ಇಂದು ಅಧಿಕಾರಕ್ಕಾಗಿ ಹಾಗೂ ಮತಗಳಿಕೆಗಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹೆಸರನ್ನು ಬಳಸಿಕೊಳ್ಳುತ್ತಿರುವ ಆರ್‌ಎಸ್‌ಎಸ್ ಬೆಂಬಲಿತ ಬಿಜೆಪಿ ಪಕ್ಷದ ನಾಯಕರಿಗೆ 72 ವರ್ಷಗಳ ಹಿಂದೆ ಅದೇ ಸರ್ದಾರ್ ಪಟೇಲ್ ಅವರು ಗಾಂಧಿ ಹತ್ಯೆಯ ಕಾರಣಕ್ಕಾಗಿ ಆರ್‌ಎಸ್‌ಎಸ್ ಅನ್ನು ನಿಷೇಧಿಸಿದ್ದು ಮರೆತು ಹೋಯಿತೇ? ತಮ್ಮ ಧೃಡ ನಿಲುವುಗಳಿಗೆ ಸದಾ ಹೆಸರುವಾಸಿಯಾಗಿದ್ದ ಸರ್ದಾರ್ ಪಟೇಲ್ ಅವರನ್ನು ಇಂದು ಕ್ಷುಲ್ಲಕ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವ ರಾಜಕೀಯ ನಾಯಕರಿಗೆ ಅಂದು ಸರ್ದಾರ್ ಪಟೇಲ್ ಅವರು ಬರೆದಿದ್ದ ಪತ್ರ ನೆನಪಿಲ್ಲವೇನೋ.
ಆರ್‌ಎಸ್‌ಎಸ್ ಅನ್ನು ನಿಷೇಧಿಸಿದ ಬಳಿಕ ಅಂದರೆ ಫೆಬ್ರುವರಿ 4, 1948ರಂದು ಅಂದಿನ ಆರ್‌ಎಸ್‌ಎಸ್ ನಾಯಕರಿಗೆ ಪತ್ರ ಬರೆದಿದ್ದ ಸರ್ದಾರ್ ಪಟೇಲ್ ಅವರು “ಆರ್‌ಎಸ್‌ಎಸ್ ದೇಶದ ಸ್ವಾತಂತ್ರ್ಯಕ್ಕೆ ದಕ್ಕೆ ಉಂಟು ಮಾಡುತ್ತಿದೆ ಹಾಗೂ ಭಾರತ ಮಾತೆಯ ಹೆಸರಿಗೆ ಮಸಿ ಬಳಿಯುತ್ತಿದೆ. ಇದು ದೇಶದಲ್ಲಿ ದ್ವೇಷ ಮತ್ತು ಹಿಂಸೆಯ ಮೂಲ ಬೇರು. ಹೀಗಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಕಾನೂನು ಬಾಹಿರ ಸಂಘಟನೆಯೆಂದು ಘೋಷಿಸಲು ಭಾರತ ಸರ್ಕಾರವು ನಿರ್ಧರಿಸಿದೆ” ಎಂದಿದ್ದರು. ಆಗಿನ ಉಪ ಪ್ರಧಾನಿ ಹಾಗೂ ಗೃಹ ಸಚಿವರಾಗಿದ್ದ ಸರ್ದಾರ್ ಪಟೇಲ್ ಅವರು ಬರೆದ ಪತ್ರ ಇಂದಿಗೂ ಗೃಹ ಕಚೇರಿಯ ಕಡತಗಳಲ್ಲಿ ಲಭ್ಯವಿದೆ.
ತಮ್ಮ ಧೃಢ ನಿರ್ಧಾರದಿಂದ ಪಟೇಲರು ಹಿಂದೆ ಸರಿಯಲಿಲ್ಲ. ಅಂದಿನ ಆರ್‌ಎಸ್‌ಎಸ್ ಮುಖ್ಯಸ್ಥರಾದ ಎಂ ಎಸ್ ಗೋಲ್ವಾಲ್ಕರ್, ಪಟೇಲರಿಗೆ ಪತ್ರ ಬರೆದು “ಆರ್‌ಎಸ್‌ಎಸ್ ಭಾರತದ ಜಾತ್ಯಾತೀತೆಯನ್ನು ಹಾಗೂ ಭಾರತದ ಧ್ವಜವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತದೆ. ಹಾಗಾಗಿ, ಆರ್‌ಎಸ್‌ಎಸ್ ಮೇಲೆ ವಿಧಿಸಿರುವ ನಿಷೇಧವನ್ನು ಹಿಂಪಡೆಯಬೇಕು,” ಎಂದು ಹೇಳಿದ್ದರು.

