ಕಳೆದ ವರ್ಷದ ಭೀಕರ ಮಳೆ ಮತ್ತು ಭೂ ಕುಸಿತಕ್ಕೆ ಸಿಲುಕಿ ಕೊಡಗಿನ ಗ್ರಾಮವೊಂದು ಸಂಪೂರ್ಣ ನಾಶವಾಗಿತ್ತು. ಮಡಿಕೇರಿಗೆ 15 ಕಿಲೋಮೀಟರ್ ದೂರವಿರುವ ಈ ಪುಟ್ಟ ಗ್ರಾಮದಲ್ಲಿ ಸುಮಾರು 35 ಮನೆಗಳಿದ್ದವು .ಬಹುತೇಕ ಕೆಳ ಮದ್ಯಮ ವರ್ಗದವರೇ ಹೆಚ್ಚಿದ್ದ ಊರಿನ ಸಮೀಪವೇ ಇದ್ದ ಗುಡ್ಡವೊಂದು ಭೀಕರ ಮಳೆಗೆ ಕುಸಿದು 15 ಮನೆಗಳು ಒಂದೇ ರಾತ್ರಿಯಲ್ಲಿ ನಾಶವಾದವು. ಇದೇ ಸ್ಥಳದಲ್ಲಿ 8 ಮಂದಿ ಭೂ ಸಮಾಧಿ ಆಗಿದ್ದರು.
ತೀವ್ರ ಬಿರುಗಾಳಿ ಮಳೆಗೆ ಮುನ್ನೆಚ್ಚರಿಕೆಯಾಗಿ ಅನೇಕರು ಕಾಲ್ನಡಿಗೆಯಲ್ಲೇ ಮಳೆಯಲ್ಲಿ ನಡೆದುಕೊಂಡು ಮಡಿಕೇರಿಯಲ್ಲಿ ತೆರೆಯಲಾಗಿದ್ದ ನಿರಾಶ್ರಿತರ ಕೇಂದ್ರವನ್ನು ತಲುಪಿ ಪ್ರಾಣ ಉಳಿಸಿಕೊಂಡರು. ಒಂದು ತಿಂಗಳ ನಂತರ ಮಳೆ ಕಡಿಮೆಯಾಗಿ ಬಿಸಿಲು ಮೂಡುತ್ತಿದ್ದಂತೆ ಇಲ್ಲಿನ ಸಂತ್ರಸ್ಥರಿಗೆ ಎಲ್ಲಿಗೆ ಹೋಗುವುದು ಎಂಬ ಚಿಂತೆ ಆರಂಭವಾಯಿತು. ಮನೆ ಅಲ್ಪ ಸ್ವಲ್ಪ ಹಾನಿಯಾಗಿದ್ದವರು ಮನೆ ಸೇರಿಕೊಂಡರು, ಸರ್ಕಾರ ನೀಡಿದ ಪರಿಹಾರದಿಂದ ರಿಪೇರಿಯನ್ನೂ ಮಾಡಿಕೊಂಡರು. ಆದರೆ ಮನೆಗಳೇ ನೆಲಸಮವಾಗಿದ್ದವರು ಎಲ್ಲಿಗೆ ಹೋಗುವುದು? ನೆಂಟರ ಮನೆಯಲ್ಲಾದರೂ ಎಷ್ಟು ದಿನ ಇರಲಾದೀತು ?
ಈ ರೀತಿ ಸಂತ್ರಸ್ಥರು ಆತಂಕಿತರಾಗಿದ್ದಾಗಲೇ ಇವರ ನೆರವಿಗೆ ಧಾವಿಸಿದ್ದು ಭಾರತೀಯ ವಿದ್ಯಾ ಭವನದ ಕೊಡಗು ಕೇಂದ್ರ. ಇಲ್ಲಿನ ಗೌರವ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ಅವರು ಈ ಸಂತ್ರಸ್ಥರ ಬದುಕಿಗೊಂದು ನೆಲೆ ಕಾಣಿಸುವ ಪ್ರಯತ್ನ ಮಾಡಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಬಿವಿಬಿ ಮೂಲಕ ಪ್ರಾಜೆಕ್ಟ್ ಕೂರ್ಗ್ ಎಂಬ ಹೊಸ ಘಟಕವನ್ನು ಮೊದಲಿಗೆ ತೆರಯಲಾಯಿತು. ಈ ಘಟಕದ ಮೂಲಕ ಆಸಕ್ತಿಯುಳ್ಳ ಮಹಿಳೆಯರಿಗೆ ಆಹಾರ ಪದಾರ್ಥಗಳ ಸಂಸ್ಕರಣೆ ಅಲ್ಲದೆ ಹೊಲಿಗೆ ತರಬೇತಿಯನ್ನೂ ಕೂಡ ನೀಡಲಾಯಿತು. ಇದೀಗ ಪ್ರಾಜೆಕ್ಟ್ ಕೂರ್ಗ್ ನ ಉಸ್ತುವಾರಿಯಲ್ಲಿ ಸಂತ್ರಸ್ಥ ಮಹಿಳೆಯರೇ ಕೂರ್ಗ್ ಫ್ಲೇವರ್ಸ್ ಎಂಬ ಆಹಾರ ಪದಾರ್ಥಗಳ ಸಂಸ್ಕರಣಾ ಘಟಕವನ್ನು ಸ್ಥಾಪಿಸಿಕೊಂಡಿದ್ದು ಇದು ಕಳೆದ 10 ತಿಂಗಳಿನಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಇಲ್ಲಿ ಇದ್ದ ಸುಮಾರು 25-30 ಮಹಿಳೆಯರು ಇಂದು ತಮ್ಮದೇ ಕೈಯಲ್ಲಿ ತಯಾರಾದ ಸಾಂಬಾರು ಪುಡಿ, ರಸಂ ಪುಡಿ, ಪಲಾವ್, ಬಿರಿಯಾನಿ, ಚಿಕನ್ ಮಸಲಾ ಪಡಿ, ಮಟನ್ ಮಸಾಲಾ, ಫಿಶ್ ಮಸಲಾ ಪುಡಿ, ಅಕ್ಕಿ ಪುಡಿ, ಅಕ್ಕಿ ತರಿ, ಬಿಸಿ ಬೇಳೆ ಬಾತ್ ಪುಡಿ, ಚಟ್ನಿ ಪುಡಿ, ಪೋರ್ಕ್ ಮಸಾಲ ಪುಡಿಗಳಲ್ಲದೆ, ಪಾಪಡ್, ಉಪ್ಪಿನ ಕಾಯಿ ಪುಡಿಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ,
ಈಗಾಗಲೇ ಹೊಲಿಗೆ ತರಬೇತಿ ಪಡೆದ ಮಹಿಳೆಯರು ಬ್ಯಾಗುಗಳನ್ನು, ವಿದ್ಯಾರ್ಥಿಗಳ ಸಮವಸ್ತ್ರಗಳನ್ನು ಹೊಲಿಯುವ ಕ್ಷಮತೆಯನ್ನು ಹೊಂದಿದ್ದಾರೆ. ಅಲ್ಲದೆ, ಸಾಕಷ್ಟು ಬೇಡಿಕೆ ಇರುವುದರಿಂದ ಸೂಕ್ತ ಸಮಯದಲ್ಲಿ ಬ್ಯಾಗ್‍ಗಳನ್ನು ಮತ್ತು ಸಮವಸ್ತ್ರಗಳನ್ನು ಪೂರೈಸುತ್ತಿದ್ದಾರೆ. ಈಗಾಗಲೇ ಹೈದರಾಬಾದ್ ಗೆ 500 ಹಾಗೂ ಜಲಂಧರ್‍ಗೆ ಒಂದು ಸಾವಿರ ಬಟ್ಟೆ ಬ್ಯಾಗುಗಳನ್ನು ಹೊಲಿದು ನೀಡಿದ್ದಾರೆ. ಇದೀಗ ಭಾರತೀಯ ವಿದ್ಯಾ ಭವನದ ಕೊಡಗು ವಿದ್ಯಾಲಯ ಸೇರಿದಂತೆ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ನಡೆಯುವ ಶಾಲಾ ವಾರ್ಷಿಕೋತ್ಸವಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಡ್ರೆಸ್‍ಗಳನ್ನು ಹೊಲಿದು ನೀಡಿದ್ದಾರೆ.
ಅಡುಗೆ ಉತ್ಪನ್ನಗಳ ಮಾರಾಟ ಮತ್ತು ಹೊಲಿಗೆ ವಿಭಾಗದಿಂದ ಬಂದ ಲಾಭ ಹಣ ಸೇರಿದಂತೆ ಇತರ ದಾನಿಗಳಿಂದ ಬಂದ ನೆರವು ಮತ್ತು ಪ್ರಮುಖವಾಗಿ ರೋಟರಿ ಕ್ಲಬ್ ದೊಡ್ಡ ಪ್ರಮಾಣದ ಸಹಾಯದ ಹಸ್ತವಾಗಿ ಆರ್ಥಿಕ ನೆರವು ನೀಡಿದುದರಲ್ಲಿ ಮಾಸಿಕ 3 ಸಾವಿರದಂತೆ ಮಸಾಲೆ ಪದಾರ್ಥಗಳನ್ನು ತಯಾರಿಸುವ ಮತ್ತು ಹೊಲಿಗೆ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ಗೌರವಧನವನ್ನು ನೀಡಲಾಗುತ್ತಿದೆ.
