ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈಶಾನ್ಯ ರಾಜ್ಯಗಳ ಹೊತ್ತಿ ಉರಿಯುತ್ತಿವೆ. ಇದೊಂದು ಸಂವಿಧಾನ ವಿರೋಧಿ ಕಾಯ್ದೆ, ಕೆಲವೇ ಕೆಲವು ಧರ್ಮಗಳನ್ನು ಓಲೈಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತರಲು ಹೊರಟಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದು ನೆಲೆಸಿರುವ ಮುಸ್ಲಿಂರನ್ನು ಕಡೆಗಣಿಸಿ ಕೇವಲ ಕೆಲವೇ ಧರ್ಮಗಳ ಅಕ್ರಮ ವಲಸಿಗರಿಗೆ ಮಣೆ ಹಾಕಲಾಗಿದೆ ಎಂದು ಆರೋಪಿಸಿ ನಡೆಯುತ್ತಿರುವ ಪ್ರತಿಭಟನೆಗಳು ತಾರಕಕ್ಕೇರುತ್ತಿವೆ.
ಅಸ್ಸಾಂ, ಮೇಘಾಲಯ, ಪಶ್ಚಿಮಬಂಗಾಳ, ದೆಹಲಿ, ಅರುಣಾಚಲ ಪ್ರದೇಶ ಸೇರಿದಂತೆ ಮತ್ತಿತರೆ ರಾಜ್ಯಗಳಲ್ಲಿ ಸಾರ್ವಜನಿಕರು, ವಿವಿಧ ಪಕ್ಷಗಳ ಪರ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರ ಉದ್ದೇಶಪೂರ್ವಕವಾಗಿಯೇ ಮುಸ್ಲಿಂರನ್ನು ಕಡೆಗಣಿಸಿದೆ. ಈ ಮೂಲಕ ಸಂವಿಧಾನದ 14 ನೇ ವಿಧಿಯ ಆಶಯಕ್ಕೆ ಧಕ್ಕೆಯನ್ನುಂಟು ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸುತ್ತಿದ್ದಾರೆ.
ಅಸ್ಸಾಂನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಅಲ್ಲಲ್ಲಿ ಪೊಲೀಸ್ ಠಾಣೆ, ರೈಲ್ವೆ ನಿಲ್ದಾಣಗಳಿಗೆ ಬೆಂಕಿ ಹಚ್ಚಲಾಗಿದೆ. ಇದರಿಂದ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದೆ. ಆದರೆ, ಕೇಂದ್ರ ಸರ್ಕಾರ ಈ ವಿಚಾರದಲ್ಲಿ ತನ್ನ ನಿಲುವಿನಿಂದ ಹಿಂದೆ ಸರಿಯುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ.
ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಗೃಹ ಸಚಿವ ಅಮಿತ್ ಶಾ ಅವರೇ ಖುದ್ದಾಗಿ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
ಅಸ್ಸಾಂನ ರಾಜವಂಶಸ್ಥ ಕಿರೀಟ್ ಪ್ರದ್ಯೋತ್ ದೇಬ್ ಬರ್ಮನ್ ಅವರು ತಮ್ಮನ್ನು ಭೇಟಿ ಮಾಡಿದ ಅಮಿತ್ ಶಾಗೆ ಸೊಪ್ಪು ಹಾಕಿಲ್ಲ. ಪ್ರತಿಭಟನೆಯನ್ನು ಹಿಂಪಡೆದು ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಿಕೊಂಡ ಮನವಿಗೂ ಡೋಂಟ್ ಕೇರ್ ಅಂದಿದ್ದಾರೆ ರಾಜವಂಶಸ್ಥ.
ಯಾವುದೇ ಕಾರಣಕ್ಕೂ ಈ ಕಾಯ್ದೆಯನ್ನು ಕಾನೂನಾಗಿ ಜಾರಿಗೊಳಿಸಲು ಬಿಡುವುದಿಲ್ಲ. ಸಂಧಾನ ಅಥವಾ ರಾಜೀ ಮಾತೇ ಇಲ್ಲ. ಕೇಂದ್ರ ಸರ್ಕಾರದ ಈ ಉದ್ದೇಶಿತ ಕಾನೂನಿನ ವಿರುದ್ಧ ಸುಪ್ರೀಂಕೋರ್ಟಿಗೆ ಮನವಿ ಸಲ್ಲಿಸುತ್ತೇವೆ ಎಂದು ಕಿರೀಟ್ ಪ್ರದ್ಯೋತ್ ದೇಬ್ ಬರ್ಮನ್ ಸ್ಪಷ್ಟ ಮಾತುಗಳಲ್ಲಿ ಅಮಿತ್ ಶಾಗೆ ಹೇಳಿ ಕಳಿಸಿರುವುದು ಕೇಂದ್ರಕ್ಕೆ ಇರಿಸು ಮುರಿಸು ಉಂಟುಮಾಡಿದೆ.
