ಆತಂಕಕಾರಿ ಕರೋನಾ ವೈರಸ್ ಎರಡನೇ ದಾಳಿಯ ಆತಂಕದ ನಡುವೆಯೇ ಒಂದು ಸಮಾಧಾನಕರ ಸಂಗತಿ ಹೊರಬಿದ್ದಿದೆ. ಸೋಂಕು ತಡೆಯುವಲ್ಲಿ ಶೇ.90ರಷ್ಟು ಯಶಸ್ವಿಯಾಗಿರುವ ವ್ಯಾಕ್ಸಿನ್ ಅಂತಿಮ ಹಂತದ ಪ್ರಯೋಗವನ್ನು ಯಶಸ್ವಿಯಾಗಿ ಪೂರೈಸಿದ್ದು, ಈ ತಿಂಗಳಾಂತ್ಯಕ್ಕೆ ತುರ್ತು ಬಳಕೆಗೆ ಲಭ್ಯವಾಗಲಿದೆ!
ಜಗತ್ತಿನಾದ್ಯಂತ ಕೋವಿಡ್-19 ಸೋಂಕಿನ ಎರಡನೇ ಅಲೆ ಹಬ್ಬುತ್ತಿದ್ದು, ಭಾರತದಲ್ಲಿಯೂ ಪ್ರಕರಣಗಳ ಸಂಖ್ಯೆ ಮತ್ತೆ ಏರುಗತಿಯಲ್ಲಿದೆ. ಜೊತೆಗೆ ಚಳಿಗಾಲದಲ್ಲಿ ಸೋಂಕು ಮತ್ತಷ್ಟು ವೇಗವಾಗಿ ಹರಡುವ ಆತಂಕವಿದೆ. ಇಂತಹ ಹೊತ್ತಲ್ಲಿ ಹೊಸ ಭರವಸೆಯಾಗಿ ಈ ಸುದ್ದಿ ಬಂದಿದ್ದು, ಅಮೆರಿಕ ಮೂಲದ ಪಿಫರ್ ಮತ್ತು ಬಯೋಎನ್ ಟೆಕ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ವ್ಯಾಕ್ಸಿನ್ ಈಗಾಗಲೇ ಪ್ರಯೋಗದ ಅಂತಿಮ ಹಂತದಲ್ಲಿ ಉತ್ತಮ ಫಲಿತಾಂಶ ನೀಡಿದೆ. ಮಾನವರ ಮೇಲಿನ ಪ್ರಯೋಗವಾದ ಈ ಹಂತದಲ್ಲಿ ಜಗತ್ತಿನಾದ್ಯಂತ ಸುಮಾರು ಒಂದು ಡಜನ್ ಗೂ ಅಧಿಕ ವ್ಯಾಕ್ಸಿನಗಳು ಪ್ರಯೋಗಕ್ಕೊಳಗಾಗಿವೆ. ಆದರೆ, ಆ ಪೈಕಿ ಸದ್ಯ ಫಿಫರ್- ಬಯೋಎನ್ ಟೆಕ್ ಲಸಿಕೆ ಮಾತ್ರ ಧನಾತ್ಮಕ ಫಲಿತಾಂಶ ನೀಡಿದೆ ಎಂದು ಬಿಬಿಸಿ ವರದಿ ಮಾಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈಗಾಗಲೇ ಆರು ದೇಶಗಳ ಸುಮಾರು 43,500 ಮಂದಿಯ ಮೇಲೆ ಪ್ರಾಯೋಗಿಕವಾಗಿ ಲಸಿಕೆಯ ಅಂತಿಮ ಹಂತದ ಪರೀಕ್ಷೆ ನಡೆಸಲಾಗಿದೆ. ಆ ಪೈಕಿ ಯಾವುದೇ ಆರೋಗ್ಯ ಸುರಕ್ಷತೆಯ ಕುರಿತ ಸಮಸ್ಯೆಗಳಾಗಲೀ, ಅಡ್ಡಪರಿಣಾಮದ ಕುರಿತ ಆತಂಕವಾಗಲೀ ಕಂಡುಬಂದಿಲ್ಲ. ಸಂಪೂರ್ಣವಾಗಿ ಪ್ರಾಯೋಗಾತ್ಮಕ ವಿಧಾನದಲ್ಲಿ ವ್ಯಾಕ್ಸಿನ್ ಕೆಲಸ ಮಾಡಲಿದ್ದು, ವೈರಸ್ಸಿನ ಆರ್ ಎನ್ ಎ ಒಳಗೊಂಡ ವ್ಯಾಕ್ಸಿನನ್ನು ಒಮ್ಮೆ ಮನುಷ್ಯನ ದೇಹಕ್ಕೆ ನೀಡಿದ ಬಳಿಕ ಅದು ದೇಶದ ಜೀವಕೋಶಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿ, ಪ್ರತಿಕಾಯಗಳನ್ನು ಉತ್ಪಾದಿಸಲು ಮತ್ತು ಆ ಮೂಲಕ ವೈರಸ್ ವಿರುದ್ಧ ಪ್ರತಿದಾಳಿ ಮಾಡಲು ಪ್ರೇರೇಪಿಸುತ್ತದೆ.
