ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ನಿಜಕ್ಕೂ ಅಧಿಕಾರದ ಮದ ಏರಿದಂತೆ ಕಾಣುತ್ತಿದೆ. ತಾನು ಜಾರಿಗೆ ತಂದಿರುವ ಮತ್ತು ತರುವ ಕಾನೂನುಗಳು ಕಾನೂನು ಬಾಹಿರವಾಗಿದ್ದರೂ ಅವುಗಳನ್ನು ಒಪ್ಪಿಕೊಳ್ಳಲೇಬೇಕೆಂಬ ಒತ್ತಡವನ್ನು ಜನಸಾಮಾನ್ಯನ ಮೇಲೆ ಹೇರುತ್ತಿದೆ. ಒಂದು ವೇಳೆ ಅದಕ್ಕೆ ವಿರೋಧ ವ್ಯಕ್ತಪಡಿಸುವವರ ಧ್ವನಿಯನ್ನು ದಮನ ಮಾಡುವಂತಹ ಕೆಲಸ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಿಂದ ಆಗುತ್ತಿದೆ.
ದೇಶಾದ್ಯಂತ ವಿವಾದವನ್ನು ಸೃಷ್ಟಿಸಿರುವ ಪೌರತ್ವ ತಿದ್ದುಪಡಿ ಕಾನೂನನ್ನು ಜಾರಿಗೆ ತರುವುದಿಲ್ಲ ಎಂದು ಘೋಷಣೆ ಮಾಡಿರುವ ಬಿಜೆಪಿಯೇತರ ರಾಜ್ಯ ಸರ್ಕಾರಗಳ ವಿರುದ್ಧ ಕೇಂದ್ರ ಸರ್ಕಾರ ಕತ್ತಿ ಮಸೆಯುತ್ತಾ ಬಂದಿದೆ.
ಆ ರಾಜ್ಯಗಳಿಗೆ ಬರಬೇಕಿದ್ದ ನ್ಯಾಯಸಮ್ಮತ ಅನುದಾನಗಳಿಗೆ ಕೊಕ್ಕೆ ಹಾಕುತ್ತಿರುವ ಕೇಂದ್ರ ಸರ್ಕಾರ, ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಆ ರಾಜ್ಯಗಳಲ್ಲಿ ಜಾರಿಗೆ ತರದೇ ತಾರತಮ್ಯ ಮಾಡುತ್ತಿದೆ. ಅಲ್ಲದೇ, ತಮ್ಮ ಪಕ್ಷಕ್ಕೆ ಚುನಾವಣೆಯಲ್ಲಿ ಬೆಂಬಲ ಸೂಚಿಸಿಲ್ಲ ಎಂಬ ಕಾರಣಕ್ಕೆ ಈ ರಾಜ್ಯಗಳನ್ನು ತುಚ್ಛವಾಗಿ ನೋಡುತ್ತಿದೆ. ಈ ಮೂಲಕ ನರೇಂದ್ರ ಮೋದಿ ಸರ್ಕಾರ ದ್ವೇಷದ ರಾಜಕಾರಣವನ್ನು ಶುರುವಿಟ್ಟುಕೊಂಡಿದೆ.
ಕೇಂದ್ರದ ಬಿಜೆಪಿ ಸರ್ಕಾರದ ದ್ವೇಷದ ರಾಜಕಾರಣ ಎಷ್ಟರ ಮಟ್ಟಿಗೆ ಪರಾಕಾಷ್ಠೆ ತಲುಪಿದೆಯೆಂದರೆ, ನಾಡಿನ ಕಲೆ-ಸಂಸ್ಕೃತಿಯನ್ನು ಬಿಂಬಿಸುವಂತಹ ಸ್ತಬ್ಧ ಚಿತ್ರಗಳನ್ನೇ ತಿರಸ್ಕರಿಸುವಂತಹ ಹೇಯ ಕೃತ್ಯವೆಸಗಿದೆ.
