ಭಾರತ ಸರ್ಕಾರವು 2014ರಲ್ಲಿ ಜಾರಿಗೆ ತಂದಿದ್ದ ವಿಷಲ್ ಬ್ಲೋವರ್ಸ್ ಆಕ್ಟ್ಗೆ ನಿಯಮಾವಳಿಗಳನ್ನು ರೂಪಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ಗೃಹ ಇಲಾಖೆಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ಹೆಚ್ ಎಂ ವೆಂಕಟೇಶ್ ಅವರು ಈ ಮನವಿಯನ್ನು ಮಾಡಿಕೊಂಡಿದ್ದಾರೆ. ಈ ಕಾಯ್ದೆಗೆ ನಿಯಮಾವಳಿಗಳನ್ನು ರೂಪಿಸುವುದರಿಂದ ಸರ್ಕಾರಿ ನೌಕರರು, ಸಾಮಾಜಿಕ ಹೋರಾಟಗಾರರು ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರಿಗೆ ರಕ್ಷಣೆ ಸಿಗುತ್ತದೆ ಎಂದು, ವೆಂಕಟೇಶ್ ಅವರು ತಮ್ಮ ಮನವಿಯಲ್ಲಿ ಹೇಳಿದ್ದಾರೆ.
2014ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಇದಕ್ಕೆ ಸಂಬಂಧಪಟ್ಟ ನಿಯಾವಳಿಗಳನ್ನು ರೂಪಿಸಲು ರಾಜ್ಯ ಸರ್ಕಾರಗಳಿಗೆ ಅನುಮತಿಯನ್ನೂ ನೀಡಲಾಗಿತ್ತು. ಆದರೆ, ಈವರೆಗೆ ನಿಯಾಮವಳಿಗಳನ್ನು ರೂಪಿಸುವ ಗೋಜಿಗೆ ಯಾವುದೇ ಸರ್ಕಾರಗಳು ಹೋಗಲಿಲ್ಲ. ಈ ವಿಚಾರವು ಬಹಳ ಕಾಲದಿಂದ ನೆನೆಗುದಿಗೆ ಬಿದ್ದಿದ್ದು, ನಿಯಮಗಳನ್ನು ರೂಪಿಸಿದಲ್ಲಿ ಹೋರಾಟಗಾರರ ಕೈ ಬಲಪಡಿಸಿದಂತಾಗುತ್ತದೆ ಎಂದು, ವೆಂಕಟೇಶ್ ಅವರು ಅಭಿಪ್ರಾಯಪಟ್ಟಿದ್ದಾರೆ.