ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಒಳಜಗಳವೋ, ರಾಜಕೀಯ ಆರೋಪ ಪ್ರತ್ಯಾರೋಪವೋ, ಮತಬೇಟೆಯ ಹುನ್ನಾರವೋ ಏನೇ ಇರಲಿ, ನೆರೆ ಸಂತ್ರಸ್ತರಿಗೆರ ಮಾತ್ರ ಪರಿಹಾರ ಇನ್ನೂ ಮರೀಚಿಕೆ ಆಗಿದೆ. ದುಡ್ಡು ಸಂತ್ರಸ್ತರ ಬ್ಯಾಂಕ್ ಅಕೌಂಟ್ ಗೆ ಬಂದಾಗ ಮಾತ್ರ ಅದು ಸಿಕ್ಕಿದೆ ಎಂದರ್ಥ. ಬರೀ ಘೋಷಣೆಗಳಿಂದ ದುಡ್ಡು ಬರುವುದಿಲ್ಲ ಎಂಬುದು ಇನ್ನೂ ಸಾವಿರಾರು ಸಂತ್ರಸ್ತರ ದೈನಂದಿನ ಅಳಲು.
ಈಗ ನೆರೆ ಬಂದು ಹೋಗಿ ಎರಡು ತಿಂಗಳಾಯಿತು. ಮನೆಗಳು ಬಿದ್ದಿವೆ, ಕೆಲಸವೂ ಇಲ್ಲ. ದುಡ್ಡು ಬೇಕು ಎಂದರೆ ಯಾರು ಕೊಡುತ್ತಾರೆ. ಸರ್ಕಾರದಿಂದ ಬರುತ್ತದೆ ಎಂದು ಸಾಲ ಮಾಡಿ ಸುಸ್ತಾದರು ಜನ, ಇನ್ನೂ ಬರಲಿಲ್ಲ ಧನ…
ಏನು ಈಗಿನ ಪರಿಸ್ಥಿತಿ?
ಈಗ ಕೇಂದ್ರ ಸರ್ಕಾರ ರೂ 1,200 ಕೋಟಿಯ ಪರಿಹಾರ ಘೋಷಣೆ ಮಾಡಿದೆ. ಅದಿರಲಿ. ಮೊದಲು ಪ್ರಾಥಮಿಕ ಹಂತದಲ್ಲಿ ರೂ. 10 ಸಾವಿರ ಕೊಡಬೇಕು ಎಂದು ಸರ್ವೇ ಮಾಡಲಾಯಿತು. ಕೆಲ ಕಡೆಗಳಲ್ಲಿ ಅಂದರೆ ಕೆಲವು ಗ್ರಾಮಗಳಲ್ಲಿ ಚೆಕ್ ಗಳು ಒಂದು ಮನೆಗೆ ಮೂರು ನಾಲ್ಕು ಜನರಿಗೆ ಸಿಕ್ಕರೆ ಕೆಲವರಿಗೆ ಇನ್ನೂ ಅಂದರೆ ಇವತ್ತಿನ ಕ್ಷಣದ ವರೆಗೂ ಬಿಡಿಗಾಸು ಸಿಕ್ಕಿಲ್ಲ. ಸ್ಥಳೀಯ ಜನಪ್ರತಿನಿಧಿಗಳ ನೆಂಟರಿಷ್ಟರಿಗೆ ಮಾತ್ರ ಅವು ಬೇಗ ಲಭ್ಯವಾಗಿವೆ ಎಂಬುದು ಬಹುತೇಕ ಗ್ರಾಮಗಳಲ್ಲಿ ದಿನ ನಿತ್ಯದ ಚರ್ಚಾ ವಿಷಯ.
ಏಲ್ಲೆಲ್ಲಿ ಏನೇನು?
