ಉತ್ತರ ಪ್ರದೇಶದಲ್ಲಿ ಜನಪ್ರತಿನಿಧಿಗಳ ಸರ್ಕಾರವಿದೆಯೋ? ಅಥವಾ ಸರ್ವಾಧಿಕಾರಿ ಆಡಳಿತವಿದೆಯೋ? ಎಂಬ ಅನುಮಾನ ಅಲ್ಲಿನ ಜನರಲ್ಲಿ ಮನೆ ಮಾಡಿದೆ. ಪೌರತ್ವ ತಿದ್ದುಪಡಿ ಕಾನೂನನ್ನು ವಿರೋಧಿಸಿ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾನಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಸರ್ಕಾರ ಸಂವಿಧಾನ ವಿರೋಧಿ ನಿರ್ಧಾರವೊಂದನ್ನು ತೆಗೆದುಕೊಂಡು ಆಸ್ತಿಪಾಸ್ತಿ ಹಾನಿಯನ್ನು ಪ್ರತಿಭಟನಾಕಾರರಿಂದಲೇ ವಸೂಲಿ ಮಾಡಲು ಹೊರಟಿದೆ.
ಒಂದು ಲೆಕ್ಕಾಚಾರದಲ್ಲಿ ಇದು ಒಳ್ಳೆಯ ನಿರ್ಧಾರವೆಂದೇ ಭಾವಿಸಬಹುದು. ಆದರೆ, ಅಲ್ಲಿನ ಬಿಜೆಪಿ ಸರ್ಕಾರ ಈ ವಿಚಾರದಲ್ಲಿಯೂ ಕೋಮು ವಿಚಾರವನ್ನು ಬೆರೆಸುತ್ತಿದೆ. ಅಂದರೆ, ಪ್ರತಿಭಟನಾಕಾರರಲ್ಲೂ ಮುಸ್ಲಿಂರನ್ನು ಹುಡುಕಿ ಹುಡುಕಿ ಅವರಿಗೆ ನೊಟೀಸ್ ಸರ್ವ್ ಮಾಡುತ್ತಿದೆ. ಅದರಲ್ಲೂ ನಗೆಪಾಟಲಿಗೆ ಈಡಾಗುತ್ತಿದೆ.
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರದ ಪೊಲೀಸರು ಮುಸ್ಲಿಂರನ್ನು ಗುರಿಯಾಗಿಟ್ಟುಕೊಂಡು ನೊಟೀಸ್ ನೀಡುತ್ತಿದ್ದು, ಸರ್ಕಾರದ ಆಸ್ತಿಪಾಸ್ತಿಯನ್ನು ನಷ್ಟಗೊಳಿಸಿದ್ದೀರಿ. ಇದಕ್ಕೆ ನೀವೇ ಬಂದು ಪರಿಹಾರ ನೀಡಬೇಕೆಂದು ಸೂಚನೆ ನೀಡಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಹೊಣೆಗೇಡಿ ಪೊಲೀಸರು ಸತ್ತವರಿಗೂ ನೊಟೀಸ್ ಕಳುಹಿಸಿದ್ದಾರೆ!
ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆಯಲ್ಲಿ 21 ಮಂದಿ ಸಾವನ್ನಪ್ಪಿದ್ದರು. ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿ ಪ್ರತಿಭಟನಾಕಾರರು ಅಲ್ಲಲ್ಲಿ ಬೆಂಕಿ ಹಚ್ಚಿದ್ದರು. ಅಲ್ಲದೇ, ಸಾರ್ವಜನಿಕ ಕಟ್ಟಡಗಳು, ಆಸ್ತಿಪಾಸ್ತಿಗೆ ಹಾನಿಯನ್ನುಂಟು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ ಸರ್ಕಾರ ಆಗಿರುವ ನಷ್ಟವನ್ನು ಪ್ರತಿಭಟನಾಕಾರರಿಂದಲೇ ವಸೂಲಿ ಮಾಡುವ ನಿರ್ಧಾರಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದಲೂ ಆಯಾ ಪೊಲೀಸ್ ಠಾಣೆಗಳ ಪೊಲೀಸರು ಪ್ರತಿಭಟನೆ ವೇಳೆ ತಾವು ಚಿತ್ರೀಕರಿಸಿದ್ದ ವಿಡೀಯೋ ದೃಶ್ಯಾವಳಿಗಳನ್ನು ಹಲವು ಬಾರಿ ವೀಕ್ಷಿಸಿ ಪ್ರತಿಭಟನಾಕಾರರನ್ನು ಪತ್ತೆ ಮಾಡಿದ್ದಾರೆ. ಹೀಗೆ ಸುಮಾರು 200 ಜನರನ್ನು ಪತ್ತೆ ಮಾಡಿ ಅವರ ವಿರುದ್ಧ ಕೇಸುಗಳನ್ನೂ ಹಾಕಿದ್ದಾರೆ. ಇಷ್ಟೇ ಅಲ್ಲ, ಆ ಪ್ರತಿಭಟನಾಕಾರರ ವಿಳಾಸವನ್ನು ಪತ್ತೆ ಮಾಡಿ ಅವರಿಗೆ ನೊಟೀಸ್ ನೀಡಿ ಕೂಡಲೇ ನಿಮ್ಮಿಂದ ಸಾರ್ವಜನಿಕ ಆಸ್ತಿಪಾಸ್ತಿಗೆ ಆಗಿರುವ ಹಾನಿಗೆ ಪರಿಹಾರವಾಗಿ ಇಂತಿಷ್ಟು ಹಣವನ್ನು ನೀಡಬೇಕೆಂದು ತಾಕೀತು ಮಾಡುತ್ತಿದ್ದಾರೆ.

ಆದರೆ, ಹೊಣೆಗೇಡಿ ಪೊಲೀಸರು ಇಲ್ಲೂ ಬಹುದೊಡ್ಡ ಅವಾಂತರವನ್ನು ಸೃಷ್ಟಿ ಮಾಡಿಕೊಂಡು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸತ್ತು ವ್ಯಕ್ತಿಗಳಿಗೆ, ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವವರಿಗೆ, ಹಣ್ಣು ಹಣ್ಣು ಮುದುಕರಿಗೂ ನೊಟೀಸ್ ನೀಡಿ, ನೀವು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಕಲ್ಲು ತೂರಾಟ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟು ಮಾಡಿದ್ದೀರಿ ಎಂದು ಹೇಳಿದ್ದಾರೆ.
ಈ ನೊಟೀಸ್ ನೋಡಿ ಸತ್ತವರ ಮನೆಯವರು ಬೆಚ್ಚಿ ಬಿದ್ದಿದ್ದರೆ, ಅನಾರೋಗ್ಯಪೀಡಿತರಾಗಿರುವವರು ಮತ್ತಷ್ಟು ಚಿಂತಾಜನಕ ಸ್ಥಿತಿಗೆ ತಲುಪಿದ್ದಾರೆ. ಇನ್ನು 90 ಕ್ಕೂ ಹೆಚ್ಚು ವಯಸ್ಸಾಗಿರುವ ಹಣ್ಣು ಹಣ್ಣು ಮುದುಕರು ಪೊಲೀಸರ ಈ ನೊಟೀಸ್ ಸ್ವೀಕರಿಸಿ ಪಾರ್ಶ್ವವಾಯು ಬಡಿದವರಂತೆ ತಲೆ ಮೇಲೆ ಕೈ ಹಿಡಿದು ಕುಳಿತ್ತಿದ್ದಾರೆ.
ಡಿಸೆಂಬರ್ 20ರಂದು ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ನಡೆದ ಪ್ರತಿಭಟನೆ ವೇಳೆಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 35 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಹಿಂಸಾಚಾರ ನಡೆಸಿದವರು 29 ಮಂದಿ ಎಂದು ಗುರುತಿಸಲಾಗಿದೆ. ಈ ಸಂಬಂಧ ಪೊಲೀಸರು 14 ಮಂದಿಯನ್ನು ಬಂಧಿಸಿದ್ದಾರೆ ಮತ್ತು ಹಲವಾರು ಮಂದಿಗೆ ನೊಟೀಸ್ ನೀಡಲಾಗಿದೆ.
ಹೀಗೆ ಪೊಲೀಸರು ನೀಡಿದ ನೊಟೀಸ್ ಪಟ್ಟಿಯಲ್ಲಿ ಬನ್ನೆ ಖಾನ್ ಎಂಬ ವ್ಯಕ್ತಿಯ ಹೆಸರು ಇದೆ. ವಿಚಿತ್ರ ಮತ್ತು ಆಶ್ಚರ್ಯವೆಂದರೆ ಈ ಬನ್ನೆ ಖಾನ್ ಎಂಬ ವ್ಯಕ್ತಿ ಆರು ವರ್ಷಗಳ ಹಿಂದೆಯೇ ಇಹಲೋಕ ತ್ಯಜಿಸಿದ್ದಾರೆ! ಇವರ ಹೆಸರಿಗೆ ಬಂದ ನೊಟೀಸ್ ನೋಡಿ ಮನೆಯವರು ದಂಗಾಗಿದ್ದಾರೆ. ಯೋಗಿ ಆದಿತ್ಯನಾಥರ ಆಡಳಿತ ವ್ಯವಸ್ಥೆಯಲ್ಲಿ ಸತ್ತವರೂ ಪ್ರತಿಭಟನೆ ಮಾಡುತ್ತಾರೆ, ಹಿಂಸಾಚಾರ ನಡೆಸುತ್ತಾರೆ ಎಂಬ ಸೋಜಿಗ ಮನೆಯವರು ಮತ್ತು ನೊಟೀಸ್ ನೋಡಿದ ಇತರೆ ಜನರಿಗೆ ಆಗಿದೆ.
