ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ತೂಗುಗತ್ತಿ ಮೇಲೆ ಸರ್ಕಸ್ ಮಾಡ್ತಿದೆ. ವಿಶ್ವಾಸ ಮತ ಯಾಚನೆಗೆ ರಾಜ್ಯಪಾಲರು ಸೂಚನೆ ಕೊಟ್ಟಿದ್ದಾರೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾದ ಬಳಿಕ ಬಿಜೆಪಿ ನಾಯಕರ ಮುಂದಿನ ನಿಲ್ದಾಣ ರಾಜಸ್ಥಾನ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಕಾಂಗ್ರೆಸ್ ಸರ್ಕಾರದ ಶಾಸಕರನ್ನು ಆಪರೇಷನ್ ಕಮಲದ ಮೂಲಕ ಸೆಳೆಯುವುದು ಅಷ್ಟೇ ಬಿಜೆಪಿ ಹೈಕಮಾಂಡ್ ನಾಯಕರ ಕಾಯಕ. ಅದು ಸೂಕ್ತ ರೀತಿಯಲ್ಲಿ ಮುಗಿದ ಬಳಿಕ ಸರ್ಕಾರ ರಚನೆ ತನ್ನಷ್ಟಕ್ಕೆ ನೆರವೇರಲಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಕರ್ನಾಟಕದಲ್ಲಿ ತೆರೆಮರೆಯಲ್ಲಿ ನಿಂತು ಆಪರೇಷನ್ ಕಮಲ ಮಾಡಿಸಿದ ಕಮಲ ನಾಯಕರು
ಮಧ್ಯಪ್ರದೇಶದಲ್ಲಿ ಸ್ವತಃ ತಾವೇ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದರು. ಪ್ರಧಾನಿ ನರೇಂದ್ರ ಮೋದಿಯೇ ಜೋತಿರಾದಿತ್ಯ ಸಿಂಧಿಯಾ ಅವರನ್ನು ಭೇಟಿಯಾದ ಬಳಿಕ, ಅಮಿತ್ ಷಾ ಚರ್ಚೆ ನಡೆಸಿದ ಬಳಿಕ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಆದರೆ ರಾಜಸ್ಥಾನದಲ್ಲಿ ಬಿಜೆಪಿ ನಾಯಕರು ಆಪರೇಷನ್ ಕಮಲ ಮಾಡುವ ಅವಶ್ಯಕತೆ ಇಲ್ಲ ಎನ್ನುವ ಮಾತುಗಳು ಕೇಳಿಬಂದಿವೆ.
ರಾಜಸ್ಥಾನ ಸರ್ಕಾರ ಡಿಸೆಂಬರ್ 2018ರಲ್ಲಿ ಅಸ್ತಿತ್ವಕ್ಕೆ ಬರುವ ಸಮಯದಲ್ಲೇ ಮುಖ್ಯಮಂತ್ರಿ ಹುದ್ದೆಗಾಗಿ ಪೈಪೋಟಿ ನಡೆದಿತ್ತು. ಆಗ ಮಧ್ಯಪ್ರವೇಶ ಮಾಡಿದ್ದ ರಾಹುಲ್ ಗಾಂಧಿ, ಸ್ನೇಹಿತನನ್ನು ಸಮಾಧಾನ ಮಾಡಿ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿ ಆಗುವ ಹಾದಿಯನ್ನು ಸುಗಮ ಮಾಡಿದ್ದರು. ಅಂದಿನಿಂದಲೂ ಒಳಬೇಗುದಿಯಲ್ಲಿ ಕುದಿಯುತ್ತಿದ್ದ ಭಿನ್ನಾಭಿಪ್ರಾಯ ಇದೀಗ ಸ್ಫೋಟಗೊಳ್ಳುವ ಮುನ್ಸೂಚನೆ ಸಿಕ್ಕಿದೆ. ಇದಕ್ಕೆ ಬಲ ಒದಗಿಸಿದ್ದು ಮಧ್ಯಪ್ರದೇಶದಲ್ಲಿ ನಡೆದ ಆಪರೇಷನ್ ಕಮಲ. ರಾಹುಲ್ ಗಾಂಧಿ ಆಪ್ತರಲ್ಲಿ ಒಬ್ಬರಾಗಿದ್ದ ಜೋತಿರಾದಿತ್ಯ ಸಿಂಧಿಯಾರನ್ನೇ ಆಪರೇಷನ್ ಕಮಲಕ್ಕೆ ಕೆಡವಿಕೊಂಡ ಬಿಜೆಪಿ ನಾಯಕರು, ಇಡೀ ಸಿಂಧಿಯಾ ಪಡೆಯನ್ನೇ ರಾಜೀನಾಮೆ ಕೊಡಿಸಿ ಕಾಂಗ್ರೆಸ್ ಸರ್ಕಾರವನ್ನು ಪತನದ ಹಾದಿ ಕಡೆಗೆ ತಳ್ಳುವಲ್ಲಿ ಯಶಸ್ವಿಯಾಗಿದೆ. ಮಧ್ಯಪ್ರದೇಶ ಮಾದರಿಯಲ್ಲೇ ಆಪರೇಷನ್ ನಡೆಯುತ್ತೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಮುಖ್ಯಮಂತ್ರಿ ಹುದ್ದೆಗಾಗಿ ಪೈಪೋಟಿ ನಡೆಸಿದ್ದ ಸಚಿನ್ ಪೈಲಟ್ ಕಾಂಗ್ರೆಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಪಟ್ಟದಲ್ಲಿದ್ದರೂ ಅಸಮಾಧಾನ ಹೊಗೆಯಾಡುತ್ತಿದೆ. ಇದನ್ನೇ ಬಳಸಿಕೊಂಡು ಆಪರೇಷನ್ ಕಮಲ ಸರಳ ಮಾಡುವ ಲೆಕ್ಕಾಚಾರ ನಡೆದಿದೆ ಎನ್ನಲಾಗಿದೆ.
