ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಬಹುನಿರೀಕ್ಷಿತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಸಿ ಆರ್) ಕಾಯ್ದೆಯನ್ನು ಪರಾಮರ್ಶೆಗೆ ಒಳಪಡಿಸದೆ, ಚರ್ಚೆಯಿಲ್ಲದೇ ಕಾಯ್ದೆಯಾಗಿಸಿ, ಮಧ್ಯರಾತ್ರಿ ರಾಷ್ಟ್ರಪತಿ ಕೈಯಿಂದ ಸಹಿ ಹಾಕಿಸುವ ಮೂಲಕ ಬೀಗಿದ್ದ ಬಿಜೆಪಿಯ ಮೋದಿ-ಶಾ ಜೋಡಿಯು ವಿದ್ಯಾರ್ಥಿಗಳು, ವಿವಿಧ ನಾಗರಿಕ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಕಳೆದ ಒಂದು ವಾರದಿಂದ ನೀಡುತ್ತಿರುವ ಪ್ರತಿಭಟನೆಯ ಹೊಡೆತಕ್ಕೆ ತತ್ತರಿಸಿ ಹೋಗಿದೆ.
ಭಾರತದ ಸಂವಿಧಾನದಲ್ಲಿ ವ್ಯಕ್ತಿಯ ಧರ್ಮ ಅಥವಾ ಜಾತಿ ಆಧರಿಸಿ ಪೌರತ್ವ ಕಲ್ಪಿಸುವುದು ಅಸಂವಿಧಾನಿಕ ಎಂದು ಸ್ಪಷ್ಟವಾಗಿ ಹೇಳಿದೆ. ಈ ಮೂಲ ತತ್ವವನ್ನು ಬಹುಮತದ ಮದದಲ್ಲಿ ಉಲ್ಲಂಘಿಸಿದ ಮೋದಿ-ಶಾ ಜೋಡಿಯು ತಮ್ಮ ಮಾತೃಸಂಸ್ಥೆ ಆರ್ ಎಸ್ ಎಸ್ ಮೆಚ್ಚಿಸುವ ಭರದಲ್ಲಿ ಎಡವಿ ಬಿದ್ದಿದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಇಡೀ ಜಗತ್ತಿನಲ್ಲಿ ಅತ್ಯಂತ ದೊಡ್ಡದಾದದ್ದು. ಇಂಥ ರಾಷ್ಟ್ರದಲ್ಲಿ ಸಂವಿಧಾನ ವಿರೋಧಿ ನಡೆಯಿಟ್ಟ ಕೇಂದ್ರ ಸರ್ಕಾರವನ್ನು ಜಗತ್ತಿನ ಮಾಧ್ಯಮಗಳು ಕಟು ಶಬ್ದಗಳಲ್ಲಿ ಟೀಕಿಸಿವೆ. ಹಲವು ಸಂಘ ಸಂಸ್ಥೆಗಳು, ವಿಶ್ಚವಿದ್ಯಾಲಯಗಳು ಸಿಎಎ ವಿರುದ್ಧದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವ ಮೂಲಕ ಚಳವಳಿಯ ತೀವ್ರತೆ ವ್ಯಾಪಕವಾಗುವಂತೆ ಮಾಡುವಲ್ಲಿ ಸಫಲವಾಗಿವೆ. ಮೊದಲ ಬಾರಿಗೆ ಈ ಪರಿಯ ವಿರೋಧ ಎದುರಿಸುತ್ತಿರುವ ಕೇಂದ್ರ ಸರ್ಕಾರವು ಜನರ ಹೋರಾಟದ ಎದುರು ದಿಗ್ಮೂಡವಾಗಿದೆ. ಇದಕ್ಕೆ ಪೂರಕವೆಂಬಂತೆ ಎಂಬ ಕೆಲವು ದಿನಗಳ ಹಿಂದೆ ದೆಹಲಿಯ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಮೋದಿಯವರು “ಎನ್ ಸಿ ಆರ್ ಬಗ್ಗೆ ಇದುವರೆಗೆ ಚರ್ಚೆಯೇ ಆಗಿಲ್ಲ. ದೇಶದಲ್ಲಿ ಬಂಧನ ಕೇಂದ್ರಗಳೇ ಇಲ್ಲ” ಎನ್ನುವ ಮೂಲಕ ಸುಳ್ಳಿನ ಪರದೆಯಲ್ಲಿ ಸಿಲುಕಿಕೊಂಡಿದ್ದಾರೆ.
