ಈ ಲೇಖನದ ಆಡಿಯೋ ಆವೃತ್ತಿ ಇಲ್ಲಿದೆ. ಕ್ಲಿಕ್ ಮಾಡಿ ಕೇಳಿ
ಉಪ ಚುನಾವಣೆ ಮುಗಿದು ಸರ್ಕಾರ ಬಹುಮತ ಗಳಿಸಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇದೇ ತಿಂಗಳ 21 ಅಥವಾ 22ರಂದು ದೆಹಲಿಗೆ ತೆರಳಿ ಬಿಜೆಪಿ ವರಿಷ್ಠರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಆದರೆ, ಇದು ಸಂಪುಟ ವಿಸ್ತರಣೆಯೇ ಅಥವಾ ಪುನಾರಚನೆಯೇ ಎಂಬುದು ಈ ಚರ್ಚೆಯ ಬಳಿಕವೇ ಅಂತಿಮಗೊಳ್ಳಲಿದೆ. ಏಕೆಂದರೆ, ಸಚಿವ ಸ್ಥಾನದ ಆಕಾಂಕ್ಷಿಗಳ ಲಾಬಿ, ಉಪಮುಖ್ಯಮಂತ್ರಿ ಹುದ್ದೆಯ ಬೇಡಿಕೆ ಮತ್ತು ಈ ಕುರಿತಂತೆ ಇರುವ ಅಪಸ್ವರಗಳು ಸಂಪುಟ ವಿಸ್ತರಣೆ ವಿಚಾರವನ್ನು ಸಾಕಷ್ಟು ಗೊಂದಲಕ್ಕೆ ತಳ್ಳಿದೆ.
ಲೋಕಸಭೆ ಚುನಾವಣೆ ಹೊರತುಪಡಿಸಿ ದೇಶಾದ್ಯಂತ ಇತ್ತೀಚೆಗೆ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ್ದರೂ ಕರ್ನಾಟಕದ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಈ ಗೆಲುವಿನ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಾಮರ್ಥ್ಯ ಎದ್ದು ಕಾಣುತ್ತಿದೆ. ಹೀಗಾಗಿ ಸಂಪುಟ ವಿಸ್ತರಣೆ ವಿಚಾರದಲ್ಲಿ ವರಿಷ್ಠರು ಯಡಿಯೂರಪ್ಪ ಅವರ ಮಾತಿಗೆ ಮನ್ನಣೆ ನೀಡುವುದು ಬಹುತೇಕ ಖಚಿತ. ಏಕೆಂದರೆ, ಮೈತ್ರಿ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ರಚನೆಯಾದಾಗಲೇ ಸಂಪುಟ ರಚನೆಯಲ್ಲಿ ಯಡಿಯೂರಪ್ಪ ಅವರ ಮಾತಿಗೆ ಮನ್ನಣೆ ಸಿಕ್ಕಿತ್ತು. ಹೀಗಿರುವಾಗ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಯಾವುದೇ ಕಾರಣಕ್ಕೂ ವರಿಷ್ಠರು ಯಡಿಯೂರಪ್ಪ ಅವರ ಮಾತನ್ನು ಕಡೆಗಣಿಸಲು ಸಾಧ್ಯವಿಲ್ಲ.
ಹೀಗಾಗಿಯೇ ಆಕಾಂಕ್ಷಿಗಳ ಲಾಬಿ ಜೋರಾಗುತ್ತಿದ್ದು, ಆಕಾಂಕ್ಷಿಗಳು ಸರತಿ ಸಾಲಿನಲ್ಲಿ ಬಂದಂತೆ ಯಡಿಯೂರಪ್ಪ ಮನೆಗೆ ಬಂದು ಭೇಟಿಯಾಗುತ್ತಿದ್ದಾರೆ. ಅದರಲ್ಲೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದ ನಂತರ ಆಕಾಂಕ್ಷಿಗಳ ಪ್ರಯತ್ನ ಜೋರಾಗುತ್ತಿದೆ. ಸಚಿವಾಕಾಂಕ್ಷಿಗಳು ಸಂಪುಟದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದರೆ, ಸಚಿವ ಸ್ಥಾನ ಖಾತರಿಯಾದವರು ಪ್ರಮುಖ ಖಾತೆಗಳಿಗಾಗಿ ಓಲೈಸುತ್ತಿದ್ದಾರೆ.
