ಪರಸ್ಪರ ವ್ಯತಿರಿಕ್ತ ಸೈದ್ಧಾಂತಿಕ ನಿಲುವುಗಳ ಪಕ್ಷಗಳನ್ನು ಹೊಂದಿರುವ ಮಹಾರಾಷ್ಟ್ರದ ಮೈತ್ರಿ ಸರ್ಕಾರ ಎಷ್ಟು ಕಾಲ ಬಾಳಬಲ್ಲದು?
ಸಿದ್ಧಾಂತಗಳು ಭಿನ್ನ ಇರಬಹುದು. ಆದರೆ ಸಮಾನ ಕನಿಷ್ಠ ಕಾರ್ಯಕ್ರಮದ ಆಧಾರವಿದೆ ಸರ್ಕಾರಕ್ಕೆ. ಮತ್ತೊಂದು ಚುನಾವಣೆ ನಡೆಸುವುದು ಬಲು ದುಬಾರಿಯ ಕಸರತ್ತು. ಭಿನ್ನ ಸಿದ್ಧಾಂತಗಳನ್ನು ಹೊಂದಿದ ಪಕ್ಷಗಳು ಸೇರಿ ಸರ್ಕಾರ ನಡೆಸಿರುವ ಉದಾಹರಣೆಗಳು ಯೂರೋಪ್ ಮತ್ತು ಜರ್ಮನಿಯಲ್ಲೂ ಇವೆ.
1999ರಲ್ಲಿ ಯಾವ ಪಕ್ಷಕ್ಕೂ ಬಹುಮತ ಇರಲಿಲ್ಲ. ಆದರೆ ವಾಜಪೇಯಿ ಮುಂದೆ ಬಂದರು. ಅವರ ಸರ್ಕಾರದಲ್ಲಿ ಜಾರ್ಜ್ ಫರ್ನಾಂಡಿಸ್, ಮಮತಾ ಬ್ಯಾನರ್ಜಿ ಇರಲಿಲ್ಲವೇ? ತಮ್ಮ ಪಕ್ಷದ ಕೆಲ ನಿಲುವುಗಳು ಮತ್ತು ಕಾರ್ಯಕ್ರಮಗಳನ್ನು ಬದಿಗೆ ಸರಿಸಿದರು ವಾಜಪೇಯಿ. ರಾಮಜನ್ಮಭೂಮಿಯ ಗೊಡವೆಗೆ ಹೋಗಲಿಲ್ಲ. ಯಶಸ್ವಿಯಾಗಿ ಐದು ವರ್ಷಗಳ ಕಾಲ ಸರ್ಕಾರ ನಡೆಸಿದರು.
ಸಮಾನ ಕನಿಷ್ಠ ಕಾರ್ಯಕ್ರಮದಲ್ಲಿ ‘ಸೆಕ್ಯೂಲರಿಸಂ’ ಶಬ್ದವಿದೆ. ಶಿವಸೇನೆಯನ್ನು ಹೇಗೆ ಒಪ್ಪಿಸಿದಿರಿ?
ಅನಿವಾರ್ಯ ಸಂದರ್ಭಗಳಲ್ಲಿ ರಾಜೀ ಮಾಡಿಕೊಳ್ಳದೆ ವಿಧಿ ಇರುವುದಿಲ್ಲ. ಶಿವಸೇನೆ ಮಾತ್ರವಲ್ಲ, ಕಾಂಗ್ರೆಸ್-ಎನ್.ಸಿ.ಪಿ. ಕೂಡ ರಾಜೀ ಮಾಡಿಕೊಂಡಿವೆ. ಐದೂ ವರ್ಷಗಳ ಕಾಲ ಮುಖ್ಯಮಂತ್ರಿ ಪದವಿಯನ್ನು ಸೇನೆಗೇ ಬಿಟ್ಟುಕೊಟ್ಟಿವೆ. ಇನ್ನು ಸೆಕ್ಯೂಲರಿಸಂ ಎಂಬುದು ಸಂವಿಧಾನದ ಪೀಠಿಕೆಯಲ್ಲಿ ಇರುವ ಪದ. ಯಾವುದೇ ಸರ್ಕಾರ ಸಂವಿಧಾನವನ್ನು ಗೌರವಿಸಲೇಬೇಕು.
1993ರ ಮುಂಬಯಿ ಕೋಮು ಗಲಭೆಗಳಲ್ಲಿ (ಪವಾರ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗ) ಶಿವಸೇನೆಯ ನಾಯಕರು ಹಿಂಸೆಯನ್ನು ಪ್ರಚೋದಿಸಿದ್ದನ್ನು ಕಣ್ಣಾರೆ ಕಂಡಿದ್ದೀರಿ. ಆ ಪಕ್ಷದೊಂದಿಗೆ ಕೈ ಕಲೆಸಿದ್ದು ಕಷ್ಟವಾಗಲಿಲ್ಲವೇ?
ಮೈತ್ರಿ ಸರ್ಕಾರ ನಡೆಸುವಾಗ ಕೆಲ ಸಂಗತಿಗಳನ್ನು ಮರೆಯಬೇಕಾಗುತ್ತದೆ. ನಾವು ಒಟ್ಟಿಗೆ ಕೆಲಸ ಮಾಡುವ ಕ್ರಿಯೆಯೇ ಸಮಾಜದ ಹಲವಾರು ವರ್ಗಗಳಿಗೆ ಅಭಯದ ಭರವಸೆ. ಸಮಾಜದ ವಿಶಾಲ ಹಿತಗಳನ್ನು ಕಾಪಾಡಲು ಒಟ್ಟಾಗಿದ್ದೇವೆ ಎಂಬುದು ನಾನಾ ವರ್ಗಗಳಿಗೆ ಸಂದೇಶವೊಂದನ್ನು ಕಳಿಸುವುದು ಒಳ್ಳೆಯ ಸಂಗತಿ. 1978ರಲ್ಲಿ ನಾನು ಮೈತ್ರಿ ಸರ್ಕಾರ ನಡೆಸಿದೆ. ಜನತಾಪಾರ್ಟಿ, ಜನಸಂಘ, ಸಂಯುಕ್ತ ಸಮಾಜವಾದಿ ಪಾರ್ಟಿ ಪಾಲ್ಗೊಂಡಿದ್ದವು. ಎಡಪಕ್ಷಗಳು, ಆರ್.ಪಿ.ಐ. ಹಾಗೂ ರೈತರು- ಕಾರ್ಮಿಕರ ಪಕ್ಷಗಳು ಬೆಂಬಲಿಸಿದ್ದವು.
ಪೌರತ್ವ ಕಾಯಿದೆ ತಿದ್ದುಪಡಿ ವಿಧೇಯಕ ಮತ್ತು ದೇಶಾದ್ಯಂತ ಎನ್.ಆರ್.ಸಿ. ಜಾರಿಯನ್ನು ಒಪ್ಪುತ್ತೀರಾ?
ಈ ಕ್ರಮಗಳಿಗೆ ನಮ್ಮ ಬೆಂಬಲ ಇಲ್ಲ. ಸಮಾಜದ ಒಂದು ವರ್ಗವನ್ನು ದೂರ ಇಡುವುದು ನ್ಯಾಯವಲ್ಲ.
ಶಿವಸೇನೆಯ ಜೊತೆ ಮೈತ್ರಿಗೆ ಸೋನಿಯಾ ಮನ ಒಲಿಸಿದಿರಿ. ರಾಹುಲ್ ಗಾಂಧೀ ಒಪ್ಪಿಗೆ ಇದೆಯೇ?
ಗೊತ್ತಿಲ್ಲ. ಅವರೊಂದಿಗೆ ಸಮಾಲೋಚನೆ ಮಾಡಿಲ್ಲ. ಎರಡು ಮೂರು ತಿಂಗಳಿಂದ ಅವರನ್ನು ಭೇಟಿ ಮಾಡಿಲ್ಲ.