ಸುಮಾರು ಒಂದೂವರೆ ತಾಸು ಭಾಷಣ ಮಾಡಿದ್ದ ನರೇಂದ್ರ ಮೋದಿಯವರು ಅಪ್ಪಿತಪ್ಪಿಯೂ ಪೊಲೀಸರ ಅಟ್ಟಹಾಸದಲ್ಲಿ ಪ್ರಾಣ ಕಳೆದುಕೊಂಡವರು, ಗಾಯಗೊಂಡ ವಿದ್ಯಾರ್ಥಿಗಳ ಬಗ್ಗೆ ಮರುಕ ವ್ಯಕ್ತಪಡಿಸಲಿಲ್ಲ. ಪೊಲೀಸರು ಅಮಾಯಕರು ಎನ್ನುವ ಮೂಲಕ ಅವರ ಬೆಂಬಲಕ್ಕೆ ನಿಂತಿದ್ದ ಪ್ರಧಾನಿ, ಪ್ರತಿಭಟಿಸುವ ನಾಗರಿಕ ಹಕ್ಕನ್ನು ಹಿಂಸಾಚಾರದ ಮೂಲಕ ಮೊಟಕುಗೊಳಿಸಿದ ಆರಕ್ಷಕರ ದಬ್ಬಾಳಿಕೆಯ ಬಗ್ಗೆ ತುಟಿಬಿಚ್ಚಲಿಲ್ಲ. ಇದು ಹೋರಾಟದ ಕಿಚ್ಚನ್ನು ಮತ್ತಷ್ಟು ವ್ಯಾಪಕವಾಗಿಸಿದೆ.
ಪ್ರಧಾನಿ ಭಾಷಣದಲ್ಲಿ ಪ್ರಸ್ತಾಪದ ಎರಡು ವಿಚಾರಗಳ ಬಗ್ಗೆ ದೇಶಾದ್ಯಾಂತ ತೀವ್ರ ಚರ್ಚೆಯಾಗುತ್ತಿದ್ದು, ಮೋದಿಯವರು ಸಾರ್ವಜನಿಕವಾಗಿ ತೀವ್ರ ಮುಜುಗರಕ್ಕೆ ಒಳಗಾಗುವಂತಾಗಿದೆ. 2014ರ ನಂತರ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಎನ್ ಆರ್ ಸಿಯ ಬಗ್ಗೆ ಚರ್ಚೆಯಾಗಿಲ್ಲ ಎನ್ನುವ ಹಸಿ ಸುಳ್ಳು ಒಂದಾದರೆ ದೇಶದಲ್ಲಿ ಬಂಧನ ಕೇಂದ್ರಗಳೇ ಇಲ್ಲ ಎನ್ನುವ ಅವರ ಘಂಟಾಘೋಷದ ಹೇಳಿಕೆ ಬಿಜೆಪಿ ನಾಯಕರನ್ನು ಮುಖಹೀನಗೊಳಿಸಿದೆ.
ಎನ್ ಆರ್ ಸಿಯ ಬಗ್ಗೆ ಗೃಹ ಸಚಿವ ಹಾಗೂ ನರೇಂದ್ರ ಮೋದಿಯ ಬಂಟ ಅಮಿತ್ ಶಾ ಕಂಡಕಂಡಲ್ಲಿ ಒದರಿದ್ದಾರೆ. 2019ರ ಪ್ರಣಾಳಿಕೆಯಲ್ಲಿ ಬಿಜೆಪಿಯು ಎನ್ ಆರ್ ಸಿ ಜಾರಿಗೊಳಿಸಲಾಗುವುದು ಎನ್ನುವ ಭರವಸೆ ನೀಡಿದೆ. ಈಗ ತನ್ನದೇ ಆಟದಲ್ಲಿ ತಲೆಕೆಳಕಾಗಿರುವ ಬಿಜೆಪಿಗೆ ಸಾರ್ವಜನಿಕ ಆಕ್ರೋಶವನ್ನು ತಣಿಸುವ ಹಾದಿ ಸಿಗದೇ ಒದ್ದಾಡುತ್ತಿದೆ. ಎನ್ ಆರ್ ಸಿ ಗುಮ್ಮದ ಮೂಲಕ ಜನರಲ್ಲಿ ಆತಂಕ ಸೃಷ್ಟಿಸಿ ಅಧಿಕಾರ ಹಿಡಿಯುವುದು ಬಿಜೆಪಿಯ ಕಾರ್ಯತಂತ್ರಗಳಲ್ಲಿ ಒಂದು ಎಂಬುದನ್ನು ಬಿಜೆಪಿಯ ನಾಯಕರೇ ಒಪ್ಪಿಕೊಳ್ಳುತ್ತಾರೆ. 2021ರಲ್ಲಿ ನಡೆಯುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿಸಿಕೊಂಡಿರುವ ಶಾ, ಅಲ್ಲಿ ಗೆಲ್ಲಲು ಎನ್ ಆರ್ ಸಿ ಅಸ್ತ್ರ ಪ್ರಯೋಗಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ಬಿಜೆಪಿಯ ಅಧ್ಯಕ್ಷ ದೇಶಾದ್ಯಂತ ಎನ್ ಆರ್ ಸಿ ಯನ್ನು 2024ರ ಲೋಕಸಭಾ ಚುನಾವಣೆಯ ಒಳಗೆ ಪೂರ್ಣಗೊಳಿಸಲಾಗುವುದು ಎಂದೂ ಹೇಳಿಬಿಟ್ಟಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯ ಮೇಲಿನ ಚರ್ಚೆಯಲ್ಲಿ ಲೋಕಸಭೆಯಲ್ಲಿ ರಾಜಾರೋಷವಾಗಿ ಎನ್ ಆರ್ ಸಿ ಬರುತ್ತದೆ ಎಂದು ಶಾ ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೇ ರಾಷ್ಟ್ರಪತಿ ಅವರು ಉಭಯ ಸದನದವನ್ನು ಉದ್ದೇಶಿಸಿ ಮಾತನಾಡುವಾಗ ಎನ್ ಆರ್ ಸಿ ಜಾರಿಗೊಳಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹೀಗೆ ಎಲ್ಪ ಕಡೆಯಿಂದಲೂ ಬೆತ್ತಲಾಗಿರುವ ಬಿಜೆಪಿಯು ತೀವ್ರ ಹಿನ್ನಡೆ ಅನುಭವಿಸುತ್ತಿದೆ. ಪಕ್ಷದ ವಲಯದಲ್ಲಿ ಚರ್ಚೆಯಾಗದೇ ಇದ್ದಲ್ಲಿ ಅಮಿತ್ ಶಾ ಅವರು ಎನ್ ಆರ್ ಸಿ ಪ್ರಸ್ತಾಪಿಸಿದ್ದ ಉದ್ದೇಶ ಏನಾಗಿತ್ತು?
