CAA-NRC ಹೋರಾಟವನ್ನು ಹತ್ತಿಕ್ಕಲು ಆಡಳಿತಾರೂಢ ಬಿಜೆಪಿ ಮತ್ತು ಅದರ ಸಂಘಪರಿವಾರ ಏನೆಲ್ಲಾ ಪ್ರಯತ್ನಗಳನ್ನು ಮಾಡಿದವು? ಆ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ಹೋರಾಟಕ್ಕೆ ಕಳಂಕ ಹಚ್ಚಿ ಹೋರಾಟಗಾರರ ನೈತಿಕ ಸ್ಥೈರ್ಯ ಕುಗ್ಗಿಸಲು ಏನೆಲ್ಲಾ ಯತ್ನಗಳನ್ನು ಮಾಡಿತ್ತು ಎಂಬುದನ್ನು ಮರೆಯುವ ಮುನ್ನವೇ ಅಂತಹ ಪ್ರಯತ್ನಗಳ ಪ್ರಮುಖ ಅಸ್ತ್ರವಾಗಿದ್ದ ವ್ಯಕ್ತಿಯೊಬ್ಬ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾನೆ.
ಆ ಮೂಲಕ ವರ್ಷದ ಹಿಂದೆ ಶಾಹೀನ್ ಬಾಗ್ ಹೋರಾಟದ ಮೇಲೆ ನಡೆದ ದಾಳಿಗಳ ಮೂಲ ತನ್ನದೇ ಪರಿವಾರ ಎಂಬುದನ್ನು ಬಿಜೆಪಿ ಈಗ ದೇಶದ ಎದುರು ಬಹಿರಂಗವಾಗಿಯೇ ಒಪ್ಪಿಕೊಂಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸದ್ಯ ಮೂರು ಕೃಷಿ ವಿರೋಧಿ ಕಾಯ್ದೆಗಳನ್ನು ವಾಪಸು ಪಡೆಯಬೇಕು ಎಂದು ಆಗ್ರಹಿಸಿ ದೇಶದ ರೈತರು ನಡೆಸುತ್ತಿರುವ ಐತಿಹಾಸಿಕ ಹೋರಾಟಕ್ಕೆ ಮಸಿ ಬಳಿಯಲು, ಕಳಂಕ ಮೆತ್ತಲು ಇನ್ನಿಲ್ಲದ ಹರಸಾಹಸ ಮಾಡಿ ಸೋತಿರುವ ಬಿಜೆಪಿ, ಈಗ ಸರಣಿ ಮಾತುಕತೆಯ ಪ್ರಸ್ತಾಪಗಳನ್ನು ಇಡುತ್ತಾ ದೇಶದ ಅನ್ನದಾತರ ಮುಂದೆ ಮಂಡಿಯೂರುತ್ತಿದೆ. ಆದರೆ, ಪೌರತ್ವದ ನೆಪದಲ್ಲಿ ದೇಶದ ಜನಸಮುದಾಯವನ್ನು ಒಡೆಯಲು ಹೊರಟಿದ್ದ ಸರ್ಕಾರದ ಹೊಸ ಪೌರತ್ವ ಕಾಯ್ದೆ ಮತ್ತು ಪೌರತ್ವ ನೋಂದಣಿಯ ವಿರುದ್ದ ಕಳೆದ ವರ್ಷ ದೆಹಲಿ ಸೇರಿದಂತೆ ದೇಶಾದ್ಯಂತ ನಡೆದ ಹೋರಾಟಕ್ಕೆ ಅಂತಹ ಬಲ ಬರಲಿಲ್ಲ. ಅದಕ್ಕೆ ಮೂಲ ಕಾರಣ; ಆ ಕರಾಳ ಕಾಯ್ದೆಗಳಿಂದ ಸಂತ್ರಸ್ತರಾಗುವವರಲ್ಲಿ ಹೆಚ್ಚಿನವರು ಅಲ್ಪಸಂಖ್ಯಾತ ಸಮುದಾಯದವರಾಗಿದ್ದರು. ಹಾಗಾಗಿ ಆ ಕಾಯ್ದೆಯ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಆ ಸಮುದಾಯದವರೇ ದೊಡ್ಡ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದರು.
