ದೇಶದ ಸಂವಿಧಾನದ ತತ್ತ್ವಗಳನ್ನು ಗಾಳಿಗೆ ತೂರಿ ಅವುಗಳ ವಿರುದ್ಧವಾಗಿ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದನ್ನು ಧಿಕ್ಕರಿಸಬೇಕೆಂಬ ಸಹಿ ಸಂಗ್ರಹದ ಅಭಿಯಾನಕ್ಕೆ ದೇಶದ 2,000 ಕ್ಕೂ ಅಧಿಕ ವಿಜ್ಞಾನಿಗಳು ಮತ್ತು ವಿಜ್ಞಾನದ ವಿದ್ಯಾರ್ಥಿಗಳು ಸಹಿ ಹಾಕಿದ್ದಾರೆ.
ಹೀಗೆ ಸಹಿ ಹಾಕಿರುವವರ ಮೇಲೆ ಸರ್ಕಾರ ಹದ್ದಿನ ಕಣ್ಣಿಟ್ಟಿದೆ. ಸಿಎಎಯನ್ನು ವಿರೋಧಿಸುವ ಬಹಿರಂಗ ಪತ್ರಕ್ಕೆ ಸಹಿ ಹಾಕಿರುವ ವಿಚಾರ ತಿಳಿಯುತ್ತಿದ್ದಂತೆಯೇ ಕೇಂದ್ರ ಸರ್ಕಾರ ತನ್ನ ಅಧಿಕಾರಿಗಳ ಮೂಲಕ ವಿವಿಧ ಸಂಸ್ಥೆಗಳ ಮುಖ್ಯಸ್ಥರಿಗೆ ಮತ್ತು ವಿಜ್ಞಾನಿಗಳನ್ನು ಸಂಪರ್ಕಿಸಿ ನೀವು ಸಹಿ ಹಾಕಿದ್ದೀರಾ? ಹಾಕಿರುವ ಉದ್ದೇಶವೇನು? ಎಂಬುದರ ಬಗ್ಗೆ ವಿವರಣೆಯನ್ನು ಕೇಳಿದೆ.
ಹೀಗೆ ವಿಜ್ಞಾನಿಗಳು ಸಹಿ ಹಾಕಿರುವ ಬಹಿರಂಗ ಪತ್ರದ ಪ್ರತಿಯನ್ನು ಪುಣೆಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರೀಸರ್ಚ್(ಐಐಎಸ್ಇಆರ್) ನ ಆಡಳಿತ ಮಂಡಳಿಯ ಸದಸ್ಯರೂ ಆಗಿರುವ ಆಡಳಿತಾರೂಢ ಬಿಜೆಪಿ ನಾಯಕ ವಿಜಯ್ ಚೌತೈವಾಲೆ ಅವರು ಬಿಡುಗಡೆ ಮಾಡಿದ್ದಾರೆ. ಈ ಪ್ರತಿಯನ್ನು ಮಹಾರಾಷ್ಟ್ರ ಸರ್ಕಾರದ ಮುಖ್ಯಕಾರ್ಯದರ್ಶಿ, ಸಿಎಸ್ಐಆರ್ ನ ಮುಖ್ಯಸ್ಥರು, ಐಐಟಿ ಬಾಂಬೆ, ಐಐಎಸ್ಇಆರ್ ಪುಣೆ ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ) ಹಾಗೂ ಬಯೋಟೆಕ್ನಾಲಜಿ & ಉನ್ನತ ಶಿಕ್ಷಣ ಇಲಾಖೆಯ ಎಲ್ಲಾ ವಿಭಾಗಗಳ ಮುಖ್ಯಸ್ಥರಿಗೆ ಕಳುಹಿಸಿದ್ದಾರೆ.
ಪುಣೆಯ ಐಐಎಸ್ಇಆರ್ ನ ಮುಖ್ಯಸ್ಥರಿಗೆ ಈ ಸಂಬಂಧ ಪತ್ರ ಬರೆದಿರುವ ವಿಜಯ್, ನಿಮ್ಮ ಸಂಸ್ಥೆಯ ಮೂವರು ವಿಜ್ಞಾನಿಗಳು ಭಾರತ ಸರ್ಕಾರದ ಉದ್ದೇಶಿತ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧದ ಬಹಿರಂಗ ಪತ್ರಕ್ಕೆ ಸಹಿ ಹಾಕಿದ್ದಾರೆ (ಈ ಅಭಿಯಾನವನ್ನು ಪರೋಕ್ಷವಾಗಿ ಕಮ್ಯುನಿಸ್ಟರು ಪ್ರಾಯೋಜಿಸುತ್ತಿದ್ದಾರೆ) ಎಂದು ತಿಳಿಸಿದ್ದಾರೆ.
ಸರ್ಕಾರ ಈ ಅಭಿಯಾನದ ವಿರುದ್ಧ ಅಧಿಕಾರಿಗಳನ್ನು ಹೇಗೆ ಛೂ ಬಿಟ್ಟಿದೆ ಎಂಬುದಕ್ಕೆ ಇಲ್ಲಿವೆ ಕೆಲವು ಉದಾಹರಣೆಗಳು:- ಆಟೋಮಿಕ್ ಎನರ್ಜಿ ಇಲಾಖೆಯ ಕಾರ್ಯದರ್ಶಿ ಕೆ.ಎನ್.ವ್ಯಾಸ್ ಅವರು ಅಲಹಾಬಾದ್ ನಲ್ಲಿರುವ ಹರೀಶ್-ಚಂದ್ರ ರೀಸರ್ಚ್ ಇನ್ ಸ್ಟಿಟ್ಯೂಟ್ ನಿರ್ದೇಶಕ ಪಿನಾಕಿ ಮಜುಂದಾರ್ ಅವರನ್ನು ಸಂಪರ್ಕಿಸಿದ್ದಾರೆ. ಇದರೊಂದಿಗೆ ಸಹಿ ಹಾಕಿದವರ ಪಟ್ಟಿಯನ್ನೂ ಕಳುಹಿಸಿ, ನಿಮ್ಮಲ್ಲಿ ಯಾರಾದರೂ ಸಹಿ ಹಾಕಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಂಪರ್ಕಿಸಿರುವುದಾಗಿ ಕೇಳಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಮಜುಂದಾರ್ ಅವರು, `ಹೌದು’ ಎಂದಷ್ಟೇ ಹೇಳಿದ್ದಾರೆ.