ತನ್ನ ಬಲಗೈ ಬಂಟ ಶಾ ಅವರನ್ನು ಸಮರ್ಥಿಸಬೇಕಾದ ಅನಿವಾರ್ಯತೆಗೆ ಸಿಲುಕಿರುವ ನರೇಂದ್ರ ಮೋದಿ ಎನ್ ಆರ್ ಸಿ ಚರ್ಚೆಯೇ ಆಗಿಲ್ಲ ಎಂದು ಹೇಳುವ ಮೂಲಕ ವಿಶ್ವಾಸಾರ್ಹತೆಯ ಪರೀಕ್ಷೆಗೆ ಒಳಗಾಗಿದ್ದಾರೆ. ರಾಮಲೀಲಾ ಮೈದಾನದಲ್ಲಿ ನಿಂತು ಮೋದಿ ಆಡಿರುವ ಮೂತುಗಳು ಸುಳ್ಳುಗಳ ಪೊಟ್ಟಣ ಎಂಬುದು ಸಾಬೀತಾಗಿದೆ. ಇಷ್ಟಕ್ಕೆ ಸುಮ್ಮನಾಗದ ಮೋದಿಯವರು ವಿರೋಧಿಗಳನ್ನು ಅಣಿಯುವ ಬರದಲ್ಲಿ ಮತ್ತೊಂದು ಸುಳ್ಳಿನ ಕುಣಿಕೆಗೆ ಸಿಲುಕಿದ್ದಾರೆ. ದೇಶದಲ್ಲಿ ಬಂಧನ ಕೇಂದ್ರಗಳೆ ಇಲ್ಲ ಎನ್ನುವ ಅವರ ಸಾರ್ವಜನಿಕ ಹೇಳಿಕೆ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ದೇಶದಲ್ಲಿ ಆರು ಬಂಧನ ಕೇಂದ್ರಗಳಿವೆ. ಅಲ್ಲಿ 900ಕ್ಕೂ ಅಧಿಕ ವಿದೇಶಿ ಪ್ರಜೆಗಳನ್ನು ಇರಿಸಲಾಗಿದೆ ಎಂಬ ಉತ್ತರವನ್ನು ಸದನದಲ್ಲಿ ಮೋದಿ ಸಂಪುಟದ ಸಚಿವರು ಒಪ್ಪಿಕೊಂಡಿರುವುದು ಬಿಜೆಪಿ ಹಾಗೂ ಅದರ ನಾಯಕತ್ವವನ್ನು ಇನ್ನಿಲ್ಲದಂತೆ ಕಾಡಲಾಂಭಿಸಿದೆ.
ವಿರೋಧ ಪಕ್ಷಗಳನ್ನು ಅಣಿಯುವ ಬರದಲ್ಲಿ ಹಾಗೂ ಅಮಿತ್ ಶಾರನ್ನು ಸಾರ್ವಜನಿಕ ಟೀಕೆಯಿಂದ ಪಾರು ಮಾಡಲು ಮುಂದಾಗಿ ಮೋದಿಯವರು ನಗೆಪಾಟಲಿಗೆ ಈಡಾಗಿದ್ದಾರಲ್ಲದೇ ಬಿಜೆಪಿಯ ವಕ್ತಾರರು ಮಾಧ್ಯಮಗಳಲ್ಲಿ ಪಕ್ಷವನ್ನು ಸಮರ್ಥಿಸಲಾಗದೇ ತಿಣುಕಾಡುತ್ತಿದ್ದಾರೆ.
