ಮಂಗಳೂರು ಗೋಲಿಬಾರ್ ಪ್ರಕರಣದ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ಗೋಪಾಲಗೌಡ ನೇತೃತ್ವದ ಪೀಪಲ್ಸ್ ಟ್ರಿಬ್ಯುನಲ್ ಪೊಲೀಸರಿಗೆ ಕಾನೂನು ಪಾಲನೆಗಿಂತಲೂ ಹೆಣ ಉರುಳಿಸುವ ಗುರಿ ಹೊಂದಿದ್ದರು ಎಂದು ಅಭಿಪ್ರಾಯಪಟ್ಟಿದೆ.
ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಮಂಗಳೂರಿನಲ್ಲಿ 29/12 ಗೋಲಿಬಾರ್ ಪ್ರಕರಣದ ವಿಚಾರಣೆ ನಡೆಸಿರುವ ಪೀಪಲ್ಸ್ ಟ್ರಿಬ್ಯುನಲ್ ಕೂಡ ಒಟ್ಟು ಪ್ರಕರಣದ ನ್ಯಾಯಾಂಗ ತನಿಖೆ ನಡೆಯುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟಿದೆ. ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ವಿ.ಗೋಪಾಲಗೌಡ, ಹಿರಿಯ ನ್ಯಾಯವಾದಿ ಬಿ.ಟಿ.ವೆಂಕಟೇಶ್ ಮತ್ತು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರಿದ್ದ ಪೀಪಲ್ಸ್ ಟ್ರಿಬ್ಯುನಲ್ (ಜನತಾ ಅದಾಲತ್) ಕರ್ನಾಟಕ ಹೈಕೋರ್ಟ್, ಸುಪ್ರೀಂ ಕೋರ್ಟ್ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ತನ್ನ ವಿಚಾರಣಾ ವರದಿಯನ್ನು ಸಲ್ಲಿಸಿದೆ.
ಇಂಡಿಯನ್ ಸೋಷಿಯಲ್ ಇನ್ಸ್ ಟಿಟ್ಯೂಟ್ – ಬೆಂಗಳೂರು, ಕರ್ನಾಟಕ ನಾಗರಿಕ ಹಕ್ಕುಗಳ ರಕ್ಷಣೆಗಾಗಿ ಸಂಘಟನೆ ಮತ್ತು ಸಂವಿಧಾನ ಹಾದಿಯಲ್ಲಿ ಸಂಘಟನೆಗಳ ಜಂಟಿ ಆಶ್ರಯದ ಲೀಸನಿಂಗ್ ಪೋಸ್ಟ್ ಜಸ್ಟೀಸ್ ಗೋಪಾಲ ಗೌಡ ನೇತೃತ್ವದ ಟ್ರಿಬ್ಯುನಲ್ ನೇಮಕ ಮಾಡಿತ್ತು.
ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಪ್ರತಿಭಟನೆಗೆ ಅನುಮತಿ ನೀಡುವ ವಿಚಾರದಲ್ಲಿ ಪೊಲೀಸರು ತಮ್ಮ ನಿಲುವುಗಳನ್ನು ಆಗಾಗ ಬದಲಾಯಿಸಿದ್ದಾರೆ. ಅನುಮತಿ ನೀಡಿ ಅನಂತರ ತಿರಸ್ಕರಿಸಿದ್ದಾರೆ. ಡಿಸೆಂಬರ್‌ರಂದು ಸಂಜೆ ಮಂಗಳೂರಿನಲ್ಲಿ ಸೆಕ್ಷನ್ 144 ಪ್ರಕಾರ ನಿಷೇದಾಜ್ಞೆ ಹೊರಡಿಸುವ ಅಗತ್ಯ ಇರಲಿಲ್ಲ. ಮರುದಿನ ಗೋಲಿಬಾರ್ ನಡೆಸುವ ಪರಿಸ್ಥಿತಿ ನಿರ್ಮಾಣ ಆಗಿರಲಿಲ್ಲ ಎಂದು ಟ್ರಿಬ್ಯುನಲ್ ತೀರ್ಪಿನಲ್ಲಿ ಹೇಳಿದೆ.
ಡಿಸೆಂಬರ್‌ರಂದು ಹದ್ದು ಮೀರಿದ ಪೊಲೀಸ್ ಬಲ ಪ್ರಯೋಗ ಮಾಡಿರುವುದು ಪ್ರತ್ಯಕ್ಷದರ್ಶಿಗಳ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ ಎಂದಿರುವ ಟ್ರಿಬ್ಯುನಲ್, ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಿಂತಲೂ ಗುಂಡುಹಾರಿಸಿ ಅಮಾಯಕರನ್ನು ಕೊಲ್ಲುವ ದುರುದ್ದೇಶ ಇತ್ತು. ಇದು ಪೊಲೀಸ್ ಅಧಿಕಾರಿಯ ಹೇಳಿಕೆ ವಿಡಿಯೊ ಮತ್ತು ಪ್ರತ್ಯಕ್ಷದರ್ಶಿಗಳ ಅಹವಾಲುಗಳಿಂದ ಸ್ಪಷ್ಟವಾಗುತ್ತದೆ ಎಂದು ಪೀಪಲ್ಸ್ ಟ್ರಿಬ್ಯುನಲ್ ಅಭಿಪ್ರಾಯ ಪಟ್ಟಿದೆ.
