ಜಗತ್ತಿನಾದ್ಯಂತ ಆತಂಕ ಹುಟ್ಟಿಸಿರುವ ‘ಕೋವಿಡ್-19’ ಅನ್ನು ಸಾಂಕ್ರಾಮಿಕ ರೋಗ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಘೋಷಿಸಿದ್ದರ ಪರಿಣಾಮವಾಗಿ ಜಾಗತಿಕ ಷೇರುಪೇಟೆಗಳು ಮಹಾಪತನ ಕಂಡಿವೆ. ಭಾರತೀಯ ಷೇರುಪೇಟೆಯ ಪ್ರಮುಖ ಸೂಚ್ಯಂಕಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ಒಂದೇ ದಿನದಲ್ಲಿ ಅತಿ ಗರಿಷ್ಠ ಪ್ರಮಾಣದ ಐತಿಹಾಸಿಕ ಮಹಾಪತನ ದಾಖಲಿಸಿವೆ.
ಗುರುವಾರದ ರಕ್ತದೋಕುಳಿ ಎಷ್ಟೊಂದು ತೀವ್ರವಾಗಿತ್ತೆಂದರೆ- ವಿಸ್ತೃತ ಮಾರುಕಟ್ಟೆಯ ಎಲ್ಲಾ ಸೂಚ್ಯಂಕಗಳು ಸರಾಸರಿ ಶೇ.6-10ರಷ್ಟು ಕುಸಿತ ದಾಖಲಿಸಿವೆ. ಹೂಡಿಕೆದಾರರ ಅಚ್ಚು ಮೆಚ್ಚಿನ ಬ್ಲೂಚಿಪ್ ಷೇರುಗಳೂ ಸರಾಸರಿ ಶೇ.10ರಷ್ಟು ಕುಸಿತ ದಾಖಲಿಸಿವೆ. ಒಟ್ಟಾರೆ ಮಾರುಕಟ್ಟೆ ತೀವ್ರ ಕುಸಿತದ ಹಾದಿಯಲ್ಲಿದ್ದು ಈ ಮಾಹಪಾತನದ ಅಂತ್ಯ ಯಾವಾಗ ಎಂಬ ಟ್ರಿಲಿಯನ್ ಡಾಲರ್ ಪ್ರಶ್ನೆ ಹೂಡಿಕೆದಾರರನ್ನು ಕಾಡುತ್ತಿದೆ.
ನಿಫ್ಟಿ ಹಾಗೂ ಸೆನ್ಸೆಕ್ಸ್ ತೀವ್ರ ಕುಸಿತದ ಪರಿಣಾಣ 2017ರ ಮಟ್ಟಕ್ಕೆ ಇಳಿದಿವೆ. ನಿಫ್ಟಿ 10,000 ಅಂಶಗಳ ಪ್ರಬಲ ಸುರಕ್ಷತಾ ಮಟ್ಟದಿಂದ ಕುಸಿದು ಮತ್ತೊಂದು ಸುರಕ್ಷತಾ ಹಂತವಾದ 9,700ರ ಮಟ್ಟದಿಂದಲೂ ಪಾತಾಳಕ್ಕಿಳಿದಿದೆ. ದಿನದ ಅಂತ್ಯಕ್ಕೆ ನಿಫ್ಟಿ 825 ಅಂಶ ಕುಸಿತದೊಂದಿಗೆ 9,633 ಅಂಶಗಳಿಗೆ ಸ್ಥಿರಗೊಂಡಿತು. ಸೆನ್ಸೆಕ್ಸ್ 33,000 ಅಂಶಗಳ ಪ್ರಬಲ ಸುರಕ್ಷತಾ ಮಟ್ಟದಿಂದಲೂ ಕುಸಿಯಿತು. ಒಂದು ಹಂತದಲ್ಲಿ 3000 ಅಂಶಗಳಷ್ಟು ಕುಸಿದು ಕೊಂಚ ಚೇತರಿಕೆಯೊಂದಿಗೆ ದಿನದ ಅಂತ್ಯಕ್ಕೆ 2919 ಅಂಶಗಳ ಕುಸಿತದೊಂದಿಗೆ 32,778 ಅಂಶಗಳಿಗೆ ಸ್ಥಿರಗೊಂಡಿದೆ.
