿನ ಬೇಡಿಕೆಯನ್ನು ಪೂರೈಸುವಷ್ಟು ಶಕ್ತಿ ವಧುವಿನ ತಂದೆ ತಾಯಿಗೆ ಇರಲಿಲ್ಲ. ಕೊಡದೆ ಹೋದರೆ ಪರಿಣಾಮ ಎದುರಿಸಬೇಕಾದೀತು ಎಂದು ವರನ ಕಡೆಯವರು ಎಚ್ಚರಿಕೆ ನೀಡಿದ್ದರು. ಚೌಕಾಶಿಯ ಹಗ್ಗಜಗ್ಗಾಟದ ಮನಸ್ತಾಪದಲ್ಲಿ ಅಪರಾಹ್ಣ ಎರಡಕ್ಕೆ ನಂಗಲ್ ಜಾಟ್ ತಲುಪಬೇಕಿದ್ದ ವರನ ದಿಬ್ಬಣ ತಡ ರಾತ್ರಿ ಬಂದಿಳಿಯಿತು.

ಆಕ್ರೋಶಗೊಂಡಿದ್ದ ವಧುವಿನ ಕಡೆಯವರು ವರನೂ ಸೇರಿದಂತೆ ಇಡೀ ದಿಬ್ಬಣವನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿ ಥಳಿಸಿತು. ವಧುವಿಗೆಂದು ತಂದಿದ್ದ ಒಡವೆಗಳನ್ನೂ ಕಿತ್ತುಕೊಂಡಿತು ಎಂಬುದು ವರನ ಆರೋಪ. ಎರಡೂ ಕುಟುಂಬಗಳು ಪೊಲೀಸರ ಮಧ್ಯಸ್ಥಿಕೆಯಲ್ಲಿ ರಾಜೀ ಮಾಡಿಕೊಂಡವು. ಆದರೆ ವಧುವಿನ ಮನಸ್ಸು ಮುರಿದು ಹೋಗಿತ್ತು. ಆ ವರನನ್ನು ವರಿಸಲು ವಧು ತಯಾರಿರಲಿಲ್ಲ. ಈ ಮದುವೆ ಮುರಿದುಬಿದ್ದ ಮರುದಿನವೇ ತನ್ನದೇ ನೆರೆಹೊರೆಯ ಯುವಕನನ್ನು ವರಿಸಿದಳ ಆಕೆ.

ಮೈಕಾಸುರನ ಗಂಟಲು ಅದುಮಿತು ಆಪ್ ಸರ್ಕಾರ!

ಸಾಂಧರ್ಭಿಕ ಚಿತ್ರ

ಮದುವೆ, ಧಾರ್ಮಿಕ ಕಾರ್ಯಗಳು, ಆಚರಣೆಗಳು, ಸಂತೋಷ ಕೂಟಗಳಲ್ಲಿ ತಡರಾತ್ರಿಯ ತನಕ ಅಬ್ಬರದ ಸಂಗೀತ ಹಾಕಿ ನೆರೆಹೊರೆಗೆ ಆಗುವ ಕಿರುಕುಳ ಚಿತ್ರಹಿಂಸೆಯನ್ನು ಲೆಕ್ಕಕ್ಕೇ ಇಡದಿರುವುದು ಭಾರತೀಯ ಸಭ್ಯತೆಯ ಮುಖ್ಯ ವಿರೂಪಗಳಲ್ಲೊಂದು. ಸರ್ಕಾರಗಳು ಸಾಮಾನ್ಯವಾಗಿ ಈ ಕಿರುಕುಳದಿಂದ ಜನರನ್ನು ಪಾರು ಮಾಡುವ ಗೊಡವೆಗೇ ಹೋಗುವುದಿಲ್ಲ. ರಾತ್ರಿ ಹತ್ತರ ನಂತರ ಅಬ್ಬರದ ಧ್ವನಿವರ್ಧಕ ಬಳಕೆ ಸಲ್ಲದೆಂಬ ನಿಯಮಗಳತ್ತ ಪೊಲೀಸರದು ಜಾಣ ಕುರುಡು.

ತನಗಿರುವ ಹಲವು ಮಿತಿಗಳ ನಡುವೆ ದೆಹಲಿಯ ಆಮ್ ಆದ್ಮೀ ಪಾರ್ಟಿ ಸರ್ಕಾರ ಜನಪರ ಕೆಲಸ ಮಾಡುತ್ತ ಬಂದಿದೆ. ಚುನಾವಣೆಗಳು ಹತ್ತಿರ ಬಂದಂತೆ ಇದೀಗ ಸಾರ್ವಜನಿಕ ಸ್ಥಳಗಳಲ್ಲಿ ಪುಕ್ಕಟೆ ವೈ-ಫೈ ಸೇರಿದಂತೆ ಹಲವು ಕ್ರಮಗಳ ಜಾರಿಯನ್ನು ಸಾರತೊಡಗಿದೆ.