ಪ್ರಮುಖವಾಗಿ ಮಂಗಳೂರು ನಗರ ಪೊಲೀಸರು ತಮ್ಮ ಕರ್ತವ್ಯ ನಿರ್ವಹಣೆ ವೇಳೆ ನಾಗರಿಕರ ಹಕ್ಕುಗಳಿಗೆ ಕಿಂಚಿತ್ತು ಮನ್ನಣೆ ನೀಡಿಲ್ಲ. ಹಲವು ನ್ಯಾಯಾಯಗಳ ಆದೇಶ ಮತ್ತು ಸರಕಾರದ ಆದೇಶಗಳು ಈ ಬಗ್ಗೆ ಸ್ಪಷ್ಟವಾಗಿವೆ. ಕರ್ನಾಟಕ ಪೊಲೀಸ್ ಕೈಪಿಡಿಯಲ್ಲಿ ನೀಡಲಾಗಿರುವ ಅಧಿಕಾರದ ವ್ಯಾಪ್ತಿಯನ್ನು ಮೀರಿ ವರ್ತಿಸಿದ್ದಾರೆ ಎಂಬ ಗಂಭೀರ ಅಂಶವನ್ನು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಡಿಸೆಂಬರ್ 18ರಂದು ನಿಷೇಧಾಜ್ಞೆ ಜಾರಿಗೊಳಿಸುವ ಅಗತ್ಯವೇ ಇರಲಿಲ್ಲ ಮತ್ತು ನಿಷೇಧಾಜ್ಞೆ ಜಾರಿಗೊಳಿಸುವ ಬಗ್ಗೆ ಪ್ರದೇಶದ ನಿವಾಸಿಗಳಿಗೆ ಪೊಲೀಸರು ಸರಿಯಾಗಿ ಮಾಹಿತಿ ನೀಡಲಿಲ್ಲ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಡಿ.19ರಂದು ಕೂಡ ಗೋಲಿ ಬಾರ್ ಮಾಡುವ ಪರಿಸ್ಥಿತಿಯನ್ನು ಪ್ರತಿಭಟನಾಕಾರರು ಸೃಷ್ಟಿಸಿರಲಿಲ್ಲ ಎಂದು ವರದಿ ಹೇಳಿದೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ ನಾಗರಿಕರ ಮೇಲೆ ಕೂಡ ವಿವೇಚನೆಯಿಲ್ಲದೆ ಲಾಠಿಚಾರ್ಜ್ ಮಾಡಿ, ಅವರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದರು ಎಂದು ಹೇಳಿರುವ ವರದಿಯು, ನ್ಯಾಯಮಂಡಳಿಯ ಮುಂದೆ ಹಾಜರಾದ ಗೋಲಿಬಾರ್ ಸಂತ್ರಸ್ತರು, ಸಾಕ್ಷಿಗಳು, ಹಿಂಸಾಚಾರದ ಸ್ಥಳದಲ್ಲಿ ಹಾಜರಿದ್ದ ಪೊಲೀಸರ ಬೇಜವಾಬ್ದಾರಿಯನ್ನು ಟ್ರಿಬ್ಯುನಲ್ ಮುಂದೆ ವಿವರಿಸಿದೆ ಎಂದು ಉಲ್ಲೇಖಿಸಿದೆ.
ಮಂಗಳೂರು ಗೋಲಿಬಾರ್ ಘಟನೆಯ ಪ್ರತ್ಯಕ್ಷದರ್ಶಿಗಳು, ಪೆಟ್ಟು ತಿಂದು ಗಾಯಗೊಂಡವರು, ಮೃತರ ಕುಟುಂಬದ ಸದಸ್ಯರು ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಟ್ರಿಬ್ಯುನಲ್ ಕಲಾಪಕ್ಕೆ ಹಾಜರಾಗಿ ಪೊಲೀಸರ ವಿರುದ್ಧ ನೇರ ಆರೋಪಗಳನ್ನು ಮಾಡಿದ್ದಾರೆ.
ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವ ವೇಳೆ ತಾರತಮ್ಯ ಧೋರಣೆ ಹೊಂದಿರಬಾರದು ಎಂದು ಕರ್ನಾಟಕ ಪೊಲೀಸ್ ಮ್ಯಾನ್ಯುವಲಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ, ಮುಸ್ಲಿಮರನ್ನು ಗುರಿ ಮಾಡಿ ಹಲ್ಲೆ ಮಾಡಿರುವುದು, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿರುವುದು ಪೊಲೀಸರು ನಿಯಮಗಳನ್ನು ಸಾರಸಗಟು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ.
