ಚೀನಾದ ದ್ವೀಪನಗರ ಹಾಂಗ್ ಕಾಂಗ್. ಕಳೆದ ಆರು ತಿಂಗಳುಗಳಿಂದ ವಿಶ್ವದ ಗಮನ ಸೆಳೆಯತೊಡಗಿದೆ. ಅಲ್ಲಿ ನಡೆದಿರುವ ದೈತ್ಯ ಜನಪ್ರತಿಭಟನೆಗಳು ಭಾರೀ ಸುದ್ದಿ ಮಾಡಿವೆ. ಕಳೆದ ಜೂನ್ 16ರಂದು ಹಾಂಗ್ ಕಾಂಗ್ ನ ಬೀದಿಗಳಲ್ಲಿ ನದಿಗಳಂತೆ ಹರಿದು ಬಂದ ಜನಪ್ರತಿಭಟನೆಯಲ್ಲಿ ಪಾಲ್ಗೊಂಡವರ ಸಂಖ್ಯೆ ಪೂರಾ 20 ಲಕ್ಷ!
ಮೊನ್ನೆ ಇಲ್ಲಿನ ಜಿಲ್ಲಾ ಪರಿಷತ್ತುಗಳಿಗೆ ನಡೆದ ಮತದಾನದಲ್ಲೂ ಈ ಪ್ರತಿಭಟನೆ ಸ್ಫೋಟಿಸಿದೆ. ಜನತಂತ್ರ ವ್ಯವಸ್ಥೆಯ ಜಾರಿಗೆ ಆಗ್ರಹಿಸಿರುವ ಬೆಳವಣಿಗೆ ವರದಿಯಾಗಿದೆ.
1989ರಲ್ಲಿ ಜನತಂತ್ರ ಬಯಸಿ ಬೀಜಿಂಗ್ ನಲ್ಲಿ ಇಂತಹುದೇ ಭಾರೀ ಆಂದೋಲನ ನಡೆದಿತ್ತು. ವಿದ್ಯಾರ್ಥಿಗಳೇ ಅದರ ಕೇಂದ್ರಬಿಂದುವಾಗಿದ್ದರು. ತಿಂಗಳುಗಟ್ಟಲೆ ನಡೆದ ಈ ಪ್ರದರ್ಶನವನ್ನು ದಮನ ಮಾಡಲು ಚೀನಾ ಸರ್ಕಾರ ತನ್ನ ಸೇನೆಯನ್ನು ನಿಯುಕ್ತಿ ಮಾಡಿತ್ತು. ಸಾವಿರಾರು ವಿದ್ಯಾರ್ಥಿಗಳು ಈ ದಮನಕ್ಕೆ ಬಲಿಯಾಗಿದ್ದರು. ಲಕ್ಷಾಂತರ ಮಂದಿ ಗಾಯಗೊಂಡಿದ್ದರು. ಟಿಯಾನನ್ಮನ್ ಚೌಕದ ನರಮೇಧ ಎಂದೇ ಈ ಘಟನೆ ಇತಿಹಾಸದಲ್ಲಿ ದಾಖಲಾಗಿದೆ.
ಹಾಂಗ್ ಕಾಂಗ್ ನಗರದ ಹಾಲಿ ಪ್ರತಿಭಟನೆಗಳು ಟಿಯಾನನ್ಮನ್ ಆಂದೋಲನವನ್ನು ನೆನಪು ಮಾಡಿವೆ.