ಈ ನೊಟೀಸ್ ಗೆ ಹೇಗೆ ಉತ್ತರ ನೀಡಬೇಕೆಂಬುದು ತಿಳಿಯದೇ, ಮನೆಯವರು ಖಾನ್ ಅವರ ಡೆತ್ ಸರ್ಟಿಫಿಕೇಟ್ ಹಿಡಿದು ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದಾರೆ.
ಪೊಲೀಸರ ಅವಾಂತರಕ್ಕೆ ಇದೊಂದೇ ಕೈಗನ್ನಡಿಯಾಗಿಲ್ಲ. ಕುಳಿತಲ್ಲಿಂದ ಅಥವಾ ಹಾಸಿಗೆಯಿಂದ ಏಳಲೂ ಸಾಧ್ಯವಾಗದ ಹಣ್ಣು ಹಣ್ಣು ಮುದುಕರಿಗೂ ನೀವು ಪ್ರತಿಭಟನೆ ಮಾಡಿದ್ದೀರಿ ಎಂದು ನೊಟೀಸ್ ನೀಡಿದ್ದಾರೆ ಪೊಲೀಸರು. ಇದಕ್ಕೆ ಮೊದಲನೆಯ ವೈಚಿತ್ರ ಇಲ್ಲಿದೆ ಓದಿ:- ಫಸಾಹತ್ ಮೀರ್ ಖಾನ್ ಎಂಬ 93 ವರ್ಷದ ಇಳಿವಯಸ್ಸಿನ ವೃದ್ಧರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಾ ಹಾಸಿಗೆ ಹಿಡಿದು ಹಲವು ತಿಂಗಳುಗಳೆ ಆಗಿವೆ. ನೀವು ಡಿಸೆಂಬರ್ 21ರಂದು ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿದ್ದೀರಿ ಎಂಬ ಒಕ್ಕಣೆ ಇರುವ ನೊಟೀಸ್ ಅನ್ನು ಪೊಲೀಸರು ನೀಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ 90 ವರ್ಷದ ಮತ್ತೋರ್ವ ಇಳಿ ವಯಸಿನ ಸೂಫಿ ಅನ್ಸಾರ್ ಹುಸೇನ್ ಅವರಿಗೂ ನೊಟೀಸ್ ನೀಡಲಾಗಿದೆ. ಇವರು ನ್ಯುಮೋನಿಯಾಗೆ ತುತ್ತಾಗಿ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇತ್ತೀಚೆಗೆ ತಾನೆ ಮನೆಗೆ ಬಂದಿದ್ದಾರೆ.

ಮೀರ್ ಖಾನ್ ಅವರು ಫಿರೋಜಾಬಾದ್ ನಲ್ಲಿ ಕಾಲೇಜೊಂದರ ಸಂಸ್ಥಾಪಕರಾಗಿದ್ದಾರೆ. ಈ ಮೂಲಕ ನೂರಾರು ಮಕ್ಕಳಿಗೆ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೇ ಖಾನ್ ಮತ್ತು ಹುಸೇನ್ ಇಬ್ಬರೂ ನಗರದ ಶಾಂತಿ ಸಮಿತಿಯ ಸದಸ್ಯರಾಗಿದ್ದಾರೆ. ಇವರಿಬ್ಬರೂ ಜೀವನದ ಅಂತ್ಯಕಾಲದಲ್ಲಿದ್ದಾರೆ. ಎದ್ದು ಓಡಾಡುವ ಸ್ಥಿತಿಯಲ್ಲಿಲ್ಲದ ಇವರು ಅದು ಹೇಗೆ ಪ್ರತಿಭಟನೆ ನಡೆಸಲು ಸಾಧ್ಯ? ಎಂಬ ಸೋಜಿಗದ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಹಾನಿಯನ್ನು ತುಂಬಿಕೊಡುವುದಷ್ಟೇ ಅಲ್ಲ, ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ 10 ಲಕ್ಷ ರೂಪಾಯಿ ಮೌಲ್ಯದ ಬಾಂಡ್ ನೀಡಿ ಜಾಮೀನಿಗೆ ಅರ್ಜಿ ಸಲ್ಲಿಸಬಹುದೆಂದು ಪೊಲೀಸರು ತಮ್ಮ ನೊಟೀಸ್ ನಲ್ಲಿ ತಿಳಿಸಿದ್ದಾರೆ.