ಆನೆ ನಡೆದದ್ದೇ ಎಂಬಂತೆ ವರ್ತಿಸುತ್ತಿದ್ದ ಅಮಿತ್ ಶಾ ಹಾಗೂ ಮೋದಿಯವರು ನಿರೀಕ್ಷಿಸದ ಮಟ್ಟಿಗೆ ಸಾರ್ವಜನಿಕ ಹೋರಾಟಗಳು ದೇಶಾದ್ಯಂತ ನಡೆಯುತ್ತಿದ್ದು, ಸಾವಿರಾರು ಮಂದಿ ಜಾಥಾ, ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದರಿಂದ ಕಂಗಾಲಾಗಿರುವ ಪೊಲೀಸರು ಅಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಿ ನಿಷೇಧಾಜ್ಞೆ ಹೊರಡಿಸುವ ಮೂಲಕ ತೀವ್ರ ಟೀಕೆ ಎದುರಿಸುತ್ತಿದ್ದಾರೆ. ಬಿಜೆಪಿ ಸರ್ಕಾರಗಳಿರುವ ರಾಜ್ಯಗಳಲ್ಲಿ ವಿಶೇಷವಾಗಿ ಮುಸ್ಲಿಮ್ ಸಮುದಾಯದ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂಬ ದೂರುಗಳು ಸಾಮಾನ್ಯವಾಗಿವೆ. ದೇಶದ ಅತ್ಯಂತ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಕನಿಷ್ಠ 20 ಮಂದಿ ಪ್ರತಿಭಟನಾಕಾರರು ಸಾವಿಗೀಡಾಗಿದ್ದು, ಹಲವು ಸಾವುಗಳು ಅನುಮಾನಕ್ಕೆ ಕಾರಣವಾಗಿವೆ. ಇದಕ್ಕೆ ಹೊಣೆ ಯಾರು? ವಿರೋಧ ಪಕ್ಷಗಳ ನಾಯಕರನ್ನು ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಲು ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರಗಳು ನೀಡದಿರುವುದೂ ಬಿಜೆಪಿಯ ರಕ್ತ ಚರಿತೆಯ ಮತ್ತೊಂದು ಭಾಗದಂತೆ ಭಾಸವಾಗುತ್ತಿದೆ. ಬಹುಮತ ಇರುವುದರಿಂದ ತನಗೆ ಅಂಕುಶ ಹಾಕಲಾಗದು ಎಂದು ಭಾವಿಸಿದ್ದ ಬಿಜೆಪಿಯ ಸುಳ್ಳಿನ ಸರಮಾಲೆ ಕಳಚಿ ಬಿದ್ದಿದೆ.
ಜಾರ್ಖಂಡ್ ವಿಧಾನಸಭೆಯ ಸೋಲು, ಶ್ರೀಮಂತ ರಾಜ್ಯ ಮಹಾರಾಷ್ಟ್ರ ಕಳೆದುಕೊಂಡು ಕಂಗಾಲಾಗಿದ್ದ ಬಿಜೆಪಿಯು ನಾಗರಿಕ ಹೋರಾಟವನ್ನು ಕಡೆಗಣಿಸಲಾಗದ ಮಟ್ಟಕ್ಕೆ ತನ್ನನ್ನು ತಂದಿಟ್ಟುಕೊಂಡಿದೆ. ಸರ್ಕಾರದ ನಡೆಗಳು ಅನುಮಾನ ವ್ಯಾಪಕವಾಗುವಂತೆ ಮಾಡಿದೆಯೇ ವಿನಾ ಅದನ್ನು ಬಗೆಹರಿಸುವ ಪ್ರಯತ್ನವಾಗಿಲ್ಲ. ಹೋರಾಟ ಹತ್ತಿಕ್ಕುವ ಹಂತದಲ್ಲೂ ಕಾನೂನು ಸುವ್ಯವಸ್ಥೆಯ ದುರ್ಬಳಕೆಯಾಗಿದೆ ಎಂಬುದನ್ನು ಪ್ರಾಣ ಚೆಲ್ಲಿರುವ ಕುಟುಂಬಗಳ ಸದಸ್ಯರ ಆಕ್ರಂದನ ಕೇಳಿದರೆ ಅರ್ಥವಾಗುವಂಥದ್ದು. ತನ್ನ ನಿರ್ಧಾರ ಸಮರ್ಥಿಸಲು ದಬ್ಬಾಳಿಕೆಗೆ ಮುಂದಾದ ಬಿಜೆಪಿ ನಾಯಕತ್ವವು ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರುವ ಮೂಲಕ ಅನಗತ್ಯ ಅಪಪ್ರಚಾರಕ್ಕೆ ಈಡಾಗಿದೆ. ಈ ಸರಣಿ ತಪ್ಪುಗಳು ಬಿಜೆಪಿಯ ಇಮ್ಮುಖ ಚಲನೆಯಂತೆ ಭಾಸವಾಗುತ್ತಿದೆ.