ಅದೇ ಅಂಶವನ್ನೇ ಬಳಸಿಕೊಂಡ ಬಿಜೆಪಿ ಮತ್ತು ಅದರ ಸಂಘಪರಿವಾರ, ಇಡೀ ಹೋರಾಟ ಪಾಕಿಸ್ತಾನ ಪ್ರೇರಿತ, ದೇಶವಿರೋಧಿ ಶಕ್ತಿಗಳ ಚಿತಾವಣೆ ಎಂಬಂತಹ ಹಣೆಪಟ್ಟಿ ಹಚ್ಚಿ ಆ ಹೋರಾಟಕ್ಕೇ ಕಳಂಕ ಅಂಟಿಸುವ ಪ್ರಯತ್ನ ಮಾಡಿದವು. ಅದರ ಭಾಗವಾಗಿ ಹೋರಾಟಗಾರರ ಮೇಲೆ ದಾಳಿಗಳು ನಡೆದವು, ದೆಹಲಿ ರಾಕ್ಷಸೀ ಪೊಲೀಸ್ ಬಲ ಬಳಸಿ ಹತ್ತಿಕ್ಕುವ ಪ್ರಯತ್ನಗಳೂ ನಡೆದವು. ಜೊತೆಗೆ ಶಾಹೀನ್ ಬಾಗ್ ಮತ್ತು ಜಾಮಿಯಾ ವಿವಿ ಬಳಿ ಹೋರಾಟಗಾರರ ಮೇಲೆ ಗುಂಡಿನ ದಾಳಿ ಕೂಡ ನಡೆದಿತ್ತು. ಎರಡೂ ಪ್ರತ್ಯೇಕ ದಾಳಿಗಳಲ್ಲಿ ದಾಳಿಗಳನ್ನು ನಡೆಸಿದವರು ಹಿಂದುತ್ವದ ಪರ ಮತ್ತು ಹೋರಾಟದ ವಿರುದ್ಧ ಘೋಷಣೆ ಕೂಗಿದ್ದರು. ಪೊಲೀಸರ ಎದುರಿಗೇ ನಡೆದ ಈ ದಾಳಿಗಳ ರೂವಾರಿಗಳನ್ನು ಬಂಧಿಸುವುದು ಅವರಿಗೆ ಅನಿವಾರ್ಯವಾಗಿತ್ತು. ಹಾಗಾಗಿ ಬಂಧನವೂ ಆಗಿತ್ತು. ಆದರೆ, ಆ ಬಳಿಕ, ಸಾರ್ವಜನಿಕವಾಗಿ ಗುಂಡು ಹಾರಿಸಿದ ಆ ವ್ಯಕ್ತಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯ ಅಡಿ ಪ್ರಕರಣದ ದಾಖಲಿಸುವ ಬದಲು ಸಾಮಾನ್ಯ ಗಲಾಟೆ-ದೊಂಬಿ ಪ್ರಕರಣ ದಾಖಲಿಸುವ ಮೂಲಕ ಆ ದಾಳಿಕೋರರ ಹಿಂದೆ ಪ್ರಭಾವಿಗಳೇ ಇದ್ದಾರೆ ಎಂಬುದು ಬಹಿರಂಗವಾಗಿತ್ತು.