ನೆನ್ನೆ ಪ್ರಕಟಿಸಿರುವ ಬಿಸಿಬಿಸಿ ಉಪಕ್ರಮ ಮೈಕಾಸುರನ ಹಾವಳಿಗೆ ಕಡಿವಾಣ ಹಾಕುವ ಪ್ರಯತ್ನಕ್ಕೆ ಸಂಬಂಧಿಸಿದ್ದು. ಇನ್ನು ಮೇಲೆ ಸಾರ್ವಜನಿಕ ಧ್ವನಿವರ್ಧಕ ಬಳಕೆಗೆ ಸದ್ದು ನಿಯಂತ್ರಣ ಸಾಧನವನ್ನು ಅಳವಡಿಸಬೇಕು. ಈ ನಿರ್ಧಾರ ಜಾರಿಗೆ ಬರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು, ದೆಹಲಿ ಪೊಲೀಸರು, ಮಹಾನಗರಪಾಲಿಕೆಗಳಿಗೆ ಅಧಿಸೂಚನೆಗಳನ್ನು ರವಾನಿಸಿದೆ. ಚುನಾವಣೆ ಪ್ರಚಾರಕ್ಕೂ ಈ ಕ್ರಮ ಅನ್ವಯಿಸಲಿದೆ.

ಸದ್ದು ನಿಯಂತ್ರಣ ಸಾಧನ ನಮ್ಮ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳಿಗೆ ಅಳವಡಿಸಲಾಗಿರುವ ವೇಗ ನಿಯಂತ್ರಕ ಸಾಧನದಂತೆ ಕೆಲಸ ಮಾಡುತ್ತದೆ. ಸದ್ದು ನಿಯಂತ್ರಣ ಸಾಧನವನ್ನು ಧ್ವನಿವರ್ಧಕ ವ್ಯವಸ್ಥೆಯಲ್ಲಿ ಅಳವಡಿಸಬೇಕು. ಹೊಮ್ಮುವ ಸದ್ದಿನ ಡೆಸಿಬಲ್ ಮಟ್ಟವನ್ನು ಈ ಸಾಧನ ಅಳೆಯುತ್ತದೆ. ಶಬ್ದಮಾಲಿನ್ಯ ಮಿತಿಗೆ ತಕ್ಕಂತೆ ಸಾಧನದಲ್ಲಿ ಡೆಸಿಬಲ್ ಮಟ್ಟವನ್ನು ಮೊದಲೇ ನಿಗದಿ ಮಾಡಲಾಗಿರುತ್ತದೆ. ಅದನ್ನು ವ್ಯತ್ಯಾಸಗೊಳಿಸಲು ಬರುವುದಿಲ್ಲ. ಧ್ವನಿವರ್ಧಕ ವ್ಯವಸ್ಥೆಯಿಂದ ಹೊಮ್ಮುವ ಸದ್ದು ನಿಗದಿತ ಡೆಸಿಬಲ್ ಮಟ್ಟವನ್ನು ಮೀರುತ್ತಿದ್ದಂತೆ ಸರಿಪಡಿಸಲು ಹತ್ತು ಸೆಕೆಂಡುಗಳ ಕಾಲಾವಕಾಶವಿರುತ್ತದೆ. ಸದ್ದನ್ನು ತಗ್ಗಿಸದೆ ಹೋದರೆ ಧ್ವನಿವರ್ಧಕ ವ್ಯವಸ್ಥೆ ತಾನಾಗಿಯೇ ಬಂದ್ ಆಗುತ್ತದೆ. ಅರ್ಥಾತ್ ಸದ್ದು ನಿಯಂತ್ರಣ ಸಾಧನವು ಧ್ನನಿವರ್ಧಕ ವ್ಯವಸ್ಥೆಗೆ ವಿದ್ಯುಚ್ಛಕ್ತಿ ಪೂರೈಕೆಯನ್ನು ಕಡಿತಗೊಳಿಸುತ್ತದೆ. ಹೀಗಾಗಿ ಕಿರುಚುವ ಧ್ವನಿವರ್ಧಕ ಹಠಾತ್ತನೆ ಬಾಯಿ ಮುಚ್ಚಿಕೊಳ್ಳುತ್ತದೆ. ರೇಜಿಗೆ ಹುಟ್ಟಿಸುವ ಅತಿಶಬ್ದ ಹಠಾತ್ತನೆ ನಿಶ್ಯಬ್ದವಾದರೆ ಅದೆಷ್ಟು ನೆಮ್ಮದಿ!

ಶಬ್ದ ಮಾಲಿನ್ಯವು ನಿತ್ಯ ಬದುಕಿನ ಗುಣಮಟ್ಟವನ್ನೇ ಹಾಳುಗೆಡವಿರುವುದಲ್ಲದೆ, ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಿರುವುದು ಜನಜನಿತ ಸತ್ಯ. ಜನವಸತಿ ಪ್ರದೇಶಗಳಲ್ಲಿ ಶಬ್ದ ಮಿತಿ ಹಗಲು 55 ಡೆಸಿಬಲ್ ಮಟ್ಟವನ್ನು ಮತ್ತು ರಾತ್ರಿ 45 ಡೆಸಿಬಲ್ ಮಟ್ಟವನ್ನು ಮೀರಕೂಡದು. ಕೈಗಾರಿಕೆ ಪ್ರದೇಶಗಳಲ್ಲಿ ಈ ಮಿತಿಯನ್ನು 75 ಮತ್ತು 70 ಡೆಸಿಬಲ್ ಮಟ್ಟಕ್ಕೆ ನಿಗದಿ ಮಾಡಲಾಗಿದೆ. ಖಾಸಗಿಯಾಗಲಿ, ಸರ್ಕಾರಿಯೇ ಇರಲಿ, ಯಾವುದೇ ಸಾರ್ವಜನಿಕ ಶ್ರವಣ ವ್ಯವಸ್ಥೆಯೂ ಸದ್ದು ನಿಯಂತ್ರಣ ಸಾಧನ ಅಳವಡಿಸದೆ ಕಾರ್ಯ ನಿರ್ವಹಿಸುವಂತಿಲ್ಲ ಎಂದು ದೆಹಲಿ ಸರ್ಕಾರ ವಿಧಿಸಿದೆ. ಸಾರ್ವಜನಿಕರು ಆನ್ ಲೈನ್ ದೂರು ನೀಡಬಹುದಾದ ಮತ್ತು ಟೆಲಿಫೋನ್ ಮೂಲಕ ದೂರಬಹುದಾದ ಸೌಲಭ್ಯ ಕಲ್ಪಿಸಲಾಗಿದೆ. ಈ ನಿಯಮ ಉಲ್ಲಂಘಿಸಿದವರು ಹತ್ತು ಸಾವಿರ ರುಪಾಯಿ ದಂಡ ತೆರಬೇಕು. ಜೊತೆಗೆ ಧ್ವನಿವರ್ಧಕ ವ್ಯವಸ್ಥೆಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವುದು. ಡೀಸೆಲ್ ಜನರೇಟರ್ ಬಳಸಿದರೆ ಒಂದು ಲಕ್ಷ ರುಪಾಯಿ ಹೆಚ್ಚುವರಿ ದಂಡ ಶುಲ್ಕ. ಅದನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

ಆದರೆ ಕೈಗಾರಿಕೀಕರಣದ ನಂತರದ ರಭಸದ ಆಧುನಿಕ ಬದುಕು ಮನುಷ್ಯನನ್ನು ಶಬ್ದ ಮಾಲಿನ್ಯ ಮತ್ತು ಬೆಳಕಿನ ಮಾಲಿನ್ಯದಲ್ಲಿ ಮುಳುಗಿಸಿಬಿಟ್ಟಿದೆ. ಮನೆಯೊಳಗಿದ್ದಾಗ, ಹೊರಗಿದ್ದಾಗ, ರಸ್ತೆಯ ಮೇಲೆ ಶಬ್ದವೆಂಬುದು ಎಡೆಬಿಡದೆ ಕಾಡುವ ಚಿತ್ರಹಿಂಸೆ. ರಾತ್ರಿ ಮಲಗಿದ ನಂತರ ಒಂದು ಅಥವಾ ಎರಡು ಗಂಟೆಯ ನಂತರ ಬೆಳಗಿನ ಐದರ ತನಕ ಎರಡು ಮೂರು ತಾಸುಗಳಷ್ಟೇ ಈ ಹಿಂಸೆಯಿಂದ ಬಿಡುಗಡೆ. ಉಳಿದಂತೆ ಶಬ್ದದ ತರಂಗಗಳು ದೇಹ ಮನಸುಗಳನ್ನು ಅಪ್ಪಳಿಸುವುದು ನಿಲ್ಲುವುದೇ ಇಲ್ಲ. ಹೀಗಾಗಿ ಕೇಜ್ರೀವಾಲ್ ಸರ್ಕಾರದ ಈ ಕ್ರಮ ಒಂದು ಸಣ್ಣಾತಿಸಣ್ಣ ನೆಮ್ಮದಿ. ಆದರೆ ಜನ ಅದನ್ನು ಪಾಲಿಸಬೇಕಲ್ಲ? ಇಲ್ಲವಾದರೆ ಈ ಕಾನೂನು ಕೂಡ ಹೊಳೆಯ ಹೋಮ ಆಗುವುದು ನಿಶ್ಚಿತ

