ಇರಾಕ್ ದೇಶದ ಕುರಿ ಮಾರಿ ಹೊಟ್ಟೆ ಹೊರೆಯುತ್ತಿದ್ದ ಅಲ್ ಬದ್ರಿ ಬುಡಕಟ್ಟಿಗೆ ಸೇರಿದ ಕುಟುಂಬದಲ್ಲಿ ಹುಟ್ಟಿದ್ದ ಬಾಗ್ದಾದಿ. ಪ್ರವಾದಿ ಮಹಮ್ಮದ್ ಕೂಡ ಇದೇ ಬುಡಕಟ್ಟಿಗೆ ಸೇರಿದವರಾಗಿದ್ದರು. ಖಲೀಫನಾಗಲು ಅಗತ್ಯವಾಗಿದ್ದ ಅರ್ಹತೆಯಿದು.
ಪದವಿಪೂರ್ವ ಶಿಕ್ಷಣದಲ್ಲೇ ಮುಗ್ಗರಿಸಿದ್ದ ಬಾಗ್ದಾದಿ, ದೃಷ್ಟಿದೋಷದ ಕಾರಣ ಇರಾಕಿನ ಸೇನೆಯಿಂದಲೂ ಬೇಗನೆ ಹೊರಬೀಳಬೇಕಾಯಿತು. ಇಸ್ಲಾಮಿಕ್ ಕಾನೂನು ಮತ್ತು ಕುರಾನನ್ನು ಅಭ್ಯಾಸ ಮಾಡಿದ. ಇದೇ ವಿಷಯದಲ್ಲಿ ಸದ್ದಾಮ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗಳಿಸಿದ. ಹರೆಯದಲ್ಲಿ ಅತ್ಯಂತ ನಾಚಿಕೆಯ ಸ್ವಭಾವದವನಾಗಿದ್ದ. ಹಿಂಸೆಯೆಂದರೆ ಆಗಿಬರುತ್ತಿರಲಿಲ್ಲ. ಮಸೀದಿಯಲ್ಲಿ ಪ್ರಾರ್ಥನೆಗಳನ್ನು ನಡೆಸುತ್ತಿದ್ದ ಇವನು, 2003ರಲ್ಲಿ ಇರಾಕಿನ ಮೇಲೆ ಅಮೆರಿಕಾ ನಡೆಸಿದ ದಾಳಿಯ ನಂತರದ ಅವಧಿಯಲ್ಲಿ ಅಲ್ ಖೈದಾ ಕಮಾಂಡರುಗಳ ಪ್ರಭಾವದಲ್ಲಿ ತೀವ್ರವಾದಿಯಾಗಿ ಬದಲಾದ. ತೀವ್ರವಾದಿ ಸಂಘಟನೆ ಕಟ್ಟುವಲ್ಲಿ ನೆರವಾದ. 2004ರ ಫೆಬ್ರವರಿಯಲ್ಲಿ ಇವನನ್ನು ಬಂಧಿಸಿ ಅಬು ಘರೀಬ್ ಸೆರೆಮನೆಯಲ್ಲಿ ಇರಿಸಿದ್ದ ಅಮೆರಿಕನ್ ಸೇನೆ ಅದೇ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಅಪಾಯಕಾರಿಯಲ್ಲವೆಂದು ಪರಿಗಣಿಸಿ ಬಿಡುಗಡೆ ಮಾಡಿತ್ತು.
ಇವನ ನೆರವಿನಿಂದ ಕಟ್ಟಲಾಗಿದ್ದ ತೀವ್ರವಾದಿ ಸಂಘಟನೆಯ ಹೆಸರನ್ನು 2006ರಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ (ಐ. ಎಸ್. ಐ.) ಎಂದು ಬದಲಾಯಿಸಲಾಯಿತು. ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ. 2010ರಲ್ಲಿ ಈ ಸಂಘಟನೆಯ ಮುಖ್ಯಸ್ಥ ಸತ್ತ ನಂತರ ಅವನ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಾಗ್ದಾದಿ. 2011ರಲ್ಲಿ ಮತ್ತೊಬ್ಬ ಭಯೋತ್ಪಾದಕ ಬಿನ್ ಲಾಡೆನ್ ನನ್ನು ಅಮೆರಿಕಾ ಕೊಂದು ಹಾಕಿದಾಗ ಕ್ರುದ್ಧನಾಗಿದ್ದ ಬಾಗ್ದಾದಿ. ಸೇಡು ತೀರಿಸುವ ಪಣ ತೊಟ್ಟ. ಇರಾಕಿನಾದ್ಯಂತ ಬಗೆ ಬಗೆಯ ಭಯಾನಕ ಸ್ಫೋಟಗಳ ಸರಣಿಯನ್ನೇ ನೆರವೇರಿಸಿದ. ಸಾವಿರಾರು ಮಂದಿ ಸತ್ತರು. ‘ಕ್ರಿಸ್ತ ವಿರೋಧಿ ಸೇನೆ’ಯನ್ನು ಹುಟ್ಟಿ ಹಾಕಿದ.