ಎರಡು ತಿಂಗಳಿನ ಹಿಂದೆ ಬಂದ ಪ್ರವಾಹ ಕರ್ನಾಟಕದಲ್ಲಿ ಒಟ್ಟು 90 ಜನರನ್ನು ಬಲಿ ತೆಗೆದಕೊಂಡಿದ್ದು, ಒಟ್ಟಾರೆ ಏಳು ಲಕ್ಷ ಜನರ ಜೀವನ ಅಸ್ತವ್ಯಸ್ತವಾಗಿಸಿತ್ತು. ಕೃಷ್ಣಾ, ಮಲಪ್ರಭಾ ಹಾಗೂ ಇನ್ನಿತರ ನದಿಗಳು ಗ್ರಾಮಗಳನ್ನೇ ನುಂಗಿದವು. ಇದರಲ್ಲಿ ಹೆಚ್ಚು ಹಾನಿಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ. ಈ ಜಿಲ್ಲೆಯ 87 ಗ್ರಾಮಗಳು ಪ್ರವಾಹ ಪೀಡಿತವಾಗಿದ್ದು, ಒಟ್ಟು 1.12 ಲಕ್ಷ ಜನರು ಸಂಕಟದಲ್ಲಿದ್ದಾರೆ. ಇಲ್ಲಿ 493 ಪರಿಹಾರ ಕೇಂದ್ರಗಳನ್ನು ತೆರೆದಿದ್ದು ಒಟ್ಟು 69,381 ಮನೆಗಳು ಕುಸಿದಿವೆ. 3,367 ಶಾಲೆಗಳು ಹಾಗೂ 939 ಸೇತುವೆಗಳು ಕುಸಿದಿವೆ. ಬೆಳಗಾವಿ ಜಿಲ್ಲಾಡಳಿತದ ಪ್ರಕಾರ ಅವರು 1.12 ಲಕ್ಷ ಜನರಿಗೆ ಪ್ರಾಥಮಿಕವಾಗಿ ಕೊಡುವ ರೂ 10, 000 ಸಾವಿರ ಕೊಟ್ಟಿದ್ದಾರೆ. ಆದರೆ, ಗ್ರಾಮಸ್ಥರಿಗೆ ಇದರ ಬಗ್ಗೆ ಮಾಹಿತಿ ಇಲ್ಲ.
ಅಥಣಿ ತಾಲೂಕಿನ ಕೆಲ ಗ್ರಾಮಸ್ಥರ ಪ್ರಕಾರ, “5 ಲಕ್ಷ ನಮಗೆ ಕೊಡುವುದಿಲ್ಲ ಎಂಬುದು ಖಾತ್ರಿಯಾಗುತ್ತಿದೆ. ಇನ್ನೂ 10,000 ರೂಪಾಯಿ ಬಂದಿಲ್ಲ. ಕೇಳಿದರೆ ನಿಮ್ಮ ರೇಷನ್ ಕಾರ್ಡ್ ಎಲ್ಲಿ…ಅದು ಕೊಡಿ ಇದು ಕೊಡಿ ಅಂತೆಲ್ಲಾ ಕೇಳುತ್ತಾರೆ. ಈ ಅಧಿಕಾರಿಗಳು ತಮಗೆ ಹತ್ತಿರ ಅಥವಾ ಗೊತ್ತಿರುವವರಿಗೆ ಮಾತ್ರ ಬೇಗ ಬೇಗ ಪರಿಹಾರ ಧನ ವಿತರಿಸುತ್ತಿದ್ದಾರೆ.’’
ಬಾಗಲಕೋಟೆ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ಇದೆ. ಚೊಳಚಗುಡ್ಡ ಗ್ರಾಮದಲ್ಲಿ ಬಹುತೇಕರಿಗೆ ಚೆಕ್ಕುಗಳು ಬಂದಿಲ್ಲ. ಕೇಳಿದರೆ ನಿಮ್ಮ ಹೆಸರೇ ಇಲ್ಲಿಲ್ಲ ಎಂದು ಪಟ್ಟಿ ತೋರಿಸುತ್ತಾರೆ ಎನ್ನುತ್ತಾರೆ ಶಿವಾನಂದ ಅಂಗಡಿ. “ಅದ ಹೆಂಗೋ ಮಾರಾಯಾ ಇಪ್ಪತ್ತ ವರ್ಷದಿಂದ ಇಲ್ಲೆ ಅದಿನಿ, ನಮ್ಮ ಹಿರಿಯರ ಕಾಲದಿಂದಲೂ ಇಲ್ಲೆ ಅದೀವಿ ಅಂತ ಅಂಗಡಿಯವರು ಅಧಿಕಾರಿಗಳಿಗೆ ಕೇಳಿದಾಗ ಅವರಿಗೆ ಸಿಕ್ಕ ಉತ್ತರ ನಮಗೆ ನೀಡಿದ ಪಟ್ಟಿ ಪ್ರಕಾರ ನಾವು ಚೆಕ್ಕು ಕೊಡ್ತೀವಿ. ತಹಶೀಲ್ದಾರ ಜೊತೆಗೆ ಮಾತನಾಡಿ ಅಂದರು,’’ ಎಂದು ತಿಳಿಸಿದರು. ಈ ಪರಿಸ್ಥಿತಿ ಇತರ ಜಿಲ್ಲೆಯಲ್ಲೂ ಇದೆ.
