ಶೂನ್ಯ ಅಂತರ ಸಂಪರ್ಕ ಬಳಕೆ ಶುಲ್ಕದ (ಐಯುಸಿ) ಅವಧಿಯನ್ನು ತಕ್ಷಣಕ್ಕೆ ಜಾರಿ ಮಾಡಲು ನಿರಾಕರಿಸಿರುವ ಭಾರತೀಯ ದೂರಸಂಪರ್ಕ ಪ್ರಾಧಿಕಾರವು (ಟ್ರಾಯ್) ಉದ್ದೇಶಿತ ಪ್ರಸ್ತಾವವನ್ನು ಒಂದು ವರ್ಷದವರೆಗೆ ಮುಂದೂಡಿದೆ. ಅಂದರೆ 2020 ಡಿಸೆಂಬರ್ ಅಂತ್ಯದವರೆಗೂ ಐಸಿಯು ಶುಲ್ಕವನ್ನು ಮೊಬೈಲ್ ಕಂಪನಿಗಳು ಭರಿಸಬೇಕಿದೆ. ಪ್ರಸ್ತುತ ಅನ್ಯ ಸಂಪರ್ಕಗಳಿಗೆ ಕರೆ ಮಾಡಿದಾಗ ಪ್ರತಿ ನಿಮಿಷದ ಕರೆಗೆ 6 ಪೈಸೆ ಐಸಿಯು ಶುಲ್ಕ ವಿಧಿಸಲಾಗುತ್ತಿದೆ. ಈ ಶುಲ್ಕವನ್ನು ಕಂಪನಿಗಳು ಈಗಾಗಲೇ ಗ್ರಾಹಕರಿಂದ ವಸೂಲಿ ಮಾಡಲಾರಂಭಿಸಿವೆ.
ಇದಲ್ಲದೇ ಕರೆ ಮತ್ತು ಡೇಟಾ ಬಳಕೆ ಮಾಡುವ ಗ್ರಾಹಕರಿಗೆ ಕನಿಷ್ಠ ಮತ್ತು ಗರಿಷ್ಠ ದರ ನಿಗದಿ ಮಾಡುವ ಕುರಿತಂತೆ ಎಲ್ಲಾ ಭಾಗೀದಾರರ ಅಭಿಪ್ರಾಯವನ್ನು ಟ್ರಾಯ್ ಕೇಳಿದೆ. ಕನಿಷ್ಠ ಮತ್ತು ಗರಿಷ್ಠ ದರ ನಿಗದಿ ಮಾಡುವುದು ಗ್ರಾಹಕ ವಿರೋಧಿ ಕ್ರಮ ಎಂದೂ ಈ ಹಿಂದೆ ಟ್ರಾಯ್ ಹೇಳಿತ್ತು.
ಐಯುಸಿ ಶುಲ್ಕದ ಮೂಲಕ ಸಾಕಷ್ಟು ಆದಾಯ ಗಳಿಸುತ್ತಿರುವ ಐಡಿಯಾ ವೊಡಾಫೋನ್ ಮತ್ತು ಭಾರ್ತಿ ಏರ್ಟೆಲ್ ಕಂಪನಿಗಳಿಗೆ ಶೂನ್ಯ ಐಯುಸಿ ಶುಲ್ಕದ ಅವಧಿ ಜಾರಿಯನ್ನು ಮುಂದೂಡುವ ನಿರ್ಧಾರರಿಂದಾಗಿ ತಕ್ಷಣಕ್ಕೆ ಲಾಭವಾಗಲಿದೆ.
ಕನಿಷ್ಠ ಮತ್ತು ಗರಿಷ್ಠ ದರ ನಿಗದಿ ಮಾಡುವಂತೆ ಪ್ರಮುಖ ದೂರಸಂಪರ್ಕ ಕಂಪನಿಗಳಾದ ಭಾರ್ತಿ ಏರ್ಟೆಲ್, ಐಡಿಯಾ ವೊಡಾಭೋನ್ ಮತ್ತು ರಿಲಯನ್ಸ್ ಜಿಯೋ ಟ್ರಾಯ್ ಗೆ ಮನವಿ ಮಾಡಿವೆ. ದೂರಸಂಪರ್ಕ ವಲಯದ ಸೇವೆಯನ್ನು ಉತ್ತಮಪಡಿಸಲು ಮತ್ತು ವಲಯದ ಆರ್ಥಿಕ ಆರೋಗ್ಯ ಕಾಪಾಡಿಕೊಳ್ಳಲು ಕನಿಷ್ಠ ಮತ್ತು ಗರಿಷ್ಠ ದರ ನಿಗದಿ ಮಾಡಬೇಕು ಎಂದು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಸಿಒಎಐ) ಮೂಲಕ ಟ್ರಾಯ್ ಗೆ ಮನವಿ ಸಲ್ಲಿಸಿವೆ.