2013ರಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ನ್ನು ಸಿರಿಯಾಕ್ಕೂ ವಿಸ್ತರಿಸಿದ. ಐಎಸ್.ಐ.ಎಸ್. ಮುಖ್ಯಸ್ಥ ಎನಿಸಿಕೊಂಡ. 2014ರಲ್ಲಿ ಐಎಸ್ಐಎಸ್ ವಿಶ್ವವ್ಯಾಪಿ ಖಿಲಾಫತ್ತನ್ನು ಘೋಷಿಸಿತು. ಬಾಗ್ದಾದಿ ಅದರ ಖಲೀಫನಾದ. ಇಬ್ರಾಹಿಂ ಖಲೀಫ ಎಂದು ಕರೆಯಿಸಿಕೊಂಡ. ಐಎಸ್ಐಎಸ್ ಕೇವಲ ಐ.ಎಸ್. (ಇಸ್ಲಾಮಿಕ್ ಸ್ಟೇಟ್) ಆಯಿತು. ಮಧ್ಯಪ್ರಾಚ್ಯದ ಹಲವು ಸರ್ಕಾರಗಳು ಮತ್ತು ಸುನ್ನಿ ಮುಸ್ಲಿಂ ಧರ್ಮಗುರುಗಳನೇಕರಿಂದ ಖಿಲಾಫತ್ ಮತ್ತು ಖಲೀಫ ರಚನೆ-ನೇಮಕಕ್ಕೆ ವಿರೋಧ ವ್ಯಕ್ತವಾಯಿತು. ಇರಾಕ್ ಮತ್ತು ಸಿರಿಯಾದ ಹಲವಾರು ಪಟ್ಟಣಗಳನ್ನು ಕೈವಶ ಮಾಡಿಕೊಂಡು ಐ.ಎಸ್. ಧ್ವಜ ಹಾರಿಸಿದ. ಅವನ ಈ ಬರ್ಬರ ಕ್ರೌರ್ಯದ ಆಟ ಬಹುಕಾಲ ಸಾಗಲಿಲ್ಲ. ಅಮೆರಿಕಾ ನೇತೃತ್ವದ ಸಮ್ಮಿಶ್ರ ಪಡೆಗಳು ಮತ್ತು ಜೋರ್ಡಾನ್ ಪಡೆಗಳು ನಡೆಸಿದ ಹಲವು ದಾಳಿಗಳಲ್ಲಿ ಐ.ಎಸ್.ನ ಸಾವಿರಾರು ಹಂತಕರು ಹತರಾದರು. ಸರಣಿ ಸರಣಿ ಸೋಲುಗಳು ಅವನ ಬೆನ್ನು ಬಿದ್ದವು. ನೀನು ಹೇಳುವ ಇಸ್ಲಾಮಿಕ್ ಸ್ಟೇಟ್ ಎಲ್ಲಿದೆ, ನಾವು ಮರುಭೂಮಿಯಲ್ಲಿ ಬದುಕು ಕಳೆಯುತ್ತಿದ್ದೇವೆ ಎಂದು ಅವನ ಪತ್ನಿಯೊಬ್ಬಳು ಬಾಗ್ದಾದಿಯನ್ನು ಪ್ರಶ್ನಿಸಿದ್ದಳಂತೆ.
ಅಬು ಬಾಕರ್ ಅಲ್ ಬಾಗ್ದಾದಿಯ ಕರಾರುವಾಕ್ ಸುಳಿವು ನೀಡಿದಾತ ಯಾರು, ಯಾವ ದೇಶದವನು ಎಂಬುದನ್ನು ಅಮೆರಿಕಾ ಬಹಿರಂಗಪಡಿಸಿಲ್ಲ. ಜಗತ್ತಿನ ಬಹುಬೇಡಿಕೆಯ ಈ ಭಯೋತ್ಪಾದಕನ ತಲೆ ಒಪ್ಪಿಸಿದವರಿಗೆ ಎರಡೂವರೆ ಕೋಟಿ ಡಾಲರುಗಳ ಬಹುಮಾನವನ್ನು ಅಮೆರಿಕಾ ಘೋಷಿಸಿತ್ತು. ಈ ಮೊತ್ತದ ಬಹುಪಾಲು ಇಲ್ಲವೇ ಎಲ್ಲ ಹಣವೂ ಸುಳಿವು ನೀಡಿದ ವ್ಯಕ್ತಿಗೆ ದೊರೆಯಲಿದೆ. ಐಎಸ್ಐಎಸ್ ತನ್ನ ಸಂಬಂಧಿಯೊಬ್ಬನನ್ನು ಕೊಂದಿದ್ದ ಕಾರಣ ಈ ವ್ಯಕ್ತಿ ವ್ಯಗ್ರನಾಗಿದ್ದ.
ಸುಳಿವು ನೀಡಿದ ಈ ವ್ಯಕ್ತಿಯೂ ಐಎಸ್ಐಎಸ್ ಗೆ ಸೇರಿದವನು. ಬಾಗ್ದಾದಿಯ ನಂಬಿಕೆ ಗಳಿಸಿದ್ದವನು. ಬಾಗ್ದಾದಿಯ ಚಲನವಲನಗಳಿಗೆ ಅನುಕೂಲ ಮಾಡಿಕೊಡುತ್ತಿದ್ದವನು. ಅವನ ಕುಟುಂಬದ ಸದಸ್ಯರನ್ನು ವೈದ್ಯರ ಬಳಿಗೆ ಕರೆದೊಯ್ದು ವಾಪಸು ಕರೆತರುತ್ತಿದ್ದ. ಭಯೋತ್ಪಾದಕನ ಅಂತಿಮ ಅಡಗುದಾಣದ ಸಣ್ಣಪುಟ್ಟ ವಿವರಗಳನ್ನೂ ಆತ ಬಲ್ಲವನಾಗಿದ್ದ. ಈ ಅಡುಗುದಾಣದ ನಿರ್ಮಾಣದ ಉಸ್ತುವಾರಿಯಲ್ಲೂ ಈತ ನೆರವಾಗಿದ್ದ. ಈ ಅಂಶವೇ ಅಕ್ಟೋಬರ್ 26ರ ಅಂತಿಮ ಆಕ್ರಮಣಕ್ಕೆ ನಿರ್ಣಾಯಕವಾಗಿ ನೆರವಾಯಿತು. ಅಮೆರಿಕಾ ಈತನನ್ನು ನಂಬುವ ಮುನ್ನ ವಾರಗಟ್ಟಲೆ ಇವನ ನಡೆನುಡಿಗಳನ್ನು ಪರೀಕ್ಷಿಸಿತು.

ಸದಾ ಸೊಂಟಕ್ಕೆ ಆತ್ಮಹತ್ಯೆ ಪಟ್ಟಿಯನ್ನು (ಬೆಲ್ಟ್) ಕಟ್ಟಿಕೊಂಡೇ ತಿರುಗುತ್ತಿದ್ದ. ಸಿಕ್ಕಿಬಿದ್ದರೆ ತನ್ನನ್ನು ತಾನೇ ಕೊಂದುಕೊಳ್ಳುವುದು ಅವನ ಉದ್ದೇಶವಾಗಿತ್ತು. ಬಾಗ್ದಾದಿಯ ಸುಳಿವು ನೀಡಿದ್ದ ವ್ಯಕ್ತಿ ಈ ಅಂಶವನ್ನೂ ಅಮೆರಿಕೆಯ ಪಡೆಗಳಿಗೆ ಮುಂದಾಗಿಯೇ ತಿಳಿಸಿದ್ದ. ಅಮರಿಕಾದ ರಕ್ಷಣಾ ಪಡೆಗಳ ಅತ್ಯಂತ ನುರಿತ ಗಣ್ಯ ತುಕಡಿ ಡೆಲ್ಟಾ ಫೋರ್ಸ್ ಮತ್ತು 75ನೆಯ ರೆಜಿಮೆಂಟ್ ಈ ಕಾರ್ಯಾಚರಣೆಯ ಮುಂದಾಳತ್ವ ವಹಿಸಿತ್ತು. ಮಿಲಿಟರಿ ಶ್ವಾನಗಳನ್ನೂ ಬಳಸಲಾಗಿತ್ತು. ಕಮಾಂಡೋಗಳು ಸ್ಫೋಟಕ ಬಳಸಿ ಅಡಗುದಾಣವನ್ನು ಸಿಡಿಸಿದ ನಂತರ ಬಾಗ್ದಾದಿ ಮನೆಯ ಅಡಿಯಲ್ಲಿನ ಸುರಂಗಕ್ಕೆ ಓಡಿದ್ದ. ತನಗೆ ರಕ್ಷಣೆಯಾಗಿ ಮಾನವ ಗುರಾಣಿಗಳಂತೆ ಬಳಸಲು ತನ್ನ ಮೂವರು ಮಕ್ಕಳನ್ನು ಜೊತೆಗೆ ಒಯ್ದಿದ್ದ. ಮಿಲಿಟರಿ ನಾಯಿಯೊಂದು ತನ್ನ ಮೇಲೆ ಎರಗಿದ ಹಂತದಲ್ಲಿ ತನ್ನ ಸೊಂಟಕ್ಕೆ ಕಟ್ಟಿದ್ದ ಸ್ಫೋಟಕದ ಪಟ್ಟಿಯನ್ನು ಸಿಡಿಸುವ ಗುಂಡಿ ಅದುಮಿದ್ದ. ಮೂವರು ಮಕ್ಕಳೊಂದಿಗೆ ಸ್ಥಳದಲ್ಲೇ ಸತ್ತ. ಸುರಂಗದ ಚಾವಣೆ ಕುಸಿದ ಕಾರಣ ಮೂರೂ ದೇಹಗಳು ಆಂಶಿಕವಾಗಿ ಹೂತು ಹೋದವು. ಅವನ ಇಬ್ಬರು ಹೆಂಡಿರನ್ನೂ ಕಾರ್ಯಾಚರಣೆಯಲ್ಲಿ ಕೊಲ್ಲಲಾಯಿತು.
ಸುಳಿವು ನೀಡಿದಾತನ ನೆರವು ದೊರೆತರೂ ನೆಲಮಟ್ಟದ ಪರಿಸ್ಥಿತಿಯಲ್ಲಿ ಉಂಟಾಗುತ್ತಿದ್ದ ಬದಲಾವಣೆಗಳ ಕಾರಣ ಬಾಗ್ದಾದಿಯನ್ನು ಸೆರೆ ಹಿಡಿಯುವ ಅಥವಾ ಕೊಲ್ಲುವ ಹಲವು ಪ್ರಯತ್ನಗಳು ಈ ಮುನ್ನ ವಿಫಲವಾಗಿದ್ದವು. ಕಳೆದ ಕೆಲವು ತಿಂಗಳುಗಳಿಂದ ಇನ್ನೇನು ಕೈಗೆ ಸಿಕ್ಕ ಎನ್ನುವಷ್ಟರಲ್ಲೇ ಕೈ ಜಾರುತ್ತಿದ್ದ. ಅಂತಿಮ ದಾಳಿಯು ಹಲವಾರು ವರ್ಷಗಳ ಪ್ರಯತ್ನದ ಫಲ. ಅಮೆರಿಕೆಯ ಕಮಾಂಡೋಗಳು ಇರಾಕಿ ಮತ್ತು ಕುರ್ಡಿಶ್ ಪಡೆಗಳೊಂದಿಗೆ ಗುರುತು ಹತ್ತದಷ್ಟು ಬೆರೆತು ಹೋಗಿ ಬಾಗ್ದಾದಿ ಮತ್ತು ಐಎಸ್ಐಎಸ್ ನ ಹಿರಿಯ ಮುಂದಾಳುಗಳ ಶೋಧದಲ್ಲಿ ತೊಡಗಿದ್ದರು. ಇದೇ ಶೋಧದ ಫಲವಾಗಿ 2016ರಲ್ಲಿ ಈ ಸಂಘಟನೆಯ ಪ್ರಚಾರಕಾರ್ಯದ ಮುಖ್ಯಸ್ಥ ಅಬು ಮಹಮ್ಮದ್ ಅಲ್ ಅದ್ನಾನಿಯನ್ನು ಪತ್ತೆ ಮಾಡಿ ಕೊಲ್ಲಲಾಯಿತು. ಆದರೆ ಬಾಗ್ದಾದಿ ಪದೇ ಪದೇ ಜಾಗ ಬದಲಾಯಿಸುತ್ತಿದ್ದ ಮತ್ತು ಮೊಬೈಲ್ ಫೋನ್ ಅಥವಾ ಅಂತಹ ಇನ್ಯಾವುದೇ ಸಾಧನಗಳನ್ನು ಬಳಸುತ್ತಿರಲಿಲ್ಲ. ಹೀಗಾಗಿ ಅವನನ್ನು ಹಿಡಿಯುವುದು ಸವಾಲಾಗಿ ಪರಿಣಮಿಸಿತ್ತು.

