ದೇಶದಲ್ಲಿ ರೈತರ ಪ್ರತಿಭಟನೆ ವಿಚಾರವಾಗಿ ಮೋದಿ ಅಮಿತ್ ಶಾ ನೇತೃತ್ವದ ಸರ್ಕಾರ ತೆಲೆಕೆಡಿಸಿ ಕೊಳ್ಳುತ್ತಿಲ್ಲ, ಕೊರೆಯವ ಚಳಿಯಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ. ಪ್ರತಿಭಟನಾನಿರತ ರೈತರ ಸಾವು ನೋವುಗಳು ಆಗಿವೆ. ಇಲ್ಲಿ ಹರಿಯಾಣ ಮತ್ತು ಪಂಜಾಬಿ ರೈತರಿಗೆ ಜೀವನ್ಮರಣದ ಪರಿಸ್ಥಿತಿ ಎದುರಾಗಿದೆ ಎಂದು ಹಿರಿಯ ಸ್ವತಂತ್ರ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ ʼಪ್ರತಿಧ್ವನಿʼ ನಡೆಸಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.
ಗೋಧಿಯ ಖಣಜ ಎಂದೇ ಪ್ರಸಿದ್ಧವಾದ ಪಂಜಾಬಿಂದ ಸರ್ಕಾರ ಹೇರಳವಾಗಿ ಗೋಧಿ ಮತ್ತು ಅಕ್ಕಿಯನ್ನು ಕೊಂಡುಕೊಳ್ಳತ್ತದೆ. ಕೇಂದ್ರ ಜಾರಿಗೆ ತಂದ ಕೃಷಿ ಕಾಯ್ದೆಗಳು ಪಂಜಾಬ್ ಮತ್ತು ಹರಿಯಾಣ ಭಾಗದ ರೈತರಿಗೆ ಹೆಚ್ಚು ಸಮಸ್ಯೆಯಾಗಿದೆ. ರೈತರಿಂದ ಭೂಮಿ ಕಸಿದು ಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇದರಿಂದ ರೈತರು ಕಾರ್ಪೋರೇಟ್ ಸಂಸ್ಥೆಯ ಗುಲಾಮರಾಗುತ್ತಾರೆ. ಕಾರ್ಪೋರೇಟ್ ಸಂಸ್ಥೆಗಳು ಕೃಷಿಕರನ್ನು ಶೋಷಣೆಗೆ ತಳ್ಳಿ ಅವರಿಗೆ ಬೇಕಾದ ಬೆಳೆ ಬೆಳೆಸಿ ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳಲಾಗುತ್ತದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸರ್ಕಾರಕ್ಕೆ ಮರ್ಯಾದೆಯ ಪ್ರಶ್ನೆ ಎದುರಾಗಿದೆ. ಆದ್ದರಿಂದ ರೈತರ ಹೋರಾಟ ತಡೆದು ಕೃಷಿಕಾಯ್ದೆಗಳನ್ನು ಉಳಿಸಿಕೊಳ್ಳುವ ಅಗತ್ಯ ಇರುವುದರಿಂದ ಕಾಯ್ದೆ ಹಿಂಪಡೆಯುವಲ್ಲಿ ಹಿಂಜರೆಯುತ್ತಿದೆ. ಈ ಕಾಯ್ದೆಗಳು ಸಾಮಾನ್ಯ ಜನರಿಗೆ ನೋವುಂಟು ಮಾಡಿ ಸ್ವಾತಂತ್ರವನ್ನು ಅಪಹರಣ ಮಾಡಿದೆ. ಶ್ರೀಮಂತರಿಗೆ ಅನುಕೂಲ ಮಾಡಿಕೊಟ್ಟು ಕ್ಯಾಪಿಟಲಿಸ್ಟ್ ದೇಶ ಮಾಡಲು ಹೊರಟ್ಟಿದ್ದಾರೆ.