ಪ್ರತಿ ಜಿಲ್ಲೆಯಲ್ಲೂ ಕೇಳಿದಾಗ ಎಲ್ಲರೂ ಹೇಳುವ ಒಂದು ಸಾಮಾನ್ಯ ಅಂಶ: ಪರಿಹಾರ ಧನ ನಮಗೆ ಬರಲ್ಲ. 10,000 ರೂ ಗಳನ್ನು ಬೇಕಂತಲೆ ತಡವಾಗಿ ಕೊಟ್ಟು ಇಷ್ಟಾದರೂ ಸಿಕ್ತಲ್ಲ ಎಂಬ ಭಾವನೆ ಬರುವಂತೆ ಮಾಡಿ, ಉಳಿದ 5 ಲಕ್ಷ ವನ್ನು ರಾಜಕಾರಣಿಗಳೇ ತಿನ್ನುತ್ತಾರೆ. ಇದು ಮೊದಲ ಸಲ ಏನಲ್ಲ. ಪ್ರತಿ ಬಾರಿ ಬರ, ನೆರೆ ಇದ್ದಾಗ ಬಡವರ ದುಡ್ಡನ್ನೇ ತಿಂದು ಹೀಗೆ ಮಾಡುತ್ತ ಬಂದಿದ್ದಾರೆ. ಬಹುತೇಕ ಗ್ರಾಮಸ್ಥರು, ತಾವು ಸರ್ಕಾರವನ್ನು ನಂಬಿ ಕುಳಿತರೆ ಆಗುವುದಿಲ್ಲ ಎಂದು ಸ್ವತಃ ಮನೆ ಕಟ್ಟಿಕೊಳ್ಳುತ್ತಿದ್ದಾರೆ.
ಏಷ್ಟೆಷ್ಟು? ಯಾವ ಯಾವ ಜಿಲ್ಲೆಗೆ?
ಪ್ರವಾಹ ಪೀಡಿತ ಜಿಲ್ಲೆಗಳಿಗೆ ಅವುಗಳ ಹಾನಿಯ ತೀವ್ರತೆಯ ಮೇಲೆ ಹಣವನ್ನು ಮೀಸಲಿಡಲಾಗಿದ್ದು ಸಿಂಹ ಪಾಲು ಬೆಳಗಾವಿ ಜಿಲ್ಲೆಗೆ ಸೇರಲಿದೆ. ಬೆಳಗಾವಿಗೆ 500 ಕೋಟಿ, ಬಾಗಲಕೋಟೆಗೆ 135 ಕೋಟಿ, ಧಾರವಾಡಕ್ಕೆ 55 ಕೋಟಿ, ಹಾವೇರಿಗೆ 70 ಕೋಟಿ, ಗದುಗಿಗೆ 30 ಕೋಟಿ ಹಾಗೂ ಕಾರವಾರಕ್ಕೆ 30 ಕೋಟಿ ಬರಲಿದೆ ಎಂದು ಪ್ರಾಥಮಿಕ ವರದಿಗಳು ಸ್ಪಷ್ಟ ಪಡಿಸಿವೆ.
ಜನಪ್ರತಿನಿಧಿಗಳ ಹಾಗೂ ಅಧಿಕಾರಿ ದುವರ್ತನೆ ಬಗ್ಗೆ ಬೇಸರ:
ಪ್ರವಾಹ ಪೀಡಿತ ಜನರಿಗೆ ಸ್ಪಂದನೆ ಅಥವಾ ಪ್ರೀತಿಗಿಂತ ಹೆಚ್ಚು ಅವರಿಗೆ ಚುಚ್ಚಿ ಮಾತನಾಡುವುದು ನಿಂತರೆ ಸಾಕು ಎಂಬಂತಾಗಿದೆ. ಜನಪ್ರತಿನಿಧಿಗಳು ತಮ್ಮನ್ನು ಪೊಲಿಟಿಕಲ್ ಗಿಮಿಕ್ ಸಿಕ್ಕು ಹಾಕಿಸಿದಾಗ ಪ್ರತ್ಯುತ್ತರ ಕೊಡುವ ಧಾವಂತದಲ್ಲಿ ಏನೋ ಮಾತನಾಡಿ ಪ್ರವಾಹ ಸಂತ್ರಸ್ತರಿಗೆ ಮನನೋಯುವಂತಹ ಮಾತುಗಳನ್ನಾಡುತ್ತಾರೆ. ಅಧಿಕಾರಿಗಳೂ ಅವರನ್ನು ಕಡೆಗಣಿಸಿ ಮಾತನಾಡುತ್ತಾರೆ.