ಈಗ, ವರ್ಷದ ಬಳಿಕ ಅದೇ ಶಾಹೀನ್ ಬಾಗ್ ಹೋರಾಟಗಾರರ ಮೇಲೆ ಗುಂಡಿನ ದಾಳಿ ನಡೆಸಿದ್ದ ಕಪಿಲ್ ಗುರ್ಜರ್ ಎಂಬಾತನನ್ನು ಆಡಳಿತಾರೂಢ ಬಿಜೆಪಿ, ಹಾರ ತುರಾಯಿ ಹಾಕಿ ಅಧಿಕೃತವಾಗಿ ತನ್ನ ಪಕ್ಷಕ್ಕೆ ಸೇರಿಸಿಕೊಂಡಿದೆ. ಜೊತೆಗೆ, ಆತನ ಹಲವು ಸಹಚರರನ್ನೂ ಸಂಘಟನೆಗೆ ಸೇರಿಸಿಕೊಂಡು, “ಭಾರತೀಯ ಜನತಾ ಪಕ್ಷದ ತತ್ವ ಆದರ್ಶಗಳಲ್ಲಿ ನಂಬಿಕೆ ಇಟ್ಟು, ಪ್ರಧಾನಿ ಮೋದಿಯವರಲ್ಲಿ ವಿಶ್ವಾಸವಿಟ್ಟು ಯೋಗಿ ಆದಿತ್ಯನಾಥರ ಆದರ್ಶದಿಂದ ಪ್ರಭಾವಿತನಾಗಿ ಆತ ಬಿಜೆಪಿಗೆ ಅಧಿಕೃತವಾಗಿ ಸೇರಿದ್ದಾನೆ. ಹಿಂದಿನಿಂದಲೂ ಹಿಂದುತ್ವ ಕಾರ್ಯಕರ್ತನಾಗಿದ್ದು, ಆರ್ ಎಸ್ ಎಸ್ ಸಂಘಟನೆಯನ್ನು ಕಟ್ಟುವಲ್ಲಿ ಶ್ರಮಿಸಿದ್ದಾನೆ” ಎಂದೂ ಬಿಜೆಪಿಯ ನಾಯಕರು ಹೇಳಿದ್ದಾರೆ. ಆತನನ್ನು ಪಕ್ಷಕ್ಕೆ ಬರಮಾಡಿಕೊಂಡ ಘಾಜಿಯಾಬಾದ್ ಬಿಜೆಪಿ ಜಿಲ್ಲಾ ಸಂಚಾಲಕ ಸಂಜೀವ್ ಶರ್ಮಾರ ಈ ಉವಾಚ, ಕಪಿಲ್ ನಡೆಸಿದ ಎಲ್ಲಾ ಕೃತ್ಯಗಳ ಹಿಂದೆ ಬಿಜೆಪಿ ಮತ್ತು RSS ಇವೆ ಎಂಬುದನ್ನು ಅಧಿಕೃತವಾಗಿ ದೃಢಪಡಿಸಿದೆ.
ಕಪಿಲ್ ಗುರ್ಜರ್ ಕೂಡ, “ಹಿಂದುತ್ವವನ್ನು ಬಲಪಡಿಸುತ್ತಿರುವ ಬಿಜೆಪಿಯೊಂದಿಗೆ ನಾವು ಯಾವಾಗಲೂ ಇದ್ದೇವೆ. ಅವರು ಏನೇ ಮಾಡಿದರೂ ಅದು ಹಿಂದೂಗಳಿಗಾಗಿಯೇ ಎಂಬುದು ನಮಗೆ ಗೊತ್ತು. ಹಿಂದುತ್ವಕ್ಕಾಗಿ ಏನಾದರೂ ದೊಡ್ಡ ಕಾರ್ಯಮಾಡುವ ಆಸೆ ನನಗೆ ಯಾವಾಗಲೂ ಇತ್ತು. ಹಾಗಾಗಿ ನಾನು ಬಿಜೆಪಿ ಸೇರಿದ್ದೇನೆ. ಇದಕ್ಕೂ ಮೊದಲು ನಾನು ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿರಲಿಲ್ಲ. ಬದಲಾಗಿ ಆರ್ ಎಸ್ ಎಸ್ ಜೊತೆ ಇದ್ದೆ” ಎಂದು ಹೇಳಿದ್ದಾನೆ.

ಆದರೆ, ಇದೇ ಬಿಜೆಪಿ ನಾಯಕರು, ವರ್ಷದ ಹಿಂದೆ ಆತ ಶಾಹೀನ್ ಬಾಗ್ ಹೋರಾಟಗಾರರ ಮೇಲೆ ಗುಂಡಿನ ದಾಳಿ ನಡೆಸಿದ್ದಾಗ, ಆತ ಎಎಪಿ ಕಾರ್ಯಕರ್ತ ಎಂದು ಹೇಳಿದ್ದರು. ಆದರೆ, ಎಎಪಿ ಅಂತಹ ಹೇಳಿಕೆಯನ್ನು ಅಲ್ಲಗಳೆದಿತ್ತು.
ಈ ನಡುವೆ, ಕಪಿಲ್ ಗುರ್ಜರ್ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗುತ್ತಲೇ ವ್ಯಾಪಕ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿ ಯೂಟರ್ನ್ ಹೊಡೆದಿದ್ದು, ಆತನನ್ನು ಪಕ್ಷದಿಂದ ಉಚ್ಛಾಟಿಸಿದೆ. ಜೊತೆಗೆ, ಜಿಲ್ಲಾ ಸಂಚಾಲಕ ಶರ್ಮಾ, ಒಂದು ಪತ್ರಿಕಾ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದು, “ಮಹಾನಗರ ಕಚೇರಿಯಲ್ಲಿ ಇಂದು ಬಿಎಸ್ ಪಿ ಪಕ್ಷದ ನೂರಾರು ಮಂದಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಆ ಪೈಕಿ ಕಪಿಲ್ ಗುರ್ಜರ್ ಕೂಡ ಒಬ್ಬ. ಆದರೆ ಆತನ ಅಪರಾಧ ಹಿನ್ನೆಲೆಯ ಮಾಹಿತಿ ಇರಲಿಲ್ಲ. ಶಾಹೀನ್ ಬಾಗ್ ಘಟನೆಯಲ್ಲಿ ಆತ ಭಾಗಿಯಾದ ಬಗ್ಗೆಯೂ ನಮಗೆ ಮಾಹಿತಿ ಇರಲಿಲ್ಲ. ಆ ವಿಷಯ ಗೊತ್ತಾಗುತ್ತಿದ್ದಂತೆ ಆತನನ್ನು ಪಕ್ಷದಿಂದ ಹೊರಹಾಕಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ, ಶಾಹೀನ್ ಬಾಗ್ ಘಟನೆಯ ವೇಳೆ ಬಿಜೆಪಿಯ ಪಾಲಿಗೆ ಎಎಪಿ ಕಾರ್ಯಕರ್ತನಾಗಿ ಸ್ಪಷ್ಟವಾಗಿ ಗೊತ್ತಿದ್ದ ಕಪಿಲ್ ಗುರ್ಜರ್, ಅಂತಹ ಭಯಾನಕ ಅಪರಾಧ ಕೃತ್ಯ ನಡೆಸಿದ್ದರೂ ಕೇವಲ ಒಂದೇ ವರ್ಷದಲ್ಲಿ ಮರೆತುಹೋಗಿದ್ದು ಹೇಗೆ? ಎಂಬುದು ಪ್ರಶ್ನೆ. ಜೊತೆಗೆ ಅಂದು ಎಎಪಿ ಕಾರ್ಯಕರ್ತನಾದವನು ಈಗ ಬಿಎಸ್ ಪಿ ಕಾರ್ಯಕರ್ತ ಎಂಬುದು ಮಾತ್ರ ಪಕ್ಕಾ ಗೊತ್ತಿದೆ. ಆದರೆ, ಅದೇ ವ್ಯಕ್ತಿ ಶಾಹೀನ್ ಬಾಗ್ ದಾಳಿಕೋರ ಎಂಬುದು ಮಾತ್ರ ಗೊತ್ತೇ ಇರಲಿಲ್ಲ ಎಂಬುದು ಯಾವ ಮಟ್ಟದ ನಾಚಿಕೆಗೇಡಿನ ನಾಜೂಕುತನ ಎಂಬುದನ್ನು ಆ ಪಕ್ಷವೇ ಸ್ಪಷ್ಟಪಡಿಸಬೇಕಿದೆ.
ಒಂದು ಕಡೆ ಚುನಾವಣೆಗಳ ಹೊಸ್ತಿಲಿನಲ್ಲಿ ಪಶ್ಚಿಮಬಂಗಾಳ ಮತ್ತಿತರ ಕಡೆ ಸಾಲುಸಾಳು ಹಗರಣಗಳ ರೂವಾರಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ಅವರನ್ನು ಪವಿತ್ರೀಕರಿಸುವ ಘನ ಕಾರ್ಯಕ್ಕೆ ಇಳಿದಿರುವ ಬಿಜೆಪಿ ಮತ್ತೊಂದು ಕಡೆ ಸಾರ್ವಜನಿಕರ ಮೇಲೆ ಗುಂಡು ಹಾರಿಸುವಂತಹ ಭಯೋತ್ಪಾದಕ ಕೃತ್ಯಗಳನ್ನು ನಡೆಸಿದವರಿಗೆ ಹಾರ ತುರಾಯಿ ಹಾಕಿ ಪಕ್ಷಕ್ಕೆ ಬರಮಾಡಿಕೊಳ್ಳುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ!