‘ಕೋವಿಡ್-19’ ವಿಷವೃತ್ತದಲ್ಲಿ ಸಿಲುಕಿ ನಲುಗುತ್ತಿರುವ ಜಾಗತಿಕ ಷೇರುಪೇಟೆ ಶುಕ್ರವಾರವೂ ಮಹಾಪತನ ಕಂಡಿತೆ. ನಿಲ್ಲದ ರಕ್ತದೋಕುಳಿಗೆ ದೇಶೀಯ ಷೇರು ಪೇಟೆ ನ್ಯಾಷನಲ್ ಸ್ಟಾಕ್ ಎಕ್ಸ್ಚೆಂಜ್ ಸೂಚ್ಯಂಕ ‘ನಿಫ್ಟಿ’ ಲೋಯರ್ ಸರ್ಕ್ಯೂಟ್ ಮುಟ್ಟಿದ ಪರಿಣಾಮ ತಾಲ್ಕಾಲಿಕವಾಗಿ ಒಂದು ಗಂಟೆ ವಹಿವಾಟು ಸ್ಥಗಿತಗೊಳಿಸಲಾಗಿದೆ. ತೀವ್ರ ಮಾರಾಟದ ಒತ್ತಡದ ಕಾರಣ ಮುಂಜಾನೆ ಮಾರುಕಟ್ಟೆ ವಹಿವಾಟು ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಷೇರುಪೇಟೆ ಶೇ.10ರಷ್ಟು ಕುಸಿತ ದಾಖಲಿಸಿತು.
ಭಾರಿ ಪ್ರಮಾಣದಲ್ಲಿ ಕುಸಿತವಾಗುವುದನ್ನು ತಡೆಗಟ್ಟುವ ಸಲುವಾಗಿ ಶೇ.10ರ ಲೋಯರ ಸರ್ಕ್ಯೂಟ್ ಹೇರಲಾಗಿದೆ. ಅಂದರೆ, ತ್ವರಿತವಾಗಿ ಶೇ.10ರಷ್ಟು ಕುಸಿತ ದಾಖಲಿಸಿದಾಗ ಬಾರಿ ನಷ್ಟವಾಗುವುದನ್ನು ತಪ್ಪಿಸಲು ವಹಿವಾಟನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ವಿಶೇಷ ಮತ್ತು ವಿರಳಾತಿವಿರಳ ಸಂದರ್ಭಗಳಲ್ಲಿ ಈ ಕ್ರಮ ಕೈಗೊಳ್ಳಳಾಗುತ್ತದೆ. ಒಂದು ಗಂಟೆಯ ನಂತರ ವಹಿವಾಟು ಪುನಾರಂಭಗೊಂಡು ಕುಸಿತವು ಶೇ.15ರಷ್ಟಾದರೆ ಮತ್ತೆ ತಾತ್ಕಾಲಿಕವಾಗಿ ವಹಿವಾಟು ಸ್ಥಗಿತಗೊಳಿಸಲಾಗುತ್ತದೆ. ಹೂಡಿಕೆದಾರರ ಸಂಪತ್ತು ತ್ವರಿತವಾಗಿ ನಾಶವಾಗುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ.
ಶುಕ್ರವಾರ ಮಾರುಕಟ್ಟೆ ಆರಂಭದ ತಕ್ಷಣವೇ ಮಾರುಕಟ್ಟೆ ತೀವ್ರ ಕುಸಿತ ದಾಖಲಿಸಿತು. ಅದಕ್ಕೂ ಮುನ್ನ ಜಾಗತಿಕ ಮಾರುಕಟ್ಟೆಗಳು ತೀವ್ರ ಕುಸಿತದಾಖಲಿಸಿದ್ದರಿಂದ ದೇಶೀಯ ಪೇಟೆಯ ಕುಸಿತವು ನಿರೀಕ್ಷಿತವಾಗಿತ್ತು. ಆದರೆ, ತ್ವರಿತವಾಗಿ ಶೇ.10ರಷ್ಟು ಕುಸಿತ ದಾಖಲಿಸುತ್ತದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಮಾರುಕಟ್ಟೆ ಎಲ್ಲಿ ಹೋಗಿ ನಿಲ್ಲುತ್ತದೆ ಎಂಬುದರ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲದ ಕಾರಣ ಎಲ್ಲರೂ ಮಾರಾಟ ಮಾಡುತ್ತಿದ್ದಾರೆ. ಖರೀದಿಸುವವರೇ ಇಲ್ಲ. ಹೀಗಾಗಿ ಕುಸಿತ ಅಬಾಧಿತವಾಗಿದೆ.
