ಕರ್ನಾಟಕದಲ್ಲಿ ಭೂ ದಾಖಲೆಗಳನ್ನು ಪಡೆಯುವುದು ನಿಜಕ್ಕೂ ತ್ರಾಸದಾಯಕ ಕೆಲಸ. ತಾಸುಗಟ್ಟಲೆ ಸರತಿ ಸಾಲು, ನಾನಾತರದ ಕಡತಗಳನ್ನು ಸಂಪಾದಿಸುವ ಕೆಲಸ ಜೊತೆಗೆ ಸಾವಿರಾರು ತಲೆನೋವುಗಳು ಜನಸಾಮಾನ್ಯರನ್ನು ಹೈರಾಣಾಗಿಸುತ್ತವೆ. ಈ ತ್ರಾಸದಾಯಕ ಕೆಲಸವನ್ನು ಕಡಿಮೆ ಮಾಡಲು ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಂತರ್ಜಾಲ ತಾಣವಾದ ಕಾವೇರಿ ಆನ್ಲೈನ್ ಸರ್ವಿಸಸ್ ಅನ್ನು ಪ್ರಾರಂಭಿಸಿದೆ. ಆದರೆ, ಇಲ್ಲೂ ಆಧೇ ರೀತಿಯ ಸಮಸ್ಯೆಗಳು ತಲೆದೋರಿದರೆ ಜನರು ಏನು ಮಾಡಬೇಕು?
ಕಾವೇರಿ ಆನ್ಲೈನ್ ಸರ್ವಿಸಸ್ ಆರಂಭವಾದಾಗಿಂದ ಒಂದಲ್ಲ ಒಂದು ರೀತಿಯ ತಲೆನೋವು ಜನರನು ಭಾದಿಸುತ್ತಲೇ ಇದೆ. ಅದರಲ್ಲೂ ಋಣಭಾರ ಪ್ರಮಾಣಪತ್ರ (EC) ಹಾಗೂ ದೃಢೀಕೃತ ಪ್ರಮಾಣಪತ್ರದ ನಕಲು ಪಡೆಯಲಿಚ್ಚಿಸುವ ನಾಗರಿಕರು ಹಲವು ಬಾರಿ ಪ್ರಯತ್ನಿಸಿದರೂ ಯಾವುದೇ ಫಲ ಕೊಡದೇ ಇದ್ದಾಗ ಆಕ್ರೋಶ ಹೆಚ್ಚಾಗುವುದು ಸಹಜ. ಕಚೇರಿಗಳಿಗೆ ಅಲೆದಾಡಿ ಸುಸ್ತಾದ ಜನರು, ಕಂಪ್ಯೂಟರ್ ಎದುರು ಕುಳಿತರೂ ಬೇಕಾದ ದಾಖಲೆಗಳು ಪಡೆಯಲು ಸಾಧ್ಯವಾಗದಿದ್ದಲ್ಲಿ ಎಲ್ಲಿ ಹೋಗಬೇಕು?
ಬೆಂಗಳೂರಿನ ನಿವಾಸಿಯಾದ ರವಿ ಕುಮಾರ್ ಎಂಬುವವರು ಪ್ರತಿಧ್ವನಿಗೆ ನೀಡಿದ ಮಾಹಿತಿಯ ಪ್ರಕಾರ, ಹಲವು ಬಾರಿ ಕಾವೇರಿ ಆನ್ಲೈನ್ ಸರ್ವಿಸ್ ವೆಬ್‌ಸೈಟ್ ಸರಿಯಾಗಿ ಸ್ಪಂದಿಸುವುದಿಲ್ಲ. ಸಾಕಷ್ಟು ಬಾರಿ ಪ್ರಯತ್ನಿಸಿದರೂ ನಮಗೆ ಬೇಕಾದ ದಾಖಲೆಗಳು ಸಿಗುವುದಿಲ್ಲ. ಅರ್ಜಿಯ ಶುಲ್ಕ ಸಲ್ಲಿಸಲು ಹೋದರೆ ಬ್ಯಾಂಕಿನಿಂದ ಹಣ ಕಡಿತಗೊಳ್ಳುತ್ತದೆ. ಆದರೆ, ಅರ್ಜಿ ಸ್ವೀಕೃತವಾಗುವುದಿಲ್ಲ, ಎಂದಿದ್ದಾರೆ.
ಇದಕ್ಕಿಂತಲೂ ಅತೀ ಮುಖ್ಯವಾದ ಸಮಸ್ಯೆ ಏನೆಂದರೆ, ಸದ್ಯಕ್ಕೆ ‘Anywhere Registration’ ಸೌಲಭ್ಯವಿರುವುದರಿಂದ ಒಂದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಾಖಲಾದ ಕಡತಗಳು ಇನ್ನೊಂದು ಕಚೇರಿಯಲ್ಲಿ ದಾಖಲಾಗುವುದಿಲ್ಲ. ಇದರಿಂದಾಗಿ, ಆಸ್ತಿಯು ಎಲ್ಲಿ ನೋದಣಿಯಾಗಿದೆ ಎಂದು ತಿಳಿದುಕೊಂಡು ಅದೇ ಕಚೇರಿಯ ವ್ಯಾಪ್ತಿಯಲ್ಲಿ ಹುಡುಕಿದರೆ ಮಾತ್ರ ದಾಖಲೆಗಳು ಲಭ್ಯವಾಗುತ್ತವೆ. ಅಗತ್ಯ ಸಂದರ್ಭಗಳಲ್ಲಿ ಬೇಕಾದ ದಾಖಲೆಗಳನ್ನು ಪಡೆಯಲು ಇದೊಂದು ಬಹು ದೊಡ್ಡ ಸಮಸ್ಯೆಯಾಗಿದೆ.

ಇನ್ನು EC ಪಡೆಯುವುದು ಎಷ್ಟು ಕಷ್ಟವೆಂದರೆ, ಜನರಿಗೆ ಬೇಕಾದಾಗ ದಾಖಲೆಗಳು ಕೈಗೆ ಸಿಗುವುದೇ ಇಲ್ಲ. ಇನ್ನು ಸಕಾಲ ಯೋಜನೆಯಡಿಯಲ್ಲಿ ದಾಖಲೆಗಳನ್ನು ಪಡೆಯಲು ಅರ್ಜಿ ಸಲ್ಲಿಸಿದರೆ ಅರ್ಜಿಗೆ ತಗುಲುವ ಶುಲ್ಕ ಕಡಿತಗೊಳ್ಳುತ್ತಿದೆಯೇ ಹೊರತು, ಅರ್ಜಿಯ ಕ್ರಮ ಸಂಖ್ಯೆ ನಿಮಗೆ ಸಿಗುವುದಿಲ್ಲ.
ಇನ್ನು ನೋಂದಣಿಯಾದ ದಾಖಲೆಗಳನ್ನು ಸರ್ವರ್‌ಗೆ ಅಪ್‌ಲೋಡ್ ಮಾಡಲು ಹೋದರೆ ಅದು ಇನ್ನೊಂದು ಸಮಸ್ಯೆಯನ್ನು ನಿಮ್ಮ ಮುಂದೆ ತೆರೆದಿಡುತ್ತದೆ. ತಂತ್ರಾಂಶದಲ್ಲಿನ ಎಡವಟ್ಟು ಅಧಿಕಾರಿಗಳನ್ನು ಕೂಡಾ ಹೈರಾಣಾಗಿಸಿವೆ ಎಂದರೆ, ಪರಿಸ್ಥಿತಿ ಹೇಗಿರಬೇಕು ನೀವೇ ಊಹಿಸಿಕೊಳ್ಳಿ. ತಂತ್ರಾಂಶದಲ್ಲಿನ ಲೋಪದೋಷಗಳಿಂದಾಗ ಸಾಮಾನ್ಯ ಜನರು ಪರಿತಪಿಸುವ ಪರಿಸ್ಥಿತಿ ಇಂದು ಒದಗಿ ಬಂದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ (ಗಣಕಯಂತ್ರ ವಿಭಾಗ) ಆಗಿರುವ ಪಾಷಾ ಅವರು, ಈ ಎಲ್ಲಾ ಸಮಸ್ಯೆಗಳು ಅಧಿಕಾರಗಳ ಗಮನಕ್ಕೆ ಬಂದಿದ್ದು ಒಂದೊಂದಾಗಿ ಎಲ್ಲವನ್ನೂ ಸರಿಪಡಿಸಲಾಗುವುದು, ಎಂದು ಹೇಳಿದ್ದಾರೆ.
ಇದೇ ಉತ್ತರವನ್ನು ಪ್ರತೀ ಬಾರಿ ಅಧಿಕಾರಿಗಳು ಹೇಳುತ್ತಲೇ ಬಂದಿದ್ದಾರೆ. ಆದರೆ, ಸಮಸ್ಯೆಗಳಿಗ ಪರಿಹಾರ ಮಾತ್ರ ಇನ್ನೂ ಸಿಗಲಿಲ್ಲ. ಎಲ್ಲಾ ರೀತಿಯ ಉದ್ದೇಶಗಳಿಗೂ ಬೇಕಾಗುವ ECಯನ್ನು ಪಡೆಯುವುದೇ ಜನರ ಬಹುದೊಡ್ಡ ಸಮಸ್ಯೆಯಾಗಿ ಏರ್ಪಟ್ಟಿದೆ.

ಹೀಗಾಗಿ ಜನರು ಹೇಳುವ ಪ್ರಕಾರ, ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸುವದಕ್ಕಿಂತಲೂ ನೇರವಾಗಿ ಸಬ್ ರಿಜಿಸ್ಟ್ರಾರ್ ಆಫೀಸ್‌ಗಳಲ್ಲೇ ದಾಖಲೆಗಳು ದೊರೆತಲ್ಲಿ ಸ್ವಲ್ಪವಾದರೂ ಅನುಕೂಲವಾಗಲಿದೆ. ಅಲ್ಲಿ ಕನಿಷ್ಟ ಪಕ್ಷ ತಾವು ಕಟ್ಟಿದ ಶುಲ್ಕಕ್ಕೆ ರಶೀದಿಯಾದರೂ ದೊರೆಯುತ್ತದೆ ಎನ್ನುವ ಸಮಾಧಾನ ಜನಸಾಮಾನ್ಯರದು. ಇನ್ನಾದರೂ, ಅಧಿಕಾರಿಗಳು ಇತ್ತ ಕಡೆ ಸ್ವಲ್ಪ ಗಮನ ಹರಿಸಿ ಜನಸಾಮಾನ್ಯರ ತಲೆನೋವನ್ನು ದೂರ ಮಾಡುವ ಕುರಿತು ಯೋಚಿಸಬೇಕಾಗಿದೆ.