ಬಳ್ಳಾರಿ ಹಾಗೂ ಸಂಡೂರು ಭಾಗದ ಸಾವಿರಾರು ಗಣಿ ಸಂತ್ರಸ್ತರ ಪುನರ್ವಸತಿ ಹಾಗೂ ಪುರುತ್ಥಾನವೇ ಇಂದಿಗೂ ಸಾಧ್ಯವಾಗುತ್ತಿಲ್ಲ. ಇಂತಹ ಸಮಯದಲ್ಲಿ ಐತಿಹಾಸಿಕ ದೇಗುಲಗಳ ಸುತ್ತಮುತ್ತ ಗಣಿಗಾರಿಕೆಗೆ ಹವಣಿಸುತ್ತಿರುವ ಗಣಿ ಸಂಸ್ಥೆಗಳ ಬಗ್ಗೆ ಇಲ್ಲಿ ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳು ಚಿಂತಿತರಾಗಿದ್ದಾರೆ. ಆದರೆ ಇತ್ತಿಚೆಗೆ ಸೆಪ್ಟೆಂಬರ್ ನಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ ಎಂಬ ತಂಡವು ದೇಗುಲದ 500 ಮೀಟರ್ ಆಚೆಗೆ ಗಣಿಗಾರಿಕೆ ಮಾಡಬಹುದೆಂದು ಶಿಫಾರಸು ಮಾಡಿದೆ. ಈ ಶಿಫಾರಸು ಇಲ್ಲಿನ ಜನರಿಗೆ ಇನ್ನೂ ಆತಂಕ ಮೂಡಿಸಿದೆ.
ಸಂಡೂರು ಕುಮಾರಸ್ವಾಮಿ ದೇಗುಲದ ಹತ್ತಿರ ಗಣಿಗಾರಿಕೆ ಮಾಡಲು ಹವಣಿಸಲಾಗುತ್ತಿದೆ. ಕೆಲವು ಕಂಪೆನಿಗಳು ದೇವಾಲಯದ ಸಂಕೀರ್ಣದ ಹತ್ತಿರ ಒಂದು ಕಿಮೀ ಒಳಗಡೆಯೂ ಗಣಿಗಾರಿಕೆಗೆ ಪ್ರಯತ್ನಿಸುತ್ತಿವೆ. ಈಗಾಗಲೇ ಮತ್ತೆರಡು ಸಿ ದರ್ಜೆಯ ಮೈನಿಂಗ್ ಕಂಪೆನಿಗಳು ದೇವಾಲಯದ ಹತ್ತಿರವೇ ಗಣಿಗಾರಿಕೆ ಅನುಮತಿ ಕೇಳುತ್ತಿದ್ದು ಇನ್ನೂ ಹೆಚ್ಚು ಚಿಂತೆಯ ವಿಚಾರವಾಗಿದೆ. ಇದು ದೇವಾಲಯಕ್ಕೆ ಹಾಗೂ ಸುತ್ತಮುತ್ತಲಿನ ಪರಿಸರ ಧಕ್ಕೆಯಾಗುವುದಿಲ್ಲವೇ…ಪ್ರಾಣಿ ಪಕ್ಷಿ ಸಂಕುಲಕ್ಕೆ ಮಾರಕವಲ್ಲವೇ… ದಿನನಿತ್ಯ ಬರುವ ನೂರಾರು ಪ್ರವಾಸಿಗರ ಸಂಖ್ಯೆ ಕಡಿಮೆಯಾಗುದಿಲ್ಲವೇ….
ರಾಷ್ಟ್ರೀಯ ಮಾನ್ಯತೆ ಪಡೆದ ಹಾಗೂ ರಾಷ್ಟ್ರ ಮಟ್ಟದಲ್ಲೇ ಖ್ಯಾತಿ ಪಡೆದಿರುವ ಈ ಪ್ರವಾಸಿ ಹಾಗೂ ಧಾರ್ಮಿಕ ತಾಣವನ್ನು ರಕ್ಷಿಸಿಕೊಳ್ಳಬೇಕಾಗಿರುವುದು ಅಲ್ಲಿನ ಭಕ್ತರಿಗೆ ಹಾಗೂ ನಿಸರ್ಗ ಪ್ರಿಯರಿಗೆ ಸವಾಲಾಗಿ ಪರಿಣಮಿಸಿದೆ.