ಕಡೆಗೂ ಸಿರಿಯಾದ ಇದ್ಲಿಬ್ ಪ್ರಾಂತ್ಯದ ಬರೀಶಾ ಪಟ್ಟಣದ ಎತ್ತರದ ಕಾಂಪೌಂಡುಗಳಿದ್ದ ಸುರಕ್ಷಿತ ಅಡಗುದಾಣಕ್ಕೆ ಸ್ಥಳಾಂತರಗೊಂಡಿದ್ದ ಬಾಗ್ದಾದಿ. ಮನೆಯ ಕೆಳಗೆ ಒಂದಲ್ಲ ಹಲವು ಸುರಂಗಗಳಿದ್ದವು. ಅವನನ್ನು ಜೀವಂತ ಹಿಡಿಯುವ ನಿರೀಕ್ಷೆಯನ್ನು ಇಟ್ಟುಕೊಂಡು ದಾಳಿಯನ್ನು ಯೋಜಿಸಲಾಗಿತ್ತು. ಕಾಂಪೌಂಡನ್ನು ಸುತ್ತುವರೆದ ಪಡೆಗಳು ಹೊರಬಿದ್ದು ಶರಣಾಗುವಂತೆ ಅವನನ್ನು ಕರೆದವು. ಸುಮಾರು ಹನ್ನೆರಡು ಮಕ್ಕಳು, ಹಲವು ವಯಸ್ಕರು ಹೊರಬಿದ್ದರು. ಆದರೆ ಬಾಗ್ದಾದಿ ಬರಲಿಲ್ಲ. ಮೂವರು ಮಕ್ಕಳೊಂದಿಗೆ ಸುರಂಗ ನುಗ್ಗಿ ಪಾರಾಗಲು ಹವಣಿಸಿದ.
2014ರಲ್ಲಿ ಇರಾಕಿನ ಮೂರನೆಯ ಒಂದರಷ್ಟು ಭೂಪ್ರದೇಶ ಐ.ಎಸ್.ವಶವಾಗಿತ್ತು. ಆ ದೇಶದ ಎರಡನೆಯ ಅತಿದೊಡ್ಡ ನಗರ ಮೋಸುಲ್ ಕೂಡ ಈ ಪ್ರದೇಶದಲ್ಲಿ ಸೇರಿತ್ತು. ತೈಲ ಬಾವಿಗಳು, ಮಿಲಿಟರೆ ನೆಲೆಗಳು, ವಿಶ್ವವಿದ್ಯಾಲಯಗಳು ಹಾಗೂ ಕೋಟ್ಯಂತರ ಡಾಲರುಗಳ ನಗದು ಮೇಲೆ ಐ.ಎಸ್. ಅಧಿಕಾರದಡಿ ಬಂದಿತ್ತು. ದಿನ ಬೆಳಗಾಗುವುದರೊಳಗಾಗಿ ಇಸ್ಲಾಮಿಕ್ ಸ್ಟೇಟ್ ಜಗತ್ತಿನ ಅತ್ಯಂತ ಸಿರಿವಂತ ಮತ್ತು ಅತ್ಯುತ್ತಮ ಶಸ್ತ್ರಾಸ್ತ್ರ ಸಜ್ಜಿತ ಭಯೋತ್ಪಾದಕ ಸಂಘಟನೆಯಾಗಿಬಿಟ್ಟಿತ್ತು. ರೋಮ್ ನ ಮೇಲೆ ನಮ್ಮ ಅಧಿಪತ್ಯ ಸ್ಥಾಪಿಸಲಿದ್ದೇವೆ, ಜಗತ್ತೇ ನಮ್ಮದಾಗಲಿದೆ ಎಂದು ಸಾರಿದ್ದ ಬಾಗ್ದಾದಿ.