ಜೆಡಿಎಸ್ ಮತ್ತು ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರ ನಡುವಿನ ವಾಕ್ಸಮರ ಮತ್ತೆ ಮುಂದುವರೆದಿದೆ. ಕೆಲವು ದಿನದ ಹಿಂದೆ ಮೈಸೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಜೆಡಿಎಸ್ ಟೀಕಿಸಿದ ಸುದ್ದಿ ಜೆಡಿಎಸ್ ನಾಯಕರನ್ನು ಕೆರಳಿಸಿದೆ. ವಿಶ್ವನಾಥ್ ಅವರ ಹೇಳಿಕೆಗೆ ಜೆಡಿಎಸ್ ಶಾಸಕ ಸಾರಾ ಮಹೇಶ್ ಅವರು ಕೆಂಡಾಮಂಡಲರಾಗಿದ್ದಾರೆ.
ಮಾಧ್ಯಮದ ಮುಂದೆ ಬಹಿರಂಗವಾದ ಹೇಳಿಕೆ ನೀಡಿದ್ದ ವಿಶ್ವನಾಥ್ ಅವರು, ಜೆಡಿಎಸ್ ಪಕ್ಷವು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಮಗುವಿದ್ದಂತೆ. ಯಾರು ವಿಠಾಯಿ ತೋರಿಸುತ್ತಾರೋ ಅವರ ಕಡೆಗೆ ಹೋಗುತ್ತಾರೆ, ಎಂದಿದ್ದರು.
ಇದೀಗ ಜೆಡಿಎಸ್ ನಾಯಕ ಸಾರಾ ಮಹೇಶ್ ಟ್ವಿಟರ್ ಮೂಲಕ ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅವರ ನಾಲಿಗೆಗೆ ಇನ್ನೊಬ್ಬರನ್ನು ವ್ಯಕ್ತಿಗತವಾಗಿ ಜರಿಯುವ ಹಕ್ಕಾದರೂ ಇದೆಯಾ? ಎಂದು ಪ್ರಶ್ನಿಸುವುದರ ಮೂಲಕ ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ಎಂದು ವಿಶ್ವನಾಥ್ ಹೇಳಿಕೆಗೆ ಜೆಡಿಎಸ್ ನಾಯಕ ಸಾರಾ ಮಹೇಶ್ ಪ್ರತಿಕ್ರಿಯಿಸಿದ್ದಾರೆ.
“ಬೌದ್ಧಿಕ ದಿವಾಳಿತನಕ್ಕೆ ತುತ್ತಾದವರು ಮಾತ್ರ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ವ್ಯಕ್ತಿಗತ ಲೇವಡಿಗಿಳಿಯುತ್ತಾರೆ. ಅವರು ಎಂದೋ ಬಫೂನ್ ಆಗಿರುವುದನ್ನು ಮರೆತಿರುತ್ತಾರೆ. ಬೊಂಬಾಯಿ ಮಿಠಾಯಿ ರುಚಿ ಸವೆದಿದ್ದು ಮಂತ್ರಿಯಾಗುವ ತಿರುಕನ ಕನಸು ಕಾಣುತ್ತಿದ್ದಾರೆ,” ಎಂದಿದ್ದಾರೆ.
“ತಾನು ಘನವಾಗದೆ ಘನವೇನು ಬಂತು. ಹರುಕುಬಾಯಿ, ಕೊಳೆತ ಮೆದುಳು ಮಂತ್ರಿಗಿರಿಯ ಘನತೆಗೆ ಊಳಿಡುತಿದೆ. ಎಂದೋ ಭಿಕ್ಷುಕನಾಗಿರುವ ವಿಶ್ವನಾಥ್ ಎರಡು ಬಾರಿ ಮುಖ್ಯಮಂತ್ರಿಯಾದ ಜೆಡಿಎಸ್ ನಾಯಕ ಕುಮಾರಸ್ವಾಮಿಯ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳದಿದ್ದರೆ ತಕ್ಕಶಾಸ್ತಿ ಮಾಡಬೇಕಾಗುತ್ತದೆ,” ಎಂದು ಎಚ್ಚರಿಕೆ ನೀಡಿದ್ದಾರೆ.