ಸಂತ್ರಸ್ತರು ತರಬೇತಿ ಪಡೆದು ಉತ್ಪಾದಿಸಿದ ಅಡುಗೆ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ‘ಫುಡ್ ಸೆಕ್ಯೂರಿಟಿ ಆಫ್ ಸೇಫ್ಟಿ ಅಥಾರಿಟಿ ಆಫ್ ಇಂಡಿಯಾ’ ಸಂಸ್ಥೆಯಿಂದ ಅಧಿಕೃತ ಮಾನ್ಯತೆ ಲಭ್ಯವಾಗಿದ್ದು, ಈ ಮಾನ್ಯತೆಗೆ ತಕ್ಕಂತೆ ಪದಾರ್ಥಗಳಿಗೆ ಬೆಲೆ ನಿಗದಿಗೊಳಿಸಿ ದೇಶಾದ್ಯಂತ ಅಮೆಜಾನ್ ಸಂಸ್ಥೆಯ ಮೂಲಕ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಚೆನ್ನೈ ಮತ್ತಿತರ ರಾಜ್ಯಗಳಿಗೆ ಮಾರಾಟವಾಗುತ್ತಿದೆ.
ಈ ಪದಾರ್ಥಗಳು ಕೊಡಗು ಜಿಲ್ಲೆಯ ಸೋಮವಾರಪೇಟೆ, ವೀರಾಜಪೇಟೆ, ತಾಲೂಕುಗಳ ಎಲ್ಲಾ ಅಂಗಡಿ ಮಳಿಗೆಗಳಲ್ಲಿ ಲಭ್ಯವಿದೆ. ಜೊತೆಗೆ ಪ್ರತ್ಯೇಕವಾಗಿ ಸಂಚಾರಿ ವಾಹನದ ಮೂಲಕವೂ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಕೊಡಗಿನ ರಾಜಧಾನಿಯಾದ ಮಡಿಕೇರಿ ನಗರದ ರಾಜಾಸೀಟ್ ಪ್ರವೇಶದ್ವಾರ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯ ಬಾಲ ಭವನದ ಆವರಣಕ್ಕೆ ಪ್ರವೇಶಿಸುವ ಸ್ಥಳ ಸೇರಿದಂತೆ ಎರಡು ಸ್ಥಳದಲ್ಲಿ ಪ್ರತ್ಯೇಕ ಸ್ಟಾಲ್‍ಗಳನ್ನು ತೆರೆಯಲಾಗಿದೆ.
ಪ್ರಸ್ತುತ ಕಾಲೂರಿನಲ್ಲಿ ವಿದ್ಯಾರ್ಥಿಗಳಿಲ್ಲದೆ ಮುಚ್ಚಿದ ಶಾಲಾ ಕಟ್ಟಡದಲ್ಲಿ ಅಡುಗೆ ಉತ್ಪನ್ನಗಳನ್ನು ಮತ್ತು ಹೊಲಿಗೆ ತರಬೇತಿ ನಡೆಯುತ್ತದೆ. ಆದರೆ, ಸರಕಾರದ ಸ್ವಾಮ್ಯತೆಗೆ ಸೇರಿದ ಕಟ್ಟಡಗಳಲ್ಲಿ ಇಂಥಹ ಸಂಸ್ಥೆಗಳನ್ನು ನಡೆಸಲು ಅವಕಾಶವಿಲ್ಲದ್ದರಿಂದ ಇಲ್ಲಿ ನಡೆದ ಸಮಾರಂಭದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದಾಗ ಇದೇ ಊರಿನ ದಾನಿ ಕಾರೇರ ಕುಟುಂಬಸ್ಥರು 20 ಸೆಂಟ್ ನಿವೇಶನವನ್ನು ನೀಡುವುದಾಗಿ ಘೋಷಿಸಿದ್ದಾರೆ. ದಾನಿಗಳು ನೀಡಿದ ನಿವೇಶನದಲ್ಲಿ ಶಾಶ್ವತವಾದ ಕಟ್ಟಡ ನಿರ್ಮಿಸಿ ಅಲ್ಲಿ ಆಹಾರ ಉತ್ಪನ್ನಗಳನ್ನು ತಯಾರಿಸುವ ಘಟಕ ಆರಂಭಿಸುವ ಉದ್ದೇಶ ಹೊಂದಲಾಗಿದೆ. ಅಲ್ಲದೆ, ಹೊಲಿಗೆ ತರಬೇತಿ ಕೇಂದ್ರವನ್ನೂ ನಿರ್ಮಿಸಿ ಆರಂಭಿಸಲಾಗುವುದು.
ಸಂತ್ರಸ್ಥ ಮಹಿಳೆಯರ ಈ ಯಶಸ್ವಿ ಯಜನೆಗೆ ರಾಜ್ಯದ ಖ್ಯಾತ ಬರಹಗಾರ್ತಿ, ಕತೆಗಾರ್ತಿಯೂ ಆದ ವೈದೇಹಿ ಅವರ ಪುತ್ರಿ, ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಉಪನ್ಯಾಸಕಿ, ಬಾಲಾಜಿ ಕಶ್ಯಪ್ ಅವರ ಪತ್ನಿಯೂ ಆದ ನಯನ ಕಶ್ಯಪ್ ಅವರೂ ಸೇರಿದಂತೆ ಕೇಂದ್ರದ ಇತರ ನಿರ್ದೇಶಕರು ಕೈಜೋಡಿಸಿದ್ದಾರೆ.