ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಸಿಎಎ ವಿಚಾರದಲ್ಲಿ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದು, ಪ್ರತಿಭಟನೆಗಳು ಮುಂದುವರಿದಿವೆ. ಸಮಾಜದ ಬಹುತೇಕ ವರ್ಗಗಳಿಂದ ಈ ಸಿಎಎ, ಎನ್ಆರ್ ಸಿಗೆ ಪ್ರತಿರೋಧಗಳು ಬರುತ್ತಿವೆ. ಇದು ಒಂದು ಕಡೆಯಾದರೆ, ಬಿಜೆಪಿಯೇ ಆಡಳಿತದಲ್ಲಿರುವ ಉತ್ತರ ಪ್ರದೇಶದಲ್ಲಿ ಪ್ರತಿಭಟನಾಕಾರರನ್ನಷ್ಟೇ ಅಲ್ಲ, ಬೇಕಾಬಿಟ್ಟಿಯಾಗಿ ಮನಸೋಇಚ್ಛೆ ಮುಸ್ಲಿಂ ಸಮುದಾಯಕ್ಕೆ ಸೇರಿದವರ ಹೆಸರಿನ ಆಧಾರದಲ್ಲಿ ಪ್ರತಿಭಟನೆ ಮಾಡಿ, ಶಾಂತಿಯನ್ನು ಕದಡಿದರು ಎಂಬ ಆರೋಪ ಹೊರಿಸಿ ಕೇಸುಗಳನ್ನು ಹಾಕಲಾಗಿದೆ.
ಆದರೆ, ಸರ್ಕಾರದ ಮಾತು ಕೇಳಿ ಕೇಸು ಹಾಕಿದ ಪೊಲೀಸರು ಈಗ ಹೆಣಗಾಡುವಂತಾಗಿದೆ. ಏಕೆಂದರೆ, ಯಾರ ಮೇಲೆ ಕೇಸು ಹಾಕಿದ್ದಾರೋ ಆ ಹೆಸರಿನ ವ್ಯಕ್ತಿಗಳೇ ಅಸ್ತಿತ್ವದಲ್ಲಿಲ್ಲ, ಇನ್ನೂ ಹಲವಾರು ಮಂದಿಯ ವಿಳಾಸ ಸಿಗುತ್ತಲೇ ಇಲ್ಲ. ರಾಜ್ಯಾದ್ಯಂತ ಹುಡುಕಾಟ ನಡೆಸಿದರೂ ಅವರನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಫೋಟೋಗಳನ್ನು ಕಂಡ ಕಂಡ ಜಾಗದಲ್ಲಿ ಅಂಟಿಸಿ ಬೇಕಾಗಿದ್ದಾರೆ ಎಂಬ ಪೋಸ್ಟರ್ ಗಳನ್ನು ಹಾಕತೊಡಗಿದ್ದಾರೆ.
ಇದಿಷ್ಟೇ ಅಲ್ಲ. ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದರು ಎಂಬ ಕಾರಣಕ್ಕೆ ಬಂಧಿಸಲ್ಪಟ್ಟಿದ್ದ ವ್ಯಕ್ತಿಗಳು ಯಾವ ರೀತಿ ಅಪರಾಧ ಮಾಡಿದ್ದಾರೆ ಎಂಬುದನ್ನು ಕೋರ್ಟುಗಳಲ್ಲಿ ಸಾಬೀತುಪಡಿಸಲು ಪೊಲೀಸರು ಹೆಣಗಾಡುತ್ತಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಸಾಬೀತುಪಡಿಸಲು ಸಾಧ್ಯವಾಗದೇ ಕೋರ್ಟುಗಳಿಂದ ಛೀಮಾರಿಯನ್ನೂ ಹಾಕಿಸಿಕೊಳ್ಳುತ್ತಿದ್ದಾರೆ.