ರಾಜ್ಯಾಂಗದಲ್ಲಿ ಸಮಾಜವಾದಿ ವ್ಯವಸ್ಥೆ ಇರಬೇಕೆಂದು ಬರೆದಿದ್ದಾರೆ. ಈಗಿನ ಪರಿಸ್ಥಿತಿ ಹಾಗಿಲ್ಲ ಬಡವರು ಬಡವರಾಗಿಯೇ ಇದ್ದಾರೆ. ಶ್ರೀಮಂತರು ಶ್ರೀಮಂತರಾಗುತ್ತಲೆ ಇದ್ದಾರೆ. ಸಮಾನತೆಯ ಸಮಾಜ ಕಣ್ಮರೆಯಾಗುತ್ತಿದೆ. ಬಂಡವಾಳಶಾಹಿಗಳ ಕೈಗೆ ದೇಶದ ಆಡಳಿತ ಸಿಕ್ಕಂತಾಗಿದೆ ಎಂದಿದ್ದಾರೆ.
ಜರ್ಮನಿಯ ಹಿಟ್ಲರ್, ಇಟಲಿಯ ಮುಸುಲೋನಿ ಸರ್ವಾಧಿಕಾರದ ಆಡಳಿತ ಅವಧಿ ನೆನಪಾಗುತ್ತದೆ. ಮೋದಿ ಭ್ರಮೆ ಏನೆಂದರೆ, ಪ್ರಧಾನಿಯಾಗಿ ನಾನೇನು ಮಾಡಿದರೂ ನಡೆಯುತ್ತದೆ ಅನ್ನುವ ಕಲ್ಪನೆ ಅವರಲ್ಲಿದೆ. ಜನ ಮಾತ್ರ ಗುಲಾಮಗಿರಿಯ ಸಮಾಜ ಬಯಸುವುದಿಲ್ಲ. ಆಡಳಿತ ಪಕ್ಷ ಅಧಿಕಾರಕ್ಕಾಗಿ ಹಿಂದುತ್ವ ತತ್ವಗಳನ್ನು ಪ್ರತಿಪಾದಿಸುತ್ತಿದೆ. ಹಾಗೂ ಬಂಡವಾಳಶಾಹಿ ದೇಶವನ್ನಾಗಿ ಪರಿವರ್ತನೆ ಮಾಡಲು ಹೊರಟಿದೆ. ಎಲ್ಲಿ ಸರ್ವಾಧಿಕಾರದ ಆಡಳಿತಕ್ಕೆ ಎಡೆಮಾಡಿಕೊಡುತ್ತದೋ ಅನ್ನೋ ಭಯದಿಂದ ದೇಶದ ಕೃಷಿಕರು ಪ್ರಜ್ಞಾವಂತರು ಒಟ್ಟಾಗಿ ಹೋರಾಟ ಮಾಡುವ ಸನ್ನಿವೇಶ ಎದುರಾಗಿದೆ ಎಂದಿದ್ದಾರೆ.
ರೈತರನ್ನು ಯಾರೂ ಎತ್ತಿಕಟ್ಟುತ್ತಿಲ್ಲ, ಸ್ವಂತ ಆಲೋಚನೆಯಿಂದ ಹೋರಾಟ ಮಾಡಲು ಮುಂದಾಗಿದ್ದಾರೆ. ಈ ಮಧ್ಯೆ ಬಿಜೆಪಿಗರು ಮೋಡಿ ಮಾತಿನಿಂದ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಆಡಳಿತ ಪಕ್ಷ ಮಾಡಿದ್ದೇ ಸರಿ ಎನ್ನುವುದಾದರೆ ರೈತಾಪಿ ವರ್ಗದ ಮತವನ್ನು ಕಳೆದುಕೊಳ್ಳುವ ಸಂಭವವಿದೆ. ಇದು ಮೋದಿ ಹಾಗೂ ಅಮಿತ್ ಶಾ ಅವರಿಗೂ ತಿಳಿದಿದೆ ಎಂದು ಹೇಳಿದ್ದಾರೆ.