ಸಚಿವಾಕಾಂಕ್ಷಿಗಳ ಲಾಬಿ ಇಷ್ಟೊಂದು ತೀವ್ರಗೊಳ್ಳಲು ಕಾರಣವಾಗಿರುವುದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಸೋಮವಾರ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು. ಉಪಮುಖ್ಯಮಂತ್ರಿ ಸ್ಥಾನಕ್ಕೆ ಪ್ರಯತ್ನಿಸುತ್ತಿರುವ ಶ್ರೀರಾಮುಲು ಮತ್ತು ಸಂತೋಷ್ ಅವರ ಭೇಟಿಯಾದ ಬಳಿಕ ನಾನಾ ಊಹಾಪೋಹಗಳು ಸೃಷ್ಟಿಯಾಗಿತ್ತು. ಇದರ ಬೆನ್ನಲ್ಲೇ ಸಂತೋಷ್ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಭೇಟಿ ಈ ಊಹಾಪೋಹಗಳಿಗೆ ಮತ್ತಷ್ಟು ಬಲ ತುಂಬಿ ಸಚಿವಾಕಾಂಕ್ಷಿಗಳು ಯಡಿಯೂರಪ್ಪ ಅವರ ಮುಂದೆ ಪೆರೆಡೇ ನಡೆಸುವಷ್ಟರ ಮಟ್ಟಿಗೆ ತಲುಪಿದೆ.
ಬುಧವಾರ ಸಚಿವ ಬಿ.ಶ್ರೀರಾಮುಲು ಅವರ ಪುತ್ರಿಯ ಮದುವೆ ನಿಶ್ಚಿತಾರ್ಥವಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಅವರು ಬಿಜೆಪಿ ಕಚೇರಿಗೆ ಆಗಮಿಸಿದ್ದ ಸಂತೋಷ್ ಅವರನ್ನು ಭೇಟಿಯಾಗಿ ಪುತ್ರಿಯ ನಿಶ್ಚಿತಾರ್ಥಕ್ಕೆ ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ನನಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂಬ ಬಗ್ಗೆ ಜನರ ಒತ್ತಾಯ ಇದೆ. ಜನರ ಒತ್ತಾಯ ಇರುವಾಗ ಅವರ ಅಪೇಕ್ಷೆಗೆ ವಿರುದ್ಧವಾಗಿ ಮಾತನಾಡಿ ಮುಜುಗರ ಉಂಟುಮಾಡುವುದಿಲ್ಲ. ಎಲ್ಲವೂ ದೈವೇಚ್ಛೆಯಂತೆ ನಡೆಯುತ್ತದೆ ಎಂದು ಹೇಳಿದ್ದರು. ಹೀಗಾಗಿ ಶ್ರೀರಾಮುಲು ಅವರು ಸಂತೋಷ್ ಅವರನ್ನು ಭೇಟಿಯಾಗಿ ಉಪಮುಖ್ಯಮಂತ್ರಿ ಹುದ್ದೆಗೆ ಲಾಬಿ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಅಲ್ಲದೆ, ಸಂತೋಷ್ ಮತ್ತು ಯಡಿಯೂರಪ್ಪ ಅವರು ಮಾತುಕತೆ ನಡೆಸಿದ್ದರಿಂದಾಗಿ, ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ದೆಹಲಿಗೆ ಬರುವಂತೆ ಯಡಿಯೂರಪ್ಪ ಅವರಿಗೆ ಸಂತೋಷ್ ಸೂಚಿಸಿದ್ದಾರೆ ಎಂಬ ಸುದ್ದಿಯೂ ಇದಕ್ಕೆ ಸೇರಿಕೊಂಡಿತು.