ಮೂರು ವಾರಗಳ ಅಂತರದಲ್ಲಿ ಎರಡು ಡೋಸ್ ವ್ಯಾಕ್ಸಿನ್ ತೆಗೆದುಕೊಳ್ಳಬೇಕಾಗುತ್ತದೆ. ಅಮೆರಿಕ, ಜರ್ಮನಿ, ಬ್ರಿಜಿಲ್, ಅರ್ಜೆಂಟೈನಾ, ದಕ್ಷಿಣ ಆಫ್ರಿಕಾ ಮತ್ತು ಟರ್ಕಿಯಲ್ಲಿ ನಡೆದಿರುವ ಅಂತಿಮ ಹಂತದ ಮಾನವ ಪ್ರಯೋಗಗಳಲ್ಲಿ, ಎರಡನೇ ಡೋಸ್ ವ್ಯಾಕ್ಸಿನ್ ನೀಡಿದ ಏಳು ದಿನಗಳ ಬಳಿಕ ಆ ವ್ಯಕ್ತಿಗಳು ಕರೋನಾ ವೈರಸ್ ವಿರುದ್ಧ ಶೇ.90ರಷ್ಟು ಪ್ರತಿರೋಧ ಬೆಳೆಸಿಕೊಂಡಿರುವುದು ದೃಢಪಟ್ಟಿದೆ. ಇದೊಂದು ಮಾನವ ಇತಿಹಾಸದಲ್ಲೇ ಅವಿಸ್ಮರಣೀಯ ಮತ್ತು ಮಹತ್ವದ ಸಾಧನೆ ಎಂದು ಕಂಪನಿ ಹೇಳಿಕೊಂಡಿರುವುದಾಗಿ ಬಿಬಿಸಿ ಹೇಳಿದೆ.

ಸದ್ಯ ವರ್ಷಾಂತ್ಯದ ವೇಳೆಗೆ ತಾನು ಸುಮಾರು 5 ಕೋಟಿ ಡೋಸ್ ವ್ಯಾಕ್ಸಿನ್ ಸರಬರಾಜು ಮಾಡಲು ಶಕ್ತನಾಗಿದ್ದೇನೆ ಎಂದು ಕಂಪನಿ ಹೇಳಿದ್ದು, 2021ರ ಅಂತ್ಯದ ಹೊತ್ತಿಗೆ ಸುಮಾರು 130 ಕೋಟಿ ಡೋಸ್ ವ್ಯಾಕ್ಸಿನ್ ಸಿದ್ಧಪಡಿಸುವುದಾಗಿ ಹೇಳಿದೆ. ಈ ನಡುವೆ, ಬ್ರಿಟನ್ ವರ್ಷಾಂತ್ಯದ ವೇಳೆಗೆ ಒಂದು ಕೋಟಿ ವ್ಯಾಕ್ಸಿನ್ ಡೋಸ್ ಪಡೆಯಲಿದ್ದು, ಈಗಾಗಲೇ ಹೆಚ್ಚುವರಿಯಾಗಿ 3 ಕೋಟಿ ಡೋಸ್ ಗೆ ಬೇಡಿಕೆ ಸಲ್ಲಿಸಿದೆ. ಆದರೆ, ವ್ಯಾಕ್ಸಿನ್ ಅಭಿವೃದ್ಧಿಪಡಿಸುವುದು ಮತ್ತು ಅದನ್ನು ನೀಡುವ ನಡುವೆ, ಅದರ ಸಾಗಣೆಯ ದೊಡ್ಡ ಸವಾಲು ಇದೆ. ಏಕೆಂದರೆ; ಆ ವ್ಯಾಕ್ಸಿನನ್ನು ಮೈನಸ್(-) 80 ಡಿಗ್ರಿಯಷ್ಟು ಅಲ್ಟ್ರಾ ಕೋಲ್ಡ್ ವಾತಾವರಣದಲ್ಲಿ ಶೇಖರಿಸಿಡಬೇಕು ಎಂದು ಕಂಪನಿ ಹೇಳಿದೆ.