ಭಾರತದ ಸಂವಿಧಾನವನ್ನು ಒಪ್ಪಿಕೊಳ್ಳುವ ಹಾಗೂ ಅದರಂತೆ ನಡೆಯುವ ಮತ್ತು ಭಾರತದ ಧ್ವಜವನ್ನು ಒಪ್ಪಿಕೊಳ್ಳುವ ಒಪ್ಪಂದದ ಮೇರೆಗೆ 1949ರ ಜುಲೈ 11ರಂದು ಸರ್ದಾರ್ ಪಟೇಲರು ಆರ್‌ಎಸ್‌ಎಸ್ ಮೇಲಿನ ನಿಷೇಧವನ್ನು ಹಿಂಪಡೆದರು. ಇಲ್ಲಿ ಆರ್‌ಎಸ್‌ಎಸ್ ಸಂಪೂರ್ಣವಾಗಿ ಭಾರತದ ಧ್ವಜದ ಎದುರು ಶರಣಾಗತವಾಗುವವರೆಗೂ ಪಟೇಲರು ತಮ್ಮ ಪಟ್ಟು ಸಡಿಲಿಸಲಿಲ್ಲ. ಇಂತಹ ಸಂಘಟನೆಯನ್ನು ಸರ್ದಾರ್ ಪಟೇಲರು ನಿಷೇಧಿಸಿ ಇಂದಿಗೆ 72 ವರ್ಷ ತುಂಬಿದೆ.
ಇದರ ನಂತರವೂ ಆರ್‌ಎಸ್‌ಎಸ್ ದೇಶದಲ್ಲಿ ಎರಡು ಬಾರಿ ನಿಷೇದಕ್ಕೆ ಒಳಗಾಗಿದೆ. ಇಂದಿರಾ ಗಾಂಧೀಯವರು ಪ್ರಧಾನ ಮಂತ್ರಿಯಾಗಿದ್ದಾಗ ಜಾರಿಗೊಳಿಸಿದ್ದ ತುರ್ತು ಪರಿಸ್ಥಿಯ ಸಂದರ್ಭದಲ್ಲಿ ಹಾಗೂ 1992ರ ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಘಟನೆಯ ನಂತರ ಆರ್‌ಎಸ್‌ಎಸ್‌ಅನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು.

ಅಂದು ಅಂತಹ ದಯನೀಯ ಸ್ಥಿತಿಯಲ್ಲಿದ್ದಂತಹ ಸಂಘಟನೆಯ ಇಂದಿನ ನಾಯಕರು ಅದೇ ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನಾಡುತ್ತಾರೆ. ಮಾಹಾತ್ಮಾ ಗಾಂಧಿಯನ್ನು ಹತ್ಯೆಗೈದ ಆರೋಪದ ನಿಷೇಧವಾಗಿದ್ದ ಆರ್‌ಎಸ್‌ಎಸ್‌ನ ನಾಯಕರು ಇಂದಿಗೂ ಮಹಾತ್ಮಾ ಗಾಂಧಿಯ ಕುರಿತು ಸಾರ್ವಜನಿಕ ಸಭೆಗಳಲ್ಲಿ ಕೀಳು ಮಟ್ಟದ ಭಾಷೆಯನ್ನು ಪ್ರಯೋಗ ಮಾಡಿ ತಮ್ಮ ಮನಸ್ಥಿತಿ ಇಂದಿಗೂ ಬದಲಾಗಿಲ್ಲ ಎಂಬುದನ್ನು ತೋರಿಸಿಕೊಡುತ್ತಿದ್ದಾರೆ.