ನಿಫ್ಟಿ ಮಿಡ್ಕ್ಯಾಪ್ 100, ನಿಫ್ಟಿ ಸ್ಮಾಲ್ಕ್ಯಾಪ್, ನಿಫ್ಟಿ 500, ನಿಫ್ಟಿ ಬ್ಯಾಂಕ್, ನಿಫ್ಟಿ ಐಟಿ, ನಿಫ್ಟಿ ರಿಯಾಲ್ಟಿ, ನಿಫ್ಟಿ ಇನ್ಫ್ರಾ, ನಿಫ್ಟಿ ಪಿಎಸ್ಯೂ ಬ್ಯಾಂಕ್, ನಿಫ್ಟಿ ಮೆಟಲ್, ನಿಫ್ಟಿ ಮಿಡಿಯಾ ಸೂಚ್ಯಂಕಗಳು ಶೇ.8ರಿಂದ 14ರಷ್ಟು ಕುಸಿತ ದಾಖಲಿಸಿವೆ. ಕುಸಿತದ ತೀವ್ರತೆಯಿಂದ ಮಾರುಕಟ್ಟೆ ತಜ್ಜರೂ ಕಂಗಾಲಾಗಿ ಹೋಗಿದ್ದು, ಹೂಡಿಕೆದಾರರು ಏನುಮಾಡಬೇಕೆಂದು ಸಲಹೆ ನೀಡಲಾರದ ಪರಿಸ್ಥಿತಿಗೆ ತಲುಪಿದ್ದರು. ಇಳಿಜಾರಿನಲ್ಲಿ ಏಕಮುಖವಾಗಿ ಮತ್ತು ತೀವ್ರವಾಗಿ ಚಲಿಸುತ್ತಿರುವ ಸೂಚ್ಯಂಕಗಳು ಮತ್ತಷ್ಟು ಕುಸಿಯುವ ಆತಂಕ ಇಡೀ ಪೇಟೆಯಲ್ಲಿ ಆತಂಕವನ್ನುಂಟು ಮಾಡಿದೆ.
ಬಹುತೇಕ ಸೂಚ್ಯಂಕಗಳು ಷೇರುಪೇಟೆಯ ಇತಿಹಾಸದಲ್ಲೇ ಅತಿ ಗರಿಷ್ಠ ಪ್ರಮಾಣದಲ್ಲಿ ಕುಸಿತ ದಾಖಲಿಸಿವೆ. 2008ರ ಜಾಗತಿಕ ಆರ್ಥಿಕ ಕುಸಿತದ ಸಮಯದ ಕುಸಿತಕ್ಕಿಂತ ಕೋವಿಡ್-19ರ ಪರಿಣಾಮದ ಕುಸಿತವು ತೀವ್ರವಾಗಿದೆ. 2008ರ ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದ್ದು ಬಹುತೇಕ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಅವುಗಳ ಪೂರಕವಲಯಗಳು.