ಮೈತ್ರಿಯ ಮಾತುಕತೆಗಳನ್ನು ಕಾಂಗ್ರೆಸ್ ಮತ್ತು ಎನ್.ಸಿ.ಪಿ.ಯ ಹಿರಿಯರೇ ಮುನ್ನಡೆಸಿದರು. ಯುವಪೀಳಿಗೆಯಿಂದ ಈ ಮೈತ್ರಿಯನ್ನು ಆಗು ಮಾಡುವುದು ಸಾಧ್ಯವಿರಲಿಲ್ಲವೇ?
ಈ ಮಾತು ಆಂಶಿಕವಾಗಿ ನಿಜ. ಆದರೆ ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಶೇ.70ರಷ್ಟು ಕಿರಿಯ ಪೀಳಿಗೆಯವರೇ ತುಂಬಿದ್ದಾರೆ. ಅವರಿಗೆ ಈ ಮೈತ್ರಿ ಬೇಕಾಗಿತ್ತು. ಎನ್.ಸಿ.ಪಿ.ಮತ್ತು ಶಿವಸೇನೆಯಲ್ಲೂ ಅಷ್ಟೇ. ಈ ಮೈತ್ರಿ ರೂಪು ತಳೆದಿದ್ದು ಕಿರಿಯರ ಒತ್ತಾಸೆಯಿಂದಲೇ.
ನಿಮ್ಮ ಪಕ್ಷ ಕಾಂಗ್ರೆಸ್ಸಿನಲ್ಲಿ ವಿಲೀನವಾಗಬೇಕೆಂಬ ಸಲಹೆಗಳಿವೆಯಲ್ಲ?
ಅಂತಹ ಆಲೋಚನೆ ಎನ್.ಸಿ.ಪಿ.ಗೆ ಇಲ್ಲ. ತನ್ನದೇ ಆದ ಕಾರ್ಯಕ್ರಮಗಳಿರುವ ರಾಜಕೀಯ ಪಕ್ಷ ನಮ್ಮದು. ಹಾಗೆಯೇ ಮುಂದುವರೆಯ ಬಯಸುತ್ತೇವೆ. ಒಂದು ವೇಳೆ ನಮ್ಮ ಪಕ್ಷದ ಕಾರ್ಯಕರ್ತರು- ಪದಾಧಿಕಾರಿಗಳು ವಿಲೀನಕ್ಕೆ ಮನಸ್ಸು ಮಾಡಿದರೆ ಅವರ ಹಿತರಕ್ಷಣೆ ನನ್ನ ಜವಾಬ್ದಾರಿ.
ಮಹಾರಾಷ್ಟ್ರದ ಪ್ರತಿಕೂಲ ಚುನಾವಣಾ ಸನ್ನಿವೇಶದಲ್ಲಿ ಎನ್.ಸಿ.ಪಿ. ಮತ್ತು ಕಾಂಗ್ರೆಸ್ ನಿರೀಕ್ಷೆ ಮೀರಿ ಉತ್ತಮ ಫಲಿತಾಂಶ ಕಂಡವು. ಪ್ರಚಾರ ಮತ್ತು ಹುರಿಯಾಳುಗಳ ಆಯ್ಕೆ ಕುರಿತು ಯಾವ ಪಾಠ ಕಲಿಯಬಹುದು?