ಮೊಬೈಲ್ ಸೇವಾ ದರಗಳ ಕುರಿತಂತೆ ತನ್ನ ನಿಲವು ಪ್ರಕಟಿಸಿರುವ ಟ್ರಾಯ್, ದರ ನಿಗದಿ ವಿಷಯದಲ್ಲಿ ಮಧ್ಯಪ್ರವೇಶ ಮಾಡದಿರುವ ನಿರ್ಧಾರ ಕೈಗೊಂಡಿದ್ದು, ಮೊಬೈಲ್ ಕಂಪನಿಗಳ ದರ ನಿಗದಿ ಬೇಡಿಕೆಯನ್ನು ಟೀಕಿಸಿದೆ. ಇದು ಮೇಲ್ನೋಟಕ್ಕೆ ಗ್ರಾಹಕರ ವಿರೋಧ ನಿಲವಾಗಿದೆ, ಇದರಿಂದ ಗ್ರಾಹಕರು ತೆರಬೇಕಾದ ಶುಲ್ಕಗಳು ಹೆಚ್ಚಾಗಲಿವೆ ಎಂದು ಹೇಳಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ದರನಿಗದಿ ಮಾಡುವಲ್ಲಿ ನಿಯಂತ್ರಣ ಪ್ರಾಧಿಕಾರಗಳು ಮಧ್ಯಪ್ರವೇಶ ಮಾಡುವುದಿಲ್ಲ. ಏಕೆಂದರೆ ಇದು ಗ್ರಾಹಕ ವಿರೋಧಿ ಮತ್ತು ಸ್ಪರ್ಧಾತ್ಮಕ ವಿರೋಧಿ ನಿಲವು ಎಂದೇ ಪರಿಗಣಿಸಲಾಗಿದೆ. ಮಧ್ಯಪ್ರವೇಶಿಸುವುದರಿಂದ ಸೇವೆ ಒದಗಿಸುವ ಕಂಪನಿಗಳು ಗ್ರಾಹಕಸ್ನೇಹಿ ದರ ನೀಡುವ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತಾಗುತ್ತದೆ ಎಂದು ಒಪ್ಪಲಾಗಿದೆ ಎಂದು ಟ್ರಾಯ್ ಹೇಳಿದೆ.
ಆದರೆ, ರಿಯಲನ್ಸ್ ಜಿಯೋ ಮಾತ್ರ ಶುನ್ಯ ಐಯುಸಿ ಅವಧಿ ಜಾರಿಯನ್ನು ಮುಂದೂಡುವ ನಿರ್ಧಾರವನ್ನು ವಿರೋಧಿಸಿದೆ. ದೇಶೀಯ ಮೊಬೈಲ್ ಕರೆಗಳಿಗೆ ಟರ್ಮಿನೇಷನ್ ಶುಲ್ಕ ಪ್ರತಿ ನಿಮಿಷಕ್ಕೆ 6 ಪೈಸೆ 2020 ಡಿಸೆಂಬರ್ 31ರವೆರೆಗೆ ಮುಂದುವರೆಯಲಿದೆ. ಆನಂತರದಲ್ಲಿ ಟರ್ಮಿನೇಷನ್ ಶುಲ್ಕವು ಶೂನ್ಯವಾಗಲಿದೆ ಎಂದು ಟ್ರಾಯ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಸ್ತುತ ಇಂಟರ್ ಕನೆಕ್ಟ್ ಶುಲ್ಕವನ್ನು ಕರೆ ಮಾಡುವ ಕಂಪನಿಗಳು ಕರೆ ಸ್ವೀಕರಿಸುವ ಕಂಪನಿಗಳಿಗೆ ನೀಡುತ್ತಿವೆ. ಉದ್ದೇಶಿತ ‘ಬಿಲ್ ಅಂಡ್ ಕೀಪ್’ ವ್ಯವಸ್ಥೆ ಅಡಿಯಲ್ಲಿ ಕರೆ ಮಾಡುವ ಕಂಪನಿಗಳು ಶುಲ್ಕವನ್ನು ಗ್ರಾಹಕರ ಬಿಲ್ ಗೆ ವರ್ಗಾಹಿಸುತ್ತವೆ. ಗ್ರಾಹಕರಿಂದ ವಸೂಲು ಮಾಡುವ ಶುಲ್ಕವನ್ನು ತಾನೇ ಇಟ್ಟುಕೊಳ್ಳುತ್ತದೆ. 4ಜಿ ಅಸಮರ್ಪಕ ಅಳವಡಿಕೆ ಮತ್ತು ಕರೆ ಸಂಚಾರ ಸಾಂದ್ರತೆಯಲ್ಲಿನ ಅಸಮತೋಲನದಿಂದಾಗಿ ಜನವರಿ 1ರಿಂದಲೇ ಶೂನ್ಯ ಐಯುಸಿ ಶುಲ್ಕ ಅವಧಿಯನ್ನು ಜಾರಿ ಮಾಡುವುದು ಸೂಕ್ತವಲ್ಲ ಎಂದು ಟ್ರಾಯ್ ಹೇಳಿದೆ.