ಜನವರಿ 24 ರಂದು ಇಬ್ಬರು ವ್ಯಕ್ತಿಗಳು ಸಿಎಎ ಮತ್ತು ಎನ್ಆರ್ ಸಿ ವಿರುದ್ಧದ ಪ್ರತಿಭಟನೆ ವೇಳೆ ಗಲಭೆ ನಡೆಸಿದ್ದಲ್ಲದೇ, ಕೊಲೆ ಯತ್ನ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಇವರನ್ನು ನ್ಯಾಯಾಲಯಕ್ಕೂ ಹಾಜರುಪಡಿಸಲಾಗಿತ್ತು. ಆದರೆ, ನ್ಯಾಯಾಧೀಶರಾದ ಬಿಜ್ನೋರ್ ಸಂಜೀವ್ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ಅಭಿಪ್ರಾಯವನ್ನು ಹೇಳುವುದಿಲ್ಲ. ಪ್ರಕರಣದ ಸಾಧಕಬಾಧಕಗಳನ್ನು ಗಮನಿಸಿ ಈ ವ್ಯಕ್ತಿಗಳಿಗೆ ಜಾಮೀನು ಮಂಜೂರು ಮಾಡುತ್ತಿರುವುದಾಗಿ ಆದೇಶ ನೀಡಿದರು. ಇದು ಪೊಲೀಸರಿಗೆ ತೀವ್ರ ಹಿನ್ನಡೆಯನ್ನುಂಟು ಮಾಡಿತು.
ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಿಂದ ಇಮ್ರಾನ್ ಎಂಬುವ ವ್ಯಕ್ತಿಯನ್ನು (ಈತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ) ಬಂಧಿಸಲಾಗಿತ್ತು. ಆದರೆ, ಈತನೊಂದಿಗೆ ಎಫ್ಐಆರ್ ದಾಖಲಿಸಿದ್ದ ಮತ್ತೊಬ್ಬನನ್ನು ಬೇರೊಂದು ಸ್ಥಳದಲ್ಲಿ ಬಂಧಿಸಲಾಗಿದೆ. ಇವರಿಬ್ಬರು ಕಲ್ಲು ತೂರಿದ್ದರಿಂದ ಪೊಲೀಸರು ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯವು ಪೊಲೀಸರು ಆರೋಪಿಸಿರುವಂತೆ ಇವರಿಬ್ಬರು ಕಲ್ಲು ತೂರಾಟ ನಡೆಸಿದ್ದಕ್ಕಾಗಲೀ ಅಥವಾ ಹಿಂಸಾಚಾರ ನಡೆಸಿದ್ದಕ್ಕಾಗಲೀ ಯಾವುದೇ ಸಾಕ್ಷ್ಯಾಧಾರಗಳನ್ನು ಪೊಲೀಸರು ಒದಗಿಸುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಬ್ಬರಿಗೂ ಜಾಮೀನು ನೀಡುತ್ತಿರುವುದಾಗಿ ತಿಳಿಸಿದೆ.
ಬಂಧಿತ ಆರೋಪಿಗಳಿಂದ .315 ಬೋರ್ ಬುಲೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಇವರಿಬ್ಬರಿಂದ ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿಲ್ಲ. ಅಲ್ಲದೇ, ಗುಂಡಿನ ದಾಳಿಯಲ್ಲಿ ಯಾವೊಬ್ಬ ಪೊಲೀಸರೂ ಸಹ ಗಾಯಗೊಂಡಿಲ್ಲ ಎಂಬುದು ವಿಚಾರಣೆಯಿಂದ ಸಾಬೀತಾಗಿದೆ. ಕಲ್ಲು ತೂರಾಟದಿಂದ ಗಾಯಗೊಂಡಿರುವುದು ತಿಳಿದುಬಂದಿದೆ. ಆದಾಗ್ಯೂ, ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬುದನ್ನು ಸಾಬೀತುಪಡಿಸುವಂತಹ ಯಾವುದೇ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಇನ್ನೊಂದು ಪ್ರಕರಣದಲ್ಲಿ ಅಮಾಯಕನೊಬ್ಬನನ್ನು ಸಿಕ್ಕಿಸಲಾಗಿತ್ತು. ಬುಲಂದ್ ಶಹರ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 13 ಜನರ ಮೇಲೆ ಎಫ್ಐಆರ್ ದಾಖಲಿಸಲಾಗಿತ್ತು. ಡಿಸೆಂಬರ್ 20 ರಂದು ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ಕೇಸು ಇದು. ಪೊಲೀಸರು ಘಟನೆ ನಡೆದ 15 ಗಂಟೆಗಳ ನಂತರ ಎಫ್ಐಆರ್ ದಾಖಲಿಸಿದ್ದರು. ಅಲ್ಲದೇ, ಘಟನೆ ನಡೆದ ಸ್ಥಳದಿಂದ 8 ಕಿಲೋಮೀಟರ್ ದೂರದಲ್ಲಿರುವ ಗ್ರಾಮದ ವ್ಯಕ್ತಿಯೊಬ್ಬನ ಹೆಸರನ್ನೂ ಎಫ್ಐಆರ್ ನಲ್ಲಿ ದಾಖಲಿಸಲಾಗಿತ್ತು. ಆದರೆ, ಈ ವ್ಯಕ್ತಿ ಅಂದು ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿರಲಿಲ್ಲ ಅಥವಾ ಕೊಲೆ ಯತ್ನವನ್ನೂ ಮಾಡಿರಲಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನೀಡಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಕೋರ್ಟು ಪರಿಶೀಲಿಸಿದಾಗ ಈ ವ್ಯಕ್ತಿ ಅಲ್ಲಿ ನಡೆದ ಯಾವುದೇ ಘಟನೆಯಲ್ಲೂ ಭಾಗಿಯಾಗಿಲ್ಲದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಎಲ್ಲಾ 13 ಮಂದಿ ಆರೋಪಿಗಳಿಗೂ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಇನ್ನು ಮದ್ರಾಸಾಗಳ ವಿದ್ಯಾರ್ಥಿಗಳ ಮೇಲೆಯೂ ಕೇಸುಗಳನ್ನು ಹಾಕಲಾಗಿತ್ತು ಮತ್ತು ಬಂಧಿಸಲಾಗಿತ್ತು. ಆದರೆ, ಈ ಬಗ್ಗೆ ವಿಶೇಷ ತನಿಖಾ ತಂಡ ನಡೆಸಿದ ತನಿಖೆಯಲ್ಲಿ ವಿದ್ಯಾರ್ಥಿಗಳು ಯಾವುದೇ ಹಿಂಸಾಚಾರದಲ್ಲಿ ಭಾಗಿಯಾಗಿಲ್ಲ ಎಂದು ವರದಿ ನೀಡಿದ್ದರಿಂದ ವಿದ್ಯಾರ್ಥಿಗಳಿಗೆ ನ್ಯಾಯಾಲಯವು ಜಾಮೀನು ನೀಡಿದೆ.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಪೊಲೀಸರು ಬಹುತೇಕ ಪ್ರಕರಣಗಳಲ್ಲಿ ಮುಸ್ಲಿಂರನ್ನೇ ಗುರಿಯಾಗಿಸಿಕೊಂಡು ಎಫ್ಐಆರ್ ಗಳನ್ನು ದಾಖಲಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿರುವ ಪೀಪಲ್ಸ್ ಟ್ರಿಬ್ಯೂನಲ್ ಆನ್ ಸ್ಟೇಟ್ ಆ್ಯಕ್ಷನ್ ಇನ್ ಯುಪಿ ಸಂಸ್ಥೆಯು ಈ ವಿಚಾರವನ್ನು ಪತ್ತೆ ಮಾಡಿದೆ.
ಕೇವಲ ಮುಸ್ಲಿಂರನ್ನೇ ಗುರಿಯಾಗಿಸಿಕೊಂಡು ಪೊಲೀಸರು ಉದ್ದೇಶಪೂರ್ವಕವಾಗಿ ಅವರ ವಿರುದ್ಧ ಕೇಸುಗಳನ್ನು ಹಾಕಿರುವುದನ್ನು ಈ ಸಂಸ್ಥೆ ಪತ್ತೆ ಮಾಡಿದೆ. ದೆಹಲಿ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶ ಎ.ಪಿ.ಶಾ, ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಾಧೀಶ ಸುದರ್ಶನ ರೆಡ್ಡಿ, ಒರಿಸ್ಸಾ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶ ವಿ.ಗೋಪಾಲಗೌಡ, ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ಮಾಜಿ ಅಧ್ಯಕ್ಷರಾದ ಶಾಂತಾ ಸಿನ್ಹಾ ಸೇರಿದಂತೆ ಹಲವಾರು ಪ್ರಮುಖರನ್ನು ಒಳಗೊಂಡ ಈ ಸಂಸ್ಥೆಯು ಉತ್ತರ ಪ್ರದೇಶದಲ್ಲಿ ಪೊಲೀಸರು ಯಾವ ರೀತಿ ಪ್ರತಿಭಟನಾಕಾರರ ವಿರುದ್ಧ ಕೇಸುಗಳನ್ನು ಹಾಕುತ್ತಿದ್ದಾರೆ ಎಂಬುದರ ಬಗ್ಗೆ ಅಧ್ಯಯನ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ.