ದೇಶಾದ್ಯಂತ ಮರಣ ಮೃದಂಗ ಹರಿಸುತ್ತಿರುವ ಎಂಡೋಥೆಲಿಯೋಟ್ರೊಪಿಕ್ ಹರ್ಪಿವೈರಸ್ (Endotheliotropic herpesvirus) ರಾಜ್ಯದ ಪ್ರತಿಷ್ಠಿತ ಸಕ್ರೆಬೈಲ್ ಆನೆಬಿಡಾರದಲ್ಲಿಯೂ ಮಾರಕವಾಗಿ ಪರಿಣಮಿಸಿದೆ. ಪದೇ ಪದೇ ಆನೆಗಳು ಸಾಯುತ್ತಿರುವ ಬೆನ್ನಲ್ಲೇ ಅಧಿಕಾರಿಗಳೂ ವರ್ಗಾವಣೆ ಕೋರಿ ಇಲ್ಲಿಂದ ಹೊರಡಲು ಸಿದ್ಧರಾಗಿದ್ದಾರೆ. ಒಂದೇ ಒಂದು ಆನೆ ಮೃತಪಟ್ಟರೂ ಅಧಿಕಾರಿಗಳನ್ನ ಸುಮ್ಮನೆ ಬಿಡುವುದಿಲ್ಲ ಎಂದು ಪರಿಸರವಾದಿಗಳು ಹಾಗೂ ಪ್ರಾಣಿ ಪ್ರಿಯರು ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗ ಸಕ್ರೆಬೈಲು ಆನೆ ಬಿಡಾರ ಕಾಡಾನೆಗಳ ತರಬೇತಿಯಲ್ಲಿ ರಾಜ್ಯದಲ್ಲಿಯೇ ಎರಡನೇ ಶ್ರೇಯಾಂಕದಲ್ಲಿತ್ತು. ಉತ್ತುಂಗದಲ್ಲಿದ್ದ ಕಾಲದಲ್ಲಿ ಬಿರುದು ಬಾವಲಿಗಳಿಗೇನು ಕೊರತೆ ಇರಲಿಲ್ಲ, ಮಾಧ್ಯಮಗಳ ಮೂಲಕ ಇದರ ಕೀರ್ತಿ ಇನ್ನಷ್ಟು ಏರಿತ್ತು. ಸಾಮಾಜಿಕ ಜಾಲತಾಣಗಳು ಬಂದ ಮೇಲಂತೂ ಪ್ರಾತಃಕಾಲದಲ್ಲಿ ಆನೆ ಸ್ನಾನ ಮಾಡಿಸುವ ಚಿತ್ರಗಳು, ರಸ್ತೆ ಬದಿ ಗಾಂಭೀರ್ಯವಾಗಿ ತೆರಳುವ ಆನೆಗಳ ದೃಶ್ಯಗಳು ಎಲ್ಲೆಡೆ ಹರಡಿ ಸಕ್ರೆಬೈಲು ಅದ್ಭುತ ಪ್ರವಾಸಿ ತಾಣವಾಯ್ತು. ಶಿವಮೊಗ್ಗದ ಸಮೀಪದಲ್ಲಿಯೂ , ಗಾಜನೂರು ಜಲಾಶಯದ ಪಕ್ಕದಲ್ಲಿಯೂ ಹಾಗೂ ತೀರ್ಥಹಳ್ಳಿ ಹೆದ್ದಾರಿ ಮೇಲೆ ತುಂಗಾನದಿ ತೀರದಲ್ಲಿನ ಸುಂದರ ಪ್ರದೇಶ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಯ್ತು. ಆದರೆ, ಆನೆಗಳಿಗೆ ಮಾತ್ರ ಬಂಧನದ ಬೀಡಾಯ್ತು.
ಸಕ್ರೆಬೈಲು ಮಲೆನಾಡಿನ ಮಡಿಲಲ್ಲಿರುವುದರಿಂದ ಸುತ್ತಲಿನ ಕಾಡಾನೆಗಳನ್ನು ಓಡಿಸಲು ಹಾಗೂ ಸೆರೆಹಿಡಿದ ಆನೆಗಳನ್ನು ತಂದು ಪಳಗಿಸಲು ಎಲ್ಲಾ ರೀತಿಯ ಪ್ರಕೃತಿದತ್ತ ವಾತಾವಾರಣ ಇದೆ. ಹೀಗಾಗಿಯೇ ಇಲ್ಲಿ ಈಗ ಇಪ್ಪತ್ತಕ್ಕೂ ಹೆಚ್ಚು ಆನೆಗಳನ್ನು ಸೇರಿಸಲಾಗಿದೆ. ಆದರೆ, ಸೆರೆಹಿಡಿದು ತಂದ ಆನೆಗಳನ್ನು ಅಕ್ಷರಶಃ ಕೊಲ್ಲಲಾಗುತ್ತಿದೆಯೇ ಎಂದೆನಿಸುತ್ತಿದೆ.