ವರ್ಷಗಟ್ಟಲೆ ಅಧಿಕಾರ ಸವಿದ ನನ್ನ ಕೆಲವು ಹಿರಿಯ ಸಹೋದ್ಯೋಗಿಗಳು ಪಕ್ಷ ತೊರೆದರು. ಅಂತಹ ಸನ್ನಿವೇಶದಲ್ಲಿ ದುಡಿಯಲು ಸಾವಿರಾರು ಕಿರಿಯರು ತಯಾರಿದ್ದರು. ಅವಕಾಶದ ಬಾಗಿಲುಗಳೂ ಅವರಿಗೆ ತೆರೆದಿದ್ದವು. ಕಷ್ಟಪಟ್ಟು ದುಡಿದರ. ಅವರನ್ನು ಹುರಿದುಂಬಿಸುವುದು ಮತ್ತು ಇವರು ಕೆಲಸ ಮಾಡಬಲ್ಲರೆಂದು ಮತದಾರರಿಗೆ ಮನವರಿಕೆ ಮಾಡಿಸುವುದು ನನ್ನ ಕರ್ತವ್ಯವಾಗಿತ್ತು.
ಫಡಣವೀಸ್ ಮತ್ತು ಮೋದಿ ಸರ್ಕಾರಗಳ ಕುರಿತು ಜನರಲ್ಲಿ ಅಸಮಾಧಾನ ಇತ್ತೇ?
ಫಡಣವೀಸ್ ಸರ್ಕಾರದ ಕುರಿತು ಅಸಂತೋಷ ಇತ್ತು. ಜೊತೆ ಜೊತೆಗೇ ದೀರ್ಘ ಕಾಲ ನನ್ನೊಂದಿಗೆ ಹಲವಾರು ಹುದ್ದೆಗಳಲ್ಲಿ ಅಧಿಕಾರ ಅನುಭವಿಸಿದವರು ನನ್ನನ್ನು ತೊರೆದದ್ದು ಜನರಿಗೆ ಸಿಟ್ಟು ಬರಿಸಿತ್ತು.
ಅವರ ಮೇಲೆ ಕೇಸುಗಳಿದ್ದ ಒತ್ತಡದ ಕಾರಣ ನಿಮ್ಮನ್ನು ಬಿಡಬೇಕಾಯಿತೇ?
ಕೇಸುಗಳ ಕೆಲವರ ಮೇಲೆ ಮಾತ್ರವೇ ಇದ್ದವು. ಹೌದು, ಸಿ.ಬಿ.ಐ. ಮತ್ತು ಜಾರಿ ನಿರ್ದೇಶನಾಲಯವನ್ನು ಛೂ ಬಿಡಲಾಯಿತು. ಆದರೆ ಬಿಜೆಪಿಯನ್ನು ಸೇರುವುದು ಅವರು ಪ್ರಜ್ಞಾಪೂರ್ವಕವಾಗಿ ತೆಗೆದುಕೊಂಡ ತೀರ್ಮಾನ.
ಕಾಂಗ್ರೆಸ್ ಆಳ್ವಿಕೆಯಲ್ಲೂ ಕೇಂದ್ರೀಯ ಏಜೆನ್ಸಿಗಳನ್ನು ಪ್ರತಿಪಕ್ಷಗಳ ರಾಜಕಾರಣಿಗಳ ವಿರುದ್ಧ ಬಳಸಲಾಯಿತಲ್ಲ?
ಇಲ್ಲ, ಈ ಸಲದಂತಹ ಸಿ.ಬಿ.ಐ-ಇ.ಡಿ. ದುರುಪಯೋಗವನ್ನು ಮಹಾರಾಷ್ಟ್ರ ಹಿಂದೆಂದೂ ಕಂಡಿಲ್ಲ. ನಾಳೆ ನನ್ನ ಮೇಲೂ ಕ್ರಮ ಜರುಗಿಸಬಹುದು… ಪಿ.ಚಿದಂಬರಂ ಉದಾಹರಣೆ ಕಣ್ಣ ಮುಂದಿದೆ.
ಪ್ರತಿಪಕ್ಷಗಳನ್ನು ಕಟ್ಟಿ ಹಾಕುವ ಭಯದ ವಾತಾವರಣ ದೇಶದಲ್ಲಿದೆಯೇ?