ಪ್ರತಿ ವರ್ಷ ಗಣರಾಜ್ಯೋತ್ಸವ ದಿನದಂದು ನಡೆಯುವ ಪರೇಡ್ ನಲ್ಲಿ ದೇಶದ ಕಲೆ ಸಂಸ್ಕೃತಿ, ನಾಗರಿಕತೆಯನ್ನು ಬಿಂಬಿಸುವಂತಹ ಬಹುತೇಕ ಎಲ್ಲಾ ರಾಜ್ಯಗಳ ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಈ ವರ್ಷವೂ ಎಲ್ಲಾ ರಾಜ್ಯಗಳು ತಮ್ಮ ತಮ್ಮ ರಾಜ್ಯಗಳ ಸ್ತಬ್ಧ ಚಿತ್ರಗಳನ್ನು ಕಳುಹಿಸಿಕೊಟ್ಟಿವೆ. ಅದೇ ರೀತಿ ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ರಾಜ್ಯಗಳೂ ಕಳುಹಿಸಿಕೊಟ್ಟಿದ್ದವು.
ಆದರೆ, ಪೌರತ್ವ ತಿದ್ದುಪಡಿ ಕಾನೂನನ್ನು ಜಾರಿಗೆ ತರುವುದಿಲ್ಲ ಎಂದು ಘೋಷಣೆ ಮಾಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಈ ಕಾನೂನಿನ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿ ಮತ್ತು ನಾಗರಿಕ ಸಮೂಹಕ್ಕೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಮಮತಾ ದೀದಿ ಅವರ ಈ ವಿರೋಧದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದ ಕಲಾವಿದರು ಸಿದ್ಧಪಡಿಸಿದ್ದ ಸ್ತಬ್ಧಚಿತ್ರದ ಪ್ರಸ್ತಾವನೆಯನ್ನು ಆರಂಭದಲ್ಲಿಯೇ ತಿರಸ್ಕರಿಸಿದೆ. ಈ ಮೂಲಕ ಒಂದು ರಾಜ್ಯದ ಸಂಸ್ಕೃತಿಗೆ ಅಪಚಾರ ಮಾಡಿದೆ.
ಪಶ್ಚಿಮ ಬಂಗಾಳ ಸರ್ಕಾರವು ತನ್ನ ಮಹತ್ವಾಕಾಂಕ್ಷೆಯ ನಗದು ವಿತರಣೆ ಕಾರ್ಯಕ್ರಮ ಕನ್ಯಾಶ್ರೀ ಮತ್ತು ಶಾಲಾ ಮಕ್ಕಳಿಗೆ ಬೈಸಿಕಲ್ ವಿತರಣೆ ಹಾಗೂ ನೀರು ಸಂರಕ್ಷಣೆಯ ಜಲ್ ಧೊರೋ ಜಲ್ ಭೊರೋ ಯೋಜನೆಯನ್ನು ಒಳಗೊಂಡ ಸ್ತಬ್ಧಚಿತ್ರವನ್ನು ಸಿದ್ಧಪಡಿಸಿ ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ಪ್ರದರ್ಶಿಸಲಾಗುವುದು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು.
ಆದರೆ, ಪಶ್ಚಿಮ ಬಂಗಾಳದ ಜನಪರ ಕಾರ್ಯಕ್ರಮದ ಉದ್ದೇಶವನ್ನೇ ಅರಿಯದ ಹೊಣೆಗೇಡಿ ಕೇಂದ್ರ ಸರ್ಕಾರವು ತನ್ನ ಅಧಿಕಾರಿಗಳ ಮೂಲಕ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದೆ.
ಸ್ತಬ್ಧ ಚಿತ್ರಗಳನ್ನು ಆಯ್ಕೆ ಮಾಡುವುದು ರಕ್ಷಣಾ ಇಲಾಖೆಯ ತಜ್ಞರ ಸಮಿತಿ. ಪಶ್ಚಿಮ ಬಂಗಾಳದ ಈ ಪ್ರಸ್ತಾವನೆಯನ್ನು ಎರಡು ಸಭೆಗಳಲ್ಲಿ ಚರ್ಚೆ ನಡೆಸಿದ ಸಮಿತಿಯು ಪರಿಶೀಲಿಸಿ ತಿರಸ್ಕರಿಸಿದೆ. ಇದಕ್ಕೆ ತಜ್ಞರ ಸಮಿತಿ ನೀಡಿರುವ ಕಾರಣ ಪ್ರಸ್ತಾವನೆಯನ್ನು ಸಲ್ಲಿಸುವಾಗ ಮತ್ತು ಸ್ತಬ್ಧಚಿತ್ರದ ಅಂಶಗಳು ನಿಯಮಬದ್ಧವಾಗಿಲ್ಲ ಎಂದು. ಸ್ತಬ್ಧ ಚಿತ್ರಕ್ಕೆ ಸಲ್ಲಿಸುವ ಪ್ರಸ್ತಾವನೆಗಳನ್ನು ಕಳೆದ ವರ್ಷದ ಮಾನದಂಡದ ಆಧಾರದಲ್ಲಿಯೇ ಈ ಬಾರಿಯೂ ಅನುಸರಿಸಲಾಗಿದೆ. ಕಳೆದ ವರ್ಷ ಪಶ್ಚಿಮ ಬಂಗಾಳ ಅಂತಿಮ ಸುತ್ತಿಗೆ ಆಯ್ಕೆಯಾಗಿ ಸ್ತಬ್ಧ ಚಿತ್ರವನ್ನು ಪ್ರದರ್ಶನ ಮಾಡಿತ್ತು ಎಂದು ಸಬೂಬು ಹೇಳಿದೆ.