ಪ್ರಸ್ತುತ ಕುಸಿತಕ್ಕೆ ಬಹುಮುಖ ಆಯಾಮಗಳಿವೆ. ಕೋವಿಡ್-19 ಸಾಂಕ್ರಾಮಿಕ ರೋಗ ಎಂದು ಘೋಷಿಸಿರುವುದರಿಂದಾಗಿ ಜಾಗತಿಕ ಸಂಚಾರವು ತಾತ್ಕಾಲಿಕವಾಗಿ ಮಂದಗತಿಗೆ ತಿರುಗಲಿದೆ. ಬಹುತೇಕ ದೇಶಗಳು ತುರ್ತು ಸಂದರ್ಭದ ಹೊರತಾಗಿ ವಿದೇಶ ಪ್ರಯಾಣ ಮಾಡದಂತೆ ಸೂಚಿಸಿವೆ. ಪ್ರವಾಸೋದ್ಯಮವನ್ನೇ ತಮ್ಮ ಪ್ರಮುಖ ಆದಾಯದ ಮೂಲವನ್ನಾಗಿ ಹೊಂದಿರುವ ಇಟಲಿ ಮತ್ತಿತರ ಯೂರೋಪ್ ದೇಶಗಳು ಪೂರ್ಣ ಅಥವಾ ಭಾಗಷಃ ಬಂದ್ ಆಗಿವೆ. ಜಾಗತಿಕ ಆರ್ಥಿಕ ಚಟುವಟಿಕೆಗಳಿಗೆ ಜೀವದ್ರವ್ಯವಾಗಿರುವ ವಿವಿಧ ಕಚ್ಚಾವಸ್ತುಗಳು, ಉಪಕರಣಗಳ ಸರಬರಾಜು ಸರಪಳಿಯೇ ಕಡಿದು ಬೀಳುವ ಹಂತಕ್ಕೆ ಬಂದಿರುವುದರಿಂದ ಮತ್ತೊಂದು ಸುತ್ತಿನ ಜಾಗತಿಕ ಆರ್ಥಿಕ ಕುಸಿತ ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ಅಪ್ಪಳಿಸಲಿದೆ. ರಫ್ತು ಆಧಾರಿತ ಕಂಪನಿಗಳು ಒಂದು ಕಡೆ ಕಚ್ಚಾ ವಸ್ತುಗಳ ಕೊರತೆಯಿಂದ ಉತ್ಪಾದನೆ ಸ್ಥಗಿತಗೊಳಿಸುತ್ತಿದ್ದರೆ, ಮತ್ತೊಂದು ಕಡೆ ಸಿದ್ದವಸ್ತುಗಳಿಗೆ ಬೇಡಿಕೆಯೇ ಇಲ್ಲದೇ ಉತ್ಪಾದನೆ ಸ್ಥಗಿತಗೊಳಿಸುತ್ತಿವೆ. ತತ್ಪರಿಣಾಮ ಕಾರ್ಮಿಕರು ಉದ್ಯೋಗಕಳೆದುಕೊಳ್ಳುತ್ತಿದ್ದಾರೆ. ಉದ್ಯೋಗ ಕಳೆದುಕೊಳ್ಳುತ್ತಿರುವ ಲಕ್ಷಾಂತರ ಕಾರ್ಮಿಕರ ಪೈಕಿ ಅಲ್ಪಭಾಗದ ಕಾರ್ಮಿಕರಿಗೆ ಮಾತ್ರ ಸ್ವಯಂ ನಿವೃತ್ತಿ ಸೌಲಭ್ಯಗಲು ದಕ್ಕಲಿವೆ. ಉಳಿದವರು ನಿರುದ್ಯೋಗಿಗಳಾಗಲಿದ್ದಾರೆ. ಈ ನಿರುದ್ಯೋಗವು ಮತ್ತೊಂದು ಸುತ್ತಿನ ಹಿಂಜರಿತಕ್ಕೆ ಕಾರಣವಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ದೇಶದ ಅಷ್ಟೇ ಅಲ್ಲ, ಇಡೀ ವಿಶ್ವದ ಆರ್ಥಿಕತೆಯು ಸಂಭವನೀಯ ತ್ವರಿತ ಆರ್ಥಿಕ ಹಿಂಜರಿತ ಬಿಗಿಮುಷ್ಠಿಗೆ ಸಿಲುಕಲಿದೆ.
ಜಾಗತಿಕ ಸೂಚ್ಯಂಕಗಳಿಗೆ ಹೋಲಿಸಿದರೆ ಗುರುವಾರದ ವಹಿವಾಟಿನಲ್ಲಿ ಭಾರತೀಯ ಸೂಚ್ಯಂಕಗಳು ತೀವ್ರವಾಗಿ ಕುಸಿದವು. ಅದಕ್ಕೆ ಕಾರಣಗಳೆಂದರೆ ಕೊವಿಡ್-19ರ ಜತೆಗೆ ದೇಶೀಯ ಪರಿಸ್ಥಿತಿಯು ಕಾರಣವಾಗಿದೆ. ಈಗಾಗಲೇ ದೇಶದ ಆರ್ಥಿಕತೆ ಕುಸಿಯುತ್ತಿದ್ದು, ಮತ್ತೊಂದು ಕಡೆ ಯೆಸ್ ಬ್ಯಾಂಕ್ ಹಗರಣವು ಇಡೀ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ವಲಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಿದೆ.
ಈ ಕಾರಣಕ್ಕಾಗಿ ಅತ್ಯಂತ ಲಾಭದಾಯಕ ಮತ್ತು ಸುರಕ್ಷಿತ ಕಂಪನಿಗಳಾದ ಎಚ್ಡಿಎಫ್ಸಿ, ಎಚ್ಡಿಎಫ್ಸಿ ಬ್ಯಾಂಕ್, ಬಜಾಜ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳೂ ಸಹ ಶೇ.10-14ರಷ್ಟು ಕುಸಿತ ದಾಖಲಿಸಿವೆ. ಕೋಟಕ್ ಮಹಿಂದ್ರ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್ ತೀವ್ರವಾಗಿ ಕುಸಿದಿವೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಷೇರುಗಳೂ ಸರಾಸರಿ ಶೇ.10ರಷ್ಟು ಇಳಿದಿವೆ. ಕೊವಿಡ್-19 ಚೀನಾದೇಶವನ್ನು ದಾಟಿ ಜಗತ್ತಿನಾದ್ಯಂತ ಹರಡಲಾರಂಭಿಸಿದಂದಿನಿಂದಲೂ ಜಾಗತಿಕ ಪೇಟೆಗಳು ಕುಸಿತದ ಹಾದಿಯಲ್ಲಿವೆ. ದೇಶೀಯ ಸೂಚ್ಯಂಕಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ಗರಿಷ್ಠ ಮಟ್ಟದಿಂದ ಶೇ.20ರಷ್ಟು ಕುಸಿತ ದಾಖಲಿಸಿವೆ. ಆಯ್ದ ಷೇರುಗಳು ಶೇ.40ರಿಂದ 70ರಷ್ಟು ಕುಸಿದಿವೆ.
ಷೇರುಪೇಟೆಯಲ್ಲಿ ಏರಿಳಿತ ಸಾಮಾನ್ಯ. ಆದರೆ, ಈಗಿನ ಕುಸಿತದ ತೀವ್ರತೆಯು ಎಲ್ಲರಲ್ಲಿ ಆತಂಕವನ್ನುಂಟು ಮಾಡಿದೆ. ಮಾರುಕಟ್ಟೆ ಸ್ಥಿರಗೊಳ್ಳಲು ಸಾಕಷ್ಟು ಕಾಲಾವಕಾಶ ಬೇಕಾಗಬಹುದು. ಕೋವಿಡ್-19 ತೀವ್ರತೆ ತಗ್ಗಿದ ನಂತರ ಷೇರುಪೇಟೆಯಲ್ಲಿ ಸ್ಥಿರತೆ ಕಂಡು ಬರಬಹುದು. ಅಲ್ಲಿಯವರೆಗೆ ಹೂಡಿಕೆದಾರರು ಎಚ್ಚರಿಕೆಯಿಂದ ಹೂಡಿಕೆ ಮಾಡಬೇಕು.