ಕಳೆದ ಭಾನುವಾರ ನಗರದ 18 ಜಿಲ್ಲಾ ಪರಿಷತ್ತುಗಳಿಗೆ ಜರುಗಿದ ಮತದಾನವನ್ನು ಹಾಂಗ್ ಕಾಂಗ್ ಜನರು ಚೀನಾ ಮುಖ್ಯನಾಡಿನ ದಮನಕಾರಿ ನೀತಿಯ ವಿರುದ್ಧದ ಜನಮತಗಣನೆಯಾಗಿ ಪರಿವರ್ತಿಸಿಕೊಂಡಿದ್ದಾರೆ. 18 ರ ಪೈಕಿ 17 ಪರಿಷತ್ತುಗಳು ಜನತಂತ್ರ ವ್ಯವಸ್ಥೆಯ ಪರ ದನಿಯೆತ್ತಿರುವ ಪಕ್ಷಗಳ ವಶವಾಗಿವೆ. 452 ಸೀಟುಗಳ ಪೈಕಿ 392 ಸೀಟುಗಳು ಪ್ರತಿಭಟನಾಕಾರರ ಪಾಲಾಗಿವೆ. ಚುನಾವಣೆಗೆ ಮುನ್ನ 292 ಸೀಟುಗಳು ಚೀನಾ ಮುಖ್ಯನಾಡಿನ ಪರವಾಗಿರುವ ಪಕ್ಷಗಳ ನಿಯಂತ್ರಣದಲ್ಲಿದ್ದವು. ಇದೀಗ ಈ ಸಂಖ್ಯೆ 60ಕ್ಕೆ ಕುಸಿದಿದೆ.
ಮಾಮೂಲಾಗಿ ಈ ಚುನಾವಣೆಗಳಿಗೆ ಯಾವುದೇ ಮಹತ್ವ ಇಲ್ಲ. ಬೀದಿ ದೀಪ, ಪಾರ್ಕಿಂಗ್, ಸಂಚಾರಿ ಸಂಕೇತ ದೀಪಗಳು, ಬಸ್ ನಿಲ್ದಾಣಗಳನ್ನು ನಿರ್ಮಿಸುವ, ಕಸ ಸಂಗ್ರಹಿಸುವ ಮುಂತಾದ ಪೌರ ಸೌಲಭ್ಯಗಳ ವಿನಾ ಬೇರೆ ಯಾವ ಅಧಿಕಾರವೂ ಈ ಪರಿಷತ್ತುಗಳಿಗೆ ಇಲ್ಲ. ಆದರೆ ಇಲ್ಲಿ ಎಡೆಬಿಡದೆ ನಡೆದಿರುವ ಲಕ್ಷಾಂತರ ಜನರು ಭಾಗವಹಿಸುವ ಬೀದಿ ಪ್ರತಿಭಟನೆಗಳು, ಜನತೆ ಮತ್ತು ಪೊಲೀಸರ ನಡುವಣ ಘರ್ಷಣೆಯ ಹಿನ್ನೆಲೆಯಲ್ಲಿ ಈ ಚುನಾವಣೆಗಳು ಅಂತಾರಾಷ್ಟ್ರೀಯ ಗಮನ ಸೆಳೆದಿವೆ.
ಕೊಲೆ, ಲೈಂಗಿಕ ಅತ್ಯಾಚಾರದಂತಹ ಅಪರಾಧಗಳ ಶಂಕಿತರನ್ನು ವಿಚಾರಣೆಗಾಗಿ ಚೀನಾ ಮುಖ್ಯನಾಡಿಗೆ ರವಾನಿಸಲು ಹಾಂಗ್ ಕಾಂಗ್ ಕಾನೂನಿಗೆ ಮಾಡಿದ ತಿದ್ದುಪಡಿಗಳು ಜನಪ್ರತಿಭಟನೆಯನ್ನು ಭುಗಿಲೆಬ್ಬಿಸಿದ್ದವು. 2017ರಲ್ಲಿ ಚೀನಾ ಮುಖ್ಯನಾಡಿನ ಬೆಂಬಲದೊಂದಿಗೆ ಹಾಂಗ್ ಕಾಂಗ್ ನ ಮುಖ್ಯ ಕಾರ್ಯನಿರ್ವಾಹಕರಾಗಿ ಅಧಿಕಾರ ವಹಿಸಿಕೊಂಡ ಕ್ಯಾರೀ ಲ್ಯಾಮ್ ಈ ತಿದ್ದುಪಡಿಗಳ ವಿಧೇಯಕದ ಅಂಗೀಕಾರಕ್ಕೆ ಚಾಲನೆ ನೀಡಿದ್ದರು.