ಭಾರತೀಯ ಷೇರುಪೇಟೆಯ ಪ್ರಮುಖ ಸೂಚ್ಯಂಕಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ಒಂದೇ ದಿನದಲ್ಲಿ ಅತಿ ಗರಿಷ್ಠ ಪ್ರಮಾಣದ ಐತಿಹಾಸಿಕ ಮಹಾಪತನವನ್ನು ಗುರುವಾರ ದಾಖಲಿಸಿದ್ದವು. ಶುಕ್ರವಾರ ಶೇ.10ರಷ್ಟು ಕುಸಿತವಾಗಿ ಮತ್ತೊಂದು ಐತಿಹಾಸಿಕ ಕುಸಿತ ದಾಖಲಾದಂತಾಗಿದೆ. ಇದು ಆರಂಭ ದಿನದ ಅಂತ್ಯಕ್ಕೆ ಏನಾಗುತ್ತದೆಂಬ ಆತಂಕ ಎಲ್ಲರನ್ನು ಕಾಡುತ್ತಿದೆ. ನಿಫ್ಟಿ 966 ಅಂಶಗಳಷ್ಟು ಕುಸಿದು 8624ಕ್ಕೆ ಇಳಿದಾಗ ಲೋಯರ್ ಸರ್ಕ್ಯೂಟ್ ಹೇರಲಾಗಿದೆ. ಸೆನ್ಸೆಕ್ಸ್ 3090 ಅಂಶ ಕುಸಿದು 29687.62ಕ್ಕೆ ಇಳಿದಿದೆ.
ನಿಫ್ಟಿ ಹಾಗೂ ಸೆನ್ಸೆಕ್ಸ್ ತೀವ್ರ ಕುಸಿತದ ಪರಿಣಾಮ 20175ರ ಮಟ್ಟಕ್ಕೆ ಇಳಿದಿವೆ. ಗುರುವಾರ ನಿಫ್ಟಿ 10,000 ಅಂಶಗಳ ಪ್ರಬಲ ಸುರಕ್ಷತಾ ಮಟ್ಟದಿಂದ ಕುಸಿದು ಮತ್ತೊಂದು ಸುರಕ್ಷತಾ ಹಂತವಾದ 9,700ರ ಮಟ್ಟದಿಂದಲೂ ಪಾತಾಳಕ್ಕಿಳಿದಿತ್ತು. ದಿನದ ಅಂತ್ಯಕ್ಕೆ ನಿಫ್ಟಿ 825 ಅಂಶ ಕುಸಿತದೊಂದಿಗೆ 9,633 ಅಂಶಗಳಿಗೆ ಸ್ಥಿರಗೊಂಡಿತು. ಸೆನ್ಸೆಕ್ಸ್ 33,000 ಅಂಶಗಳ ಪ್ರಬಲ ಸುರಕ್ಷತಾ ಮಟ್ಟದಿಂದಲೂ ಕುಸಿಯಿತು. ಒಂದು ಹಂತದಲ್ಲಿ 3000 ಅಂಶಗಳಷ್ಟು ಕುಸಿದು ಕೊಂಚ ಚೇತರಿಕೆಯೊಂದಿಗೆ ದಿನದ ಅಂತ್ಯಕ್ಕೆ 2919 ಅಂಶಗಳ ಕುಸಿತದೊಂದಿಗೆ 32,778 ಅಂಶಗಳಿಗೆ ಸ್ಥಿರಗೊಂಡಿತ್ತು. ಆದರೆ, ಶುಕ್ರವಾರದ ಮಹಾಪತನದ ನಂತರ ನಿಫ್ಟಿ ಮತ್ತು ಸೆನ್ಸೆಕ್ಸ್ ಗಳಿಗೆ ಪ್ರಬಲ ಸುರಕ್ಷತಾ ಮಟ್ಟವೇ ಇಲ್ಲದಂತಾಗಿದೆ. ಶುಕ್ರವಾರದ ರಕ್ತದೋಕುಳಿಯಲ್ಲಿ ವಿಸ್ತೃತ ಮಾರುಕಟ್ಟೆಯ ಬಹುತೇಕ ಸೂಚ್ಯಂಕಗಳು ತ್ವರಿತ ಕುಸಿತ ದಾಖಲಿಸಿವೆ. ನಿಫ್ಟಿ ಮಿಡ್ಕ್ಯಾಪ್ 100, ನಿಫ್ಟಿ ಸ್ಮಾಲ್ಕ್ಯಾಪ್, ನಿಫ್ಟಿ 500, ನಿಫ್ಟಿ ಬ್ಯಾಂಕ್, ನಿಫ್ಟಿ ಐಟಿ, ನಿಫ್ಟಿ ರಿಯಾಲ್ಟಿ, ನಿಫ್ಟಿ ಇನ್ಫ್ರಾ, ನಿಫ್ಟಿ ಪಿಎಸ್ಯೂ ಬ್ಯಾಂಕ್, ನಿಫ್ಟಿ ಮೆಟಲ್, ನಿಫ್ಟಿ ಮಿಡಿಯಾ ಸೂಚ್ಯಂಕಗಳು ಶೇ.8ರಿಂದ 14ರಷ್ಟು ಕುಸಿತ ದಾಖಲಿಸಿದವು. ಗುರುವಾರ ದಿನವಿಡೀ ಆದ ಕುಸಿತವು ಶುಕ್ರವಾರ ಕೆಲವೇ ಸೆಕೆಂಡುಗಳಲ್ಲಿ ನಡೆಯಿತು.