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

LIVE: Congress Party briefing by Shri Rahul Gandhi at AICC HQ, New Delhi.
ಇದೀಗ

LIVE: Congress Party briefing by Shri Rahul Gandhi at AICC HQ, New Delhi.

by ಪ್ರತಿಧ್ವನಿ
March 25, 2023
ಸ್ಯಾಂಡಲ್ವುಡ್ ನಟ ಚೇತನ್ ಅಹಿಂಸಾ ಬಂಧನ..!
Top Story

ಸ್ಯಾಂಡಲ್ವುಡ್ ನಟ ಚೇತನ್ ಅಹಿಂಸಾ ಬಂಧನ..!

by ಪ್ರತಿಧ್ವನಿ
March 21, 2023
R. Ashoka ಕಾಂಗ್ರೆಸ್ ಪಕ್ಷವನ್ನು ನಿರ್ಮಾ ನಿರ್ಮಾ ಸರ್ಪ್ ಹಾಕಿ ತೊಳೆದು ಹಾಕಬೇಕು..!
ಇದೀಗ

R. Ashoka ಕಾಂಗ್ರೆಸ್ ಪಕ್ಷವನ್ನು ನಿರ್ಮಾ ನಿರ್ಮಾ ಸರ್ಪ್ ಹಾಕಿ ತೊಳೆದು ಹಾಕಬೇಕು..!

by ಪ್ರತಿಧ್ವನಿ
March 20, 2023
CONGRESS | ದಲಿತರಿಗೆ ನಾವು ರಕ್ಷಣೆ ಕೊಡ್ತೀವಿ ಎಂದು ಭಾಷಣ ಬಿಗಿತ್ತಿದ್ದ ಬಿಜೆಪಿಗರೇ… ಇದೇನಾ ನಿಮ್ಮ ರಕ್ಷಣೆ
ಇದೀಗ

CONGRESS | ದಲಿತರಿಗೆ ನಾವು ರಕ್ಷಣೆ ಕೊಡ್ತೀವಿ ಎಂದು ಭಾಷಣ ಬಿಗಿತ್ತಿದ್ದ ಬಿಜೆಪಿಗರೇ… ಇದೇನಾ ನಿಮ್ಮ ರಕ್ಷಣೆ

by ಪ್ರತಿಧ್ವನಿ
March 23, 2023
ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ಆಟೋ ಚಾಲಕರ ಜತೆ ಡಿ.ಕೆ.ಶಿವಕುಮಾರ್ ಸಂವಾದ
Top Story

ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ಆಟೋ ಚಾಲಕರ ಜತೆ ಡಿ.ಕೆ.ಶಿವಕುಮಾರ್ ಸಂವಾದ

by ಪ್ರತಿಧ್ವನಿ
March 24, 2023
Next Post
ಸಿಎಂ ಯಡಿಯೂರಪ್ಪ ಕುರ್ಚಿ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ

ಸಿಎಂ ಯಡಿಯೂರಪ್ಪ ಕುರ್ಚಿ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ

ಉಪಚುನಾವಣೆ ಫಲಿತಾಂಶದಿಂದ ಬಿಜೆಪಿಸರ್ಕಾರ ಸುಭದ್ರ

ಉಪಚುನಾವಣೆ ಫಲಿತಾಂಶದಿಂದ ಬಿಜೆಪಿಸರ್ಕಾರ ಸುಭದ್ರ, ಕಾಂಗ್ರೆಸ್-ಜೆಡಿಎಸ್ ಅಭದ್ರ

ಶಾಲಾ ಶಿಕ್ಷಣಕ್ಕೆ 3

ಶಾಲಾ ಶಿಕ್ಷಣಕ್ಕೆ 3,000 ಕೋಟಿ ರುಪಾಯಿ ಕಡಿತ ಮಾಡಿದ ನರೇಂದ್ರ ಮೋದಿ ಸರ್ಕಾರ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist