2013ರಲ್ಲಿ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಅವರನ್ನು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿತ್ತು. ದೇಶಾದ್ಯಂತ ಕಾಲಿ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡಿದ ನರೇಂದ್ರ ಮೋದಿ ಅಬ್ಬರದ ಚುನಾವಣಾ ಪ್ರಚಾರ ಮಾಡಿದ್ರು. ಮಾತಿನ ಕೌಶಲ್ಯದಿಂದಲೇ ಭಾರತಕ್ಕೆ ಹೊಸ ನಾಯಕ ಸಿಕ್ಕಿಬಿಟ್ಟ ಎನ್ನುವಂತೆ ಭಾಷಣ ಮಾಡಿದ್ದರು. ಈ ವೇಳೆ ಭಾರತಕ್ಕೆ ಕಪ್ಪು ಹಣ ವಾಪಸ್ ತರುವುದಾಗಿ ದೇಶದ ಜನರಿಗೆ ಆಶ್ವಾಸನೆಯನ್ನೂ ಕೊಟ್ಟಿದ್ದರು. ರಾಜಕಾರಣಿಗಳು ಸೇರಿದಂತೆ ಶ್ರೀಮಂತ ಕುಟುಂಬಸ್ಥರು ಸ್ವಿಸ್ಬ್ಯಾಂಕ್ನಲ್ಲಿ ಸಾವಿರಾರು ಕೋಟಿ ಹಣವನ್ನು ಗುಟ್ಟಾಗಿ ಇಟ್ಟಿದ್ದಾರೆ. ಆ ಹಣವನ್ನು ಭಾರತಕ್ಕೆ ವಾಪಸ್ ತಂದರೆ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ ಬರೋಬ್ಬರಿ 15 ಲಕ್ಷ ರೂಪಾಯಿ ಹಣವನ್ನು ಹಾಕಬಹುದು ಎಂದಿದ್ದರು. ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತಂದರೆ! ಆದರೆ ಬಿಜೆಪಿ ಬೇರೆಲ್ಲಾ ನಾಯಕರು ಪ್ರಚಾರ ಮಾಡಿದ್ದು, ನರೇಂದ್ರ ಮೋದಿ ಪ್ರಧಾನಿ ಆದರೆ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂಪಾಯಿ ಹಣಬರುತ್ತದೆ ಎಂದು.
ನರೇಂದ್ರ ಮೋದಿ ಮಾತನ್ನೇ ಬಿಜೆಪಿಯ ಉಳಿದ ನಾಯಕರು ತಿರುಚಿ ಪ್ರಚಾರ ಮಾಡಿಬಿಟ್ಟಿದ್ದರು. ಅದಾದ ಬೆನ್ನಲ್ಲೇ ಭಾರತೀಯ ಎಲ್ಲರಿಗೂ ಕೇಂದ್ರ ಸರ್ಕಾರ ಬ್ಯಾಂಕ್ ಖಾತೆ ತೆರೆಯುವಂತೆ ಸೂಚನೆ ಕೊಟ್ಟಿತ್ತು. ಯಾವುದೇ ಹಣ ಸಂದಾಯ ಮಾಡದೆ ಇದ್ದರೂ ಜೀರೋ ಬ್ಯಾಲೆನ್ಸ್ನಲ್ಲೂ ಈ ಖಾತೆ ಚಾಲ್ತಿಯಲ್ಲಿ ಇರಲಿದೆ ಎನ್ನಲಾಗಿತ್ತು. ಆಗಲೂ ಪ್ರಧಾನಿ ನರೇಂದ್ರ ಮೋದಿ ಹಣ ಹಾಕುತ್ತಾರೆ. ಅದೇ ಕಾರಣಕ್ಕೆ ಪ್ರತಿಯೊಬ್ಬರು ಬ್ಯಾಂಕ್ ಖಾತೆ ಹೊಂದುವುದು ಕಡ್ಡಾಯ ಎಂದು ಬಿಜೆಪಿ ನಾಯಕರೇ ಸ್ವತಃ ಮುಂದೆ ನಿಂತು ಜನಧನ್ ಖಾತೆ ಮಾಡಿಸಿದ್ದರು. ಆದರೆ ಆ ಬಳಿಕ ಯಾವ ಲಕ್ಷವೂ ಬರಲಿಲ್ಲ, ಪೈಸೆಯೂ ಬರಲಿಲ್ಲ. ಆದರೆ ಜೀರಿಗೆ ಮೆಣಸು ಡಬ್ಬಿಯಲ್ಲಿ ಭದ್ರವಾಗಿ ಇರುತ್ತಿದ್ದ ಹಣವೂ ಮಾರುಕಟ್ಟೆ ಪಾಲಾಗಿ ಜನರ ಬಳಿಕ ಖಾಲಿ ಕೈ ದಾಸಪ್ಪ ಎನ್ನುವಂತಾಯ್ತು.
ಇದೀಗ ಅದೇ ಜನಧನ ಖಾತೆಗೆ ಪ್ರಧಾನಿ ನರೇಂದ್ರ ಮೋದಿ ಹಣ ಹಾಕಿದ್ದಾರೆ. ಆದರೆ ಕಪ್ಪುಹಣದ 15 ಲಕ್ಷ ರೂಪಾಯಿ ಬಾಕಿ ಅಲ್ಲ. ಬದಲಿಗೆ ಕರೋನಾ ಸಾಂಕ್ರಾಮಿಕ ಸೋಂಕು ತಡೆಯಲು ಕೇಂದ್ರ ಸರ್ಕಾರ ಘೋಷಣೆ ಮಾಡಿದ ವಿಶೇಷ ಪ್ಯಾಕೇಜ್ನಲ್ಲಿ ಜನಧನ್ ಖಾತೆಧಾರರಿಗೆ ತಲಾ 500 ರೂಪಾಯಿ ಘೋಷಣೆ ಮಾಡಿದ್ದರು. ಅದರಂತೆ ಇದೀಗ ಜನಧನ್ ಖಾತೆಗೆ 500 ರೂಪಾಯಿ ಹಣ ಬಂದಿದೆ.
ಮುಂದಿನ 21 ದಿನಗಳ ಕಾಲ ಮನೆಯ ಲಕ್ಷ್ಮಣ ರೇಖೆ ದಾಟಿ ಹೊರಕ್ಕೆ ಬರಬೇಡಿ ಎಂದಿದ್ದ ಪ್ರಧಾನಿ ಕೇವಲ 500 ರೂಪಾಯಿ ಬ್ಯಾಂಕ್ ಹಾಕಿ ಜನರನ್ನು ಸಾಲುಗಟ್ಟಿ ನಿಲ್ಲುವಂತೆ ಮಾಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಇತರೆಡೆ ಜನರು 500 ರೂಪಾಯಿ ಹಣ ಪಡೆಯುವ ಉದ್ದೇಶದಿಂದ ಸಾಲುಗಟ್ಟಿ ನಿಂತಿದ್ದಾರೆ. ಸೋಷಿಯಲ್ ಡಿಸ್ಟೆನ್ಸ್ ಎಂದು ಕರೆ ಕೊಟ್ಟಿರುವ ನರೇಂದ್ರ ಮೋದಿ ಹಣವನ್ನು ಬ್ಯಾಂಕ್‌ಗೆ ಹಾಕುವ ಬದಲು ಬೇರೆ ರೀತಿಯಲ್ಲಿ ವ್ಯವಸ್ಥೆ ಮಾಡಬಹುದುದಿತ್ತು ಅಲ್ಲವೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಇದೀಗ ಜನರು ಮನೆಯಲ್ಲಿ ಇರುವುದರಿಂದ ಮನೆಯಲ್ಲಿ ಅಗತ್ಯ ಸಾಮಗ್ರಿಗಳ ಅವಶ್ಯಕತೆ ಇರುತ್ತದೆ. ಹಣ ಅವಶ್ಯಕತೆ ಅಷ್ಟಕಷ್ಟೆ. ಈಗಾಗಲೇ ಕೇಂದ್ರ ಸರ್ಕಾರದ ನೆರವಿಂದ ನೀಡುವ ಪಡಿತರ ಕೂಡ ಸೂಕ್ತ ರೀತಿಯಲ್ಲಿ ಕೊಡಲಾಗ್ತಿಲ್ಲ. ನೂರಾರು ಜನರನ್ನು ಒಟ್ಟಿಗೆ ಸೇರಿಸಿಕೊಂಡು ಪಡಿತರ ವಿತರಣೆ ಮಾಡುವ ಕೆಲಸ ಮಾಡಲಾಗ್ತಿದೆ. ಹಾಲಿನ ಸಂಗ್ರಹ ಹೆಚ್ಚಾಗಿದೆ. ತೆರೆದ ಮಾರುಕಟ್ಟೆಯಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗ್ತಿಲ್ಲ ಎನ್ನುವ ಕಾರಣದಿಂದ ಸರ್ಕಾರ ಉಚಿತವಾಗಿ ಹಂಚಿಕೆ ಮಾಡುವ ನಿರ್ಧಾರ ಮಾಡಲಾಗಿದೆ.
