ಕರೋನಾ ತಡೆಗಟ್ಟಲು ಸರ್ಕಾರ ದಿನಕ್ಕೊಂದು ಹೊಸ ಆದೇಶ ಮಾಡುತ್ತಾ ಗೊಂದಲಕ್ಕೆ ಸಿಲುಕುತ್ತಿದೆ. ಸರ್ಕಾರದ ಎಡವಟ್ಟು ನಿರ್ಧಾರಗಳನ್ನು ಬಳಸಿಕೊಂಡ ಕರೋನಾ ವೈರಸ್ ತನ್ನ ವ್ಯಾಪ್ತಿಯನ್ನು ಮೀರಿ ಹೋಗುತ್ತಿದೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಕರೋನಾ ನಿಯಂತ್ರಣ ಮೀರಿ ಹೋಗುತ್ತಿದೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಈ ನಡುವೆ ಕರೋನಾ ನಿಯಂತ್ರಣಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. ಆದರೆ ಕರೋನಾ ನಿಯಂತ್ರಣಕ್ಕಾಗಿ ಸರ್ಕಾರ ಇಲ್ಲೀವರೆಗೂ ಮಾಡಿರುವ ಖರ್ಚು ವೆಚ್ಚದಲ್ಲಿ ಕೋಟಿ ಕೋಟಿ ಲೂಟಿ ಆಗಿದೆ ಎನ್ನುವ ಆರೋಪ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ಆರೋಪಕ್ಕೆ ನೀರೆರೆದ ನಿರಾಣಿ..!
ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಆದರೆ ಈ ಆರೋಪಕ್ಕೆ ನೀರೆರದು ಪೋಷಣೆ ಮಾಡಿರುವುದು ಸ್ವತಃ ಬಿಜೆಪಿ ಶಾಸಕ ಹಾಗೂ ಮಾಜಿ ಮಿನಿಸ್ಟರ್ ಮುರುಗೇಶ್ ನಿರಾಣಿ. ಇದನ್ನು ಸ್ವತಃ ಮುರುಗೇಶ್ ನಿರಾಣಿ ಅವರೇ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ನಿರಾಣಿ, ಅಪರಿಚಿತ ವ್ಯಕ್ತಿಯೊಬ್ಬರು ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ 125 ಪುಟಗಳ ಮಾಹಿತಿ ಇರುವ ಪೆನ್ ಡ್ರೈ ನನ್ನ ಬಳಿ ಇದೆ ಎಂದು ಹೇಳಿಕೊಂಡು ಒಮ್ಮೆ ನನ್ನ ಬಳಿ ಬಂದಿದ್ದರು. ಅದನ್ನೇ ನಾನು Public Accounts Committee ಅಂದರೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆಯಲ್ಲಿ ಹೇಳಿದ್ದೆ, ಆದರೆ ನನ್ನ ಬಳಿ ಪೆನ್ ಡ್ರೈವ್ ಇದೆ ಎಂದು ನಾನು ಸಭೆಯಲ್ಲಿ ಹೇಳಿಲ್ಲ. ಪ್ರತಿಪಕ್ಷ ಮುಖಂಡರು ಅನಾವಶ್ಯಕವಾಗಿ ನನ್ನ ಹೆಸರನ್ನು ಎಳೆದು ತರುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದಿದ್ದಾರೆ.
ಆರೋಗ್ಯ ಪರಿಕರ ಖರೀದಿಯಲ್ಲಿ ಹಗರಣ ನಡೆದಿದೆಯೇ..?
ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷ ಹೆಚ್.ಕೆ ಪಾಟೀಲ್ ಅವರು ಕರೋನಾ ನಿಯಂತ್ರಣದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಿದ್ದರು. ತನಿಖೆ ಮಾಡುವುದಕ್ಕೂ ಮುಂದಾಗಿದ್ದರು. ಆದರೆ ವಿಧಾನಸಭಾ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ತಡೆ ಹಿಡಿದಿದ್ದರು. ಆ ಸಮಯದಲ್ಲೇ ಮುರುಗೇಶ್ ನಿರಾಣಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಎದುರು ಈ ರಹಸ್ಯ ಬಿಚ್ಚಿಟ್ಟಿದ್ದಾರೆ. ಹಗರಣ ನಡೆದಿದೆ ಎಲ್ಲಾ ದಾಖಲೆಗಳು ನನ್ನ ಬಳಿ ಇದೆ ಎಂದು ಓರ್ವ ಸಾಮಾನ್ಯ ವ್ಯಕ್ತಿಯೊಬ್ಬ ಮುರುಗೇಶ್ ನಿರಾಣಿ ಅವರನ್ನು ಭೇಟಿ ಮಾಡಿರಲು ಸಾಧ್ಯವೇ ಇಲ್ಲ. ಯಾರೋ ಘಟಾನುಘಟಿ ಅಧಿಕಾರಿ, ಆರೋಗ್ಯ ಸಿಬ್ಬಂದಿ ಅದಕ್ಕೂ ದೊಡ್ಡ ಹಂತದ ಅಧಿಕಾರಿಯೂ ಆಗಿರಬಹುದು. ಮಾಹಿತಿ ಇಲ್ಲದೆ ಅಧಿಕಾರಿ ಒಬ್ಬರು ಈ ರೀತಿ ಬಂದು ಹೇಳಿರಲು ಸಾಧ್ಯವಿಲ್ಲ.

ಇದೀಗ ಇಷ್ಟೆಲ್ಲಾ ಸಾಕ್ಷಿಗಳು ಯಾರೋ ಒಬ್ಬರ ಬಳಿ ಸೇರಿಕೊಂಡಿದ್ದರೂ ಬಿಜೆಪಿ ನಾಯಕರು ಮಾತ್ರ ತುಂಬಾ ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದಾರೆ. ಕಂದಾಯ ಸಚಿವ ಆರ್ ಅಶೋಕ್, ನನ್ನ ಪೆನ್ನಿನಲ್ಲಿ ಇಂಕ್ ಖಾಲಿಯಾಗಿದೆ ಎನ್ನುವ ಮೂಲಕ ನಿರಾಣಿ ಪೆನ್ ಡ್ರೈವ್ ವಿಚಾರವಾಗಿ ವ್ಯಂಗ್ಯವಾಡಿದ್ದಾರೆ. ನಿರಾಣಿ ಬಗ್ಗೆ ಸಿದ್ದರಾಮಯ್ಯ ಟ್ವೀಟ್ ಮಾಡಿರುವ ಬಗ್ಗೆ ಅಶೋಕ್ ಮಾತನಾಡಿ, ಸಿದ್ದರಾಮಯ್ಯ ಬಳಿ ಯಾವುದಾದರೂ ದಾಖಲೆ ಇದ್ದರೆ ಸರ್ಕಾರಕ್ಕೆ ಕೊಡಲಿ ಎಂದಿದ್ದಾರೆ. ಇನ್ನೂ ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಡಾವಳಿಯಲ್ಲಿ ಮುರುಗೇಶ್ ನಿರಾಣಿ ಹೇಳಿಕೆ ಪ್ರಸ್ತಾಪವಾಗಿದೆ ಎನ್ನಲಾಗಿದೆ ಎಂದು ಸಿದ್ದರಾಮಯ್ಯ ಅವರು ಟ್ವೀಟ್ನಲ್ಲಿ ಹಾಕಿಕೊಂಡಿದ್ದಾರೆ. ಆದ್ರೆ, ನಿರಾಣಿ ಅವ್ರು ನನ್ನ ಬಳಿ ಪೆನ್ ಡ್ರೈವ್ ಇಲ್ಲ ಅಂತಾ ಹೇಳಿದ್ದಾರೆ. ಹಾಗಿದ್ದ ಮೇಲೆ ಯಾವುದೇ ಹಗರಣ ನಡೆದಿಲ್ಲ ಎಂದಿದ್ದಾರೆ ಸಚಿವ ಆರ್ ಅಶೋಕ್.
ಬಿಜೆಪಿ ನಾಯಕರ ಸ್ಥೈರ್ಯ ಕುಗ್ಗಲಿಲ್ಲ ಯಾಕೆ..?