ಇದರಿಂದ ಒಂದೋ ಎರಡೋ ಕಾನೂನನ್ನು ಹಿಂಪಡೆಯುವ ಸಾಧ್ಯತೆಯಿದೆ. ಕಾರಣ ದೇಶದ ಜನ ಒಂದಾಗಿ ಬಿಕ್ಕಟಿನ ಪರಿಸ್ಥಿತಿ ಎದುರಾಗುವ ಮೂಲಕ ಆಡಳಿತದ ಉಳಿವಿನ ಪ್ರಶ್ನೇ ಎದುರಾಗುತ್ತದೆ. ಇದರಿಂದ ಮೋದಿ ಸರ್ಕಾರ ಎಚ್ಚೆತ್ತುಕೊಂಡು ಕಾನೂನು ಹಿಂಪಡೆಯಬಹುದು ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ದೆಹಲಿಯ ಹೋರಾಟಗಾರರು ಶಾಂತಿಯುತ ಹೋರಾಟ ಮಾಡಿದರೂ ಸರ್ಕಾರ ಭಯೋತ್ಪಾದಕರಂತೆ ಬಿಂಬಿಸಿದೆ. ಇದನ್ನು ದೇಶದ ಜನ ನಂಬುವುದಿಲ್ಲ, ಸುಪ್ರೀಂ ಕೋರ್ಟ್ನ ಜಡ್ಜ್ಗಳು ಸಮತೂಕದ ನ್ಯಾಯ ನೀಡುತ್ತಿಲ್ಲ, ಸರ್ಕಾರದ ತೀರ್ಮಾನಕ್ಕೆ ತಲೆಬಾಗುತ್ತಿವೆ. ನ್ಯಾಯದ ಕಡೆ ಮಾತನಾಡುತ್ತಿಲ್ಲ, ಅಧಿಕಾರದ ಆಸೆಗೆ ಆಡಳಿತ ಪಕ್ಷದವರಿಗೆ ತಲೆಬಾಗುತ್ತಿದ್ದಾರೆ. ಉದಾಹರಣೆ – ಅಸ್ಸಾಂ ನ್ಯಾಯಮೂರ್ತಿ ರಂಜನ್ ಗೊಗಾಯ್ ನಿವೃತ್ತಿಯಾದ ಮರುದಿನವೇ ರಾಜ್ಯಸಭೆಯಲ್ಲಿ ಸ್ಥಾನ ಕೊಡಲಾಗುತ್ತೆ. ಸರ್ಕಾರಕ್ಕೂ ನ್ಯಾಯಾಂಗಕ್ಕೂ ಸಂಬಂಧವಿದೆ ಎನ್ನುವುದು ಈ ಮೂಲಕ ಪರೋಕ್ಷವಾಗಿ ತಿಳಿಯುತ್ತದೆ ಎಂದಿದ್ದಾರೆ.
ಸರ್ವೋಚ್ಚ ನ್ಯಾಯಾಲಯದಲ್ಲಿಯೂ ಕೆಟ್ಟಹುಳುಗಳು ಸೇರಿಕೊಂಡಿವೆ. ಪ್ರಜೆಗಳಿಗೆ ಅನ್ಯಾಯವಾಗುತ್ತಿದೆ. ಇಲ್ಲಿ ಸುರ್ಪೀಂ ಕೋರ್ಟ್ ಪ್ರವೇಶಿಸದೇ ಇರುವುದು ಸೂಕ್ತ ಎಂದಿದ್ದಾರೆ.ಇತ್ತ ಮಾಧ್ಯಮಗಳನ್ನು ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೆ ಕೊಂಡುಕೊಂಡಿದೆ. ಮಾಧ್ಯಮಗಳು ಕಾವಲು ನಾಯಿಗಳಾಗಿರ ಬೇಕು. ಆದರೀಗ ಸಾಕು ನಾಯಿಗಳಾಗಿವೆ. ಬಿಜೆಪಿ ಹಾಕಿದ ಚೂರು ಬ್ರೆಡ್ಡಿಗೆ ಬಾಲ ಆಡಿಸಲು ಶುರುಮಾಡಿದೆ.
ದೇಶದಲ್ಲಿನ ಸಮಸ್ಯೆ ಮತ್ತು ಪ್ರಜಾಪ್ರಭುತ್ವದ ಕಂಟಕದ ಬಗ್ಗೆ ಸುದ್ದಿ ಪ್ರಸ್ತಾಪಿಸುತ್ತಿಲ್ಲ ಅದರ ಬದಲು ಜನರನ್ನು ತಪ್ಪು ದಾರಿಗೆ ತಳ್ಳಲಾಗುತ್ತಿದೆ. ಇನ್ನು ಮೇಲಾದರು ನಿಷ್ಪಕ್ಷಪಾತವಾಗಿ ಯಾರಿಗೂ ತಲೆಬಾಗದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಹಿರಿಯ ಸ್ವತಂತ್ರ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.