ಅರ್ಧ ಲೀಟರ್ ಹಾಲು ತೋರಿಸಿ ಜನರನ್ನು ಗುಂಪು ಗೂಡಿಸುವ ಕೆಲಸ ಮಾಡುತ್ತಿದೆ ಸರ್ಕಾರ. 10 ಕೆಜಿ ಅಕ್ಕಿ ಆಸೆಗಾಗಿ ಸಾಲುಗಟ್ಟಿ ನಿಲ್ಲುವಂತೆ ಮಾಡಿದೆ ರಾಜ್ಯ ಸರ್ಕಾರ. 500 ರೂಪಾಯಿ ಆಸೆ ತೋರಿಸಿ ಜನರನ್ನು ಬ್ಯಾಂಕ್ ಎದುರು ನಿಲ್ಲಿಸಿದೆ ಕೇಂದ್ರ ಸರ್ಕಾರ. ಆದರೆ ಕೇಂದ್ರ ಸರ್ಕಾರದ ಉದ್ದೇವೇನು? ಲಾಕ್‌ಡೌನ್ ಮಾಡಿದ್ದರ ಮಹತ್ವವೇನು? ಯೋಜನೆಗಳನ್ನು ಜಾರಿ ಮಾಡುವುದೇ ದೊಡ್ಡ ಸಾಧನೆಯಲ್ಲ. ಅದನ್ನು ಜಾರಿ ಮಾಡುವ ಸವಾಲನ್ನು ಹೇಗೆ ಜಾರಿ ಮಾಡುತ್ತೇವೆ ಎನ್ನುವುದಷ್ಟೇ ಮುಖ್ಯವಾಗುತ್ತದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರವೂ ಸೋತಿದೆ. ರಾಜ್ಯ ಸರ್ಕಾರವೂ ಸೋಲುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕರೋನಾ ಮಹಾಮಾರಿ ಇಡೀ ದೇಶಾದ್ಯಂತ ಬ್ರಹ್ಮಜಾಲದಂತೆ ವ್ಯಾಪಿಸುತ್ತಿದೆ. 21 ದಿನಗಳ ಕಾಲ ಯುದ್ಧವೆಂದು ಘೋಷಣೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯೇ ಜನರನ್ನು ಬೀದಿಗೆ ಕಳುಹಿಸುವ ಕೆಲಸ ಮಾಡುತ್ತಿರುವುದು ಯಾಕೆ ಎನ್ನುವ ಪ್ರಶ್ನೆಗೆ ಸಂಬಂಧಪಟ್ಟವರೇ ಉತ್ತರ ಕೊಡಬೇಕು. ಇಲ್ಲದಿದ್ದರೆ, ಜನರು ಬೀದಿಗೆ ಬಾರದಂತೆ ತಡೆದು ಯೋಜನೆಗಳನ್ನು ಜಾರಿ ಮಾಡಬೇಕಿದೆ.