ಅದೇರೀತಿ ವ್ಯಾಸ್ ಅವರು ಮುಂಬೈನ ಟಾಟಾ ಇನ್ ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್ (ಟಿಐಎಫ್ಆರ್) ಅನ್ನು ಸಂಪರ್ಕಿಸಿ ಇದಕ್ಕೆ ನಿಮ್ಮ ಸಿಬ್ಬಂದಿ ಸಹಿ ಹಾಕಿರುವುದರಿಂದ ಸಂಸ್ಥೆಯ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಯಾವುದೇ ಸಿಬ್ಬಂದಿ ಸಕ್ರಿಯ ರಾಜಕಾರಣದಲ್ಲಿ ಪಾಲ್ಗೊಳ್ಳುವಂತಿಲ್ಲ ಎಂಬ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರದ ಒಡೆದು ಆಳುವ ನೀತಿಗೆ ಮತ್ತೊಂದು ಉದಾಹರಣೆ ಎಂದರೆ ಮೊಹಾಲಿಯ ಐಐಎಸ್ಇಆರ್ ನ ನೂತನ ನಿರ್ದೇಶಕರಾಗಿರುವ ಜಯರಾಮನ್ ಗೌರಿಶಂಕರ್ ಅವರು, ಡಿಸೆಂಬರ್ 14 ರಂದು ಇಮೇಲ್ ಮೂಲಕ ತಮ್ಮ ಎಲ್ಲಾ ಸಿಬ್ಬಂದಿಗೆ ಸುತ್ತೋಲೆಯೊಂದನ್ನು ಹೊರಡಿಸಿ ಕೇಂದ್ರ ನಾಗರಿಕ ಸೇವೆಗಳು ಅಥವಾ ಸಿಸಿಎಸ್ ನಿಯಮಗಳು 1964 ರ ಪ್ರಕಾರ ಸರ್ಕಾರದ ನೀತಿಗಳ ಬಗ್ಗೆ ಹೇಳಿಕೆ ನೀಡುವ ಮುನ್ನ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಸೂಚನೆ ನೀಡುವ ಮೂಲಕ ತಮ್ಮ ಸಂಸ್ಥೆಯ ಸಿಬ್ಬಂದಿ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದಾರೆ.
ತಮ್ಮ ಸಂಸ್ಥೆಯ ಯಾವುದೇ ಸಿಬ್ಬಂದಿ ಅಭಿಯಾನಕ್ಕೆ ಸಹಿ ಹಾಕದಿದ್ದರೂ ಎಂದಿನಂತೆ ನಮ್ಮ ಕಚೇರಿಯಿಂದ ಸುತ್ತೋಲೆಯನ್ನು ಕಳುಹಿಸಲಾಗಿದೆ. ನಮ್ಮ ಸಿಬ್ಬಂದಿಯ ವಾಕ್ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವುದಿಲ್ಲ. ಆದರೆ, ಸರ್ಕಾರದ ನೀತಿ ನಿಯಮಗಳ ಬಗ್ಗೆ ಹೇಳುವ ಮುನ್ನ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಅವರು ಹೇಳಿದ್ದಾರೆ.
ಇದೇ ರೀತಿಯ ಎಚ್ಚರಿಕೆಯ ಸುತ್ತೋಲೆಯೊಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದ ಐಐಎಸ್ ಸಿ ನಿರ್ದೇಶಕ ಅನುರಾಗ್ ಕುಮಾರ್ ಅವರಿಗೆ ಬಂದಿದ್ದರೆ, ಭುವನೇಶ್ವರದ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರೀಸರ್ಚ್ ನ ನಿರ್ದೇಶಕ ಸುಧಾಕರ್ ಪಾಂಡ ಅವರಿಗೆ ನೇರವಾಗಿ ಪ್ರಧಾನಮಂತ್ರಿ ಕಚೇರಿಯಿಂದಲೇ ಸುತ್ತೋಲೆ ಬಂದಿದೆ.
ಈ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ತನ್ನ ನೀತಿಗಳ ವಿರುದ್ಧ ಧ್ವನಿ ಎತ್ತಿದವರನ್ನು ಮಟ್ಟ ಹಾಕುವ ಪ್ರಯತ್ನಕ್ಕೆ ಕೈ ಹಾಕಿದೆ. ಈಗಾಗಲೇ ದೇಶಾದ್ಯಂತ ಸಿಎಎ ವಿರುದ್ಧದ ಪ್ರತಿಭಟನೆಗಳು ನಿಲ್ಲಲಾರದಂತಹ ಪರಿಸ್ಥಿತಿಗೆ ಹೋಗಿವೆ. ಆದರೂ ಸರ್ಕಾರ ಮಾತ್ರ ಪ್ರತಿಭಟನಾಕಾರರ ವಿರುದ್ಧ ತನ್ನೆಲ್ಲಾ ಅಸ್ತ್ರಗಳನ್ನು ಬಳಸಿ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ.
ಕೃಪೆ: ದಿ ವೈರ್