ಸಾಕಷ್ಟು ಪ್ರಮಾಣದ ಪೊಲೀಸ್ ಬಲ ಇಲ್ಲದೇ ಇದ್ದಾಗ, ಲಾಠಿ ಚಾರ್ಜ್ ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಲಾಠಿ ಚಾರ್ಜ್ ನಡೆಸಬಾರದು ಎನ್ನುತ್ತದೆ ಪೊಲೀಸ್ ಮ್ಯಾನ್ಯುವಲ್. ಪೊಲೀಸರ ಹೇಳಿಕೆ ಪ್ರಕಾರ ಏಳು ಸಾವಿರ ಮಂದಿ ಪ್ರತಿಭಟನಾಕಾರರು ಇರುವುದೇ ಹಾಗಿದ್ದರೆ, ಅಲ್ಲಿ ಸೇರಿದ್ದ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದು ನಿಯಮದ ಉಲ್ಲಂಘನೆಯಾಗುತ್ತದೆ. ಪರಿಣಾಮಕಾರಿಯಾಗಿ ಲಾಠಿಚಾರ್ಜ್ ನಡೆಸಿ ಜನರನವ್ನು ಚದುರಿಸಲು ಸಾಧ್ಯವಾಗದಿದ್ದಾಗ ಅಂತಹ ಕ್ರಮ ಕೈಗೊಳ್ಳಬಾರದು ಎನ್ನುತ್ತದೆ ಪೊಲೀಸರು ಪಾಲಿಸಬೇಕಾದ ನಿಯಮ ಪುಸ್ತಕ.
ಪ್ರತ್ಯಕ್ಷದರ್ಶಿಗಳು ಮತ್ತು ವಿಡಿಯೋ ಪ್ರಕಾರ ಪೊಲೀಸರು ಕತೆ ಕಟ್ಟಿದ ಸಂಖ್ಯೆಯ ಪ್ರತಿಭಟನಾಕಾರರು ಅಲ್ಲಿ ಸೇರಿರಲಿಲ್ಲ. ಹಾಗಿದ್ದರೂ, ಜನರ ಗುಂಪನ್ನು ಚದುರಿಸಲು ಬಲ ಪ್ರಯೋಗಕ್ಕೆ ಮುನ್ನ, ಅಂದರೆ ಲಾಠಿಚಾರ್ಜ್, ಟಿಯರ್ ಗ್ಯಾಸ್ ಮತ್ತು ಗೋಲಿಬಾರಿಗೂ ಮುನ್ನ ಸಾಕಷ್ಟು ಎಚ್ಚರಿಕೆಯನ್ನು ನೀಡಬೇಕಾಗುತ್ತದೆ. ಅಂತಹ ನಿಯಮಗಳನ್ನು ಪಾಲಿಸಿರುವುದು ಕಂಡುಬಂದಿಲ್ಲ ಎಂದಿದೆ ವರದಿ.
ಪೊಲೀಸರು ಗುಂಡುಹಾರಿಸುವಾಗ ಸೊಂಟದಿಂದ ಕೆಳಕ್ಕೆ ಮಾತ್ರ ಹೊಡೆಯಬೇಕೆಂದಿದೆ. ಆದರೆ, ಸಾವನಪ್ಪಿದವರ ಮತ್ತು ಗುಂಡೇಟಿನಿಂದ ಗಾಯಗೊಂಡ ಹಲವರ ದೇಹದಲ್ಲಿ ಎದೆ ಮತ್ತು ಮುಖಕ್ಕೆ ಗುಂಡು ಹೊಡಿದಿರುವುದು ಸ್ಪಷ್ಟವಾಗಿದೆ.
ಪೊಲೀಸರು ಅತಿಯಾದ ಬಲ ಉಪಯೋಗಿಸಲು ಎಂ.ಎಂ. ಕಿಣಿ ಅವರ ಬಂದೂಕು ಅಂಗಡಿಗೆ ಪ್ರತಿಭಟನಾಕಾರರು ದಾಳಿ ಮಾಡಿದರು ಎಂಬ ಪೊಲೀಸರ ಕತೆಗೆ ಯಾವುದೇ ಸಾಕ್ಷ್ಯ ನೀಡಲಾಗಿಲ್ಲ. ಸರಕಾರ ಮತ್ತು ಅಧಿಕಾರಿಗಳು ನಿಯಮ ಉಲ್ಲಂಘಿಸಿ ಗೊಲಿಬಾರಿಂದ ಸಾವನ್ನಪ್ಪಿದ ಕುಟುಂಬದವರಿಗ ಪರಿಹಾರ ನೀಡಿಲ್ಲ. ನಾಡಿನ ಕಾನೂನು ಕಟ್ಟಳೆಗಳ ಪ್ರಕಾರ ಅವರು ಪರಿಹಾರ ಪಡೆಯಲು ಅರ್ಹರು ಎಂದು ವರದಿ ಟಿಪ್ಪಣಿ ಮಾಡಿದೆ.