ರಾಜಸ್ಥಾನದಲ್ಲಿ ಮಾರ್ಚ್ 26ರಂದು ರಾಜ್ಯಸಭಾ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜ್ಯುವೆಲ್ಲರಿ ಕಂಪನಿ ಮಾಲೀಕ ರಾಜೀವ್ ಅರೋರಾ ಅವರನ್ನು ಆಯ್ಕೆ ಮಾಡಲು ಮುಂದಾಗಿದ್ದರು. ಆದರೆ ಸಿಎಂ ಅಶೋಕ್ ಗೆಹ್ಲೋಟ್ ನಿರ್ಧಾವನ್ನು ವಿರೋಧಿಸಿದ ಸಚಿನ್ ಪೈಲಟ್, ಯಾವುದೇ ಕಾರಣಕ್ಕೂ ಉದ್ಯಮಿಗಳನ್ನು ಆಯ್ಕೆ ಮಾಡುವುದು ಬೇಡ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗಲಿದೆ ಎನ್ನುವುದನ್ನು ಹೇಳಿದ್ರು. ಅದೇ ಸಮಯಕ್ಕೆ ಮಧ್ಯಪ್ರದೇಶ ಬಿಕ್ಕಟ್ಟು ಸಚಿನ್ ಪೈಲಟ್‌ಗೆ ಬೆಂಬಲವಾಗಿ ಬಂದಿತ್ತು. ಅದನ್ನೇ ಬಳಸಿಕೊಂಡ ಸಚಿನ್ ಪೈಲಟ್, ಸಣ್ಣದಾಗಿ ಒಂದು ಟ್ವೀಟ್ ಮಾಡಿದ್ದರು. ಮಧ್ಯಪ್ರದೇಶ ಬಿಕ್ಕಟ್ಟು ಶೀಘ್ರವೇ ಬಗೆಹರಿಯಲಿದೆ. ಕಾಂಗ್ರೆಸ್ ನಾಯಕರು ಕೊಟ್ಟಿರುವ ಆಶ್ವಾಸನೆಗಳನ್ನು ಪೂರ್ಣ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಭೂಗಿಲೆದ್ದಿರುವ ಭಿನ್ನಾಭಿಪ್ರಾಯಗಳು ಸರಿಯಾಗಲಿವೆ ಎಂದಿದ್ದರು. ಆ ಟ್ವೀಟ್ ಮಾಡಿದ ಮರುದಿನವೇ ಜೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದರು. ಟ್ವೀಟ್‌ಗೂ ರಾಜೀನಾಮೆಗೂ ಏನೋ ಸಂಬಂಧ ಇದೆ ಎನ್ನುವುದನ್ನು ಅರಿತ ಕಾಂಗ್ರೆಸ್ ಹೈಕಮಾಂಡ್ ಎಚ್ಚೆತ್ತುಕೊಂಡಿದೆ. ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದ ಅಭ್ಯರ್ಥಿಯನ್ನು ಕೈಬಿಟ್ಟು, ಕೆ.ಸಿ ವೇಣುಗೋಪಾಲ್ ಹಾಗೂ ದಲಿತ ನಾಯಕ ನೀರಜ್ ದಾಂಗಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ನಾಮಪತ್ರ ಸಲ್ಲಿಸಿದೆ. ಆದರೂ ಪಟ್ಟು ಬಿಡದ ಕಮಲಪತಿಗಳು ಸಚಿನ್ ಪೈಲಟ್ ಸೆಳೆಯುವ ತಂತ್ರಗಾರಿಕೆ ಮಾಡುತ್ತಿದ್ದಾರೆ ಎನ್ನುವ ಭಯ ರಾಜಸ್ಥಾನ ಸಿಎಂ ಸಿಎಂ ಅಶೋಕ್ ಗೆಹ್ಲೋಟ್ ಅವರನ್ನು ಕಾಡುತ್ತಿದೆ
ರಾಜಸ್ಥಾನದಲ್ಲಿ ಕಾಂಗ್ರೆಸ್ ಬಿಜೆಪಿ ಅಷ್ಟೊಂದು ದೊಡ್ಡ ಮಟ್ಟದ ವ್ಯತ್ಯಾಸವಿಲ್ಲ. ವಿಧಾನಸಭಾ ಸದಸ್ಯರ ಬಲ 200 ಇದ್ದು, ಆಡಳಿತ ರೂಢ ಕಾಂಗ್ರೆಸ್ 112 ಶಾಸಕರ ಬಲ ಹೊಂದಿದೆ. ಇದರಲ್ಲಿ ಆರ್‌ಎಲ್‌ಡಿಯ ಒಬ್ಬರು ಹಾಗೂ ಸಿಪಿಎಂನ ಮೂವರು ಸೇರಿದ್ದಾರೆ. ವಿರೋಧ ಪಕ್ಷ ಬಿಜೆಪಿ ಬತ್ತಳಿಕೆಯಲ್ಲಿ 80 ಸ್ಥಾನಗಳಿದ್ದು, ಮಧ್ಯಪ್ರದೇಶದಂತೆ 20 ಶಾಸಕರನ್ನು ರಾಜೀನಾಮೆ ಕೊಡಿಸುವಲ್ಲಿ ಯಶಸ್ಸು ಸಾಧಿಸಿಸಿದರೆ ರಾಜಸ್ಥಾನದಲ್ಲಿ ಗೇಮ್ ಬದಲಾಗಲಿದೆ. ವಿಶೇಷ ಎಂದರೆ ರಾಜಸ್ಥಾನದಲ್ಲಿ ಅತೃಪ್ತ ನಾಯಕನಾಗಿರುವ ಸಚಿನ್ ಪೈಲಟ್ ಸಮಾಧಾನ ಮಾಡುವಂತೆ ಸೋನಿಯಾ ಗಾಂಧಿಯೇ ಸ್ವತಃ ಸಿಎಂ ಅಶೋಕ್ ಗೆಹ್ಲೋಟ್‌ಗೆ ಸೂಚನೆ ಕೊಟ್ಟು ಅಖಾಡಕ್ಕೆ ಇಳಿದಿದ್ದಾರೆ. ಯಾವುದೇ ಕಾರಣಕ್ಕೂ ಮಧ್ಯಪ್ರದೇಶದಂತೆ ಆಪರೇಷನ್ ಆಗಬಾರದು ಎಲ್ಲವನ್ನೂ ಎಚ್ಚರಿಕೆಯಿಂದಲೇ ನಿಬಾಯಿಸಬೇಕು ಎನ್ನುವ ಸಂದೇಶ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಆದರೂ ಸಚಿನ್ ಪೈಲಟ್ ಹಾಗೂ ಜೋತಿರಾದಿತ್ಯ ಸಿಂಧಿಯಾ ಈ ಹಿಂದೆ ರಾಹುಲ್ ಟೀಂನಲ್ಲಿ ಒಟ್ಟಿಗೆ ಕೆಲಸ ಮಾಡಿದವರು. ಇಬ್ಬರ ನಡುವೆ ಉತ್ತಮ ಸ್ನೇಹ ಬಾಂಧವ್ಯ ಇದೆ. ಇದೀಗ ಜೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದಿದ್ದು, ತನ್ನ ಸ್ನೇಹಿತನನ್ನು ಆತನ ಸ್ನೇಹಿತರ ಸಮೇತ ಕಮಲ ಪಕ್ಷಕ್ಕೆ ಕರೆದೊಯ್ಯುವ ಲೆಕ್ಕಾಚಾರ ನಡೆಯುತ್ತಿದೆ. ಆಪರೇಷನ್ ಕಮಲ ಮಾಡುವ ಅವಶ್ಯಕತೆ ಇಲ್ಲ. ಸ್ನೇಹಕ್ಕೆ ಬಲೆ ಬೀಸಿದರರೆ ಅಷ್ಟೇ ಸಾಕು. ಎಲ್ಲವೂ ಸಲೀಸಾಗಿ ಸಾಗಲಿದೆ ಎನ್ನಲಾಗ್ತಿದೆ. ಒಟ್ಟಾರೆ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದ ಬಳಿ ರಾಜಸ್ಥಾನದಲ್ಲೂ ಜಾಲ ಎಣೆಯುವುದು ಶತಸಿದ್ಧವಾಗಿದ್ದು ಸೂತ್ರ ಸಿದ್ಧವಾಗಿದೆ ಎನ್ನಲಾಗ್ತಿದೆ.