ಈ ಹಿನ್ನೆಲೆಯಲ್ಲಿ ಮಂಗಳವಾರ ಸಚಿವರು ಮತ್ತು ಸಚಿವಾಕಾಂಕ್ಷಿಗಳು ಸಾಲು ಸಾಲಾಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದಾರೆ. ಉಮೇಶ್ ಕತ್ತಿ, ಎಂ.ಪಿ.ರೇಣುಕಾಚಾರ್ಯ ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಚಿವ ಸ್ಥಾನದ ಹಕ್ಕು ಮಂಡಿಸಿದ್ದಾರೆ. ಇನ್ನೊಂದೆಡೆ ನೂತನ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಕೂಡ ಭೇಟಿಯಾಗಿ ಉಪಮುಖ್ಯಮಂತ್ರಿ ಹುದ್ದೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದರೆ, ಸಚಿವ ಬಸವರಾಜ ಬೊಮ್ಮಾಯಿ ಖಾತೆ ಬದಲಾವಣೆ ಕುರಿತ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ತಮ್ಮನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿ ಹುದ್ದೆ ಉಳಿಸಿಕೊಳ್ಳುವ ಕುರಿತು ಮಾತನಾಡಿದ್ದಾರೆ. ನೂತನ ಶಾಸಕರಾದ ಶ್ರೀಮಂತ ಪಾಟೀಲ್ ಮತ್ತು ನಾರಾಯಣಗೌಡ ಕೂಡ ಮುಖ್ಯಮಂತ್ರಿಗಳ ಜತೆ ಸಚಿವ ಸ್ಥಾನದ ಕುರಿತಂತೆ ಮಾತುಕತೆ ನಡೆಸಿದ್ದಾರೆ.
ಉಪಮುಖ್ಯಮಂತ್ರಿ ಹುದ್ದೆ ಬೇಡ ಎನ್ನುವರೇ ಯಡಿಯೂರಪ್ಪ?
ಸದ್ಯದ ಪರಿಸ್ಥಿತಿಯಲ್ಲಿ ಸಚಿವ ಸಂಪುಟ ವಿಸ್ತರಣೆಗಿಂತ ಉಪಮುಖ್ಯಮಂತ್ರಿ ಹುದ್ದೆಯೇ ದೊಡ್ಡ ಸವಾಲಾಗಿದೆ. ಈಗಾಗಲೇ ಮೂವರು ಉಪಮುಖ್ಯಮಂತ್ರಿಗಳಿದ್ದು, ಮತ್ತೆ ಕನಿಷ್ಠ ಎರಡು ಉಪಮುಖ್ಯಮಂತ್ರಿ ಹುದ್ದೆಯನ್ನಾದರೂ ಸೃಷ್ಟಿಸಬೇಕು ಎಂಬ ಬೇಡಿಕೆ ಇದೆ. ಆದರೆ, ಈ ಎರಡು ಸ್ಥಾನಗಳಿಗೆ ಆಕಾಂಕ್ಷಿಗಳ ಸಂಖ್ಯೆ 5ಕ್ಕಿಂತ ಹೆಚ್ಚಿದೆ. ಅದರಲ್ಲಿ ಮುಖ್ಯವಾಗಿ ನೂತನ ಶಾಸಕ ರಮೇಶ್ ಜಾರಕಿಹೊಳಿ, ಆರೋಗ್ಯ ಸಚಿವ ಬಿ.ಶ್ರೀರಾಮುಲು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಕಂದಾಯ ಸಚಿವ ಆರ್.ಅಶೋಕ್ ಇವರಲ್ಲಿ ಪ್ರಮುಖರು.
ಎರಡು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸಿ ಅವುಗಳನ್ನು ನೀಡುವುದಾದರೆ ಮೊದಲ ಸಾಲಿನಲ್ಲಿ ನಿಲ್ಲುವವರು ರಮೇಶ್ ಜಾರಕಿಹೊಳಿ ಮತ್ತು ಶ್ರೀರಾಮುಲು. ರಮೇಶ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬುದು ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸೇರಿ ಗೆದ್ದಿರುವ ಬಹುತೇಕ ಶಾಸಕರ ಒತ್ತಾಯವಾದರೆ, ರಮೇಶ್ ಬಿಜೆಪಿಗೆ ಸೇರಿರುವುದು ಕೂಡ ಇದೇ ಕಾರಣಕ್ಕೆ. ಇನ್ನು 2018ರ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆಯೇ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು. ಈ ಭರವಸೆ ಉಳಿಸಿಕೊಳ್ಳಬೇಕಾದರೆ ಮೊದಲು ಇವರಿಬ್ಬರಿಗೂ ಉಪಮುಖ್ಯಮಂತ್ರಿ ಸ್ಥಾನ ನೀಡಲೇ ಬೇಕು.
ಆದರೆ, ಸಮಸ್ಯೆ ಎದುರಾಗುವುದೇ ಇಲ್ಲಿ. ರಮೇಶ್ ಜಾರಕಿಹೊಳಿ ಮತ್ತು ಶ್ರೀರಾಮುಲು ಇಬ್ಬರೂ ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮುದಾಯಕ್ಕೆ ಸೇರಿದವರು. ಒಂದೇ ಸಮುದಾಯಕ್ಕೆ ಸೇರಿದ ಇಬ್ಬರಿಗೆ ಈ ಹುದ್ದೆ ನೀಡಿದರೆ ಇತರೆ ಸಮುದಾಯಗಳಿಂದ ಆಕ್ಷೇಪ ವ್ಯಕ್ತವಾಗಬಹುದು ಎಂಬ ಆತಂಕ ಕಾಡುತ್ತಿದೆ. ಇವರನ್ನು ಬಿಟ್ಟು ಬೇರೆಯವರಿಗೆ ಉಮುಖ್ಯಮಂತ್ರಿ ಸ್ಥಾನ ನೀಡಿದರೆ ಭರವಸೆ ಹುಸಿಯಾಗುವುದರ ಜತೆಗೆ ಬಹುಸಂಖ್ಯೆಯಲ್ಲಿರುವ ವಾಲ್ಮೀಕಿ ಸಮುದಾಯ ಬೇಸರಗೊಳ್ಳುತ್ತದೆ.
ಈ ಕಾರಣಕ್ಕಾಗಿ ಉಪಮುಖ್ಯಮಂತ್ರಿ ಹುದ್ದೆಯೇ ಬೇಡ ಎಂಬ ನಿರ್ಧಾರಕ್ಕೆ ಯಡಿಯೂರಪ್ಪ ಅವರು ಬರುವ ಸಾಧ್ಯತೆ ಇದೆ. ಈಗಾಗಲೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಎಂ.ಪಿ.ರೇಣುಕಾಚಾರ್ಯ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರು ಉಪಮುಖ್ಯಮಂತ್ರಿ ಹುದ್ದೆ ರದ್ದುಗೊಳಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಇವರಿಬ್ಬರೂ ಯಡಿಯೂರಪ್ಪ ಅವರಿಗೆ ಆಪ್ತರಾಗಿರುವುದರಿಂದ ಅಂಥವರ ಮೂಲಕ ಒತ್ತಡ ತಂದು ಉಪಮುಖ್ಯಮಂತ್ರಿ ಸ್ಥಾನವನ್ನೇ ರದ್ದುಗೊಳಿಸಲು ಯಡಿಯೂರಪ್ಪ ಪ್ರಯತ್ನಿಸುತ್ತಿದ್ದಾರೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ. ಒಂದೊಮ್ಮೆ ಯಡಿಯೂರಪ್ಪ ಅವರು ಈ ನಿರ್ಧಾರಕ್ಕೆ ಬದ್ಧರಾಗಿ ವಾದ ಮಂಡಿಸಿದರೆ ವರಿಷ್ಠರು ಅದನ್ನು ಒಪ್ಪಿಕೊಳ್ಳುವ ಸಾಧ್ಯತೆಯೂ ಇದೆ.
ಇದರ ಜತೆಗೆ ಕೆಲವರು ಖಾತೆ ಬದಲಾವಣೆಗೆ ಒತ್ತಾಯ ಮಾಡುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಗೃಹ ಸಚಿವರಾಗಿರುವ ಬಸವರಾಜ ಬೊಮ್ಮಾಯಿ ಅವರು ಜನಸಂಪನ್ಮೂಲ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ. ಗೃಹ ಖಾತೆ ಬೊಮ್ಮಾಯಿ ಕೈತಪ್ಪಿದರೆ ಅದನ್ನು ಪಡೆಯಲು ಆರ್.ಅಶೋಕ್ ತುದಿಗಾಲಲ್ಲಿ ನಿಂತಿದ್ದು, ಕಂದಾಯ ಖಾತೆ ಬಿಟ್ಟುಕೊಡಲು ಸಿದ್ಧವಾಗಿದ್ದಾರೆ. ಅಬಕಾರಿ ಖಾತೆ ಹೊಂದಿರುವ ಪಕ್ಷೇತರ ಶಾಸಕ ನಾಗೇಶ್ ಅವರು ವಿವಾದ ಸೃಷ್ಟಿಸಿಕೊಂಡಿರುವುದರಿಂದ ಅವರ ಖಾತೆ ಬದಲಾವಣೆ ಮಾಡಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ. ಈ ಕಾರಣಕ್ಕಾಗಿಯೇ ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬ ಪ್ರಶ್ನೆ ಉದ್ಭವವಾಗಿದೆ.