ಆಕ್ರಮ ಗಣಿಗಾರಿಕೆ ಬಂದ್ ಆಯಿತು, ಆದರೂ ಧೂಳು ಮತ್ತು ಲಾರಿಗಳ ಬರ್ರೆಂಬ ಸಂಚಾರ ಸಂಡೂರಿನಲ್ಲಿ ಇನ್ನೂ ನಿಂತಿಲ್ಲ. ಲಾರಿಗಳ ಸಂಖ್ಯೆ ಕಡಿಮೆಯಾಗಿದೆ, ಆದರೂ ಪ್ರವಾಸಿಗರಿಗೆ ಧೂಳು ಮೆಟ್ಟದೇ ಇರದು.
ಮೊದಲು ಅಂದರೆ ಗಣಿಗಾರಿಕೆ ಅಷ್ಟೊಂದು ಚಾಲ್ತಿ ಇಲ್ಲದಿರುವಾಗ ಇಲ್ಲಿ ಅಸಂಖ್ಯ ನವಿಲುಗಳು, ಪಕ್ಷಿಗಳು ಹಾಗೂ ಪ್ರಾಣಿಗಳು ನಿರುಮ್ಮಳವಾಗಿ ಓಡಾಡುತ್ತಿದ್ದವು. ದೇಗುಲದ ಸುತ್ತಮುತ್ತಲಿನ ಪ್ರದೇಶವೂ ಕೊಡಗು ಕಾಶ್ಮೀರವನ್ನು ಮೀರಿಸುವಂತೆ ಇದ್ದವು. ಮುಂಜಾನೆ ಮಂಜಿನ ಫೋಟೊ ಕ್ಲಿಕ್ಕಿಸಲು ಛಾಯಾಗ್ರಾಹಕರು ಬೆಳಿಗ್ಗೆ 4 ಗಂಟೆಗೆ ಬರುತ್ತಿದ್ದರು. ಇಲ್ಲಿರುವ ಅತ್ಯುತ್ತಮ ಅದಿರಿನ ಮೇಲೆ ಕಣ್ಣಿಟ್ಟ ಕೆಲ ಗಣಿ ಕಂಪೆನಿಗಳು ಪದೇ ಪದೇ ಅವುಗಳನ್ನು ದೋಚುವ ಪ್ರಯತ್ನದಲ್ಲಿವೆ.
ಸಂಡೂರು ಊರಿಗೆ ಪ್ರವೇಶವಾದ ಕೂಡಲೆ ನಿಮಗೆ ಗಣಿಗಾರಿಕೆ ಲಾರಿಗಳ ಸದ್ದು ಕೇಳಿಸತೊಡಗುತ್ತದೆ. ಇಲ್ಲಿರುವ ಬಸ್ ನಿಲ್ದಾಣದ ಮುಂದೆ ಹಾದು ಹೋಗುವಾಗ ಆ ಧೂಳಿನ ಕಣಗಳು ಹಿಂದೆ ಬರುತ್ತಿರುವ ವಾಹನಗಳಿಗೆ ರಾಚುತ್ತ ಮುಂದೆ ಸಾಗುವವು. ಆದ್ದರಿಂದ ಇಲ್ಲಿರುವ ಬಹುತೇಕ ಗಾಡಿಗಳು ಕೆಂಪ ಬಣ್ಣದ್ದಿವೆ.
ಸಂಡೂರಿನ ನಿವಾಸಿ ನರಸಿಂಹ ರೆಡ್ಡಿ ಯವರ ಅಭಿಪ್ರಾಯದ ಪ್ರಕಾರ, “ಈ ವಾಹನಗಳ ಸದ್ದು ಹಾಗೂ ಕೆಂಪು ಮಣ್ಣು ತುಂಬಿದ ಗಾಡಿಗಳನ್ನು ನೋಡುತ್ತಿದ್ದರೆ ಈ ದೇವಾಲಯಗಳನ್ನು ಉಳಿಸಿಕೊಳ್ಳಬೇಕಾದರೆ ದೊಡ್ಡಮಟ್ಟದಲ್ಲಿ ಹೋರಾಟ ಮಾಡಬೇಕು. ದೇವಾಲಯದ ಅನತಿ ದೂರದಲ್ಲಿರುವ ಮುಖ್ಯ ರಸ್ತೆಯಲ್ಲಿ ಒಂದು ಬಸ್ ನಿಲ್ದಾಣವಿದೆ. ಅಲ್ಲಿ ನಿಂತವರ ಪಾಡು ಆ ದೇವರಿಗೆ ಪ್ರೀತಿ. ಅಲ್ಲಿ ದೂರಿನಿಂದ ನಿಮಗೆ ರಮ್ಯ ನಿಸರ್ಗ ಕಾಣಸಿಗುತ್ತದೆ. ಆದರೆ ನವಿಲಿನ ನಾದ, ಪಕ್ಷಿಗಳ ಚಿಲಿಪಿಲಿ ಕಿವಿಗಳಿಗೆ ಬೀಳುವುದೇ ಇಲ್ಲ”.