ಟ್ರಾಯ್ ನಿರ್ಧಾರದಿಂದಾಗಿ ಐಡಿಯಾ ವೋಡಾಫೋನ್ ಗೆ ತಾತ್ಕಾಲಿಕ ಪರಿಹಾರವಾಗಿ ಪರಿಣಮಿಸಿದರೆ ರಿಲಯನ್ಸ್ ಜಿಯೋಗೆ ಇದು ವ್ಯತಿರಿಕ್ತವಾಗಿ ಪರಿಣಮಿಸಿದೆ. ಪ್ರಸಕ್ತ ವಿತ್ತೀಯ ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ ವೊಡಾಫೋನ್ ಒಟ್ಟು ಆದಾಯದ ಪೈಕಿ ಐಯುಸಿ ಮೂಲಕ ಶೇ.28ರಷ್ಟು ಬಂದಿದ್ದರೆ, ಭಾರ್ತಿ ಏರ್ಟೆಲ್ ಗೆ ಶೇ.3ರಷ್ಟು ಆದಾಯ ಬಂದಿದೆ. ಅದೇ ಜಿಯೋಗೆ ಐಯುಸಿ ಶೇ.13ರಷ್ಟು ವೆಚ್ಚದ ಬಾಬ್ತಾಗಿದೆ. ಬರುವ ಮುರ್ನಾಲ್ಕು ತ್ರೈಮಾಸಿಕಗಳ ನಂತರ ಜಿಯೋ ಕೂಡಾ ಐಯುಸಿ ಮೂಲಕ ಆದಾಯಗಳಿಸುವ ಸಾಧ್ಯತೆ ಇದೆ ಎಂದು ಐಐಎಫ್ಎಲ್ ದಲ್ಲಾಳಿ ಸಂಸ್ಥೆಯು ತಿಳಿಸಿದೆ.
ಈ ಬೆಳವಣಿಗೆಗಳಿಂದಾಗಿ ಮುಂಬರುವ ದಿನಗಳಲ್ಲಿ ಗ್ರಾಹಕರು ಹೆಚ್ಚಿನ ಶುಲ್ಕವನ್ನು ತೆರಬೇಕಾಗಿದೆ. ಕನಿಷ್ಠ ಮತ್ತು ಗರಿಷ್ಠ ದರ ನಿಗದಿ ಮಾಡಿದರೆ, ಗ್ರಾಹಕರು ಕಡ್ಡಾಯವಾಗಿ ಕನಿಷ್ಠ ದರ ಪಾವತಿಸಲೇಬೇಕಾಗುತ್ತದೆ. ಅಂದರೆ ಪ್ರಸ್ತುತ ಮಾಡಿದ ಕರೆಗೆ ಮತ್ತು ಬಳಸಿದ ಡೇಟಾಗೆ ಮಾತ್ರ ಶುಲ್ಕ ಪಾವತಿಸುವುದರ ಜತೆಗೆ ಪಡೆದುಕೊಂಡಿರುವ ಸಂಪರ್ಕಕ್ಕೂ ಕನಿಷ್ಠ ಶುಲ್ಕ ಪಾವತಿಸಬೇಕಾಗುತ್ತದೆ. ಮೊಬೈಲ್ ಕಂಪನಿಗಳು ಇದುವರೆಗೆ ಸತತ ನಷ್ಟದಲ್ಲಿ ಇದ್ದರೂ ಪೈಪೋಟಿ ಕಾರಣಕ್ಕಾಗಿ ಮೊಬೈಲ್ ಕಂಪನಿಗಳು ದರ ಏರಿಕೆ ಮಾಡಿರಲಿಲ್ಲ. ಪ್ರತಿಬಾರಿ ದರ ಏರಿಕೆ ಮಾಡುವ ಪ್ರಸ್ತಾಪವನ್ನು ಹೊಸದಾಗಿ ಮಾರುಕಟ್ಟೆಗೆ ಬಂದಿದ್ದ ರಿಲಯನ್ಸ್ ಜಿಯೋ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿತ್ತು. ಆದರೆ, ದೂರಸಂಪರ್ಕ ಇಲಾಖೆ ಹೊಂದಾಣಿಕೆ ಮಾಡಲಾದ ಒಟ್ಟು ಆದಾಯ (ಎಜಿಆರ್) ಕುರಿತಂತೆ ಸುಪ್ರೀಂಕೋರ್ಟ್ ನಲ್ಲಿ ವ್ಯಾಜ್ಯವನ್ನು ಗೆದ್ದಿದ್ದು, ಬೃಹತ್ ಬಾಕಿ ಮೊತ್ತವನ್ನು ಈ ಕಂಪನಿಗಳು ಪಾವತಿಸಬೇಕಿದೆ. ಹೊಂದಾಣಿಕೆ ಮಾಡಲಾದ ಒಟ್ಟು ಆದಾಯ (ಎಜಿಆರ್) ಬಾಕಿ ಪಾವತಿಸುವ ಸಲುವಾಗಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಎಡರನೇ ತ್ರೈಮಾಸಿಕದಲ್ಲಿ ಭಾರಿ ನಷ್ಟವನ್ನು ಘೋಷಣೆ ಮಾಡಿವೆ. ವೊಡಾಫೋನ್ ಐಡಿಯಾ 50,921 ಕೋಟಿ ರುಪಾಯಿಗಳ ನಷ್ಟ ಘೋಷಣೆ ಮಾಡಿದ್ದರೆ, ಏರ್ಟೆಲ್ 23,045 ಕೋಟಿ ರುಪಾಯಿ ನಷ್ಟ ಘೋಷಣೆ ಮಾಡಿದೆ. ಘೋಷಣೆ ಮಾಡಲಾದ ನಷ್ಟದ ಅಷ್ಟೂ ಮೊತ್ತವನ್ನು ಈ ಕಂಪನಿಗಳು ಹೊಂದಾಣಿಕೆ ಮಾಡಲಾದ ಒಟ್ಟು ಆದಾಯದ ಮೇಲಿನ ತೆರಿಗೆ ಮತ್ತು ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಬೇಕಿದೆ.
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಬಿಟ್ಟರೆ, ಸ್ಪರ್ಧೆಯಲ್ಲಿ ಉಳಿದಿರುವ ಮೂರು ಪ್ರಮುಖ ಕಂಪನಿಗಳಾದ ಏರ್ಟೆಲ್, ಐಡಿಯಾ ಮತ್ತು ರಿಲಯನ್ಸ್ ಜಿಯೋ ಕಂಪನಿಗಳ ಮೇಲೆ ಬೃಹತ್ ಸಾಲದ ಹೊರೆಯೇ ಇದೆ. ಏರ್ಟೆಲ್ 1.17 ಲಕ್ಷ ಕೋಟಿ ಇದ್ದರೆ, ವೊಡಾಫೋನ್ 1.18 ಲಕ್ಷ ಕೋಟಿ ಮತ್ತು ರಿಲಯನ್ಸ್ ಜಿಯೋ 1.08 ಲಕ್ಷ ಕೋಟಿ ಸಾಲ ಹೊಂದಿವೆ. ಈ ಮೂರು ಕಂಪನಿಗಳ ಒಟ್ಟು 3.43 ಲಕ್ಷ ಕೋಟಿ ಸಾಲ ಹೊರೆ ಇದೆ. ಈ ಬೃಹತ್ ಸಾಲದ ಹೊರೆಯ ಜತೆಗೆ ಹೊಂದಾಣಿಕೆ ಮಾಡಲಾದ ಒಟ್ಟು ಆದಾಯದ ಮೇಲಿನ ಬಾಕಿ ತೆರಿಗೆ ಮತ್ತು ಶುಲ್ಕ ಪಾವತಿಸಬೇಕಿರುವುದರಿಂದ ಕಂಪನಿಗಳಿಗೆ ದರ ಏರಿಕೆ ಮಾಡದೇ ಅನ್ಯ ಮಾರ್ಗವೇ ಇರಲಿಲ್ಲ.
ಈಗ ಕನಿಷ್ಠ ಮತ್ತು ಗರಿಷ್ಠ ದರ ನಿಗದಿಗೆ ಮೂರು ಕಂಪನಿಗಳು ಮನವಿ ಸಲ್ಲಿಸಿವೆ. ಒಂದು ವೇಳೆ ಟ್ರಾಯ್ ಈ ಮನವಿ ಪುರಸ್ಕರಿಸಿದರೆ ಗ್ರಾಹಕರು ಇದುವರೆಗೆ ಪಡೆಯುತ್ತಿದ್ದ ಉಚಿತ ಅಥವಾ ಕಡಮೆ ದರದ ಸೇವೆಗಳಿಗೆ ಹೆಚ್ಚಿನ ಶುಲ್ಕ ಪಾವತಿಸುವುದು ಅನಿವಾರ್ಯವಾಗುತ್ತದೆ.