ನಿರ್ದಿಷ್ಟ ದಿಕ್ಕಿನಲ್ಲಿ, ನಿರ್ದಿಷ್ಟ ಸಿದ್ಧಾಂತಗಳೊಂದಿಗೆ ಕೆಲಸ ಮಾಡಲು ತೀರ್ಮಾನಿಸಿದ್ದೇವೆ. ಮತ್ತೊಂದು ದಿಕ್ಕು, ಮತ್ತೊಂದು ಸಿದ್ಧಾಂತವೂ ಇದೆ. ಜನತಾಂತ್ರಿಕ ವಿಧಾನಗಳನ್ನು ಅವರು ಅನುಸರಿಸದೆ ಹೋದರೆ, ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಂದು ಅರ್ಥ. ಪ್ರತಿಪಕ್ಷಗಳು ಅದನ್ನು ಎದುರಿಸಬೇಕಿದೆ.
ಮಹಾರಾಷ್ಟ್ರ ಸರ್ಕಾರ ರಚನೆಯ ನಾಟಕದಲ್ಲಿ ನಿಮ್ಮ ಕುರಿತು ಅಪನಂಬಿಕೆ ವ್ಯಕ್ತವಾಗಿತ್ತು. ಒಳಗೊಳಗೇ ಬಿಜೆಪಿ ಜೊತೆ ಕೈಜೋಡಿಸಿದ್ದಿರಿ, ಅಜಿತ್ ಪವಾರ್ ಅವರು ಫಡಣವೀಸ್ ಜೊತೆ ಸೇರಿದ್ದು ನಿಮಗೆ ಮೊದಲೇ ತಿಳಿದಿದ್ದು ಎಂದೆಲ್ಲ ಹೇಳಲಾಯಿತು?
ಮೀಡಿಯಾದ ಒಂದು ವರ್ಗ ಇದನ್ನೆಲ್ಲ ಸುಖಿಸುತ್ತಿದೆ. ನೀವು ಹೇಳಿದ್ದೇ ನಿಜವಾಗಿದ್ದರೆ ಉದ್ಧವ ಠಾಕರೆ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ನನ್ನ ಪಕ್ಷ ಅವರನ್ನು ಬೆಂಬಲಿಸಿ ಸರ್ಕಾರವನ್ನು ಸೇರುತ್ತಿರಲಿಲ್ಲ. ಸಾರ್ವಜನಿಕ ಬದುಕಿನಲ್ಲಿ ನಾನು ಭಿನ್ನ ಸಿದ್ಧಾಂತದ ಪಕ್ಷಕ್ಕೆ ಸೇರಿರಬಹುದು. ಆದರೆ ಎದುರಾಳಿ ಮತ್ತು ನಾನು ಶತ್ರುಗಳೆಂದು ಅರ್ಥವಲ್ಲ. ವ್ಯಕ್ತಿಗತವಾಗಿ ನಾನು ಯಾರ ವಿರುದ್ಧವೂ ತಪ್ಪಾಗಿ ನಡೆದುಕೊಂಡಿಲ್ಲ ಅದು ಬಿಜೆಪಿಯೇ ಇರಬಹುದು, ಮತ್ಯಾವುದೇ ಪಕ್ಷ ಆಗಿರಬಹುದು. 20- 40 ವರ್ಷಗಳ ಹಿಂದೆ ನಾನು ಮತ್ತು ನನ್ನ ಎದುರಾಳಿ ದಿನವಿಡೀ ಒಬ್ಬರ ವಿರುದ್ಧ ಮತ್ತೊಬ್ಬರು ಮಾತಿನ ದಾಳಿ ನಡೆಸುತ್ತಿದ್ದೆವು. ಆದರೆ ಪರಸ್ಪರರ ಮನೆಯಲ್ಲಿ ಒಟ್ಟಾಗಿ ಊಟ ಮಾಡುತ್ತಿದ್ದೆವು. ಈ ಸಂಗತಿ ಕೆಲವರಿಗೆ ಜೀರ್ಣವಾಗುವುದಿಲ್ಲ.