ಗದುಗಿನ ಹೊಳೆಹಡಗಲಿಯ ಪ್ರಭುರಾಜ ಗೌಡ ಪಾಟೀಲ್ ರ ಪ್ರಕಾರ, “ಇಲ್ಲಿರುವ ಹಲವು ಗ್ರಾಮಸ್ಥರಿಗೆ ಇನ್ನೂ ಪರಿಹಾರ ಚೆಕ್ ಮೊತ್ತ ರೂ 10,000 ಬಂದಿಲ್ಲ. ಕೆಲವರ ಹೆಸರು ಪಟ್ಟಿಯಲ್ಲೇ ಇಲ್ಲ. ಪಟ್ಟಿಯನ್ನು ಯಾವ ಆಧಾರದ ಮೇಲೆ ಸಿದ್ಧಪಡಿಸಿದ್ದಾರೆ ಎಂಬುದು ಗೊತ್ತಿಲ್ಲ. ಇನ್ನೂ ಒಂದು ವಾರ ಕಾಯುತ್ತೇವೆ. ನಂತರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಮಾಡಲು ನಿರ್ಧರಿಸಿದ್ದೇವೆ. ಬೇರೆ ಯಾವುದೋ ವಿಷಯಕ್ಕೆ ದುಡ್ಡು ಕೇಳುತ್ತಿಲ್ಲ. ನಮಗೆ ಸಲ್ಲಬೇಕಾದ ದುಡ್ಡು ನಮಗೆ ಬಂದರೆ ಸಾಕು. ಈಗ ಸಾಮಾಜಿಕ ಜಾಲತಾಣಗಳೂ ಪ್ರಭಾವೀ ಮಾಧ್ಯಮವಾಗಿವೆ. ಮೊದಲಿನಂತೆ ಅವ್ಯವಹಾರ ನಡೆದರೆ ಬಯಲಿಗೆಳೆಯುವುದು ನಮ್ಮ ಕರ್ತವ್ಯವಲ್ಲವೇ”.
ಬೆಳಗಾವಿ ಜಿಲ್ಲಾಡಳಿತದ ಅಧಿಕಾರಿ ಹೇಳುವ ಪ್ರಕಾರ, “ಈಗಾಗಲೇ 1.12 ಲಕ್ಷ ಕುಟುಂಬಗಳಿಗೆ ರೂ 10,000 ಪರಿಹಾರ ನೀಡಿದ್ದೇವೆ. ಪ್ರತಿ ಮನೆಗೂ ಅವರಿಗೆ ಸಲ್ಲಬೇಕಾದ ಹಣವನ್ನು ಶೀಘ್ರವೇ ತಲುಪಿಸುತ್ತೇವೆ”.
ಆದರೆ ಅಥಣಿ, ರಾಮದುರ್ಗ, ಬೆಳಗಾವಿ ಗ್ರಾಮಾಂತರ ಪ್ರವಾಹ ಪೀಡಿತ ಜನರಲ್ಲಿ ಕೇಳಿದಾಗ, ಅವರು ಇನ್ನೂ ಹಣ ಬಂದಿಲ್ಲ ಎನ್ನುತ್ತಾರೆ. ಹಾಗಾದರೆ ಆ ಹಣ ಎಲ್ಲಿ ಹೋಯಿತು. ಚೆಕ್ಕುಗಳು ಏನಾದವು! ಇಲ್ಲಿ ನಿಜವಾದ ಸಂತ್ರಸ್ತರೆಂದರೆ ಯಾರು ಎಂಬುದನ್ನು ಜಿಲ್ಲಾಡಳಿತ ಸರಿಯಾಗಿ ಗುರುತಿಸಿದೆಯೋ ಎಂಬೆಲ್ಲ ಪ್ರಶ್ನೆಗಳು ಹಾಗೇಯೇ ಇವೆ!
ಈ ಮೊತ್ತವು ನಿಜವಾದ ಸಂತ್ರಸ್ತರನ್ನು ಮುಟ್ಟುವುದೇ…ಅವರಿಗೆ ಮನೆ ಕಟ್ಟಲು ನೆರವಾಗುವುದೇ. ಅದರಲ್ಲಿ ಯಾವುದೇ ಮೋಸ ಅಥವಾ ಕಮಿಷನ್ ಇಲ್ಲದೇ ಸಂಪೂರ್ಣ ದುಡ್ಡು ಬಡವರಿಗೆ ಸಿಗುವುದೇ, ಎಲ್ಲರ ಬ್ಯಾಂಕ್ ಕಾತೆಗೆ ನೇರವಾಗಿ ಹಣ ಸಂದಾಯವಾಗುವುದೇ ಅಥವಾ ಜನಪ್ರತಿನಿಧಿಗಳು ಪ್ರತಿಸಲದಂತೆ ನೆರೆ ಬರ ಎಂದರೆ ಹಬ್ಬವೆಂಬಂತೆ ಹಣ ಹಂಚಿಕೊಂಡು ಸುಮ್ಮನಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕು!!!