ನೋಡಿ ಸ್ವಾಮಿ ನನಗೆ ಈಗ 90 ವರ್ಷ. ಕಳೆದ ಕೆಲವು ದಿನಗಳ ಹಿಂದಷ್ಟೇ ಹುಷಾರಿಲ್ಲದ ಕಾರಣ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್ ಆಗಿದ್ದೇನೆ. ನನ್ನ ಜೀವನವಿಡೀ ಸಮಾಜದಲ್ಲಿ ಶಾಂತಿ ನೆಲೆಸಲು ಹೋರಾಟ ಮಾಡಿದವನಾಗಿದ್ದೇನೆ. ಅಷ್ಟಕ್ಕೂ ನನಗೆ ಪ್ರತಿಭಟನೆ ಮಾಡುವ ಶಕ್ತಿ ಇದೆಯೇ? ಶಾಂತಿಗಾಗಿ ಹಪಹಪಿಸುವ ನನ್ನ ಜೀವ ಹಿಂಸಾಚಾರ ಮಾಡಲು ಸಾಧ್ಯವೇ? ಅದು ಯಾವ ಅರ್ಥದಲ್ಲಿ ನನಗೆ ಪೊಲೀಸರು ನೊಟೀಸ್ ನೀಡಿದ್ದಾರೆಂಬುದೇ ನನಗೆ ತಿಳಿಯುತ್ತಿಲ್ಲ ಎನ್ನುತ್ತಾರೆ ಸೂಫಿ ಅನ್ಸಾರ್.
ಈ ಬುದ್ಧಿಗೇಡಿ ಪೊಲೀಸರಿಗೆ ನೊಟೀಸ್ ನೀಡುವ ಮುನ್ನ ನಾವು ಯಾರಿಗೆ ನೊಟೀಸ್ ನೀಡುತ್ತಿದ್ದೇವೆ? ಅವರ ವಯಸ್ಸಾದರೂ ಏನು? ಅವರು ಬದುಕಿದ್ದಾರೆಯೇ? ಇಲ್ಲವೇ? ಅವರು ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಜೀವಿಸುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಮೊದಲು ಪರಿಶೀಲಿಸುವ ಸಾಮಾನ್ಯ ಜ್ಞಾನವನ್ನು ಹೊಂದಿಲ್ಲದಿರುವುದು ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿಯಂತಾಗಿದೆ. ಮುಸಲ್ಮಾನರನ್ನೇ ಗುರಿಯಾಗಿರಿಸಿಕೊಂಡು ತಮಗಿಷ್ಟ ಬಂದ ವ್ಯಕ್ತಿಗಳ ಹೆಸರನ್ನು ಆಯ್ಕೆ ಮಾಡಿ ನೊಟೀಸ್ ಸಿದ್ಧಪಡಿಸಿದಂತೆ ಕಾಣುತ್ತಿದೆ. ಸೌಜನ್ಯಕ್ಕಾದರೂ ತಾವು ಆಯ್ಕೆ ಮಾಡಿಕೊಂಡ ವ್ಯಕ್ತಿಗಳು ವಾಸಿಸುತ್ತಿರುವ ಮನೆಗಳಿಗೆ ಭೇಟಿ ನೀಡಿ ಅವರ ಪರಿಸ್ಥಿತಿಯನ್ನು ಅವಲೋಕಿಸಬಹುದಿತ್ತು. ಇದು ವಿಶೇಷ ಸಂದರ್ಭಗಳಲ್ಲಿ ತಮ್ಮಲ್ಲಿರುವ ರೌಡಿಶೀಟರ್ ಪಟ್ಟಿಯಲ್ಲಿರುವ ವ್ಯಕ್ತಿಗಳನ್ನು ಪಟ್ಟಿ ಮಾಡಿ ಠಾಣೆಗೆ ಕರೆತಂದು ಮುನ್ನೆಚ್ಚರಿಕೆ ಕೊಡುತ್ತಾರಲ್ಲಾ ಆ ರೀತಿಯಲ್ಲಿಯೇ ಮುಸಲ್ಮಾನರ ಪಟ್ಟಿಯಲ್ಲಿದ್ದ ಹೆಸರುಗಳನ್ನು ಪಿಕ್ ಅಂಡ್ ಚೂಸ್ ಮಾಡಿ ನೊಟೀಸ್ ಜಾರಿ ಮಾಡಿದಂತೆ ಕಾಣುತ್ತಿದೆ. ಇದನ್ನು ಉತ್ತರ ಪ್ರದೇಶ ಪೊಲೀಸರ ಹೊಣೆಗೇಡಿತನದ ಪರಮಾವಧಿ ಎಂದೇ ಹೇಳಬಹುದು.