ಕಳೆದ ವರ್ಷ ಸಿಎಎ ವಿವಾದವೂ ಇರಲಿಲ್ಲ, ಪಶ್ಚಿಮ ಬಂಗಾಳ ಸರ್ಕಾರದಿಂದ ವಿರೋಧವೂ ಇರಲಿಲ್ಲ. ಆಗ ಅನುಸರಿಸಿದ ಮಾನದಂಡದ ಆಧಾರದಲ್ಲಿಯೇ ಈ ಬಾರಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು ಎಂದು ಪಶ್ಚಿಮ ಬಂಗಾಳ ಸರ್ಕಾರ ಹೇಳಿದೆ. ಹೀಗಿದ್ದಾಗ್ಯೂ ನಿಯಮಬದ್ಧವಾಗಿಲ್ಲ ಎಂದರೆ ಹೇಗೆ? ಈ ನಿರ್ಧಾರದ ಹಿಂದೆ ಕಾಣದ ಕೈ ಕೆಲಸ ಮಾಡಿದೆ ಎಂಬ ಗುಮಾನಿ ಪಶ್ಚಿಮ ಬಂಗಾಳದ್ದಾಗಿದೆ.
ಕಳೆದ ವರ್ಷದ ರೀತಿಯಲ್ಲಿಯೇ ಪ್ರಸ್ತಾವನೆ ಸಲ್ಲಿಸಿದ್ದರೆ ಅದನ್ನು ಕಳೆದ ವರ್ಷದ ರೀತಿಯಲ್ಲಿಯೇ ಪುರಸ್ಕರಿಬೇಕಿತ್ತು. ಆದರೆ, ಈ ಕೆಲಸ ಮಾಡದೇ ತಜ್ಞರ ಸಮಿತಿ ಕೇಂದ್ರ ಸರ್ಕಾರದ ಒತ್ತಡಕ್ಕೆ ಕಟ್ಟು ಬಿದ್ದು ಪ್ರಸ್ತಾವನೆ ತಿರಸ್ಕರಿಸುವ ಮೂಲಕ ಒಂದು ರಾಜ್ಯದ ಕಲೆ ಮತ್ತು ಸಂಸ್ಕೃತಿಗೆ ಅವಮಾನ ಮಾಡಿದೆ.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಮತಾ ಬ್ಯಾನರ್ಜಿಯವರ ಪಕ್ಷ ತೃಣಮೂಲ ಕಾಂಗ್ರೆಸ್, ಸಿಎಎಯನ್ನು ವಿರೋಧಿಸಿದ್ದರಿಂದ ಕೇಂದ್ರ ಸರ್ಕಾರ ಈ ರೀತಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದೆ.
ನಾವು ಜನಸಾಮಾನ್ಯರಿಗೆ ಅನ್ಯಾಯವಾಗುವಂತಹ ಸಿಎಎಯನ್ನು ವಿರೋಧಿಸಿದ್ದರಿಂದ ಕೇಂದ್ರ ಸರ್ಕಾರ ನಮ್ಮ ರಾಜ್ಯದ ಯೋಜನೆಗಳನ್ನು ಪ್ರತಿಬಿಂಬಿಸುವ ಸ್ತಬ್ಧ ಚಿತ್ರವನ್ನೇ ತಿರಸ್ಕರಿಸುವ ಮೂಲಕ ರಾಜ್ಯದ ಜನತೆಗೆ ಅವಮಾನ ಮಾಡಿದೆ. ಇದು ಖಂಡನೀಯ ಎಂದು ಟಿಎಂಸಿ ಆಕ್ರೋಶ ವ್ಯಕ್ತಪಡಿಸಿದೆ.