ಗಣಿ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರನ್ನು ಕೇಳಿದಾಗ, “ನಾವೇನು ದೇವಾಲಯದ ಹತ್ತಿರ ಬಂದು ಮಣ್ಣು ಬಗೆಯುವುದಿಲ್ಲ. ದೂರವೇ ಇರುತ್ತೇವೆ. ನವಿಲುಗಳು ಈಗ ಅಲ್ಲ ಮೊದಲಿನಿಂದಲೂ ಕಾರು ಗಾಡಿಗಳ ಶಬ್ದ ಕೇಳಿ ದೂರ ಹೋಗಿವೆ. ಭಕ್ತರ ಸಂಖ್ಯೆಯೂ ಈಗ ಜಾಸ್ತಿಯಾಗಿದೆ. ಜನ ಸಂಚಾರ ಇದ್ದಲ್ಲಿ ಪ್ರಾಣಿ ಪಕ್ಷಿಗಳು ಬರುವುದಿಲ್ಲ. ಇದನ್ನು ಗಣಿ ಕಂಪೆನಿಗಳ ಮೇಲೆ ಕಟ್ಟಿದರೆ ಹೇಗೆ?” ಎನ್ನುತ್ತಾರೆ.
ಏನಿದೆ ಇಲ್ಲಿ?
ಸಂಡೂರು ಕುಮಾರಸ್ವಾಮಿ ದೇವಾಲಯವು ಸುಮಾರ 1200 ಕ್ಕೂ ಅಧಿಕ ವರ್ಷಗಳಷ್ಟು ಹಳೆಯ ಭವ್ಯ ದೇವಾಲಯಗಳ ಸಂಕೀರ್ಣ. ಇಲ್ಲಿ ಪಾರ್ವತಿ ಮತ್ತು ಕುಮಾರಸ್ವಾಮಿಯ ಮಂದಿರಗಳಿವೆ. ಈ ಗುಡ್ಡದ ಪ್ರದೇಶದಲ್ಲಿ ಚಿರತೆ, ಕಾಡುಹಂದಿ, ನವಿಲುಗಳು, ನರಿ ಹಾಗೂ ಇನ್ನಿತರ ಪ್ರಾಣಿಗಳಿವೆ. ಅಸಂಖ್ಯ ಔಷಧೀಯ ಸಸ್ಯಗಳಿವೆ. ಪ್ರತಿ ದಿನ ನೂರಾರು ಭಕ್ತರು ಹಾಗೂ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಹತ್ತರಿಂದ ಇಪ್ಪತ್ತು ಜನರ ವಿದೇಶಿಯರೂ ಪ್ರತಿ ನಿತ್ಯ ಇಲ್ಲಿಗೆ ಭೇಟಿ ಕೊಡುತ್ತಾರೆ.
ಸಮಾಜ ಪರಿವರ್ತನ ಸಮುದಾಯ ಎಂಬ ಸರ್ಕಾರೇತರ ಸಂಸ್ಥೆ ಮಾತ್ರ ಇದರ ಬಗ್ಗೆ ಹಲವು ಬಾರಿ ಕೂಗೆತ್ತಿದ್ದು, ನಿರಂತರ ಹೋರಾಡುತ್ತಲೇ ಬಂದಿದೆ. ಇಲ್ಲಿರುವ ಪರಿಸರ ಪ್ರೇಮಿಗಳು ಹೇಳುವ ಪ್ರಕಾರ, “ಗಣಿಗಾರಿಕೆ ಎಷ್ಟು ನಡೆಯುತ್ತಿದೆ ಎಂಬುದನ್ನು ಲೆಕ್ಕ ಹಾಕಲು ಇಲ್ಲಿ ಯಾರೂ ಹಗಲು ರಾತ್ರಿಯೆನ್ನದೇ ನಡೆಯುತ್ತಿರುವ ಈ ಕೆಂಪು ಮಣ್ಣು ಸಾಗಾಣಿಕೆ ಒಂದು ಕಣ್ಣು ಬೇಕೆ ಬೇಕು”.
ಸಂಡೂರಿನ ವ್ಯಾಪಾರಿ ಹಾಗೂ 80 ರ ವಯಸ್ಸಿನ ಹಿರಿಯರಾದ ನರಸಿಂಹಮೂರ್ತಿ ಅವರ ಪ್ರಕಾರ, “ಐತಿಹಾಸಿಕ ದೇವಾಲಯ ಉಳಿಸಲು ಬರೀ ಪ್ರತಿಭಟನೆ ಹಾಗೂ ಆಗೊಮ್ಮೆ ಈಗೊಮ್ಮೆ ಧ್ವನಿ ಎತ್ತಿದರೆ ಸಾಲದು. ಇಲ್ಲಿನ ಸಂಘಟನೆಗಳು ಹಾಗೂ ನಿಸರ್ಗ ಪ್ರೇಮಿಗಳು ಒಂದು ಆಂದೋಲನವನ್ನೇ ಮಾಡಬೇಕು. ದೇವಾಲಯದ ಸುತ್ತಲೂ ಗಣಿಗಾರಿಕೆ ಏಕೆ ಬೇಕು? ಇಲ್ಲಿ ಬಿಟ್ಟು ಬೇರೆ ಜಾಗದಲ್ಲಿ ಮಾಡಿಕೊಳ್ಳಲಿ. ಈ ಐತಿಹಾಸಿಕ ಹಾಗೂ ಧಾರ್ಮಿಕ ದೇವಾಲಯಗಳನ್ನು ನೋಡಲು ವಿದೇಶದಿಂದ ಹಾಗೂ ಭಾರತದ ಮೂಲೆ ಮೂಲೆಗಳಿಂದ ಜನರು ಬರುತ್ತಾರೆ. ಇಲ್ಲಿರುವ ಗಣಿ ಕಂಪೆನಿಗಳ ಅವುಗಳ ಮಹತ್ವ ಗೊತ್ತಿಲ್ಲ. ದುಡ್ಡೇ ಮುಖ್ಯವಲ್ಲ, ನಮ್ಮ ಸಂಸ್ಕೃತಿ, ಪುರಾತನ ದೇವಾಲಯಗಳು ಅಮೂಲ್ಯ, ಸಾವಿರ ಲಕ್ಷ ಕೋಟಿಗಳು ಅದರ ಮುಂದೆ ನಗಣ್ಯ”
ಗಣಿಗಾರಿಕೆಗೆ ಪರವಾನಗಿ ಕೊಟ್ಟರೆ ಸರ್ಕಾರ ಢಂ
ಇದು ಕಾಕತಾಳೀಯವೋ ಅಥವಾ ನಿಜವೋ ಗೊತ್ತಿಲ್ಲ, ಯಾವ ಸರ್ಕಾರ ದೇವಾಲಯದ ಹತ್ತಿರ ಗಣಿಗಾರಿಕೆ ಅನುಮತಿ ನೀಡುತ್ತೋ ಅದು ಬಿತ್ತು ಎಂದಂತೆ. ಇದು ಸಿದ್ಧರಾಮಯ್ಯರ ಕಾಲದಲ್ಲೂ ಆಯಿತು, ಕುಮಾರಸ್ವಾಮಿಯ ಸಮ್ಮಿಶ್ರ ಸರ್ಕಾರದ ಕಾಲದಲ್ಲಿಯೂ ಆಯಿತು. ಲೋಕಸಭೆ ಚುನಾವಣೆಗೆ ಮುಂಚೆ ಸಂಡೂರಿಗೆ ಭೇಟಿ ನೀಡಿದ್ದ ಕುಮಾರಸ್ವಾಮಿಯವರು, ಆ ಸಂದರ್ಭದಲ್ಲಿ ಸಂಡೂರು ಕುಮಾರಸ್ವಾಮಿ ದೇಗುಲದ ಸುತ್ತ ಮೂರು ಕಿಲೋ ಮೀಟರ್ ವ್ಯಾಪ್ತಿವರೆಗೂ ಗಣಿಗಾರಿಕೆ ನಿಷೇಧ ಮಾಡುತ್ತೇನೆಂದು ವಚನ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ ಅದನ್ನು ಮರೆತರು. ಬಳಿಕ ಜಿಂದಾಲ್ ಕಂಪನಿಗೆ ಗಣಿಗಾರಿಕೆ ಮಾಡಲು ಅವಕಾಶ ನೀಡಿದ್ದರು.