ಎರಡು ವರ್ಷಕ್ಕೆ ಏಳೆಂಟು ಆನೆಗಳು ಮೃತವಾದ ಬಳಿಕ ಬಹುತೇಕ ಆನೆಗಳ ಸಾವಿಗೆ ಈ ಡೆಡ್ಲಿ ವೈರಸ್ ಕಾರಣ ಆಗಿರಬಹುದು ಎಂದು ಹೇಳಲಾಗುತ್ತಿದೆ. ಇನ್ನೊಂದು ಆಘಾತಕಾರಿ ವಿಷಯ ಎಂದರೆ ಎರಡು ತಿಂಗಳ ಹಿಂದೆ ಮೃತಪಟ್ಟ ಆನೆ ನಾಗಣ್ಣ ಕೂಡ ಇದೇ ವೈರಸ್ಗೆ ಗುರಿಯಾಗಿತ್ತು. ಬಿಡಾರದಲ್ಲಿನ ಕೆಲವು ಆನೆಗಳಿಗೆ ಈ ಸೋಂಕು ತಗುಲಿರುವ ಸಾಧ್ಯತೆಯನ್ನು ಸ್ವತಃ ಡಿಎಫ್ಓ ಚಂದ್ರಶೇಖರ್ ತಳ್ಳಿಹಾಕುತ್ತಿಲ್ಲ. ಶಿವಮೊಗ್ಗ ವೈಲ್ಡ್ ಲೈಫ್ ವ್ಯಾಪ್ತಿಯಲ್ಲಿ ಒಂದೇ ಒಂದು ಕಾಡಾನೆ ಇದೆ. ಉಳಿದೆಲ್ಲಾ ಆನೆಗಳು ಬಿಡಾರದೊಳಗೆ ಸೇರಿವೆ. ಪ್ರತೀ ವರ್ಷ ಮೂರ್ನಾಲ್ಕು ಆನೆಗಳು ಮೃತಪಟ್ಟರೆ ಮುಂದೊಂದು ದಿನ ಬಿಡಾರವೇ ಖಾಲಿಯಾಗಬಹುದು ಎಂಬ ಆತಂಕ ಮನೆಮಾಡಿದೆ.
ಈಗ ದೇಶಾದ್ಯಂತ ಎಂಡೋಥೆಲಿಯೋಟ್ರೋಪಿಕ್ ವೈರಸ್ ದಾಳಿ ಆನೆಗಳ ಸಂತತಿಗೆ ಮಾರಕವಾಗಿದೆ. ಒಂದೇ ತಿಂಗಳಲ್ಲಿ ಕನಿಷ್ಟ ಇಪ್ಪತ್ತು ಆನೆಗಳು ಮೃತಪಟ್ಟಿವೆ. ಒಡಿಶಾದ ನಂದನ್ ಕಣನ್ ಜಿಯಾಲಜಿಕಲ್ ಪಾರ್ಕ್ ನಲ್ಲಿ ಒಂದೇ ವಾರದಲ್ಲಿ ಎಂಡೋಥೆಲಿಯೋಟ್ರೋಪಿಕ್ ವೈರಸ್ ದಾಳಿಗೆ ನಾಲ್ಕು ಆನೆಗಳು ಬಲಿಯಾಗಿದ್ದು, ಅಂತರಾಷ್ಟ್ರೀಯ ಪರಿಣತರ ತಂಡವೂ ಸಾಕಷ್ಟು ಶ್ರಮವಹಿಸಿ ಉಳಿದ ಆನೆಗಳಿಗೆ ವೈರಸ್ ಹರಡದಂತೆ ನೋಡಿಕೊಳ್ಳಲು ಹರಸಾಹಸ ಪಡುತ್ತಿದೆ. ಅದೇ ವೈರಸ್ ಸಕ್ರೆಬೈಲು ಬಿಡಾರದ ಆನೆಗಳಿಗೂ ಬಾಧಿಸಿದೆ ಎಂದು ಹೇಳಲಾಗಿದೆ.
ಮೂರು ಆನೆಗಳ ಮೇಲೆ ನಿಗಾ ಇಡಲು ಬಿಡಾರದ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ. ವೈದ್ಯಾಧಿಕಾರಿಗಳು ಪ್ರತಿದಿನ ಅವುಗಳ ಚಲನವಲನಗಳ ಮೇಲೆ ನಿಗಾ ವಹಿಸಿದ್ದಾರೆ. ಈ ಆನೆಗಳಲ್ಲಿ ಒಂದು ಮೃತಪಟ್ಟರೂ ಅಧಿಕಾರಿಗಳಿಗೆ ಶಿಸ್ತು ಕ್ರಮ ಶತಸಿದ್ಧ ಎನ್ನಲಾಗುತ್ತಿದೆ.
ಇನ್ನು ಸಕ್ರೆಬೈಲ್ ಆನೆಗಳನ್ನು ಸರ್ಕಸ್ ಆನೆಗಳನ್ನಾಗಿಸಿರುವ ಅಧಿಕಾರಿಗಳ ವಿರುದ್ಧ ಸಿಡಿದೆದ್ದಿರುವ ಪ್ರಾಣಿ ಪ್ರಿಯರು ವನ್ಯಜೀವಿ ಸಪ್ತಾಹದಲ್ಲಿ ಆಟೋಟಗಳನ್ನು ಮಾಡಿಸಿ ಜನರನ್ನು ರಂಜಿಸುವುದನ್ನು ಇನ್ನಾದರೂ ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ. ಇದರ ಮಧ್ಯೆ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ನಿರ್ದೇಶನವಿದ್ದರೂ ಮುಚ್ಚಳಿಕೆ ಬರೆಸಿಕೊಳ್ಳದೇ ಮಹಾನಗರ ಪಾಲಿಕೆಗೆ ದಸರಾ ಮೆರವಣಿಗೆ ಮಾಡಲು ಮೂರು ಆನೆಗಳನ್ನು ನೀಡಿದ್ದಾರೆ. ಅವಘಡಗಳು ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.
ಆನೆಗಳು ಸಂಘಜೀವಿಗಳು. ಶುಭ್ರ ಪರಿಸರ ಹಾಗೂ ನದಿ ಮೂಲಗಳಲ್ಲಿ ತೇಲಾಡಿ ದಿನಕ್ಕೆ ಕನಿಷ್ಟ ಮೂವತ್ತು ಕಿಲೋಮೀಟರ್ ನಡೆಯಬೇಕು. ದಿನದ 18 ಗಂಟೆ ಕ್ರಿಯಾಶೀಲವಾಗಿರುವ ಅಪರೂಪದ ಜೀವಿಗೆ ಬಂಧನದಲ್ಲಿ ನಿಸ್ತೇಜವಾಗಿಡುವುದು ಕೂಡ ಕ್ರೌರ್ಯ. ಪ್ರಾಣಿ ಹಿಂಸೆ ತಡೆ ಕಾನೂನು ಹಾಗೂ ವನ್ಯಜೀವಿ ಸಂರಕ್ಷಣ ಕಾನೂನು ಅನ್ವಯ ಅಗತ್ಯ ಸೌಕರ್ಯ ನೀಡದೇ ಬಂಧನದಲ್ಲಿಡುವುದು, ದೈಹಿಕ ಹಿಂಸೆ ಮಾಡುವುದು, ಸರ್ಕಸ್ ತರಹ ಆಟಾಟೋಪ ಆಡಿಸುವುದು ಕೂಡ ಅಪರಾಧ, ಜಲ್ಲಿಕಟ್ಟು ಪ್ರಕರಣದ ವಾದ ವಿವಾದಗಳ ಸಂದರ್ಭ ಸುಪ್ರೀಂಕೊರ್ಟ್ ಕೂಡ ಪ್ರಾಣಿಗಳ ಮೂಲ ಅಗತ್ಯತೆಗಳ ಬಗ್ಗೆ ಪ್ರಸ್ತಾಪ ಮಾಡಿತ್ತು. ಹೀಗಿರುವಾಗ ಸಕ್ರೆಬೈಲು ಆನೆಗಳನ್ನ ಶೋಚನೀಯ ಸ್ಥಿತಿಗೆ ತಂದಿರುವುದು ಅಪರಾಧ ಎನ್ನುತ್ತಾರೆ ಪರಿಸರವಾದಿ ಅಜಯ್ ಕುಮಾರ್ ಶರ್ಮಾ.
ಸದ್ಯ ಸಕ್ರೆಬೈಲು ಆನೆಬಿಡಾರದಿಂದ ಹಾಗೂ ವನ್ಯಜೀವಿ ವಲಯದಲ್ಲಿ ಸಾಲು ಸಾಲು ಅಧಿಕಾರಿಗಳು ವರ್ಗಾವಣೆ ಸಿಕ್ಕರೆ ಸಾಕು ಎಂದು ಕಾಯುತ್ತಿದ್ದಾರೆ. ಸರ್ಕಾರ ಮಾತ್ರ ಯಾರನ್ನೂ ವರ್ಗಾವಣೆ ಮಾಡದೇ ಉಳಿಸಿಕೊಂಡಿದ್ದು ಅಧಿಕಾರಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.