ಬದಲಾಯಿಸಿದ ಕಾನೂನನ್ನು ಹಾಂಗ್ ಕಾಂಗ್ ನಲ್ಲಿರುವ ತನ್ನ ರಾಜಕೀಯ ಎದುರಾಳಿಗಳ ವಿರುದ್ಧ ಅಸ್ತ್ರವಾಗಿ ಬಳಸಲಿದೆ ಎಂಬುದು ಪ್ರತಿಭಟನೆಯ ಹಿಂದಿನ ಶಂಕೆ. ಚೀನಾ ಮುಖ್ಯನಾಡಿನ ನ್ಯಾಯಾಂಗ ವ್ಯವಸ್ಥೆಯನ್ನು ಕಮ್ಯುನಿಸ್ಟ್ ಸರ್ಕಾರವೇ ನೇರವಾಗಿ ನಿಯಂತ್ರಿಸುತ್ತದೆ. ಹೀಗಾಗಿ ರವಾನಿತ ಶಂಕಿತರನ್ನು ಚಿತ್ರಹಿಂಸೆಗೆ ಗುರಿ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಈಗಾಗಲೆ ಕುಸಿಯತೊಡಗಿರುವ ಹಾಂಗ್ ಕಾಂಗ್ ನ ಸ್ವಾಯತ್ತತೆಗೆ ಈ ತಿದ್ದುಪಡಿ ವಿಧೇಯಕ ಮತ್ತೊಂದು ದೊಡ್ಡ ಹೊಡೆತ ನೀಡಲಿದೆ ಎಂಬುದು ಪ್ರತಿಭಟನಾಕಾರರ ಕಳವಳ.
ಮೂರು ತಿಂಗಳ ಕಾಲ ಜನಪ್ರತಿಭಟನೆಗಳ ನಂತರ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದ ಉದ್ದೇಶಿತ ಕಾನೂನು ತಿದ್ದುಪಡಿ ವಿಧೇಯಕವನ್ನು ಚೀನಾ ಸರ್ಕಾರ ಕಳೆದ ಸೆಪ್ಟಂಬರ್ ಮೊದಲ ವಾರ ವಾಪಸು ಪಡೆಯಿತು. ವಾಪಸು ತೆಗೆದುಕೊಳ್ಳುವಲ್ಲಿ ಉಂಟಾದ ವಿಳಂಬವು ಆಡಳಿತದ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು. ಮೂಲಭೂತ ರಾಜಕೀಯ ಸುಧಾರಣೆಗಳು ಹಾಗೂ ಪ್ರತಿಭಟನೆಕಾರರ ಮೇಲೆ ಪೊಲೀಸ್ ಕ್ರೌರ್ಯದ ವಿಚಾರಣೆಯ ಬೇಡಿಕೆಗಳೂ ಹೊಸದಾಗಿ ಸೇರಿಕೊಂಡವು. ಇದೀಗ ಪ್ರಜಾತಂತ್ರ ವ್ಯವಸ್ಥೆಯ ಬೇಕೆಂಬ ಕೂಗೆದ್ದಿದೆ.
ಪೊಲೀಸ್ ದೌರ್ಜನ್ಯಗಳ ಬಗೆಗೆ ಸ್ವತಂತ್ರ ತನಿಖೆ, ಬಂಧಿಸಲಾದ ಪ್ರತಿಭಟನಾಕಾರರಿಗೆ ಕ್ಷಮಾದಾನ, ಎಲ್ಲ ಶಾಸಕರು ಮತ್ತು ಮುಖ್ಯಕಾರ್ಯನಿರ್ವಾಹಕರ ಹುದ್ದೆಗಳಿಗೆ ನೇರ ಚುನಾವಣೆ ಹಾಗೂ ಪ್ರತಿಭಟನಾಕಾರರ ವಿರುದ್ಧ ದಂಗೆಕೋರರು ಪದಪ್ರಯೋಗವನ್ನು ವಾಪಸು ಪಡೆಯಬೇಕು ಎಂಬುವು ಇತರೆ ನಾಲ್ಕು ಬೇಡಿಕೆಗಳು.