ಹೂಡಿಕೆದಾರರ ಸುಮಾರು 12 ಲಕ್ಷ ಕೋಟಿ ರುಪಾಯಿ ಒಂದೇ ಕ್ಷಣದಲ್ಲಿ ನಾಶವಾಗಿದೆ. ಸದ್ಯಕ್ಕೆ ಚೇತರಿಕೆ ಕಾಣುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.
ಬ್ಲೂಚಿಪ್ ಷೇರುಗಳೇ ತ್ವರಿತ ಕುಸಿತ ದಾಖಲಿಸುತ್ತಿರುವುದು ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ. ಇಳಿಜಾರಿನ ಮಿಂಚಿನ ಓಟಕ್ಕೆ ಕೊನೆ ಎಂದು ಎಂಬ ಪ್ರಶ್ನೆಗೆ ಯಾರ ಉಳಿಯೂ ಉತ್ತರ ಇಲ್ಲ. ಕೋಟಕ್ ಮಹಿಂದ್ರ ಬ್ಯಾಂಕ್ ಶೇ.20ರಷ್ಟು ಕುಸಿದಿರುವುದು ಮತ್ತಷ್ಟು ಆತಂಕಕ್ಕೆಡೆ ಮಾಡಿದೆ. ಸೆನ್ಸೆಕ್ಸ್ ನಲ್ಲಿರುವ ಎಲ್ಲಾ ಮೂವತ್ತು ಷೇರುಗಳು ಭಾರಿ ಕುಸಿತ ದಾಖಲಿಸಿವೆ.
ರಿಲಯನ್ಸ್, ಟೆಕ್ ಮಹಿಂದ್ರಾ, ಎಚ್ಸಿಎಲ್ ಟೆಕ್, ಇಂಡಸ್ ಇಂಡ್, ಆಕ್ಸಿಸ್ ಬ್ಯಾಂಕ್, ಎನ್ಟಿಪಿಸಿ, ಮಾರುತಿ ಸುಜುಕಿ, ಐಟಿಸಿ, ಹಿರೋ ಮೋಟೋಕಾರ್ಪ್, ಎಸ್ಬಿಐ ಒಎನ್ಜಿಸಿ, ಎಂಅಂಡ್ಎಂ, ಟಾಟಾಸ್ಟೀಲ್, ಟಾಟಾ ಮೋಟಾರ್ಸ್, ಬಜಾಜ್ ಫೈನಾನ್ಸ್, ಬಜಾಜ್ ಆಟೋ ಸೇರಿದಂತೆ ಶೇ.10ಕ್ಕಿಂತ ಹೆಚ್ಚು ಕುಸಿತ ಕಂಡಿವೆ. ಈ ತಲ್ಲಣವೂ ತೈಲ ಮಾರುಕಟ್ಟೆಗೂ ವಿಸ್ತರಿಸಿದ್ದು, ಬ್ರೆಂಟ್ ಮತ್ತು ಡಬ್ಲ್ಯೂಟಿಐ ಕ್ರೂಡ್ ದಾಖಲೆ ಪ್ರಮಾಣದಲ್ಲಿ ಕುಸಿದಿವೆ. ಅಸ್ಥಿರತೆಯ ಕಾರಣದಿಂದಾಗಿ ರುಪಾಯಿ ಡಾಲರ್ ವಿರುದ್ಧ ದಾಖಲೆ ಮಟ್ಟದ ಕುಸಿತ ದಾಖಲಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯಪ್ರವೇಶದ ನಡುವೆಯೂ ರುಪಾಯಿ ಕುಸಿದಿದೆ.