ಸಾಮಾನ್ಯವಾಗಿ ಯಾವುದೇ ಒಂದು ಇಲಾಖೆಯಲ್ಲಿ ಹಗರಣ ನಡೆದಿದೆ ಎಂದರೆ ಸಚಿವರು ಸಿಕ್ಕಿ ಬೀಳುವುದು ಸರ್ವೇ ಸಾಮಾನ್ಯ. ಭ್ರಷ್ಟಾಚಾರ ನಡೆದಿದೆ ಎಂದರೆ ಲೋಕಾಯುಕ್ತ, ಸಿಐಡಿ. ಸಿಒಡಿ, ಎಸಿಬಿ ಸೇರಿದಂತೆ ಸಾಕಷ್ಟು ತನಿಖಾ ಸಂಸ್ಥೆಗಳಲ್ಲಿ ದೂರು ದಾಖಲಾಗುತ್ತದೆ, ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳನ್ನು ತನಿಖಾ ಸಂಸ್ಥೆಗಳಿಗೆ ಒದಗಿಸಿದಾಗ ತಪ್ಪಿತಸ್ಥರು ಶಿಕ್ಷೆ ಅನುಭವಿಸುವುದು ಶತಸಿದ್ಧ. ಇದೇ ಕಾರಣಕ್ಕೆ ಹಾಲಿ ಮುಖ್ಯಮಂತ್ರಿ ಕಳೆದ ಅವಧಿಯಲ್ಲಿ ಜಿಂದಾಲ್ ಸಂಸ್ಥೆಯಿಂದ ಚೆಕ್ ಮೂಲಕ ತಮ್ಮ ಒಡೆತನದ ಶಿಕ್ಷಣ ಸಂಸ್ಥೆಗಳಿಗೆ ಕಿಕ್‌ಬ್ಯಾಕ್ ಪಡೆದ ಆರೋಪದಲ್ಲಿಯೇ ಜೈಲು ಪಾಲಾಗಿದ್ದರು. ಆದರೆ ಈ ಪ್ರಕರಣದಲ್ಲಿ ಅಷ್ಟು ಸುಲಭವಾಗಿ ಯಾವುದೇ ಜನಪ್ರತಿನಿಧಿಗಳು ಸಿಕ್ಕಿಬೀಳುವ ಸಾಧ್ಯತೆಗಳು ತೀರಾ ಕಡಿಮೆ. ಅದಕ್ಕೆ ಕಾರಣ ಈ ಹಣ ಖರ್ಚಾಗುತ್ತಿರುವ ಹಣ 4G ಕಾಯ್ದೆಯಡಿ ಬರುತ್ತದೆ.
ದೇಶದಲ್ಲಿ ತುರ್ತು ಪರಿಸ್ಥಿತಿ ಉಂಟಾದ ಸಮಯದಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಪ್ರಕೃತಿ ವಿಕೋಪ ಹಣವನ್ನು 4G ಕಾಯ್ದೆಯಡಿ ಬಳಕೆ ಮಾಡಲು ಅನುಮತಿ ಕೊಡಲಾಗಿದೆ. ಈ ಹಣವನ್ನು ನೇರವಾಗಿ ಜಿಲ್ಲಾಧಿಕಾರಿಗಳ ಅಕೌಂಟ್ ಮೂಲಕ ಖರ್ಚಾಗಲಿದ್ದು, ಇದರಲ್ಲಿ ಯಾವುದೇ ಹಗರಣ ನಡೆದಿದ್ದರೂ ಹೊರಗಿನ ತನಿಖಾ ಸಂಸ್ಥೆಗಳು ತನಿಖೆ ಮಾಡುವುದಕ್ಕೆ ಅವಕಾಶ ಇರುವುದಿಲ್ಲ. ಕೇವಲ ಆಂತರಿಕ ತನಿಖೆಗೆ ಅವಕಾಶವಿದೆ. ಒಂದು ವೇಳೆ ವಿರೋಧ ಪಕ್ಷಗಳ ಒತ್ತಾಯಕ್ಕೆ ಮಣಿದು ಆಂತರಿಕ ತನಿಖೆಗೆ ರಾಜ್ಯ ಸರ್ಕಾರ ಒಪ್ಪಿಸಿದರೂ ತನಿಖಾ ವರದಿ ಮತ್ತೆ ಸರ್ಕಾರದ ಮುಂದಕ್ಕೇ ಬರಲಿದೆ. ಅದನ್ನು ಒಪ್ಪುವುದು ಬಿಡುವುದು ಸರ್ಕಾರಕ್ಕೆ ಬಿಟ್ಟಿದ್ದು. ಅದೇ ಕಾರಣಕ್ಕೆ ಬಿಜೆಪಿ ನಾಯಕರು ನಾವು ಏನು ತಪ್ಪೇ ಮಾಡಿಲ್ಲ ಎನ್ನುವಂತೆ ಮಾಧ್ಯಮಗಳ ಎದುರು ಗುಟುರು ಹಾಕುತ್ತಿದ್ದಾರೆ ಎನ್ನುತ್ತಾರೆ ಹಣಕಾಸು ತಜ್ಞರು.