ರಾಜ್ಯ ಸರ್ಕಾರಗಳಿಂದಲೂ ತೀವ್ರಗೊಂಡ ವಿರೋಧ
ಇನ್ನು ದೆಹಲಿ, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ಪಂಜಾಬ್ ಮತ್ತು ಚತ್ತೀಸ್ ಗಢ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಈ ಉದ್ದೇಶಿತ ಕಾನೂನಿಗೆ ವಿರೋಧವನ್ನು ಮುಂದುವರಿಸಿದ್ದಾರೆ.
ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇರಳದ ಪಿಣರಾಯಿ ವಿಜಯನ್, ಪಂಜಾಬಿನ ಅಮರಿಂದರ್ ಸಿಂಗ್, ಮಧ್ಯಪ್ರದೇಶದ ಕಮಲನಾಥ್ ಮತ್ತು ಚತ್ತೀಸ್ ಗಢದ ಭೂಪೇಂದ್ರ ಬಘೇಲಾ ಆರಂಭದಿಂದಲೂ ಈ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ್ದರು. ಇವರ ಸಾಲಿಗೆ ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿಕೊಂಡಿದ್ದಾರೆ.
ಒಂದು ವೇಳೆ ಕೇಂದ್ರ ಸರ್ಕಾರ ವಿರೋಧದ ಹೊರತಾಗಿಯೂ ಕಾನೂನನ್ನು ಜಾರಿಗೆ ತಂದರೆ ನಮ್ಮ ರಾಜ್ಯಗಳಲ್ಲಿ ಅದನ್ನು ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಘೋಷಿಸಿರುವ ಈ ಆರೂ ಮುಖ್ಯಮಂತ್ರಿಗಳು ಕಾಯ್ದೆಯನ್ನು ರದ್ದುಪಡಿಸಲು ಕಾನೂನು ವ್ಯಾಪ್ತಿಯಲ್ಲಿ ಅಗತ್ಯವಾದ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನಕ್ಕೆ ವಿರುದ್ಧವಾಗಿರುವ ಈ ಕಾನೂನನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಇದು ಸಂವಿಧಾನದ ಆಶಯವನ್ನೇ ಬುಡಮೇಲು ಮಾಡುವಂತಹ ಕಾನೂನಾಗಲಿದೆ. ಅಲ್ಲದೇ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಭಗತ್ ಸಿಂಗ್ ಅವರ ಸಮಗ್ರ ಭಾರತದ ಪರಿಕಲ್ಪನೆಗೆ ಧಕ್ಕೆ ತರುವಂತಹ ಕಾನೂನಾಗಿದೆ. ಆದ್ದರಿಂದ ನಾವು ಯಾವುದೇ ಕಾರಣಕ್ಕೂ ಇಂತಹ ಕಾನೂನನ್ನು ನಮ್ಮ ರಾಜ್ಯಗಳಲ್ಲಿ ಜಾರಿಗೆ ಬರಲು ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆದು ನಿಂತಿದ್ದಾರೆ.
ದೇಶದ ಆರ್ಥಿಕ ಪರಿಸ್ಥಿತಿ ತೀವ್ರ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಬಿಜೆಪಿ ದೇಶವನ್ನು ಧರ್ಮದ ಆಧಾರದಲ್ಲಿ ವಿಭಜನೆ ಮಾಡಲು ಹೊರಟಿದೆ. ಬಿಜೆಪಿ ತನಗೆ ತೋಚಿದಂತೆ ಮಾಡುತ್ತಿದೆ ಮತ್ತು ಧರ್ಮ ಮತ್ತು ಜಾತಿ ಹೆಸರಿನಲ್ಲಿ ಜನತೆಯನ್ನು ತಪ್ಪುದಾರಿಗೆ ಎಳೆಯುತ್ತಿದೆ. ದೇಶದಲ್ಲಿ ಈರುಳ್ಳಿ ಬೆಲೆ ಕೆಜಿಗೆ 150 ರೂಪಾಯಿವರೆಗೆ ಹೆಚ್ಚಳವಾಗಿದೆ ಈ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿಲ್ಲ. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆ ತರಲು ಹೊರಡುವ ಮೂಲಕ ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂಬುದು ಈ ಮುಖ್ಯಮಂತ್ರಿಗಳ ಆರೋಪ.
ಈ ಮಧ್ಯೆ ಕಾಂಗ್ರೆಸ್ ಪಕ್ಷ ದೇಶಾದ್ಯಂತ `ಭಾರತ ಉಳಿಸಿ’ ಆಂದೋಲನಕ್ಕೆ ಕರೆ ಕೊಟ್ಟಿರುವುದು ಪ್ರತಿಭಟನೆಯ ಕಾವು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.