ಆದರೆ, ಬಿಜೆಪಿ ತಜ್ಞರ ಸಮಿತಿಯ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಟಿಎಂಸಿ ಸರ್ಕಾರ ಸೂಕ್ತ ರೀತಿಯಲ್ಲಿ ನೀತಿ-ನಿಯಮಗಳನ್ನು ಪಾಲಿಸಿಲ್ಲದ ಕಾರಣದಿಂದ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂದು ಹೇಳಿಕೊಂಡಿದೆ.
ಏನೇ ಆಗಲಿ, ಪಶ್ಚಿಮ ಬಂಗಾಳ ಸಿಎಎಯನ್ನು ವಿರೋಧಿಸಿದ್ದರಿಂದಲೇ ಕೇಂದ್ರ ಸರ್ಕಾರ ಸ್ತಬ್ಧ ಚಿತ್ರದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂಬುದು ಬಹಿರಂಗ ಗುಟ್ಟು. ಪಶ್ಚಿಮ ಬಂಗಾಳದ ಸಂಸದೀಯ ವ್ಯವಹಾರಗಳ ಸಚಿವರಾದ ತಪಸ್ ರಾಯ್ ಅವರು ನಮ್ಮ ಸರ್ಕಾರ ಸಿಎಎ ಸೇರಿದಂತೆ ಕೇಂದ್ರದ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿದ್ದರ ಹಿನ್ನೆಲೆಯಲ್ಲಿ ನಮ್ಮ ಸ್ತಬ್ಧ ಚಿತ್ರದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಈ ಮೂಲಕ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಗಮನಿಸಿಬೇಕಾದ ಅಂಶವೆಂದರೆ ಕನ್ಯಾಶ್ರೀ ಯೋಜನೆಯನ್ನು ಪಶ್ಚಿಮ ಬಂಗಾಳದಲ್ಲಿ 2013 ರಲ್ಲಿ ಜಾರಿಗೆ ತಂದಿತ್ತು. ಇದರ ಪ್ರಮುಖ ಉದ್ದೇಶವೆಂದರೆ ಹೆಣ್ಣು ಮಕ್ಕಳು ಶಾಲೆಯಿಂದ ಹೊರಗೆ ಉಳಿಯುವುದನ್ನು ತಡೆದು ಸುಶಿಕ್ಷಿತರನ್ನಾಗಿ ಮಾಡುವುದು. ಇದಕ್ಕಾಗಿ ನಗದು ಹಣವನ್ನು ಆ ಹೆಣ್ಣು ಮಕ್ಕಳ ಖಾತೆಗೆ ವರ್ಗಾವಣೆ ಮಾಡುವುದಾಗಿತ್ತು. ಪಶ್ಚಿಮ ಬಂಗಾಳದ ಈ ಸಮಾಜಮುಖಿ ಕಾರ್ಯಕ್ರಮಕ್ಕೆ 2017 ರಲ್ಲಿ ವಿಶ್ವಸಂಸ್ಥೆಯು ಅತ್ಯುತ್ತಮ ಕಾರ್ಯಕ್ರಮ ಎಂದು ಪ್ರಶಸ್ತಿಯನ್ನೂ ನೀಡಿತ್ತು. ಇಂತಹ ಪ್ರಶಸ್ತಿ ವಿಜೇತ ಕಾರ್ಯಕ್ರಮವನ್ನೊಳಗೊಂಡ ಸ್ತಬ್ಧಚಿತ್ರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ಆಶ್ಚರ್ಯವನ್ನುಂಟು ಮಾಡಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿರಿಮೆಯನ್ನು ಹೆಚ್ಚಿಸಿರುವ ಈ ಯೋಜನೆಯನ್ನೇ ತಿರಸ್ಕಾರ ಮಾಡಿರುವ ಕೇಂದ್ರ ಸರ್ಕಾರದ ಸ್ಥಿಮಿತವಿಲ್ಲದ ಮನಸ್ಥಿತಿಯನ್ನು ಜಗಜ್ಜಾಹೀರುಗೊಳಿಸಿದಂತಾಗಿದೆ.
ಮಹಾರಾಷ್ಟ್ರ ಸ್ತಬ್ಧ ಚಿತ್ರದ ಪ್ರಸ್ತಾವನೆಗೂ ತಿರಸ್ಕಾರ
ಇದುವರೆಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮಿತ್ರ ಪಕ್ಷಗಳಾಗಿದ್ದವು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮೈತ್ರಿ ಕಡಿದುಕೊಂಡ ಶಿವಸೇನೆಯು ಕಾಂಗ್ರೆಸ್ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದೆ. ಇದನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಹಾರಾಷ್ಟ್ರದ ಸ್ತಬ್ಧ ಚಿತ್ರದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಶಿವಸೇನೆ ಮತ್ತು ಎನ್ಸಿಪಿ ಮುಖಂಡರು, ಕೇಂದ್ರ ಸರ್ಕಾರ ಬಿಜೆಪಿಯೇತರ ಸರ್ಕಾರಗಳು ಇರುವ ರಾಜ್ಯಗಳ ವಿಚಾರದಲ್ಲಿ ಮಲತಾಯಿ ಧೋರಣೆ ತಾಳುತ್ತಿದೆ. ರಾಜಕೀಯ ದ್ವೇಷದಿಂದ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ಸ್ತಬ್ಧಚಿತ್ರಗಳ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಯಾವುದೇ ಪಕ್ಷವಾಗಲೀ ಅಧಿಕಾರಕ್ಕೆ ಬಂದ ತಕ್ಷಣ ರಾಜಕೀಯ ವಿಚಾರಗಳನ್ನು ಬದಿಗಿಟ್ಟು ದೇಶದ ಸರ್ವಾಂಗೀಣ ಅಭಿವೃದ್ಧಿಯೆಡೆಗೆ ಗಮನ ನೀಡಬೇಕು. ಕೇಂದ್ರ ಸರ್ಕಾರಕ್ಕೆ ಯಾವುದೇ ರಾಜ್ಯ ಮೇಲಾಗಬಾರದು, ಯಾವುದೇ ರಾಜ್ಯ ಕೀಳಾಗಬಾರದು. ಎಲ್ಲಾ ರಾಜ್ಯಗಳನ್ನೂ ಸರಿ ಸಮಾನವಾಗಿ ಕಾಣಬೇಕು. ಆಗ ಮಾತ್ರ ಜಾತ್ಯತೀತ ಮತ್ತು ಪಕ್ಷಾತೀತವಾದ ಆಡಳಿತ ನೀಡಲು ಸಾಧ್ಯ. ಆದರೆ, ಇಷ್ಟು ವರ್ಷಗಳ ಕಾಲ ಕೇಂದ್ರ ಸರ್ಕಾರವನ್ನು ನಡೆಸಿಕೊಂಡು ಪಕ್ಷ ಮತ್ತು ಪಕ್ಷಗಳ ವಿರುದ್ಧ ಮಲತಾಯಿ ಧೋರಣೆಯ ಆರೋಪವನ್ನು ಹೊರಿಸುತ್ತಾ ಬಂದಿದ್ದ ಬಿಜೆಪಿ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅದೇ ತಾರತಮ್ಯಗಳನ್ನು ಮುಂದುವರಿಸುತ್ತಿದ್ದಾರೆ. ಇನ್ನು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಇದೇ ನರೇಂದ್ರ ಮೋದಿ ಎಂಬ ಮಹಾಶಯರು ತಮ್ಮ ರಾಜ್ಯಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎಂದು ಹತ್ತಾರು ಬಾರಿ ಕಿರುಚಾಡಿದ್ದರು. ಪ್ರತಿಭಟನೆಯನ್ನೂ ನಡೆಸಿದ್ದರು. ಆಗ ತಾರತಮ್ಯದ ಮಾತುಗಳನ್ನಾಡಿದ್ದ ಮೋದಿ ಈಗ ಪ್ರಧಾನಿಯಾಗಿ ಬಿಜೆಪಿಯೇತರ ರಾಜ್ಯಗಳ ಮೇಲೆ ಮಲತಾಯಿ ಧೋರಣೆಯ ಸವಾರಿ ಮಾಡುತ್ತಿದ್ದಾರೆ. ಆಗ ಅವರಿಗಾದದ್ದು ಅವಮಾನವಾದರೆ, ಈಗ ಅವರು ಮಾಡುತ್ತಿರುವ ಅವಮಾನ ಕಾಣುತ್ತಿಲ್ಲವೇ?