ಭೌಗೋಳಿಕ ವಿಸ್ತೀರ್ಣದಲ್ಲಿ ದೆಹಲಿಗಿಂತ ಸಣ್ಣ ಮಹಾನಗರ ಹಾಂಗ್ ಕಾಂಗ್. ಸುಮಾರು 1,100 ಚದರ ಕಿ.ಮೀ.ಗಳು. ಅಂದಾಜು ಜನಸಂಖ್ಯೆ 74 ಲಕ್ಷ. ಬ್ರಿಟಿಷರ ವಸಾಹತಾಗಿದ್ದ ಹಾಂಗ್ ಕಾಂಗ್ 1997ರಲ್ಲಿ ಕಮ್ಯೂನಿಸ್ಟ್ ಚೀನಾದ ವಶಕ್ಕೆ ಮರಳಿತು. ”ಒಂದು ದೇಶ-ಎರಡು ವ್ಯವಸ್ಥೆ’’ ಎಂಬ ತತ್ವದಡಿ ಅರೆ-ಸ್ವಾಯತ್ತ ಅಧಿಕಾರ ಅನುಭವಿಸುತ್ತ ಬಂದಿದೆ. ಹಾಂಗ್ ಕಾಂಗ್ ಗೆ ತನ್ನದೇ ಪ್ರತ್ಯೇಕ ಕಾಯಿದೆ ಕಾನೂನುಗಳು ಮತ್ತು ನ್ಯಾಯಾಲಯ ವ್ಯವಸ್ಥೆ ಉಂಟು. ಚೀನಾದ ಮುಖ್ಯನಾಡಿನ ಜನರಿಗೆ ಇಲ್ಲದಿರುವ ಅನೇಕ ನಾಗರಿಕ ಹಕ್ಕುಗಳು ಹಾಂಗ್ ಕಾಂಗ್ ನಾಗರಿಕರಿಗೆ ಉಂಟು.
ಈ ದ್ವೀಪ ನಗರವನ್ನು ಬ್ರಿಟಿಷರು 19ನೆಯ ಶತಮಾನದಲ್ಲಿ ತಮ್ಮ ವಾಣಿಜ್ಯ ಹೊರಶಿಬಿರವನ್ನಾಗಿ ಅಭಿವೃದ್ಧಿಪಡಿಸಿದ್ದರು. ಜಾಗತಿಕ ಅಫೀಮು ವ್ಯಾಪಾರದ ವಿಸ್ತರಣೆಗಾಗಿ ವಸಾಹತು ಸಾಮ್ರಾಜ್ಯವು ಚೀನಾವನ್ನು ಕೂಡ ಅದುಮಿಟ್ಟಿದ್ದ ದಿನಗಳು ಅವು. ಬ್ರಿಟಿಷರ ಕೈಯಲ್ಲಿದ್ದ ಈ ನಗರದ ಗುತ್ತಿಗೆಯನ್ನು 1898ರಲ್ಲಿ ಕಿಂಗ್ ಸಂತತಿಯು 99 ವರ್ಷಗಳಿಗೆ ವಿಸ್ತರಿಸಿತ್ತು. ಹೀಗಾಗಿ ಉದಾರವಾದಿ ಆಳ್ವಿಕೆ ಮತ್ತು ಕಾನೂನು ವ್ಯವಸ್ಥೆ, ಸ್ವಾಯತ್ತತೆ ಮುಂತಾದ ಷರತ್ತುಗಳ ಮೇರೆಗೆ ಬ್ರಿಟಿಷರು 1997ರಲ್ಲಿ ಹಾಂಗ್ ಕಾಂಗ್ ನ್ನು ಚೀನೀಯರಿಗೆ ಹಸ್ತಾಂತರಿಸಿದ್ದರು.